ADVERTISEMENT

ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿಂ ಸುರಕ್ಷಿತ

ಔದ್ಯೋಗಿಕ ವಾತಾವರಣ: ದೆಹಲಿ ಕೊನೆಯ ಸ್ಥಾನ

ಪಿಟಿಐ
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST
ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿಂ ಸುರಕ್ಷಿತ
ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿಂ ಸುರಕ್ಷಿತ   

ವಾಷಿಂಗ್ಟನ್‌ (ಪಿಟಿಐ): ಉದ್ಯೋಗ ಕೈಗೊಳ್ಳಲು ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಮಹಿಳೆಯರಿಗೆ ಉತ್ತಮವಾದ ವಾತಾವರಣ ಇದ್ದರೆ, ದೇಶದ ರಾಜಧಾನಿ ನವದೆಹಲಿಯಲ್ಲಿ ಅತ್ಯಂತ ಕೆಟ್ಟ ವಾತಾವರಣ ಇದೆ ಎಂದು ವರದಿಯೊಂದು ಹೇಳಿದೆ. ಅಮೆರಿಕದ ಸೆಂಟರ್‌ ಫಾರ್‌ ಸ್ಟ್ರಾಟಜಿಕ್‌ ಅಂಡ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ (ಸಿಎಸ್‌ಐಎಸ್)  ಹಾಗೂ ನಾಥನ್‌ ಅಸೋಸಿಯೇಟ್ಸ್‌ ಜಂಟಿಯಾಗಿ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿವೆ.

ಉದ್ಯಮದಲ್ಲಿನ ಮಹಿಳೆಯರಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳನ್ನು ಆಧರಿಸಿ  ಈ ಅಧ್ಯಯನ ನಡೆದಿದೆ. ಇದರಲ್ಲಿ ಸಿಕ್ಕಿಂಗೆ 40 ಅಂಕಗಳು, ದೆಹಲಿಗೆ ಕೇವಲ 8.5 ಅಂಕಗಳು ದೊರೆತಿವೆ.

ಅಧ್ಯಯನವು ನಾಲ್ಕು ಪ್ರಮುಖ ಮಾನದಂಡಗಳನ್ನು ಆಧರಿಸಿ ರಾಜ್ಯಗಳಿಗೆ ಅಂಕಗಳನ್ನು ನೀಡಿದೆ. ಅವೆಂದರೆ–
1) ಕಾರ್ಖಾನೆ, ರೀಟೇಲ್‌ (ಚಿಲ್ಲರೆ ಮಾರಾಟ) ಮತ್ತು ಮಾಹಿತಿ ತಂತ್ರಜ್ಞಾನದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇರುವ ಕಾನೂನಾತ್ಮಕ ನಿರ್ಬಂಧ.

2) ಔದ್ಯೋಗಿಕ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಶೋಷಣೆಗಳು.

3) ಒಟ್ಟು ಉದ್ಯೋಗಿಗಳ ಪೈಕಿ ಮಹಿಳೆಯ ಸಂಖ್ಯೆ.

4) ಮಹಿಳಾ ಉದ್ಯಮದಾರರಿಗೆ ವಿವಿಧ ರಾಜ್ಯಗಳು ನೀಡುತ್ತಿರುವ ಪ್ರೋತ್ಸಾಹ

ಸಿಕ್ಕಿಂಗೆ ಅಗ್ರಸ್ಥಾನ ಹೇಗೆ:
* ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಮಹಿಳಾ ಉದ್ಯೋಗಿಗಳಿದ್ದಾರೆ.

* ಮಹಿಳೆಯರಿಗೆ ಕೆಲಸ ನಿರ್ವಹಿಸುವ ಅವಧಿ ಕುರಿತು ಹೆಚ್ಚಿನ ನಿರ್ಬಂಧಗಳಿಲ್ಲ.

*  ಮಹಿಳಾ ಉದ್ಯೋಗಿಗಳ ಮೇಲಾದ ದೌರ್ಜನ್ಯ, ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ.

ಅಧ್ಯಯನದ ಮುಖ್ಯಾಂಶಗಳು:
* ಕಾರ್ಖಾನೆ, ರೀಟೇಲ್‌, ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಇದ್ದ ಎಲ್ಲ ನಿರ್ಬಂಧ ಗಳನ್ನು  ಸಿಕ್ಕಿಂ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳು ತೆಗೆದಿವೆ ಎಂದು ವರದಿ ಹೇಳಿದೆ.

* ನ್ಯಾಯಾಲಯದ ಸೂಚನೆ ಮೇರೆಗೆ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿವೆ.

* ಮಹಾರಾಷ್ಟ್ರದಲ್ಲಿ ಚಿಲ್ಲರೆ ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಮಹಿಳೆಯರಿಗೆ ರಾತ್ರಿ 10 ಗಂಟೆವರೆಗೆ ಮಾತ್ರ ಕೆಲಸ ಮಾಡಲು ಅವಕಾಶ ಇದೆ.

* ದೇಶದ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿಯೂ  ರಾತ್ರಿ ಪಾಳಿಯಲ್ಲಿ ದುಡಿಯುವಂತಿಲ್ಲ.

* 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಹಿಳಾ ಉದ್ದಿಮೆದಾರರಿಗೆ ಯಾವುದೇ ರೀತಿಯ ಪ್ರೋತ್ಸಾಹಧನ ನೀಡುವ ಯೋಜನೆ, ನೀತಿ ನಿಯಮಗಳನ್ನು ಹೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.