ADVERTISEMENT

ಪಾಕ್: ನೌಕಾಪಡೆಯ ಐವರು ಅಧಿಕಾರಿಗಳಿಗೆ ಗಲ್ಲುಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಇಸ್ಲಾಮಾಬಾದ್ (ಪಿಟಿಐ): ಐಎಸ್ ಜತೆ ನಂಟು ಹೊಂದಿರುವ ಆರೋಪದ ಮೇಲೆ ವಾಯುಪಡೆಯ ಐವರು ಅಧಿಕಾರಿಗಳಿಗೆ ಪಾಕಿಸ್ತಾನ ಸರ್ಕಾರವು ರಹಸ್ಯ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿದೆ.

ಪಾಕಿಸ್ತಾನದ ಯುದ್ಧನೌಕೆಯನ್ನು ಅಪಹರಿಸಿ, ಅಮೆರಿಕದ ತೈಲನೌಕೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪ ಇವರ ಮೇಲಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆ.6, 2014ರಲ್ಲಿ ಕರಾಚಿಯ ಹಡಗುಕಟ್ಟೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ ಆರೋಪ ಸಾಬೀತಾಗಿದ್ದು, ಸಬ್ ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಮತ್ತು ಇತರ ನಾಲ್ವರನ್ನು ನೌಕಾ ನ್ಯಾಯಮಂಡಳಿಯು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ.

‘ಐವರ ವಿರುದ್ಧ ಐಎಸ್ ಜತೆ ನಂಟು, ದಂಗೆ, ಸಂಚು, ಹಾಗೂ ಹಡಗುಕಟ್ಟೆಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಆರೋಪಗಳನ್ನು ಹೊರಿಸಲಾಗಿದೆ’ ಎಂದು ಹಮ್ಮದ್ ಅವರ ತಂದೆ ನಿವೃತ್ತ ಮೇಜರ್ ಸಯೀದ್ ಅಹ್ಮದ್ ತಿಳಿಸಿದ್ದಾರೆ.

ತಮ್ಮ ಮಗನ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಹಮ್ಮದ್ ಅವರ ತಂದೆ ಸಯೀದ್ ಅವರು ಆರೋಪಿಸಿದ್ದಾರೆ.

‘ಆರೋಪಿ ಪರ ವಾದಿಸಲು ವಕೀಲರನ್ನು ಒದಗಿಸುವಂತೆ ಕೇಳಿಕೊಂಡರೂ ಅವಕಾಶ ನೀಡದೇ ರಹಸ್ಯವಾಗಿ ವಿಚಾರಣೆ ಮಾಡಿ, ಶಿಕ್ಷೆಯನ್ನೂ  ವಿಧಿಸಲಾಗಿದೆ. ಪಾಕ್ ನೌಕಾಪಡೆಯಲ್ಲಿ ಭದ್ರತಾ ಲೋಪಗಳು ಸಾಮಾನ್ಯ. ಆದರೂ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಬಲಿಪಶು ಮಾಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಮೇಲ್ಮನವಿ ಸಲ್ಲಿಸುವುದಾಗಿಯೂ  ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.