ADVERTISEMENT

ಭಯೋತ್ಪಾದನೆಗೆ ಪಾಕ್‌ ಬೆಂಬಲ ತೀವ್ರ ಕಳವಳಕಾರಿ: ರಾಜನಾಥ್

ಪಿಟಿಐ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಶದಲ್ಲಿದ್ದ ಮೋಸುಲ್‌ ನಗರವನ್ನು ಮರುವಶಕ್ಕೆ ಪಡೆಯಲು ಇರಾಕ್‌ ಯೋಧರು ಮುಂದಾಗುತ್ತಿದ್ದಾರೆ.  ಆದರೆ ಈ ಭಾಗದ  ಜನರಲ್ಲಿ ಭಯ ಹುಟ್ಟಿಸಲು ಉಗ್ರರು ಹೊಸ ವಿಧಾನಗಳನ್ನು ಕಂಡು ಕೊಂಡಿದ್ದಾರೆ. ದಕ್ಷಿಣ ಮೋಸುಲ್‌ ಕ್ವಯ್ಯಾರ ಎಂಬಲ್ಲಿ  ಗಂಧಕದ ಸಂಗ್ರಹದ ಬೃಹತ್ ಘಟಕಕ್ಕೆ ಉಗ್ರರು ಬೆಂಕಿ ಹಚ್ಚಿದ್ದಾರೆ. ಇದರಿಂದ ಭಾರಿ ಪ್ರಮಾಣದ ವಿಷಕಾರಿ ಹೊಗೆ ಆಗಸಕ್ಕೆ ಚಿಮ್ಮುತ್ತಿದೆ.  ಇದು ಗಾಳಿಯೊಂದಿಗೆ ಸೇರಿ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ    –ಎಪಿ/ಪಿಟಿಐ ಚಿತ್ರ
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಶದಲ್ಲಿದ್ದ ಮೋಸುಲ್‌ ನಗರವನ್ನು ಮರುವಶಕ್ಕೆ ಪಡೆಯಲು ಇರಾಕ್‌ ಯೋಧರು ಮುಂದಾಗುತ್ತಿದ್ದಾರೆ. ಆದರೆ ಈ ಭಾಗದ ಜನರಲ್ಲಿ ಭಯ ಹುಟ್ಟಿಸಲು ಉಗ್ರರು ಹೊಸ ವಿಧಾನಗಳನ್ನು ಕಂಡು ಕೊಂಡಿದ್ದಾರೆ. ದಕ್ಷಿಣ ಮೋಸುಲ್‌ ಕ್ವಯ್ಯಾರ ಎಂಬಲ್ಲಿ ಗಂಧಕದ ಸಂಗ್ರಹದ ಬೃಹತ್ ಘಟಕಕ್ಕೆ ಉಗ್ರರು ಬೆಂಕಿ ಹಚ್ಚಿದ್ದಾರೆ. ಇದರಿಂದ ಭಾರಿ ಪ್ರಮಾಣದ ವಿಷಕಾರಿ ಹೊಗೆ ಆಗಸಕ್ಕೆ ಚಿಮ್ಮುತ್ತಿದೆ. ಇದು ಗಾಳಿಯೊಂದಿಗೆ ಸೇರಿ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ –ಎಪಿ/ಪಿಟಿಐ ಚಿತ್ರ   

ಮನಾಮಾ : ‘ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಕೃತ್ಯಗಳು ಭಾರತಕ್ಕೆ ತೀವ್ರ ಕಳವಳಕಾರಿಯಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಉಂಟಾಗಿರುವ ಅಶಾಂತಿಗೆ ಪಾಕ್‌ ಬೆಂಬಲವೇ ಕಾರಣ’ ಎಂದು ಭಾರತ ಹೇಳಿದೆ.

ಮೂರು ದಿನಗಳ ಬಹರೇನ್‌ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರು ಬಹರೇನ್‌ ಆಂತರಿಕ ಸಚಿವ ರಶೀದ್‌ ಬಿನ್‌ ಅಬ್ದುಲ್ಲಾ ಅಲ್‌ ಖಲೀಫಾ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ.

‘ಉಗ್ರ ಬುರ್ಹಾನ್‌ ವಾನಿಯನ್ನು ವೈಭವೀಕರಿಸಲು ಪಾಕಿಸ್ತಾನ ಮುಂದಾಗಿದೆ. ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರು ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾರೆ. ಅವರಿಗೆ ಬಹಿರಂಗವಾಗಿಯೇ ಬೆಂಬಲ ದೊರಕುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಖಲೀಫಾ ಅವರ ಬಳಿ ಸಿಂಗ್‌ ಹೇಳಿದ್ದಾರೆ.

‘ಭಯೋತ್ಪಾದನೆಯನ್ನು ಸರ್ಕಾರದ ನೀತಿಯಾಗಿಸುವುದನ್ನು ನಿಲ್ಲಿಸಲು ಪಾಕ್‌ ನಿರಾಕರಿಸುತ್ತದೆ’ ಎಂದು ಸಿಂಗ್‌ ತಿಳಿಸಿದ್ದಾರೆ.‘ಭಯೋತ್ಪಾದನೆಯನ್ನು ಪ್ರಾಯೋಜಿಸುವ ಪಾಕಿಸ್ತಾನದ ಧೋರಣೆಯಲ್ಲಿ ಬದಲಾವಣೆಯಾಗದಿರುವುದರಿಂದ, ಭಯೋತ್ಪಾದನೆ ತಡೆಯುತ್ತೇವೆ ಎಂದು ಅವರು ನೀಡುವ ಭರವಸೆಯನ್ನು ನಾವು ಪರಿಗಣಿಸಲಾಗುವುದಿಲ್ಲ’ ಎಂದು  ಸಿಂಗ್‌ ಹೇಳಿದ್ದಾರೆ. ಇಸ್ಲಾಮಿಕ್‌ ಸಮಾವೇಶ ಸಂಘಟನೆಯಲ್ಲಿ ಬಹರೇನ್‌ ಪ್ರಮುಖ ಸದಸ್ಯ ರಾಷ್ಟ್ರವಾಗಿದ್ದು , ಪಾಕಿಸ್ತಾನ ಸಹ ಈ ಸಂಘಟನೆಯ ಸದಸ್ಯತ್ವ ಹೊಂದಿದೆ.

ಆಪ್ಘಾನಿಸ್ತಾನ ಕುರಿತ ಸಭೆಯಲ್ಲಿ ಪಾಕ್‌ ಭಾಗಿ ಸಾಧ್ಯತೆ
ಇಸ್ಲಾಮಾಬಾದ್‌ (ಪಿಟಿಐ): 
ಆಫ್ಘಾನಿಸ್ತಾನ ಕುರಿತು ಭಾರತದಲ್ಲಿ ನಡೆಯಲಿರುವ ಪ್ರಮುಖ ಸಮಾವೇಶವೊಂದರಲ್ಲಿ ಪಾಕಿಸ್ತಾನ ಭಾಗವಹಿಸುವ ಸಾಧ್ಯತೆ ಇದೆ. ಉರಿ  ದಾಳಿಯ ನಂತರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಭಾರತದ ಯತ್ನವನ್ನು ತಡೆಯುವುದೇ ಪಾಕ್‌ ಉದ್ದೇಶ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್‌ನ ಅಮೃತಸರದಲ್ಲಿ ಡಿಸೆಂಬರ್‌ ಮೊದಲ ವಾರದಲ್ಲಿ ‘ದಿ ಹಾರ್ಟ್‌ ಆಫ್‌ ಏಷ್ಯಾ–ಇಸ್ತಾಂಬುಲ್‌’ ಸಚಿವ ಮಟ್ಟದ ಸಭೆ ನಿಗದಿಯಾಗಿದೆ. ಭಾರತ–ಪಾಕ್‌ ನಡುವೆ ಪ್ರಸ್ತುತ ಇರುವ ಸಂಘರ್ಷ ಹಾಗೂ ನವೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್‌ ಸಭೆಯನ್ನು ಭಾರತ ಬಹಿಷ್ಕರಿಸಿರುವ ಕಾರಣದಿಂದ, ‘ದಿ ಹಾರ್ಟ್‌ ಆಫ್‌ ಏಷ್ಯಾ–ಇಸ್ತಾಂಬುಲ್‌’ ಸಚಿವ ಮಟ್ಟದ ಸಭೆಯಲ್ಲಿ ಪಾಕ್‌ ಪಾಲ್ಗೊಳ್ಳುವುದು ಖಚಿತವಿರಲಿಲ್ಲ. ಪಾಕ್‌ ಈ ಸಭೆಯಿಂದ ದೂರ ಉಳಿಯುವುದಿಲ್ಲ ಎಂದು  ಅಧಿಕಾರಿಗಳು ಹೇಳಿರುವುದಾಗಿ ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT