ADVERTISEMENT

ಮಾಹಿತಿ ಕದಿಯುತ್ತಿರುವ ಚೀನಾ: ಹಿಲರಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2015, 16:20 IST
Last Updated 10 ಜುಲೈ 2015, 16:20 IST

ವಾಷಿಂಗ್ಟನ್ (ಪಿಟಿಐ): ‘ಅಮೆರಿಕದಲ್ಲಿ ಚಲಿಸದೆ ಇರುವುದೆಲ್ಲವನ್ನೂ ಚೀನಾ ಹ್ಯಾಕ್ ಮಾಡುತ್ತದೆ. ಅಲ್ಲದೆ ಸರ್ಕಾರದ ಸಾಕಷ್ಟು ಮಾಹಿತಿಯನ್ನು ಅದು ಕದಿಯು ತ್ತಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಯತ್ನಿಸುತ್ತಿರುವ ಹಿಲರಿ ಕ್ಲಿಂಟನ್ ಆರೋಪಿಸಿದ್ದಾರೆ.

‘ಅಮೆರಿಕದ ವಾಣಿಜ್ಯ ರಹಸ್ಯಗಳು, ರಕ್ಷಣಾ ಗುತ್ತಿಗೆದಾರರ ವಿವರಗಳು, ಸರ್ಕಾರದ ಇತರ ಮಾಹಿತಿಯನ್ನು ಚೀನಾ ಕದಿಯುತ್ತಿದೆ. ಅದರಿಂದ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಹಿಲರಿ ಹೇಳಿದ್ದಾರೆ. ಹಲವು ಮಾಹಿತಿ ಕಳ್ಳರು (ಹ್ಯಾಕರ್‌ಗಳು) ಚೀನಾ ಸೇನೆಗಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಅಮೆರಿಕದ ಪ್ರತಿಯೊಂದು ಇಲಾಖೆಯ ಮಾಹಿತಿಯನ್ನೂ ಕದಿಯಲಾಗುತ್ತಿದೆ. ಅಮೆರಿಕದ 40 ಲಕ್ಷದಷ್ಟು ಹಾಲಿ ಮತ್ತು ಮಾಜಿ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯನ್ನೂ ಕದಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ನ್ಯೂ ಹ್ಯಾಂಪ್‌ಶೈರ್‌ನ ಗ್ಲೆನ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚೀನಾ ಶಾಂತಿಯುತವಾಗಿ ಬೆಳೆಯುವುದನ್ನು ನಾನು ಬಯಸುತ್ತೇನೆ. ಆದರೂ ಅಮೆರಿಕ ಮತ್ತಷ್ಟು ಜಾಗೃತವಾಗಿರುವ ಅವಶ್ಯಕತೆ ಇದೆ’ ಎಂದು  ಹೇಳಿದ್ದಾರೆ.
‘ಚೀನಾದ ಸೇನೆ ತ್ವರಿತವಾಗಿ ವೃದ್ಧಿಗೊಳ್ಳುತ್ತಿದೆ. ಎಲ್ಲೆಡೆ ಸೇನಾ ನೆಲೆಗಳನ್ನು ಸ್ಥಾಪಿಸುವ ಮೂಲಕ ಚೀನಾ, ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಫಿಲಿಪ್ಪೀನ್ಸ್‌ನಂತಹ ದೇಶಗಳನ್ನು ಆತಂಕಕ್ಕೆ ದೂಡುತ್ತಿದೆ’ ಎಂದು ಹಿಲರಿ ವಾಗ್ದಾಳಿ ನಡೆಸಿದ್ದಾರೆ.

ಅಣ್ವಸ್ತ್ರ ಹೊಂದುವ ಇರಾನ್‌ನ ಆಸೆಗೆ ತಡೆ: ‘ಅಣ್ವಸ್ತ್ರ ಹೊಂದುವ ಇರಾನ್‌ನ ಇರಾದೆಗೆ ತಡೆಯೊಡ್ಡಲು ಅಮೆರಿಕ ಸರಿಯಾದ ನಿಲುವು ತೆಗೆದುಕೊಳ್ಳುತ್ತದೆ.  ಇದು ಸಾಧ್ಯವಾದರೂ ಇರಾನ್‌ನ ಆಕ್ರಮಣಕಾರಿ ಮನೋಭಾವ ಕೊನೆಯಾಗದು’ ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ರಷ್ಯಾದ ಗಡಿ ವಿಸ್ತರಿಸಲು ಯತ್ನಿಸುತ್ತಿರುವ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌  ನಡೆಯನ್ನೂ ಹಿಲರಿ ಟೀಕಿಸಿದ್ದಾರೆ. ಕ್ರಿಮಿಯಾವನ್ನು ಆಕ್ರಮಿಸಿರುವಂತಹ ರಷ್ಯಾದ ಕ್ರಮಗಳು ಅಮೆರಿಕಕ್ಕೆ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾಣಿಜ್ಯ ರಹಸ್ಯಗಳು, ಸೇನಾ ಒಪ್ಪಂದಗಳು ಸೇರಿ ಸರ್ಕಾರದ ಎಲ್ಲ ಮಾಹಿತಿಗಳನ್ನು ಚೀನಾ ಕದಿಯುತ್ತಿದೆ. ಆ ಮೂಲಕ ಲಾಭಕ್ಕೆ ಯತ್ನಿಸುತ್ತಿದೆ.
ಹಿಲರಿ ಕ್ಲಿಂಟನ್,  ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.