`ಆಪ್ತಮಿತ್ರ' ನನ್ನ ಬದುಕಿನ ಅತ್ಯಂತ ಯಶಸ್ವಿ ಚಿತ್ರವಾಯಿತು. ನಂಬಿದ ಪರದೆ ಮೋಸ ಮಾಡಲಿಲ್ಲ. ಮೈಸೂರಿನಲ್ಲಿ ಪ್ರೇಕ್ಷಕರು ಚಿತ್ರಕ್ಕೆ ಟಿಕೆಟ್ ಪಡೆಯುವ ಮುಂಚೆ, `ಈ ಹಣವೆಲ್ಲಾ ದ್ವಾರಕೀಶ್‌ಗೆ ಹೋಗುತ್ತಾ?' ಎಂದು ಕೇಳಿದರಂತೆ. ಅದೇ ಭಾಗ್ಯ. ನಾನು ಕಷ್ಟದಲ್ಲಿದ್ದದ್ದು ಪ್ರೇಕ್ಷಕರಿಗೆ ಗೊತ್ತಿತ್ತು. ಒಂದು `ಬ್ರೇಕ್' ಕೊಡಬೇಕು ಎಂಬ ಮನಸ್ಸೂ ಅವರಿಗೆ ಇತ್ತು. ಅದರಿಂದಲೇ ಸಿನಿಮಾ ಗೆದ್ದಿತು. ಆದರೆ ಆ ಚಿತ್ರದಲ್ಲಿ ನಟಿಸಿದ್ದ ಸೌಂದರ್ಯ ಬಿಡುಗಡೆಯ ಹೊತ್ತಿಗೆ ನಮ್ಮನ್ನೆಲ್ಲಾ ಅಗಲಿದ್ದು ದುಃಖದ ಸಂಗತಿ. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಅಪಾರ ನಂಬಿಕೆ ಆಕೆಗೆ ಚಿತ್ರೀಕರಣದ ಸಂದರ್ಭದಲ್ಲೇ ಇತ್ತು.
ಸೌಂದರ್ಯ ತಂದೆ ಸತ್ಯನಾರಾಯಣ ನಿರ್ದೇಶಕರು. ನನಗೆ ಆಪ್ತರಾಗಿದ್ದರು. ಸೌಂದರ್ಯ ಹುಟ್ಟಿದ ದಿನ ಅವರ ಮನೆಗೆ ನಾನು ಹೋಗಿದ್ದೆ. ಆ ಮಗುವೇ ಮುಂದೆ ನನ್ನ ಸಿನಿಮಾ ಜೀವನದ ಬೆಳಕಾಗುತ್ತಾಳೆ ಎಂದು ನಾನು ತಿಳಿದಿರಲಿಲ್ಲ. ಅವಳನ್ನು ಕಳೆದುಕೊಂಡು, ಈ ಯಶಸ್ಸು ನನಗೆ ಬೇಕಿರಲಿಲ್ಲ. ಬಹಳ ನೋವಾಯಿತು. ಹುಣಸೂರಿನಲ್ಲಿ ಚುನಾವಣಾ ಸಮಾರಂಭದಲ್ಲಿ ಭಾಷಣಕ್ಕೆಂದು ಹೋಗಿದ್ದಾಗ ಹೆಲಿಕಾಪ್ಟರ್ ದುರಂತದಲ್ಲಿ ಆಕೆ ಅಗಲಿದ ಸಂಗತಿಯನ್ನು ಅಲ್ಲಿದ್ದ ಪೊಲೀಸರು ನನಗೆ ತಿಳಿಸಿದರು. ನಂಬಲಾಗಲಿಲ್ಲ. ಸೌಂದರ್ಯ ಅಣ್ಣ ಅಮರ್ ಕೂಡ ನನಗೆ ಬಹಳ ಬೇಕಾಗಿದ್ದವನು.
ಚಿತ್ರ ಯಶಸ್ವಿಯಾದರೂ ನನ್ನ, ವಿಷ್ಣು ಸಂಬಂಧ ಬೆಸೆದುಕೊಳ್ಳಲಿಲ್ಲ. ವಿಷ್ಣುವರ್ಧನ್ ನಾನಿಲ್ಲದೆಯೇ `ಆಪ್ತಮಿತ್ರ' ಚಿತ್ರದ ಯಶಸ್ಸಿನ ಸಂಭ್ರಮ ಆಚರಿಸಿದ. ಅದು ಇನ್ನೊಂದು ದುಃಖದ ಸಂಗತಿ. ನಿರ್ಮಾಪಕನ ಅನುಪಸ್ಥಿತಿಯಲ್ಲಿ ಚಿತ್ರದ ಯಶಸ್ಸಿನ ಸಮಾರಂಭ ಬಹುಶಃ ಇತಿಹಾಸದಲ್ಲೇ ನಡೆದಿರಲಿಲ್ಲವೋ ಏನೋ? ತುಂಬಾ ನೋವಾಯಿತು. ದೇವರ ಮೊರೆಹೋದೆ. ಹೆತ್ತ ಮಕ್ಕಳೇ ತಂದೆ-ತಾಯಿಯನ್ನು ದೂರ ಮಾಡುವ ಕಾಲ ಇದು; ಇದೇನು ಮಹಾ?
ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಅತ್ಯಂತ ಅನ್ಯಾಯದ ವಿಷಯ ಎಂದರೆ ಆತನ ಮುಂದಿನ ಚಿತ್ರ `ಆಪ್ತರಕ್ಷಕ'ದ ಸಮಾರಂಭದಲ್ಲಿ ವಿಷ್ಣು ಇರಲೇ ಇಲ್ಲ. ದೇವರು ಅವನನ್ನು ಕರೆದುಕೊಂಡಿದ್ದ. ಹೃದಯಕ್ಕೆ ಆಘಾತವಾಯಿತು. ಇಲ್ಲಿ ಯಾವುದೂ ಶಾಶ್ವತವಲ್ಲ, ಸಾವಿಲ್ಲದೆ ಯಾರೂ ಇಲ್ಲ.
`ಆಪ್ತಮಿತ್ರ' ನನಗಷ್ಟೇ ಅಲ್ಲ; ಪಿ.ವಾಸು ಹಾಗೂ ರಜನೀಕಾಂತ್ ಪಾಲಿಗೂ ಅತ್ಯಂತ ಯಶಸ್ವಿ ಚಿತ್ರವಾಯಿತು. `ಚಂದ್ರಮುಖಿ'ಯಾಗಿ ಅದು ತಮಿಳಿನಲ್ಲಿ ತಯಾರಾಯಿತು. ವಾಸು ತಮಿಳಿನಲ್ಲಿ ಆ ಚಿತ್ರ ನಿರ್ದೇಶಿಸಿದ್ದರಿಂದ ಸಂತೋಷವಾದರೂ ಅದನ್ನು ರಜನಿ ನನಗೇ ಮಾಡಬಹುದಾಗಿತ್ತಲ್ಲ ಎಂಬ ಆಸೆ ಇತ್ತು.
ಎಲ್ಲಾ ನಿರ್ಮಾಪಕರಿಗೂ ಸಹಜವಾಗಿಯೇ ಬರುವಂಥ ಬಯಕೆ ಅದು. ಆ ಚಿತ್ರದ ಪೂಜೆಗೆ ನಾನು ಚೆನ್ನೈಗೆ ಹೋಗಿದ್ದೆ. ರಜನಿ ನನ್ನ ನೋಡಿ, `ನಿಮ್ಮನ್ನು ಕಂಡರೆ ನನಗೆ ಗಿಲ್ಟ್ ಫೀಲ್ ಆಗುತ್ತೆ' ಅಂದ. `ಪರವಾಗಿಲ್ಲ ಬಿಡು, ದೇವರು ನಿನಗೆ ಬುದ್ಧಿ ಹೇಳುತ್ತಾನೆ' ಎಂದೆ. `ಮಣಿಚಿತ್ರತಾಳ್' ಮಲಯಾಳಂ ಚಿತ್ರದ ರೀಮೇಕ್ ಹಕ್ಕನ್ನು ಎಲ್ಲಾ ಭಾಷೆಗಳಿಗೆ ನಾನು ಪಡೆದಿದ್ದರೆ ನನ್ನನ್ನು ಹಿಡಿಯುವವರೇ ಇರುತ್ತಿರಲಿಲ್ಲ. ರಜನಿ ನನಗೆ ಒಂದು ಮಾತೂ ತಿಳಿಸದೆ `ಚಂದ್ರಮುಖಿ' ಮಾಡಿದ್ದು ಸರಿಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ. `ಹೋಗಲಿ, ಆ ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ನನಗೆ ಕೊಡು' ಎಂದು ಕೇಳಿದೆ. `ನನ್ನ ಚಿತ್ರ ಬಿಡುಗಡೆ ಆಗುವುದರೊಳಗೆ ನಿಮ್ಮ ಚಿತ್ರ ತೆರೆಕಂಡು ಒಂದು ವರ್ಷವಾಗಿರುತ್ತದೆ. ನಿಮಗೆ ಅತಿ ಆಸೆ ದ್ವಾರಕೀಶ್ ಸಾರ್' ಎಂದು ರಜನಿ ಪ್ರತಿಕ್ರಿಯಿಸಿದ್ದ. ಆಸೆ ಇಲ್ಲದವರು ಯಾರಿದ್ದಾರೆ? ಮನುಷ್ಯನಿಗೆ ನಿಯತ್ತು ಮುಖ್ಯ. ಅದು ಇಲ್ಲದಿದ್ದರೆ ಬದುಕಿನ ಕ್ಲೈಮ್ಯಾಕ್ಸ್‌ನಲ್ಲಿ ಅನಿರೀಕ್ಷಿತ ತಿರುವುಗಳಾಗುತ್ತವೆ. ನಾನು ಕೂಡ `ಹಹ್ಹಹ್ಹಾ' ಎಂದು ರಜನಿ ಮಾತಿಗೆ ನಗುತ್ತಾ, ದೇವರನ್ನು ಸ್ಮರಿಸಿದೆ.
ಅಮೆರಿಕದಲ್ಲಿ ನನ್ನ ಒಬ್ಬ ಮಗ ಇದ್ದ. ಆದರೂ ಅಲ್ಲಿಗೆ ಹೋದರೆ ಚಿತ್ರೀಕರಣಕ್ಕೆಂದು ಹೋಗಬೇಕು ಇಲ್ಲವೇ ಸಿನಿಮಾ ತೆಗೆದುಕೊಂಡು ಅಲ್ಲಿನವರಿಗೆ ತೋರಿಸಬೇಕು ಎಂಬುದು ಸಂಕಲ್ಪವಾಗಿತ್ತು. `ಆಪ್ತಮಿತ್ರ' ಯಶಸ್ವಿಯಾದ ಮೇಲೆ ಅದನ್ನು ತೆಗೆದುಕೊಂಡು ಅಮೆರಿಕಗೆ ಹೋದೆ. ಅಲ್ಲಿನ ವಿವಿಧ ಕನ್ನಡ ಸಂಘದವರು ಚಿತ್ರ ನೋಡಿ ಖುಷಿಪಟ್ಟರು. ಮೂರು ತಿಂಗಳು ನಾನು, ಅಂಬುಜಾ ಆ ದೇಶ ಸುತ್ತಿದೆವು. ಅಲ್ಲಿಂದ ಬರುವಾಗ ಕೈತುಂಬಾ ಹಣ ತಂದೆ.
ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿ ಒಂದು ಮನೆ ಕಟ್ಟಿದೆ. ಬದುಕು ಮುಗಿದೇಹೋಯಿತು ಎಂದುಕೊಂಡಿದ್ದ ಸಂದರ್ಭದಲ್ಲೂ ದೇವರ ದಯೆಯಿಂದ ಮತ್ತೆ ಗೆದ್ದೆ, ಎದ್ದುನಿಂತೆ. ಹೆಸರು, ಹಣ ಒಟ್ಟಾಗಿ ಬಂದಿತು. ಇತ್ತೀಚೆಗೆ ನಮ್ಮನ್ನು ಅಗಲಿದ ಗೆಳೆಯ ವಿಜಯಸಾರಥಿ ಹೇಳುತ್ತಿದ್ದ: ಮನುಷ್ಯನಿಗೆ ಜೀವನದಲ್ಲಿ `ಆನೆ' ಇರಬೇಕು. `ಆ' ಎಂದರೆ ಆರೋಗ್ಯ. `ನೆ' ಎಂದರೆ ನೆಮ್ಮದಿ. ಅದೀಗ ನನಗೆ ಇದೆ ಎಂಬುದು ಸಮಾಧಾನ.
ಐದಾರು ವರ್ಷ ಚಿತ್ರ ಮಾಡುವ ಗೊಡವೆಗೆ ನಾನು ಹೋಗಲಿಲ್ಲ. ಒಂದು ಚಿತ್ರದ ಯಶಸ್ಸನ್ನು ಅನುಭವಿಸಿದ್ದು ಇದೇ ಮೊದಲು. ಜೀವನವೆಲ್ಲಾ ಸಿನಿಮಾ ಮಾಡಿದ್ದೆನೇ ಹೊರತು ಯಾವುದೇ ಚಿತ್ರದ ಯಶಸ್ಸನ್ನು `ಆಪ್ತಮಿತ್ರ'ದಷ್ಟು ಅನುಭವಿಸಿರಲಿಲ್ಲ.
ಏಳು ವರ್ಷದ ನಂತರ `ವಿಷ್ಣುವರ್ಧನ' ಸಿನಿಮಾ ಮಾಡುವ ಯೋಚನೆ ಹುಟ್ಟಿತು. ಅವನ ಹೆಸರಿನಲ್ಲಿ ನಾನೊಂದು ಸಿನಿಮಾ ಮಾಡುತ್ತೇನೆಂದು ಕನಸು ಕೂಡ ಕಂಡಿರಲಿಲ್ಲ. ಅದಕ್ಕೂ ಹಲವು ಅಡಚಣೆಗಳು ಬಂದದ್ದು ಪ್ರೇಕ್ಷಕರಿಗೆ ಗೊತ್ತೇ ಇದೆ. ವಿಷ್ಣುವರ್ಧನ ಯಾರ ಸ್ವತ್ತೂ ಆಗಿರಲಿಲ್ಲ; ಅಭಿಮಾನಿಗಳ ಸ್ವತ್ತಾಗಿದ್ದ. ಕೆಲವರಿಗೆ ನನ್ನ ಯಶಸ್ಸು ಇಷ್ಟವಾಗಲಿಲ್ಲ. ಅನೇಕರು ಕಾಲೆಳೆಯಲು ಪ್ರಯತ್ನಿಸಿದರು. ಇನ್ನು ಕೆಲವರು ಕಾಲ್‌ಷೀಟ್ ಕೊಡಲಿಲ್ಲ. ಮತ್ತೊಂದಿಷ್ಟು ನಟರು ಕಾಲ್‌ಷೀಟ್ ಕೊಡಲು ತಯಾರಿದ್ದರೂ, ಅವರಿಗೆ `ಕೊಡಬೇಡಿ' ಎಂದು ಕಿವಿಯೂದುವವರು ಇದ್ದರು. ದುಷ್ಕರ್ಮಿಗಳು ಮನೆ ಮುಂದೆ ಮಾಟ ಮಾಡಿಸಿದರು. ಕಲ್ಲುಗಳನ್ನು ತೂರಿದರು. ಯಾರ‌್ಯಾರಿಗೋ ಬೇಕೆಂದೇ ಜೈಕಾರ ಹಾಕಿಸಿದರು. ಕೊನೆಗೆ ಯಾರೂ ಗೆಲ್ಲಲಿಲ್ಲ.
`ವಿಷ್ಣುವರ್ಧನ' ಶೀರ್ಷಿಕೆಗಾಗಿ ಕೋರ್ಟ್ ಮೆಟ್ಟಿಲು ಏರಲು ಕೂಡ ಸಿದ್ಧನಾಗಿದ್ದೆ. ನಿರ್ಮಾಪಕರ ಸಂಘದ ಮುನಿರತ್ನ, ಸೂರಪ್ಪ ಸಹಾಯಕ್ಕೆ ನಿಂತರು. ಕೊನೆಗೆ `ವಿಷ್ಣುವರ್ಧನ' ವಿಜೃಂಭಿಸಿದ.
ಈ ಚಿತ್ರರಂಗ ನೀರಿನ ಮೇಲಿನ ಗುಳ್ಳೆಯಂತೆ. ಯಾವುದೂ ಸ್ಥಿರವಲ್ಲ. ಗೆದ್ದಾಗ ತಲೆಬಗ್ಗಿಸಿ, ಬಿದ್ದಾಗ ಎದೆಗುಂದದೆ ನ್ಯಾಯವಾಗಿ, ಸತ್ಯವಾಗಿದ್ದರೆ ಜಯ ಗ್ಯಾರಂಟಿ ಎಂಬುದಕ್ಕೆ ನನ್ನ ಸಿನಿಮಾ ಬದುಕೇ ಸಾಕ್ಷಿ. ನಾವು ಚಿತ್ರರಂಗಕ್ಕೆ ಏನು ಮಾಡಿದ್ದೇವೆ ಎಂಬುದು ಮುಖ್ಯವೇ ಹೊರತು ಅದರಿಂದ ಏನು ಸಿಕ್ಕಿದೆ ಎಂಬುದಲ್ಲ. ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು, ಕನ್ನಡ ಚಿತ್ರರಂಗ ಉಳಿಯಬೇಕು ಎಂಬ ಹೊಣೆಗಾರಿಕೆ ಎಲ್ಲರಿಗೆ ಇರಬೇಕು. ಎಲ್ಲ ರಾಜಕೀಯವನ್ನೂ ದೂರಮಾಡಿ, ಹೃದಯ ಶುದ್ಧ ಮಾಡಿಕೊಂಡು ಚಿತ್ರರಂಗ ಬೆಳೆಸಲು ಇಲ್ಲಿರುವ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗಬೇಕು ಎಂಬುದು ನನ್ನ ಬಯಕೆ. ಕೊನೆ ಉಸಿರು ಇರುವವರೆಗೆ ನನಗೆ, ನನ್ನ ಸಂಸಾರಕ್ಕೆ ಸಿನಿಮಾ ಉಸಿರಿದ್ದಂತೆ.
ಈ ನನ್ನ ಬದುಕನ್ನು ನಿಮ್ಮ ಮುಂದೆ ಇಡಲು `ಪ್ರಜಾವಾಣಿ' ಪತ್ರಿಕೆಯವರು ಅವಕಾಶ ಮಾಡಿಕೊಟ್ಟರು. ಆದಷ್ಟೂ ಸತ್ಯ ಬರೆದಿದ್ದೇನೆ. ಕೆಲವನ್ನು ಮುಚ್ಚಿಟ್ಟಿದ್ದೇನೆ. ಹಾಗೆ ಮುಚ್ಚಿಟ್ಟಿದ್ದು ನಿಮಗೂ ಕಹಿ, ನನಗೂ ಕಹಿ. ನನ್ನ ಜೊತೆ ಸಹಕರಿಸಿದ `ಪ್ರಜಾವಾಣಿ' ಬಳಗದ ಎಲ್ಲರಿಗೂ ಕೃತಜ್ಞತೆಗಳು.
ಮುಗಿಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.