ADVERTISEMENT

ಸಿಂಹವನ್ನೇ ಬೇಟೆಯಾಡಿದ ದಂತವೈದ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 20:02 IST
Last Updated 30 ಜುಲೈ 2015, 20:02 IST

ಹರಾರೆ (ಎಪಿ): ವಿಶ್ವಪ್ರಸಿದ್ಧ ಸೆಸಿಲ್‌ ಹೆಸರಿನ ಆಫ್ರಿಕನ್ ಸಿಂಹವನ್ನು ಅಮೆರಿಕಾದ ಶ್ರೀಮಂತ ದಂತವೈದ್ಯ ಪಾಲ್ಮರ್‌ ಬೇಟೆಯಾಡಿ ಕೊಂದಿರುವುದು ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತವೈದ್ಯನಾಗಿರುವ  ಪಾಲ್ಮರ್‌ ಸಿಂಹವನ್ನು ಬೇಟಿಯಾಡಿ ಕೊಂದಿರುವುದು ವನ್ಯಜೀವಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಂಬಾಬ್ವೆಯ ಹವಾಂಗೆ ರಾಷ್ಟ್ತೀಯ ಅಭಯಾರಣ್ಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಈ ಸಿಂಹದ ಫೊಟೋ ತೆಗೆಯುವುದು ಕೂಡ  ಕಷ್ಟದ ಕೆಲಸ.  ಬಿಲ್ಲುವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದಿರುವ ಪಾಲ್ಮರ್‌ ಬೇಟೆಯಾಡುವುದನ್ನು ಗೀಳಾಗಿ ಬೆಳೆಸಿಕೊಂಡಿದ್ದಾರೆ.  ಅಮೆರಿಕಾದಿಂದ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಈತ  ಮೊದಲು ಸಿಂಹವನ್ನು ಗುರಿಯಾಗಿಸಿಕೊಂಡು  ಬಾಣಬಿಟ್ಟಿದ್ದಾರೆ. ಗಾಯಗೊಂಡು ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡ ಸಿಂಹಕ್ಕಾಗಿ 40 ಗಂಟೆ ಹುಡುಕಾಟ ನಡೆಸಿ ನಂತರ ಬಂದೂಕಿನಿಂದ ಗುಂಡುಹಾರಿಸಿ ಕೊಂದಿದ್ದಾರೆ. ಅಲ್ಲದೆ ಅದರೊಂದಿಗೆ ಫೊಟೋ ಸಹ ತೆಗೆದುಕೊಂಡಿದ್ದಾರೆ.  ಈ ಪ್ರದೇಶದಲ್ಲಿ ಬೇಟೆಯಾಡುವುದು ಕಾನೂನುಬದ್ಧ ಇರಬಹುದು ಎಂದು ಭಾವಿಸಿರುವುದಾಗಿ ಅವರು  ಹೇಳಿಕೊಂಡಿದ್ದಾರೆ. 

ಅಭಯಾರಣ್ಯಕ್ಕೆ ಬರುತ್ತಿದ್ದ ಪ್ರವಾಸಿಗರ ಆಕರ್ಷಣೆಯ ಕೆಂದ್ರಬಿಂದುವಾಗಿದ್ದ ಈ ಸಿಂಹವನ್ನು ಕೊಂದಿರುವುದು ನೋವನ್ನುಂಟು ಮಾಡಿದೆ ಎಂದು ಜಿಂಬಾಬ್ವೆಯ ಸಫಾರಿ ನಿಯೋಜಕರ ಕೂಟದ ಅಧ್ಯಕ್ಷ ಇಮ್ಯನುವೆಲ್ ಫುಂಡ್ರಿಯಾ ಅವರು ಹೇಳಿದ್ದಾರೆ. ಪಾಲ್ಮರ್‌ ಸಿಂಹದ ಬೇಟೆಗಾಗಿ ರೂ50 ಲಕ್ಷ ನೀಡಿದ್ದ ಎಂದು ಅವರು ಹೇಳಿಕೊಂಡಿದ್ದಾರೆ.

‌‌ಈ ಹಿಂದೆ ಅಮೆರಿಕಾದಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಿದ ಆರೋಪ ಹೊತ್ತಿದ್ದು,  ಆತನಿಗೆ ಕಠಿಣ ಶಿಕ್ಷೆ ಹಾಗೂ  ದಂಡವಿಧಿಸಬೇಕೆಂದು ವನ್ಯಜೀವಿ ಸಂರಕ್ಷಣಾ ಸಂಘಟನೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.