ADVERTISEMENT

ವೀಸಾ ಮಸೂದೆ ಮಂಡನೆ ಭಾರತೀಯರಿಗೆ ಅನುಕೂಲ

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST

ವಾಷಿಂಗ್ಟನ್‌: ಅಮೆರಿಕದ ಪಿಎಚ್‌. ಡಿ ಹೊಂದಿರುವ ವಿದೇಶಿಯರಿಗೆ ಎಚ್‌1ಬಿ ವೀಸಾ ನೀಡಿಕೆ ಮಿತಿಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವ ಒಳಗೊಂಡ ಮಸೂದೆಯನ್ನು ಅಮೆರಿಕ ಸಂಸತ್ತಿನ ಜನಪ್ರತಿನಿಧಿ ಸಭೆಯಲ್ಲಿ ಪುನಃ ಮಂಡಿಸಲಾಗಿದೆ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಅಥವಾ ಗಣಿತ ವಿಷಯದಲ್ಲಿ  ಅಮೆರಿಕದಲ್ಲಿ ಪಿಎಚ್‌.ಡಿ ಪಡೆದ ವಿದೇಶಿಗರಿಗೆ ಉದ್ಯೋಗ ಆಧಾರಿತ ಗ್ರೀನ್‌ಕಾರ್ಡ್‌ ಮತ್ತು  ವಾರ್ಷಿಕವಾಗಿ ಎಚ್‌1ಬಿ ವೀಸಾ ನೀಡಿಕೆಯ ಮಿತಿಯ ಅಧಾರದ ಮೇಲೆ ವಿನಾಯಿತಿ ನೀಡುವ ಪ್ರಸ್ತಾವ ಮಸೂದೆಯಲ್ಲಿದೆ.  
ಸಂಸತ್‌ ಸದಸ್ಯರಾದ ಎರಿಕ್ ಪೌಲ್ಸೆನ್ ಮತ್ತು ಮೈಕ್ ಕ್ವಿಗ್ಲೆ ಅವರು ಈ  ಮಸೂದೆಯನ್ನು ಮಂಡಿಸಿದ್ದಾರೆ.

ಈ ಮಸೂದೆಯಿಂದ ಅಮೆರಿಕದಲ್ಲಿ ಪಿಎಚ್‌.ಡಿ ಮಾಡುವವರಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ  ಸಂಶೋಧಕರಿಗೆ ಲಾಭವಾಗಲಿದೆ.

‘ಉನ್ನತ ಶಿಕ್ಷಣಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಂದ ಪ್ರತಿಭಾನ್ವಿತರು ಅಮೆರಿಕಕ್ಕೆ ಬರುವುದು ಆಶ್ಚರ್ಯಕರ ಸಂಗತಿಯಲ್ಲ. ಇಲ್ಲಿ ಶಿಕ್ಷಣ ಮತ್ತು ತರಬೇತಿ ಪಡೆದಿರುವುದರ ಲಾಭ  ಅಮೆರಿಕದ ಅರ್ಥವ್ಯವಸ್ಥೆಗೆ ಆಗಬೇಕು’ ಎನ್ನುತ್ತಾರೆ ಕಾಂಗ್ರೆಸ್‌ ಸದಸ್ಯ ಪೌಲ್ಸೆನ್‌.

ಹೊಸ ವೀಸಾ ನಿಯಮದಿಂದ ಅಮೆರಿಕದಲ್ಲಿ ಸಾವಿರಾರು ಉನ್ನತ ಹುದ್ದೆಗಳು ಖಾಲಿಯಾಗಲಿವೆ. ಅಮೆರಿಕ ಕಂಪೆನಿಗಳು ತಮಗೆ ಅಗತ್ಯವಿರುವ ವೃತ್ತಿಪರರನ್ನು ಆಯ್ಕೆ ಮಾಡಿಕೊಳ್ಳಲು ಈ   ಕಾನೂನು ನೆರವಾಗಲಿದೆ  ಎಂದು ಅವರು ತಿಳಿಸಿದ್ದಾರೆ. ಎಚ್1ಬಿ ವೀಸಾ ನಿಯಮ ಕಠಿಣಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಕಳೆದ ತಿಂಗಳು ಟ್ರಂಪ್‌ ಸಹಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT