ADVERTISEMENT

ಹುಸೇನ್‌ ಭೇಟಿ ಮಾಡಿದ ಪ್ರಧಾನಿ ಷರೀಫ್‌

ರಾಜಕೀಯ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 11:25 IST
Last Updated 21 ಆಗಸ್ಟ್ 2014, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌ (ಪಿಟಿಐ): ಪ್ರತಿಪಕ್ಷ ನಾಯಕ ಇಮ್ರಾನ್‌ ಖಾನ್‌ ಹಾಗೂ ಧರ್ಮಗುರು ತಾಹಿರ್ ಉಲ್ ಖಾದ್ರಿ ಅವರು ನಡೆಸುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಯಿಂದ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟಿನ  ಬಗ್ಗೆ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ಗುರುವಾರ ಅಧ್ಯಕ್ಷ ಮಮ್ನೂನ್‌ ಹುಸೇನ್ ಅವರನ್ನು ಭೇಟಿ ಮಾಡಿ ವಿವರಿಸಿದ್ದಾರೆ.

ಖಾನ್‌ ಹಾಗೂ ಖಾದ್ರಿ ಅವರು ನಡೆಸುತ್ತಿರುವ ಪ್ರತಿಭಟನೆಯನ್ನು ಶಾಂತಿಯುತವಾಗಿ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಷರೀಫ್ ಅವರು ಅಧ್ಯಕ್ಷರಿಗೆ ತಿಳಿಸಿದ್ದಾರೆ.

ಕಾನೂನು ಹಾಗೂ ಸುವ್ಯವಸ್ಥೆಯ  ಬಗ್ಗೆ, ಅದರಲ್ಲೂ ವಿಶೇಷವಾಗಿ ಸೂಕ್ಷ್ಮ  ಪ್ರದೇಶವಾಗಿರುವ ‘ನಿಷೇಧಿತ ವಲಯ’ದತ್ತ ಪ್ರತಿಭಟನಾಕಾರರು  ನುಗ್ಗುತ್ತಿರುವ ಬಗ್ಗೆ ಷರೀಫ್‌ ಅವರು ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಸಂಸತ್ ಭವನ, ಪ್ರಧಾನಿ ನಿವಾಸ, ಅಧ್ಯಕ್ಷರ ನಿವಾಸ, ಸುಪ್ರೀಂ ಕೋರ್ಟ್‌, ರಾಯಭಾರಿ ಕಚೇರಿಗಳು ಸೇರಿದಂತೆ ಸರ್ಕಾರದ ಪ್ರಮುಖ ಕಟ್ಟಡಗಳು ‘ನಿಷೇಧಿತ ವಲಯ’ದಲ್ಲಿವೆ.

‘ಚುನಾಯಿತ ಪ್ರಧಾನಿಯಾದ ನೀವು ರಾಜೀನಾಮೆ ನೀಡಬಾರದು. ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಪ್ರತಿಭಟನಾಕಾರರ ಗರಿಷ್ಠ ಬೇಡಿಕೆಗಳಿಗೆ ಸ್ಪಂದಿಸಲು ಯತ್ನಿಸಿಬೇಕು ಎಂದು ಹುಸೇನ್‌ ಅವರು  ಷರೀಫ್‌ ಅವರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಅಲ್ಲದೇ, ವಿದೇಶಿ ದೂತರು ವಾಸಿಸುವ ರಾಯಭಾರಿ ವಲಯ ಮತ್ತು ಎಲ್ಲಾ ಪ್ರಮುಖ ಕಚೇರಿಗಳ ಭದ್ರತೆಯನ್ನು ಖಚಿತಪಡಿಸುವಂತೆ ಸರ್ಕಾರಕ್ಕೆ ಅಧ್ಯಕ್ಷರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.