ADVERTISEMENT

‘ಸಮುದ್ರ ಮಾರ್ಗದಲ್ಲಿ ಪೈಪೋಟಿ ಬೇಡ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST
ರಾಷ್ಟ್ರಪತಿ ಪ್ರಣವ್‌ ಅವರನ್ನು ಜಾಕ್ಸನ್ಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಪ್ರಧಾನಿ ಲಿಯೊ ಡಿಯೋನ್‌ ಅವರು ಸ್ವಾಗತಿಸಿದರು.  -ಪಿಟಿಐ ಚಿತ್ರ
ರಾಷ್ಟ್ರಪತಿ ಪ್ರಣವ್‌ ಅವರನ್ನು ಜಾಕ್ಸನ್ಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಪ್ರಧಾನಿ ಲಿಯೊ ಡಿಯೋನ್‌ ಅವರು ಸ್ವಾಗತಿಸಿದರು. -ಪಿಟಿಐ ಚಿತ್ರ   

ಪೊರ್ಟ್‌ ಮೊರೆಸ್ಬಿ (ಪಿಟಿಐ): ಸಮುದ್ರಯಾನ ಮಾರ್ಗಗಳು ಉದ್ವಿಗ್ನ ಮುಕ್ತವಾಗಿರಬೇಕು ಮತ್ತು ಪ್ರತಿಸ್ಪರ್ಧೆಗೆ ಕಾರಣವಾಗಬಾರದು ಎಂದು ಭಾರತ ಪ್ರತಿಪಾದಿಸಿದೆ.

ಪೆಸಿಫಿಕ್‌ ಪ್ರದೇಶದಲ್ಲಿನ ಅತಿ ದೊಡ್ಡ ದ್ವೀಪವಾಗಿರುವ ಪಪೂವಾ ನ್ಯೂ ಗಿನಿಯಾ (ಪಿಎನ್‌ಜಿ)ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ‘ಪೋಸ್ಟ್‌ ಕೊರಿಯರ್‌’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮುದ್ರಯಾನಕ್ಕೆ ಸಂಬಂಧಿಸಿದಂತೆ ಪಿಎನ್‌ಜಿ ಜತೆ ಭದ್ರತಾ ಸಹಕಾರ ಪಡೆಯಲು ಭಾರತ ಯಾವುದೇ ರಾಷ್ಟ್ರದ ಜತೆ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೆಸಿಫಿಕ್‌ ದ್ವೀಪದ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಬಲವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪಿಎನ್‌ಜಿ ಮತ್ತು ಭಾರತ ನಡುವಿನ ಭದ್ರತಾ ಸಹಕಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಸಮುದ್ರದ ಎಲ್ಲ ಸಂಪರ್ಕ ಮಾರ್ಗಗಳು ಉದ್ವಿಗ್ನ ರಹಿತವಾಗಿರಬೇಕು ಮತ್ತು ಪೈಪೋಟಿಯಿಂದ ಮುಕ್ತವಾಗಿರಬೇಕು ಎಂದು ಭಾರತ ಬಯಸುತ್ತದೆ ಎಂದು ತಿಳಿಸಿದ್ದಾರೆ.

ಪೆಸಿಫಿಕ್‌ ದ್ವೀಪದ ರಾಷ್ಟ್ರಗಳ ವಿಶೇಷ ಆರ್ಥಿಕ ವಲಯಗಳು ಮತ್ತು ನೀರು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ವಿಶೇಷ ಆರ್ಥಿಕ ವಲಯಗಳನ್ನು ರಕ್ಷಿಸಲು ಪಿಎನ್‌ಜಿ ಮತ್ತು ಇತರ ದ್ವೀಪ ರಾಷ್ಟ್ರಗಳಿಗೆ ಅಗತ್ಯ ನೆರವು ನೀಡಲು ಭಾರತ ಸಿದ್ಧವಿದೆ.

ಜತೆಗೆ ವಿಪತ್ತುಗಳ ಬಗ್ಗೆ ಮಾಹಿತಿ ಹಾಗೂ ನಿರ್ವಹಣೆ ಕುರಿತು ನೆರವು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಕಡಲ ಭದ್ರತೆ, ಭಯೋತ್ಪಾದನೆ ಮತ್ತು ನಕಲಿ ವಸ್ತುಗಳ ಹಾವಳಿ ಆತಂಕವನ್ನು ಸೃಷ್ಟಿಸಿವೆ. ಇವುಗಳನ್ನು  ಒಗ್ಗಟಿನಿಂದ ನಿಯಂತ್ರಿಸಬೇಕಾಗಿದೆ  ಎಂದು ತಿಳಿಸಿದ್ದಾರೆ.

‘ವಸುದೈವ ಕುಟುಂಬಕಂ’ ಸಿದ್ಧಾಂತ ಭಾರತದ ರಾಜತಾಂತ್ರಿಕತೆಗೆ ಮಾರ್ಗದರ್ಶನವಾಗಿದೆ. ಈ ಸೂತ್ರದ  ಅನ್ವಯವೇ ಭಾರತ ಎಲ್ಲ ದೇಶಗಳ ಜತೆ ಸಂಬಂಧ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.  ಗುರುವಾರ ಇಲ್ಲಿಗೆ ಬಂದ ರಾಷ್ಟ್ರಪತಿಗೆ ವಿದ್ಯುಕ್ತ ಸ್ವಾಗತ
ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.