ಅಷ್ಟೆಲ್ಲಾ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತ ಮೇಲೂ ಧೃತಿಗೆಡಲಿಲ್ಲ. ಇನ್ನೊಂದು ಸಿನಿಮಾ ಬಗೆಗೆ ತಲೆ ಓಡುತ್ತಲೇ ಇತ್ತು. ಹೊಸ ನಾಯಕರನ್ನು ಹಾಕಿ ಸಿನಿಮಾ ಮಾಡುವುದು ನನ್ನ ಹಂಬಲ. ನಮ್ಮ ಮನೆಗೆ ಲೀಲಾವತಿಯ ಮಗ ವಿನೋದ್ ರಾಜ್ ಬರುತ್ತಾ ಇದ್ದ. ಅದ್ಭುತವಾಗಿ ಡಾನ್ಸ್ ಮಾಡುತ್ತಿದ್ದ. ಅವನ ಡಾನ್ಸ್ ನೋಡಿ ಹೃದಯ ಹೇಳಿತು- ಅವನೇ ನನ್ನ ಮುಂದಿನ ನಾಯಕ. ಮಿಥುನ್ ಚಕ್ರವರ್ತಿ ನಾಯಕನಾಗಿದ್ದ ಹಿಂದಿ ಚಿತ್ರ `ಡಿಸ್ಕೋ ಡಾನ್ಸರ್' ಅದೇ ಕಾಲದಲ್ಲಿ ಹಿಟ್ ಆಗಿತ್ತು. ಸುಭಾಷ್ ಘಾಯ್ ಅದರ ನಿರ್ಮಾಪಕ. ಅವರಲ್ಲಿ ಮಾತನಾಡಿ ಕನ್ನಡಕ್ಕೆ ರೀಮೇಕ್ ಹಕ್ಕು ಕೇಳಿದೆ. ಮುಂಗಡ ಹಣವನ್ನೂ ಕೊಟ್ಟು ಬಂದೆ. ನಾನು ಸಿನಿಮಾ ಮಾಡುವ ಮೊದಲು ತಾವೇ ಕನ್ನಡದಲ್ಲಿ ಅದನ್ನು ಮಾಡುವುದಾಗಿ ಸುಭಾಷ್ ಹೇಳಿದರು. ಕೊಟ್ಟ ಮುಂಗಡ ಹಣ ಕೂಡ ವಾಪಸ್ ಬರಲಿಲ್ಲ.
ನನ್ನ ಕಷ್ಟ ಕಂಡು ರಜನೀಕಾಂತ್ ಒಂದ್ಲ್ಲಲಾ ಒಂದು ದಿನ ಕಾಲ್‌ಷೀಟ್ ಕೊಡುತ್ತಾನೆ ಎಂದು ಆಸೆ ಇಟ್ಟುಕೊಂಡಿದ್ದೆ. ಆದರೆ ರಜನಿ ನನಗೆ ಮತ್ತೆ ಸಿಗಲೇ ಇಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಮದ್ರಾಸ್‌ನಿಂದ ವಾದ್ಯವೃಂದದ ಒಬ್ಬರು ಫೋನ್ ಮಾಡಿ, `ಒಂದು ಒಳ್ಳೆಯ ಮಲಯಾಳಂ ಸಿನಿಮಾ ಬಂದಿದೆ. ನೀವು ನೋಡಿ' ಎಂದು ಹೇಳಿದರು. ಗಮನ ಸೆಳೆಯುವ ವಸ್ತುವಿನ ಸಿನಿಮಾ ನೋಡಿದೊಡನೆ ಕನ್ನಡದಲ್ಲಿ ಅದನ್ನು ನಾನು ಮಾಡುತ್ತಿದ್ದೆ. ಹಾಗಾಗಿ ಅವರು ರೀರೆಕಾರ್ಡಿಂಗ್ ಹಂತದಲ್ಲಿ ನೋಡಿದ್ದ ಆ ಮಲಯಾಳಂ ಸಿನಿಮಾ ಚೆನ್ನಾಗಿದೆ ಎಂದು ಹೇಳಿದ್ದು.
ನಾನು ಸಾಮಾನ್ಯವಾಗಿ ಮಲಯಾಳಂ ಸಿನಿಮಾ ನೋಡುತ್ತಿರಲಿಲ್ಲ. ಆದರೆ ಅವರು ಹೇಳಿದ್ದರಿಂದ ಕುತೂಹಲ ಹುಟ್ಟಿ ನೋಡಿದೆ.
ಮೋಹನ್‌ಲಾಲ್ ಅಭಿನಯದ ಆ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದರು. ನನಗೆ ತುಂಬಾ ಹಿಡಿಸಿತು. ತಿರುವನಂತಪುರಕ್ಕೆ ಹೋದಾಗ ಮೋಹನ್‌ಲಾಲ್ ಫೋನ್ ನಂಬರ್ ಪತ್ತೆಮಾಡಿ, ಅವರನ್ನು ಅಭಿನಂದಿಸಿದೆ. ಅಮಿತಾಭ್ ಬಚ್ಚನ್‌ಗೆ ಸರಿಸಮಾನವಾದ ಅಭಿನಯ ಎಂದು ನನಗೆ ಅನ್ನಿಸಿದ್ದನ್ನು ಹೇಳಿದೆ. ಕೆಲವು ದಿನಗಳ ಮೊದಲು ನಿರ್ದೇಶಕ ಕೆ.ಬಾಲಚಂದರ್ ಕೂಡ ಅವರಿಗೆ ಅದೇ ಮಾತನ್ನು ಹೇಳಿದ್ದರಂತೆ. ಆ ಚಿತ್ರದ ಕನ್ನಡ ಹಾಗೂ ತಮಿಳು ರೀಮೇಕ್ ಹಕ್ಕುಗಳನ್ನು ಪಡೆದುಕೊಂಡೆ. ಚಿತ್ರದಲ್ಲಿ ಮೋಹನ್‌ಲಾಲ್ ಪಾತ್ರದ ಹೆಸರು ವಿಷ್ಣು. ಇಡೀ ಚಿತ್ರವನ್ನು ನೋಡಿದಾಗ ಆ ಹೆಸರು ಪದೇಪದೇ ಕಿವಿಮೇಲೆ ಬಿದ್ದಿದ್ದೇ ನಮ್ಮ ವಿಷ್ಣುವರ್ಧನ್ ನೆನಪಾದ. ಆ ಚಿತ್ರ ಮಾಡಿದರೆ ವಿಷ್ಣುವೇ ನಾಯಕನಾಗಬೇಕು ಎನ್ನಿಸಿತು. ವಿಷ್ಣು ನನ್ನ ಜೊತೆ ಆಗ ಇರಲಿಲ್ಲವಲ್ಲ. ಹಾಗಾಗಿ ಸುಮ್ಮನಾದೆ.
`ಡಿಸ್ಕೋ ಡಾನ್ಸರ್' ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲು ಸಾಧ್ಯವಾಗದೇ ಇದ್ದರೂ ಅದರ ವಸ್ತು ಹಾಗೂ ವಿನೋದ್ ರಾಜ್ ಸಾಮರ್ಥ್ಯ ನನ್ನ ತಲೆಯನ್ನು ಕೊರೆಯುತ್ತಿತ್ತು. ನಾನೇ ಕೂತು ಚಿತ್ರಕಥೆ ಸಿದ್ಧಪಡಿಸಿದೆ. ಅದೇ `ಡಾನ್ಸ್ ರಾಜಾ ಡಾನ್ಸ್'. ಲೀಲಾವತಿಯವರ ಮಗ ವಿನೋದ್ ರಕ್ತದಲ್ಲೇ ಅಭಿನಯ ಕಲೆ ಇತ್ತು. ಅವನು ನೃತ್ಯ ಪ್ರವೀಣನಾದ್ದರಿಂದ ಅದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಚಿತ್ರಕತೆ ರೂಪಿಸಿದೆ. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ನಾನು ಹುಟ್ಟಿದ ಊರು ಅದೇ ಆದ್ದರಿಂದ ಅಲ್ಲಿನ ಪ್ರೀಮಿಯರ್ ಸ್ಟುಡಿಯೋದ ಬಸವರಾಜಯ್ಯ ಮೊದಲಿನಿಂದಲೂ ಬಲ್ಲವರಾಗಿದ್ದರು. ಸುಮಾರು 60 ದಿನ ಮೈಸೂರಿನಲ್ಲೇ ಚಿತ್ರೀಕರಣ ನಡೆಸಿದೆ. ಒಂದೊಂದು ಹಾಡಿನ ಚಿತ್ರೀಕರಣಕ್ಕೆ ಒಂದೊಂದು ವಾರ ಮೀಸಲಿಟ್ಟೆ. ದೇವರಾಜ್ ಚಿತ್ರದ ಖಳನಾಯಕ.
ಆ ಚಿತ್ರದ ಇನ್ನೊಂದು ಮಧುರವಾದ ನೆನಪು ದಿಲೀಪ. ಸಂಗೀತ ನಿರ್ದೇಶಕ ವಿಜಯ್ ಆನಂದ್ ಜೊತೆ ಕೆಲಸ ಮಾಡುತ್ತಿದ್ದವನು ದಿಲೀಪ. ಕೀಬೋರ್ಡ್ ಬಳಸುವುದರಲ್ಲಿ ಅವನು ನಿಸ್ಸೀಮ. ಅವನ ಕೆಲಸ ನೋಡಿ ನಾನು ಆಗಲೇ ದಂಗಾಗಿದ್ದೆ. ಮದ್ರಾಸ್‌ನಿಂದ ಮೈಸೂರಿಗೆ ಮಾರುತಿ ಆಮ್ನಿ ವ್ಯಾನ್‌ನಲ್ಲಿ ಅವನು ಬರುತ್ತಿದ್ದ. ಸಂಕೇತ್ ಸ್ಟುಡಿಯೋದಲ್ಲಿ ಒಮ್ಮೆ ಅವನಿಗೆ `ನನ್ನ ಮುಂದಿನ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ನೀನೇ' ಎಂದು ಹೇಳಿದೆ. ಅದಕ್ಕೆ ಅವನು ಅಷ್ಟು ದೊಡ್ಡ ಜವಾಬ್ದಾರಿ ತನಗೆ ಬೇಡ ಎಂದು ನಕ್ಕು ಸುಮ್ಮನಾಗಿದ್ದ. ಅದೇ ದಿಲೀಪ ಈಗ ಎ.ಆರ್.ರೆಹಮಾನ್. ಅವನು ಆಸ್ಕರ್ ಪ್ರಶಸ್ತಿಗೆ ಭಾಜನ ಆದಾಗ ಇವನೇನಾ ಆ ದಿಲೀಪ ಎನ್ನಿಸಿತು. ಅವನಿಂದ ಸಂಗೀತ ನಿರ್ದೇಶನ ಮಾಡಿಸುವ ಗೋಲ್ಡನ್ ಚಾನ್ಸ್ ಮಾತ್ರ ನನಗೆ ಸಿಗಲೇ ಇಲ್ಲ. ಒಂದು ರೀತಿಯಲ್ಲಿ `ಡಾನ್ಸ್ ರಾಜಾ ಡಾನ್ಸ್' ಹಾಡುಗಳ ಯಶಸ್ಸಿಗೆ ಅವನೇ ಕಾರಣ.
ಆ ಚಿತ್ರದ ಮುಹೂರ್ತವನ್ನು ಅದ್ದೂರಿಯಾಗಿಯೇ ಆಯೋಜಿಸಿದ್ದೆ. ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಶಿವನ 40 ಅಡಿಯ ಮೂರ್ತಿ ಮಾಡಿಸಿದ್ದೆ. ಅದಕ್ಕೆ ಪೂಜೆ ಸಲ್ಲಿಸಿ, ನೃತ್ಯ ಮಾಡುವ ಒಂದು ಹಾಡಿನ ಶಾಟ್ ಚಿತ್ರೀಕರಣ ಆ ದಿನ ನಿಗದಿಯಾಗಿತ್ತು. ವಿನೋದ್ ಶಿವಪೂಜೆ ಮಾಡಿದ ರೀತಿ ಮನತಟ್ಟುವಂತಿತ್ತು. ಅವನ ತನ್ಮಯತೆ ಕಂಡು `ಬೇಡರ ಕಣ್ಣಪ್ಪ' ಚಿತ್ರವನ್ನು ಬಣ್ಣದಲ್ಲಿ ತೆಗೆಯಬೇಕು ಎಂಬ ವಿಚಾರ ಹೊಳೆಯಿತು. ವಿನೋದ್ ರಾಜ್‌ನನ್ನೇ ನಾಯಕನನ್ನಾಗಿಸಬೇಕು ಎಂದುಕೊಂಡೆ. ಆ ವಿಷಯವನ್ನು ಆ ದಿನ ಮುಹೂರ್ತಕ್ಕೆ ಬಂದಿದ್ದ ಪತ್ರಕರ್ತರ ಎದುರೂ ಹೇಳಿದೆ. ಆಮೇಲೆ ರಾಜಣ್ಣ ತಮ್ಮ ಬ್ಯಾನರ್‌ನಲ್ಲೇ `ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರವನ್ನು ಅನೌನ್ಸ್ ಮಾಡಿದರು. ಅದರಲ್ಲಿ ಅವರು ಶಿವ. ಶಿವರಾಜ್‌ಕುಮಾರ್ ಕಣ್ಣಪ್ಪ. ದೊಡ್ಡವರು ಆ ಚಿತ್ರ ಮಾಡಲು ಮುಂದಾದ್ದರಿಂದ ನಾನು `ಬೇಡರ ಕಣ್ಣಪ್ಪ' ಚಿತ್ರದ ಯೋಚನೆ ಕೈಬಿಟ್ಟೆ.
`ಡಾನ್ಸ್ ರಾಜಾ ಡಾನ್ಸ್' ಚಿತ್ರದ ಶೂಟಿಂಗ್ ರಿಸರ್ವ್ ಪೊಲೀಸ್ ರಕ್ಷಣೆಯಲ್ಲಿ ನಡೆಯಿತು. ಕೆಲವರು `ಆ ಚಿತ್ರ ಮಾಡಬೇಡ, ನಿಲ್ಲಿಸು' ಎಂದು ಎಚ್ಚರಿಸಿದ್ದರಿಂದ ರಕ್ಷಣೆ ಪಡೆಯುವುದು ಅನಿವಾರ್ಯವಾಯಿತು. ಅವರು ಯಾಕೆ ಹಾಗೆ ಎಚ್ಚರಿಸಿದ್ದರೋ ನನಗೆ ಗೊತ್ತಾಗಲಿಲ್ಲ.
ಅಂದುಕೊಂಡಂತೆ ನಾನೇ ನಿರ್ದೇಶಿಸಿದ `ಡಾನ್ಸ್ ರಾಜಾ ಡಾನ್ಸ್' ಚಿತ್ರದ ಮೊದಲ ಕಾಪಿ ಮೂರು ತಿಂಗಳಲ್ಲಿ ಸಿದ್ಧವಾಯಿತು. ಮದ್ರಾಸ್‌ನ ಸವೇರಾ ಥಿಯೇಟರ್‌ನಲ್ಲಿ ಮೊದಲ ಪ್ರೊಜೆಕ್ಷನ್ ಹಾಕಿದೆ. ಮದ್ರಾಸ್‌ನ ದೊಡ್ಡ ನಿರ್ದೇಶಕರು, ನಟರು ಸಿನಿಮಾ ನೋಡಿದರು. ಆ ಒಂದು ಪ್ರೊಜೆಕ್ಷನ್‌ನ ಫಲ ತೆಲುಗು, ತಮಿಳಿಗೆ ಚಿತ್ರದ ರೀಮೇಕ್ ಹಕ್ಕು ಮಾರಾಟವಾಯಿತು. ಮೊನ್ನೆ ಮೊನ್ನೆ ಅಗಲಿದ ಎಸ್.ರಾಮನಾಥನ್, `ಹಿಂದಿಯಲ್ಲಿ ನೀನೇ ಆ ಸಿನಿಮಾ ಮಾಡಯ್ಯ' ಎಂದು ಆಗ ಬೆನ್ನುತಟ್ಟಿದ್ದರು. ಆಮೇಲೆ ಅವರೇ ಹಿಂದಿಯಲ್ಲಿ ಅದನ್ನು ರೀಮೇಕ್ ಮಾಡಿದರು.
ಚಿತ್ರದ ಓಪನಿಂಗ್ ಅದ್ಭುತವಾಗಿತ್ತು. ಮಂಡ್ಯದ ಗಿರಿಜಾ ಟಾಕೀಸ್ ಮುಂದಿನ ರಸ್ತೆ ಜನದಟ್ಟಣೆಯಿಂದ ತುಂಬಿಹೋಗಿತ್ತು. ಹೊಸ ನಟನ ಚಿತ್ರಕ್ಕೆ ಅಂಥ ಓಪನಿಂಗ್ ಸಿಗುವುದು ಅಪರೂಪ. ವಿನೋದ್ ರಾಜ್ ನೆಚ್ಚಿಕೊಂಡ ನನ್ನ ಯೋಚನೆ ಕೈಕೊಡಲಿಲ್ಲ ಎಂದು ಹೆಮ್ಮೆಪಟ್ಟೆ. ದುರದೃಷ್ಟವಶಾತ್ ಸಿನಿಮಾ ಬಿಡುಗಡೆಯಾದ ಎಂಟು ದಿನಗಳಲ್ಲೇ ಚಿತ್ರಮಂದಿರದವರು ಯಾವುದೋ ಕಾರಣಕ್ಕೆ ಬಂದ್ ಮಾಡಿದರು. ಚೆನ್ನಾಗಿ ಓಡುತ್ತಿದ್ದ ಸಿನಿಮಾ ಇದ್ದಕ್ಕಿದ್ದಂತೆ ನಿಲ್ಲುವ ಹಾಗಾಯಿತು. ಮತ್ತೆ ಚಿತ್ರ ಎದ್ದೇಳಲಿಲ್ಲ.
ಚಿತ್ರಗಳನ್ನು ಮಾಡುವಾಗ ನಾನು ಬ್ಯಾಲೆನ್ಸ್ ಶೀಟ್ ನೋಡಿದವನಲ್ಲ. ಅದೇ ನಾನು ಮಾಡಿದ ತಪ್ಪು. ಬಹುಶಃ 1985ರ ನಂತರ ಸಿನಿಮಾ ಮಾಡುವುದನ್ನು ನಾನು ನಿಲ್ಲಿಸಿದ್ದರೆ ಹೆಚ್ಚು ತಾಪತ್ರಯಗಳು ಬರುತ್ತಿರಲಿಲ್ಲವೋ ಏನೋ. ನನ್ನ ಐದೂ ಮಕ್ಕಳಿಗೆ ತಲಾ ಹತ್ತು ಹತ್ತು ಸಿನಿಮಾಗಳನ್ನು ಮಾಡಿಕೊಡಬೇಕು ಎಂಬ ನನ್ನ ಬಯಕೆ ತಲೆಕೆಳಗಾಯಿತು. `ಡಾನ್ಸ್ ರಾಜಾ ಡಾನ್ಸ್' ಚಿತ್ರವನ್ನು ಒಳ್ಳೆಯ ಬೆಲೆಗೆ ಮಾರಿದ್ದೆ. ಹಾಗಾಗಿ ತೀರಾ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಮುಂದಿನ ವಾರ: ನಡುರಸ್ತೆಯಲ್ಲಿ ಸಾಲ ವಾಪಸು ಕೇಳಿದವನಿಗೆ ಕಾರಿನ ಕೀ ಕೊಟ್ಟು ಬಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.