ADVERTISEMENT

ಮೇಡಂ ಟುಸಾಡ್ಸ್‌ನಲ್ಲಿ ಪ್ರಧಾನಿ ಮೋದಿ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ಲಂಡನ್‌ (ಪಿಟಿಐ): ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಲಂಡನ್‌ನ ಪ್ರತಿಷ್ಠಿತ ಮೇಡಂ ಟುಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯೂ ಸ್ಥಾನ ಪಡೆದಿದೆ.

ದೆಹಲಿಯಲ್ಲಿ ತಯಾರಿಸಿದ್ದ ಮೋದಿ ಅವರ ಮೇಣದ ಪ್ರತಿಮೆಯನ್ನು ಮೇಡಂ ಟುಸಾಡ್ಸ್ ವಸ್ತುಸಂಗ್ರಹಾಲಯ ತಂಡ  ಗುರುವಾರ ಸ್ವೀಕರಿಸಿತು. 

ವಸ್ತುಸಂಗ್ರಹಾಲಯದ ಪ್ರಧಾನ ವ್ಯವಸ್ಥಾಪಕ ಎಡ್ವರ್ಡ್‌ ಫುಲ್ಲರ್‌ ಮಾತನಾಡಿ, ‘ಮೋದಿ ಅವರು ಈಗಾಗಲೇ ತಮ್ಮ ಪ್ರತಿಮೆಯನ್ನು ದೆಹಲಿಯಲ್ಲಿ ವೀಕ್ಷಿಸಿದ್ದಾರೆ. ಆದರೂ ಲಂಡನ್‌ಗೆ ಬಂದು ವೀಕ್ಷಿಸಲು ಸ್ವಾಗತಿಸುತ್ತೇವೆ’ ಎಂದರು.

‘ಪ್ರತಿಮೆ ಸ್ಥಾಪನೆಯಿಂದಾಗಿ ವಸ್ತುಸಂಗ್ರಹಾಲಯಕ್ಕೆ ಬರುವವರಿಗೆ ಪ್ರಭಾವಿ ನಾಯಕನನ್ನು ನೋಡಲು ಅವಕಾಶ ಸಿಕ್ಕಿದೆ’ ಎಂದು ತಿಳಿಸಿದ್ದಾರೆ. ಬಿಳಿ ಕುರ್ತಾ–ಪೈಜಾಮಾದ ಮೇಲೆ ಕೆನೆಬಣ್ಣದ ಮೇಲಂಗಿ ಧರಿಸಿದ್ದು,  ಎರಡೂ ಕೈ ಮುಗಿದು ನಮಸ್ಕರಿಸುವ ಭಂಗಿಯಲ್ಲಿ ಪ್ರತಿಮೆ ಇದೆ.

ಜಾಗತಿಕ ನಾಯಕರಾದ ಬರಾಕ್‌ ಒಬಾಮ, ಡೇವಿಡ್‌ ಕ್ಯಾಮರೂನ್‌, ಏಂಜೆಲಾ ಮರ್ಕೆಲ್‌, ಫ್ರಾಂಸ್ವಾ ಒಲಾಂಡ್‌, ಮಹಾತ್ಮ ಗಾಂಧಿ ಮತ್ತು ವಿನ್‌ಸ್ಟನ್‌ ಚರ್ಚಿಲ್‌ ಅವರ ಮೇಣದ ಪ್ರತಿಮೆಗಳೂ ವಸ್ತುಸಂಗ್ರಹಾಲಯದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.