ADVERTISEMENT

‘ಷರೀಫ್ ಪದಚ್ಯುತಗೊಂಡರೆ ಶೆಬಾಜ್ ಪಾಕಿಸ್ತಾನ ಪ್ರಧಾನಿ’

ಮಾಧ್ಯಮ ವರದಿಯಲ್ಲಿ ಉಲ್ಲೇಖ

ಪಿಟಿಐ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
‘ಷರೀಫ್ ಪದಚ್ಯುತಗೊಂಡರೆ ಶೆಬಾಜ್ ಪಾಕಿಸ್ತಾನ ಪ್ರಧಾನಿ’
‘ಷರೀಫ್ ಪದಚ್ಯುತಗೊಂಡರೆ ಶೆಬಾಜ್ ಪಾಕಿಸ್ತಾನ ಪ್ರಧಾನಿ’   

ಇಸ್ಲಾಮಾಬಾದ್: ಪನಾಮ ಪೇಪರ್ಸ್ ಸೋರಿಕೆ ಹಗರಣದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಸುಪ್ರೀಂಕೋರ್ಟ್ ಒಂದು ವೇಳೆ ಪದಚ್ಯುತಗೊಳಿಸಿ ಆದೇಶಿಸಿದರೆ, ಅವರ ಸಹೋದರ ಹಾಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಬಾಜ್ ಷರೀಫ್ ಅವರು ಪಾಕ್‌ನ ಮುಂದಿನ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸಿಫ್‌ ಮಧ್ಯಂತರ ಪ್ರಧಾನಿ: ಶೆಬಾಜ್ ಅವರು ಪ್ರಸ್ತುತ ಸಂಸತ್ತಿನ ಕೆಳಮನೆಯ ಸದಸ್ಯರಾಗಿಲ್ಲ. ಹೀಗಾಗಿ ತಕ್ಷಣಕ್ಕೆ ಅವರ ಆಯ್ಕೆ ಆಗುವುದಿಲ್ಲ. ಅವರು ಚುನಾವಣೆ ಸ್ಪರ್ಧಿಸಿ ಗೆಲ್ಲಬೇಕಿದೆ. ಅವರು ಆಯ್ಕೆಯಾಗುವವರೆಗೆ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಮಧ್ಯಂತರ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ನವಾಜ್ ಷರೀಫ್ ವಿರುದ್ಧ ತೀರ್ಪು ಬಂದಲ್ಲಿ, ಸಾಧ್ಯವಿರುವ ಎಲ್ಲ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಶುಕ್ರವಾರ ನಡೆದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌ಎನ್) ಪಕ್ಷದ ಉನ್ನತ ಮಟ್ಟದ ಸಭೆ ನಿರ್ಣಯ ಕೈಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ADVERTISEMENT

ಷರೀಫ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶೆಬಾಜ್ ಷರೀಫ್, ಸಚಿವರು, ಪ್ರಕರಣದಲ್ಲಿ ಷರೀಫ್ ಅವರನ್ನು ಪ್ರತಿನಿಧಿಸುತ್ತಿರುವ ಕಾನೂನು ಪರಿಣಿತರ ತಂಡ ಹಾಗೂ ಸಲಹೆಗಾರರು ಉಪಸ್ಥಿತರಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ತಜ್ಞರ ತಂಡವು ಪ್ರಧಾನಿಗೆ ಮಾಹಿತಿ ನೀಡಿತು.

ವರದಿ ತಳ್ಳಿಹಾಕಿದ ಆಸಿಫ್: ‘ಇಡೀ ಪಕ್ಷವು ಷರೀಫ್ ಅವರ ಬೆಂಬಲಕ್ಕಿದ್ದು, ಪ್ರಧಾನಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಆಸಿಫ್ ಅವರು ಹೇಳಿದ್ದಾರೆ.

ಪನಾಮ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರವಷ್ಟೇ ವಿಚಾರಣೆ ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿದೆ. ಇದು ಷರೀಫ್ ಅವರ ರಾಜಕೀಯ ಜೀವನವನ್ನೇ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಯಿದೆ. ಇಜಾಜ್ ಅಫ್ಜಲ್ ಖಾನ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ತೀರ್ಪು ಪ್ರಕಟಣೆಗೆ ದಿನ ನಿಗದಿ ಮಾಡಿಲ್ಲ.

ಮುಖ್ಯಾಂಶಗಳು

* ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಬೇಕಿರುವ ಶೆಬಾಜ್
* ಅಲ್ಲಿಯವರೆಗೆ ರಕ್ಷಣಾ ಸಚಿವ ಆಸಿಫ್ ಮಧ್ಯಂತರ ಪ್ರಧಾನಿ?
* ಪಿಎಂಎಲ್‌ಎನ್ ಪಕ್ಷದ ಉನ್ನತ ಮಟ್ಟದ ಸಭೆ ನಿರ್ಣಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.