ADVERTISEMENT

ಮದುವೆಯಾಗಿ ಸಾವಿನ ದಾರಿ ತೋರಿಸಿದಳು...

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಟೋಕಿಯೊ (ಎಎಫ್‌ಪಿ): ಹಣ ಮತ್ತು ಆಸ್ತಿಗಾಗಿ ನಾಲ್ಕನೇ ಪತಿಗೆ ಸಯನೈಡ್‌ ನೀಡಿ ಸಾಯಿಸಿದ್ದಲ್ಲದೆ ಒಟ್ಟು ಏಳು ಮಂದಿ ಜೊತೆಗಾರರನ್ನೂ ಕೊಲೆ ಮಾಡಿದ್ದಾಳೆ ಎನ್ನಲಾಗಿರುವ ‘ಕ್ರೂರ ವಿಧವೆ’ ಎಂದು ಕುಖ್ಯಾತಿ ಪಡೆದಿರುವ ಮಹಿಳೆ ಇನ್ನೂ ಆಸ್ತಿ ಹೊಂದಿದ ಹಿರಿಯ ವ್ಯಕ್ತಿಗಳ ಹುಡುಕಾ­ಟದಲ್ಲಿ ತೊಡಗಿದ್ದಳು ಎಂದು ವರದಿಗಳು ಹೇಳಿವೆ.

75 ವರ್ಷದ ಪತಿಯನ್ನು ಕೊಂದಿ­ರುವ ಆರೋಪದ ಮೇಲೆ ಚಿಸಕೊ ಕಕೇಹಿ (67) ಅವರನ್ನು ಬಂಧಿಸಿದ ನಂತರ ಪೊಲೀಸರಿಗೆ ಆಕೆಯ ನಿಜ ವೃತ್ತಾಂತ ಬಯಲಿಗೆ ಬಂದಿದೆ.

ತನ್ನ ಜೊತೆಗಾರರು ಮತ್ತು ಪ್ರಿಯಕ­­­ರರನ್ನು ಕೊಲೆ ಮಾಡಿದ ಮಹಿಳೆ ಹತ್ತು ವರ್ಷಗಳ ವರೆಗೆ  ಸುಮಾರು ₨52.44 ಕೋಟಿ (ಒಂದು ಶತಕೋಟಿ ) ವಿಮಾ ಮತ್ತು ಇತರ ಪರಿಹಾರ ಪಡೆದಿದ್ದಳು.

ಹಣ ಸಂಪಾದಿಸಿ ಬ್ಯಾಂಕುಗಳಲ್ಲಿ  ಹತ್ತು ಬೇರೆ ಬೇರೆ ಹೆಸರುಗಳಲ್ಲಿ ಖಾತೆ ತೆರೆದು ಹಣ ಠೇವಣಿ ಇಟ್ಟಿದ್ದ ಮಹಿಳೆ ವಾಯಿದಾ ಮಾರುಕಟ್ಟೆಯಲ್ಲಿ ಅದನ್ನು ತೊಡಗಿಸಿ ಹೆಚ್ಚಿನ ಹಣ ಕಳೆದುಕೊಂಡಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಮಹಿಳೆಯ ಸುದ್ದಿ ನಾಲ್ಕು ದಿನಗಳ ವರೆಗೆ ಇಡೀ ಜಪಾನ್‌ ದೇಶದ ಜನರನ್ನು ಬೆರಗುಗೊಳಿಸಿತು. ಜನರು ಈ ಮಹಿಳೆಯ ಬಗ್ಗೆಯೇ ಮಾತನಾಡು­ತ್ತಿದ್ದರು. ಎಲ್ಲೆಡೆಯೂ ಅವಳ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು ಎಂದು ಇನ್ನೊಂದು ಪತ್ರಿಕೆ ವರದಿ ಮಾಡಿದೆ.

ಕಕೇಹಿ ತನ್ನ  ಬಹುತೇಕ ಬಾಳಸಂಗಾತಿ­ಗಳನ್ನು ಮದುವೆ ಏಜೆನ್ಸಿಗಳ ಮೂಲಕ ಆಯ್ಕೆ ಮಾಡಿ­ಕೊಂಡಿ­ದ್ದಳು. ಭೂಮಿ ಮತ್ತು ಆಸ್ತಿ ಹೊಂದಿದ ವ್ಯಕ್ತಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಮಹಿಳೆಗೆ ಮಕ್ಕಳಿರಲಿಲ್ಲ ಎಂದು ಪತ್ರಿಕೆ ಉಲ್ಲೇಖಿಸಿದೆ.

ಈ ಮಹಿಳೆ ಬಾಳಸಂಗಾತಿಯಾಗಿ ಮಾಡಿಕೊಳ್ಳಲು ಒಂಟಿಯಾಗಿ­ರುತ್ತಿದ್ದ ಮತ್ತು ಆಸ್ತಿ ಹೊಂದಿದ ಹಿರಿಯ ವ್ಯಕ್ತಿಗ­ಳನ್ನೇ ಹುಡುಕುತ್ತಿದ್ದಳು ಎಂದು ತನಿಖಾ­ಧಿಕಾರಿಗಳು ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.

ಪರಸ್ಪರ ಕೂಡುವಿಕೆಯ ನಂತರ ತನ್ನ ಸಂಗಾತಿ­ಯನ್ನೇ ತಿಂದುಬಿಡುವ ಹೆಣ್ಣು ಜೇಡದಂತೆ ಹಲ­ವಾರು ಸಂಬಂಧ­ಗಳನ್ನು ಹೊಂದಿ ನಂತರ ಅವರನ್ನು ಸಾಯಿಸಿದ ಕಕೇಹಿ ‘ಕ್ರೂರ ವಿಧವೆ’ ಎಂದು ಕುಖ್ಯಾತಿ ಪಡೆದಿದ್ದಾಳೆ ಎಂದು ಝಿಝಿ ಪ್ರೆಸ್‌ ಹೇಳಿದೆ.

ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿ ಮಾಡಲು ಅಥವಾ ಮೆಚ್ಚಿಸಲು ಮದುವೆ ಈಕೆಗೆ ಅಡ್ಡಿಯಾಗಲೇ ಇಲ್ಲ. ಹಿರಿಯ ವ್ಯಕ್ತಿಗಳನ್ನು ಪ್ರೀತಿಸಿದ ಸ್ವಲ್ಪ ಸಮಯದಲ್ಲೇ ಅವರೊಂದಿಗೆ ಮದುವೆ ಆಗುತ್ತಿದ್ದಳು ಎಂದು ಝಿಝಿ ಉಲ್ಲೇಖಿಸಿದೆ.

ಹಲವರನ್ನು ಮದುವೆ ಮತ್ತು ಪ್ರೀತಿ ಮಾಡಿದ ಕಕೇಹಿ ಮದುವೆ ಏಜೆನ್ಸಿಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ನೋಂದಾ­ಯಿಸಿದ್ದಳು ಎಂದು ನಿಕ್ಕನ್‌ ಸ್ಪೋರ್ಟ್ಸ್ ಡೈಲಿ ವರದಿ ಮಾಡಿದೆ.

ಪೊಲೀಸರು ಕ್ವಿಟೋದಲ್ಲಿರುವ ಕಕೇಹಿ ಮನೆಯ ಮೇಲೆ ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಸಯನೈಡ್‌ ಪತ್ತೆ­ಯಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.