ADVERTISEMENT

ಕೆಲಸಕ್ಕೆ ಸೂಕ್ತ ಲ್ಯಾಪ್‌ಟಾಪ್ ಆಯ್ಕೆ ಹೇಗೆ?

ಯು.ಬಿ ಪವನಜ
Published 8 ಮೇ 2013, 19:59 IST
Last Updated 8 ಮೇ 2013, 19:59 IST
ಕೆಲಸಕ್ಕೆ ಸೂಕ್ತ ಲ್ಯಾಪ್‌ಟಾಪ್ ಆಯ್ಕೆ ಹೇಗೆ?
ಕೆಲಸಕ್ಕೆ ಸೂಕ್ತ ಲ್ಯಾಪ್‌ಟಾಪ್ ಆಯ್ಕೆ ಹೇಗೆ?   

ಡೆವಲಪರ್/ಗೇಮಿಂಗ್ ಲ್ಯಾಪ್‌ಟಾಪ್
ಡೆವಲಪರ್ ಮತ್ತು ಗೇಮಿಂಗ್ ಲ್ಯಾಪ್‌ಟಾಪ್‌ಗಳ ಗುಣವಿಶೇಷಗಳು ಬಹುತೇಕ ಸಮಾನವಾಗಿವೆ. ಅವುಗಳ ಹೆಸರೇ ತಿಳಿಸುವಂತೆ ಗಣಕ ತಂತ್ರಾಂಶ ತಯಾರಿಗೆ, ಅಂದರೆ, ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ಗೆ ಬಳಕೆಯಾಗುವುದು ಡೆವಲಪರ್ ಲ್ಯಾಪ್‌ಟಾಪ್. ಈ ಲ್ಯಾಪ್‌ಟಾಪ್‌ಗಳು ಬಳಸುವುದು ಹೆಚ್ಚಿನ ವೇಗದ ಪ್ರೋಸೆಸರ್.

ಈಗ ಮಾರುಕಟ್ಟೆಯಲ್ಲಿ ದೊರೆಯುವ ಪ್ರೋಸೆಸರ್‌ಗಳ ಬಗ್ಗೆ ಹೇಳುವುದಾದರೆ ಇಂತಹ ಲ್ಯಾಪ್‌ಟಾಪ್‌ಗಳು ಬಳಸುವುದು ಇಂಟೆಲ್‌ನ 5 ಅಥವಾ 7 ಪ್ರೋಸೆಸರ್. ಮೆಮೊರಿ 8 ಗಿಗಾಬೈಟ್ (ಕನಿಷ್ಠ 4 ಗಿಗಾಬೈಟ್), ಪ್ರತ್ಯೇಕ ಗ್ರಾಫಿಕ್ಸ್ ಪ್ರೋಸೆಸರ್ ಮತ್ತು ಅದಕ್ಕೆಂದೇ ಪ್ರತ್ಯೇಕ ಮೆಮೊರಿ, 7200rpm 1 ಟೆರ್ರಾಬೈಟ್ ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್, ಇತ್ಯಾದಿ. ಗಾತ್ರವೂ ದೊಡ್ಡದಾಗಿರುತ್ತವೆ. ಕನಿಷ್ಠ 15.6 ಇಂಚು ಅಥವಾ ಹೆಚ್ಚು ಗಾತ್ರ. ಮಲ್ಟಿಮೀಡಿಯ ಅಥವಾ ಎಂಟರ್‌ಟೈನ್‌ಮೆಂಟ್ ಲ್ಯಾಪ್‌ಟಾಪ್ ಕೂಡ ಬಹುಮಟ್ಟಿಗೆ ಇದೇ ನಮೂನೆಯಲ್ಲಿ ಬರುತ್ತದೆ.

ಬಿಸಿನೆಸ್ ಲ್ಯಾಪ್‌ಟಾಪ್
ಈ ವಿಧದ ಲ್ಯಾಪ್‌ಟಾಪ್‌ಗಳ ಹೆಸರೇ ತಿಳಿಸುವಂತೆ ಅವುಗಳ ಬಳಕೆಯಾಗುವುದು ಕಡಿಮೆ ಕಂಪ್ಯೂಟಿಂಗ್ ಶಕ್ತಿಯ ಕೆಲಸಗಳಿಗೆ. ಸಾಮಾನ್ಯವಾಗಿ ವಿಂಡೋಸ್, ಆಫೀಸ್, ಬ್ರೌಸರ್ ಇತ್ಯಾದಿ ಕೆಲವು ಮೂಲಭೂತ ತಂತ್ರಾಂಶಗಳ ಬಳಕೆಗೆ ಮಾತ್ರ ಇವುಗಳ ಉಪಯೋಗ ಆಗುತ್ತದೆ. ಅತಿ ಶಕ್ತಿಯ ಪ್ರೋಸೆಸರ್, ಹಾರ್ಡ್‌ಡಿಸ್ಕ್, ಪ್ರತ್ಯೇಕ ಗ್ರಾಫಿಕ್ಸ್ ಇತ್ಯಾದಿಗಳ ಅಗತ್ಯ ಇಲ್ಲಿಲ್ಲ.

ADVERTISEMENT

ಒಂದು ಪ್ರಾತಿನಿಧಿಕ ಬಿಸಿನೆಸ್ ಲ್ಯಾಪ್‌ಟಾಪ್‌ನ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು- 14 ಇಂಚು ಅಥವಾ ಚಿಕ್ಕ ಪರದೆ, 3 ಅಥವಾ 5 ಪ್ರೋಸೆಸರ್, 2 ಅಥವಾ 4 ಗಿಗಾಬೈಟ್ ಮೆಮೊರಿ, 320 ಅಥವಾ 500 ಗಿಗಾಬೈಟ್ ಹಾರ್ಡ್‌ಡಿಸ್ಕ್ ಇತ್ಯಾದಿ. ಇವುಗಳಲ್ಲಿ ಪ್ರತ್ಯೇಕ ಗ್ರಾಫಿಕ್ಸ್ ಪ್ರೋಸೆಸರ್ ಮತ್ತು ಹೆಚ್ಚಿಗೆ ಗ್ರಾಫಿಕ್ಸ್ ಮೆಮೊರಿ ಇರುವುದಿಲ್ಲ.

ಡೆಸ್ಕ್‌ಟಾಪ್ ಗಣಕ ಕೊಳ್ಳುವಾಗ ನಮಗೆ ಬೇಕಾದ ಪ್ರೋಸೆಸರ್, ಮೆಮೊರಿ, ಹಾರ್ಡ್‌ಡಿಸ್ಕ್, ಗ್ರಾಫಿಕ್ಸ್ ಇತ್ಯಾದಿ ಆಯ್ಕೆಗಳ ಸ್ವಾತಂತ್ರ್ಯ ಇದೆ. ಆದರೆ ಲ್ಯಾಪ್‌ಟಾಪ್ ಕೊಳ್ಳುವಾಗ ಈ ರೀತಿ ನಮಗೆ ಬೇಕಾದವುಗಳನ್ನು ಜೋಡಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ. ಆದರೂ ಮಾರುಕಟ್ಟೆಯಲ್ಲಿ ದೊರೆಯುವ ಹಲವು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ನಮಗೆ ಬೇಕಾದ್ದನ್ನು ಕೊಳ್ಳಲು ಏನೇನೆಲ್ಲ ಗಮನಿಸಬೇಕು ಎಂದು ತಿಳಿದುಕೊಳ್ಳೋಣ.

ಪ್ರೋಸೆಸರ್
ಪ್ರೋಸೆಸರ್ ತಯಾರಿಸುವುದು ಇಂಟೆಲ್ ಮತ್ತು ಎಎಂಡಿ. ಹೆಚ್ಚಿನವರು ಬಳಸುವುದು ಇಂಟೆಲ್ ಸಿಪಿಯುಗಳನ್ನು. ಈಗ ಲಭ್ಯವಿರುವ ಸಿಪಿಯುಗಳು 3, 5, 7 ಇತ್ಯಾದಿ. 3ಕ್ಕಿಂತ 5, ಅದಕ್ಕಿಂತ 7 ಹೆಚ್ಚು ವೇಗವಾಗಿ ಕೆಲಸ ಮಾಡುತ್ತವೆ. ಎಎಂಡಿ ಪ್ರೋಸೆಸರ್‌ಗಳಲ್ಲೇ ಗ್ರಾಫಿಕ್ಸ್ ಪ್ರೋಸೆಸರ್ ಕೂಡ ಅಡಕವಾಗಿರುತ್ತದೆ.

ಅಂದರೆ ಅತಿ ಹೆಚ್ಚಿನ ಗ್ರಾಫಿಕ್ಸ್ ಶಕ್ತಿ ಬೇಕಿದ್ದವರು ಪ್ರತ್ಯೇಕ ಗ್ರಾಫಿಕ್ಸ್ ಪ್ರೋಸೆಸರ್ ಹಾಕಿಕೊಳ್ಳಬೇಕು. ಎಎಂಡಿ ಪ್ರೋಸೆಸರ್ ಇಂಟೆಲ್ ಪ್ರೋಸೆಸರ್‌ಗಿಂತ ಸ್ವಲ್ಪ ಕಡಿಮೆ ಬೆಲೆಬಾಳುತ್ತದೆ. ಆದರೆ ಎಎಂಡಿ ಪ್ರೋಸೆಸರ್ ತುಂಬ ಬಿಸಿಯಾಗುತ್ತದೆ ಎನ್ನುವ ದೂರು ಇದೆ. ಪ್ರೋಸೆಸರ್‌ನ ವೇಗ ಹೆಚ್ಚಿದ್ದಷ್ಟೂ ಒಳ್ಳೆಯದು. ಇದನ್ನು ಗಿಗಾಹರ್ಟ್ಸ್‌ಗಳಲ್ಲಿ ನಮೂದಿಸುತ್ತಾರೆ. ಒಂದು ಉದಾಹರಣೆ - 2.4 ಗಿಗಾಹರ್ಟ್ಸ್.

ಮೆಮೊರಿ
ಮೆಮೊರಿ ಜಾಸ್ತಿ ಇದ್ದಷ್ಟೂ ಒಳ್ಳೆಯದೇ. ಲ್ಯಾಪ್‌ಟಾಪ್‌ಗಳಲ್ಲಿ ಮೆಮೊರಿ ಜೋಡಿಸಲು ಎರಡು ಕಿಂಡಿಗಳಿರುತ್ತವೆ. ಸಾಮಾನ್ಯವಾಗಿ ಒಂದು ಕಿಂಡಿಯಲ್ಲಿ ಮೆಮೊರಿ ಜೋಡಿಸಿರುತ್ತಾರೆ. ಹೆಚ್ಚಿಗೆ ಮೆಮೊರಿ ಬೇಕಿದ್ದರೆ ಇನ್ನೊಂದು ಕಿಂಡಿಯಲ್ಲಿ, ಮತ್ತೊಂದು ಮೆಮೊರಿ ಮಾಡ್ಯೂಲ್ ಜೋಡಿಸುತ್ತಾರೆ.

4 ಗಿಗಾಬೈಟ್‌ನ ಎರಡು ಮೆಮೊರಿ ಜೋಡಿಸಿದರೆ ಒಟ್ಟು ಮೆಮೊರಿ 8 ಗಿಗಾಬೈಟ್ ಆಗುತ್ತದೆ. ಎರಡು ಮೆಮೊರಿಗಳೂ ಒಂದೇ ವೇಗದ್ದಾಗಿರುವುದು ಅತೀ ಮುಖ್ಯ. ಎಷ್ಟು ಮೆಮೊರಿ ಬೇಕು ಎಂಬುದನ್ನು ಲ್ಯಾಪ್‌ಟಾಪ್ ಕೊಳ್ಳುವಾಗಲೇ ತೀರ್ಮಾನಿಸುವುದು ಒಳಿತು.

ಉದಾಹರಣೆಗೆ ನೀವು 4 ಗಿಗಾಬೈಟ್ ಮೆಮೊರಿ ಬೇಕು ಎಂದು ಹೇಳುತ್ತೀರಿ. ಆದರೆ ಅದು ಹೇಗಿರಬೇಕು ಎಂದು ಹೇಳಿರುವುದಿಲ್ಲ. ಲ್ಯಾಪ್‌ಟಾಪ್ ಮಾರುವವರು 2 ಗಿಗಾಬೈಟ್‌ನ ಎರಡು ಮಾಡ್ಯೂಲ್ ಹಾಕಿ ಕೊಡುವ ಸಾಧ್ಯತೆ ಇರುತ್ತದೆ. ಮುಂದೆ ಯಾವತ್ತಾದರೊಮ್ಮೆ ಮೆಮೊರಿ ಜಾಸ್ತಿ ಮಾಡಲು ಹೊರಡುತ್ತೀರಿ. 8 ಗಿಗಾಬೈಟ್ ಮಾಡೋಣ ಎಂದು ಯೋಚಿಸುತ್ತೀರಿ.

ಆಗ ನೀವು 4 ಗಿಗಾಬೈಟ್‌ನ ಎರಡು ಮಾಡ್ಯೂಲ್ ಹಾಕಬೇಕಾಗುತ್ತದೆ. ಅಂದರೆ ನಿಮ್ಮಲ್ಲಿರುವ 2 ಗಿಗಾಬೈಟ್‌ನ ಎರಡು ಮಾಡ್ಯೂಲ್ ವ್ಯರ್ಥವಾಗುತ್ತದೆ. ಆದುದರಿಂದ ಇಂತಹ ಸಣ್ಣಸಣ್ಣ ವಿಷಯಗಳ ಕಡೆಗೆ ಗಮನ ನೀಡುವುದು ಒಳ್ಳೆಯದು. ಮೆಮೊರಿಯ ವೇಗ ಜಾಸ್ತಿ ಇದ್ದಷ್ಟೂ ಒಳ್ಳೆಯದು. ಇದನ್ನು ಮೆಗಾಹರ್ಟ್ಸ್‌ಗಳಲ್ಲಿ ನಮೂದಿಸುತ್ತಾರೆ.

ಗ್ರಾಫಿಕ್ಸ್
ಇದರ ಬಗ್ಗೆ ಹಲವು ಸಲ ಬರೆದಾಗಿದೆ. ನಿಮಗೆ ಶಕ್ತಿಶಾಲಿಯದ ಗ್ರಾಫಿಕ್ಸ್ ಬೇಕಿದ್ದಲ್ಲಿ ಹೆಚ್ಚಿಗೆ ಗ್ರಾಫಿಕ್ಸ್ ಪ್ರೋಸೆಸರ್ ಮತ್ತು ಹೆಚ್ಚಿಗೆ ಗ್ರಾಫಿಕ್ಸ್ ಮೆಮೊರಿ ಬೇಕು. ನೀವು ವೀಡಿಯೊ, ಚಲನಚಿತ್ರ ಎಡಿಟ್ ಮಾಡುತ್ತೀರಾದಲ್ಲಿ ಅಥವಾ ಆಧುನಿಕ ಆಟ ಆಡುವವರಾದಲ್ಲಿ ನಿಮಗೆ ಇಂತಹ ಲ್ಯಾಪ್‌ಟಾಪ್ ಬೇಕು. ಸರಳ ಕೆಲಸಗಳಿಗೆ ಇವು ಅಗತ್ಯವಿಲ್ಲ.

ಸಂಗ್ರಹ
ಲ್ಯಾಪ್‌ಟಾಪ್‌ನಲ್ಲಿ ಮಾಹಿತಿ ಸಂಗ್ರಹಕ್ಕೆ ಸಾಮಾನ್ಯವಾಗಿ ಬಳಸುವುದು ಹಾರ್ಡ್‌ಡಿಸ್ಕ್. ಇವು 500 ಗಿಗಾಬೈಟ್‌ನಿಂದ 1ಟೆರ್ರಾಬೈಟ್ ತನಕ ದೊರೆಯುತ್ತವೆ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಸಂಗ್ರಹದ ಹಾರ್ಡ್‌ಡಿಸ್ಕ್ ಆಯ್ಕೆ ಮಾಡಿಕೊಳ್ಳಬಹುದು.

ಹಾರ್ಡ್‌ಡಿಸ್ಕ್ ತಿರುಗುವ ವೇಗ 5400 ಮತ್ತು 7200 ಎಂಬ ಎರಡು ನಮೂನೆಯಲ್ಲಿ ದೊರೆಯುತ್ತವೆ. 7200 RPM (Revolutions Per Minute) ಅಂದರೆ ಹಾರ್ಡ್‌ಡಿಸ್ಕ್‌ನ ತಟ್ಟೆ ಒಂದು ನಿಮಿಷದಲ್ಲಿ 7200 ಸುತ್ತು ತಿರುಗುತ್ತದೆ ಎಂದು ಅರ್ಥ.

ಈ ವೇಗ ಹೆಚ್ಚಿಗೆ ಇದ್ದಷ್ಟೂ ಒಳ್ಳೆಯದೇ. ಇತ್ತೀಚೆಗೆ ವಿಂಡೋಸ್ 8 ಕನ್ವರ್ಟಿಬಲ್‌ಗಳು ದೊರೆಯುತ್ತಿವೆ. ಇವು ಲ್ಯಾಪ್‌ಟಾಪ್‌ನಂತೆಯೂ ಟ್ಯಾಬ್ಲೆಟ್‌ನಂತೆಯೂ ಕೆಲಸ ಮಾಡಬಲ್ಲವು. ಇಂತಹವುಗಳಲ್ಲಿ ಕೆಲವು ಮಾದರಿಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಎಸ್‌ಎಸ್‌ಡಿ ಮೆಮೊರಿ ಇರುತ್ತದೆ.

ಇವು ನಾವೆಲ್ಲ ಬಳಸುವ ಪೆನ್‌ಡ್ರೈವ್ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಸದ್ಯಕ್ಕೆ ಎಸ್‌ಎಸ್‌ಡಿಗಳು ತುಂಬ ದುಬಾರಿ. ಇವು ಹಾರ್ಡ್‌ಡಿಸ್ಕ್‌ಗಳಿಗಿಂತ ತುಂಬ ವೇಗವಾಗಿ ಕೆಲಸ ಮಾಡುತ್ತವೆ. ಸದ್ಯಕ್ಕೆ ಹೆಚ್ಚು ಅಂದರೆ 256 ಗಿಗಾಬೈಟ್‌ನ ಎಸ್‌ಎಸ್‌ಡಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಸಿ.ಡಿ./ಡಿ.ವಿ.ಡಿ. ಅಥವಾ ಬ್ಲೂರೇ
ಈ ಡ್ರೈವ್‌ಗಳು ಅತಿ ಶೀಘ್ರವಾಗಿ ಲ್ಯಾಪ್‌ಟಾಪ್‌ಗಳಿಂದ ಮರೆಯಾಗುತ್ತಿವೆ. ಅಲ್ಟ್ರಾಬುಕ್ ಮತ್ತು ಕನ್ವರ್ಟಿಬಲ್‌ಗಳಲ್ಲಿ ಇವು ಇಲ್ಲ. ಈಗೀಗ ಎಲ್ಲಿಯೂ ಸಿ.ಡಿ. ಅಥವಾ ಡಿ.ವಿ.ಡಿ.ಗಳು ಕಾಣಿಸುತ್ತಿಲ್ಲ. ತಂತ್ರಾಂಶಗಳೂ ಪೆನ್‌ಡ್ರೈವ್‌ಗಳಲ್ಲಿ ಬರುತ್ತಿವೆ. ಆದುದರಿಂದ ಸಿ.ಡಿ. ಅಥವಾ ಡಿ.ವಿ.ಡಿ. ಡ್ರೈವ್‌ಗಳು ಇಲ್ಲದಿದ್ದರೂ ಅಡ್ಡಿಯಿಲ್ಲ. ಆದರೂ ನಿಮ್ಮಲ್ಲಿ ಹಲವಾರು ಸಿ.ಡಿ. ಅಥವಾ ಡಿ.ವಿ.ಡಿ.ಗಳು ಇದ್ದಲ್ಲಿ ನೀವು ಅಂತಹ ಡ್ರೈವ್ ಇರುವ ಲ್ಯಾಪ್‌ಟಾಪ್ ಕೊಳ್ಳುವುದು ಒಳಿತು. ಅಂತಿಮ ತೀರ್ಮಾನ ನಿಮ್ಮದು.

ಪರದೆ
ಪರದೆಯ ರೆಸೊಲ್ಯೂಶನ್ ಹೆಚ್ಚಿದ್ದಷ್ಟೂ ಒಳ್ಳೆಯದು. ಇತ್ತೀಚೆಗೆ ಹೈಡೆಫಿನಿಶನ್ ಪರದೆಗಳೂ ಲಭ್ಯವಿವೆ. ಲ್ಯಾಪ್‌ಟಾಪ್ ಪರದೆಗಳು 4:3 ಮತ್ತು 16:9ರ ಅನುಪಾತಗಳಲ್ಲಿ ದೊರೆಯುತ್ತವೆ. 16:9 ಇದ್ದರೆ ಹೈಡೆಫಿನಿಶನ್ ಸಿನಿಮಾ, ವೀಡಿಯೊ ನೋಡಲು ಉತ್ತಮ.

ನೆಟ್‌ವರ್ಕ್
ಬಹುಪಾಲು ಲ್ಯಾಪ್‌ಟಾಪ್‌ಗಳಲ್ಲಿ ಇಥರ್‌ನೆಟ್ ನೆಟ್‌ವರ್ಕಿಂಗ್ ಸೌಲಭ್ಯ ಇರುತ್ತದೆ. ಜೊತೆಗೆ ಬ್ಲೂಟೂತ್ ಮತ್ತು ವೈಫೈ ಸೌಲಭ್ಯ ಕೂಡ ಇರುತ್ತದೆ. ಆದರೂ ಕೆಲವು ಅಲ್ಟ್ರಾಬುಕ್ ಮತ್ತು ಕನ್ವರ್ಟಿಬಲ್‌ಗಳಲ್ಲಿ ಇಥರ್‌ನೆಟ್ ಕಿಂಡಿ ಇರುವುದಿಲ್ಲ. ಕೊಳ್ಳುವ ಮೊದಲು ಇದರ ಕಡೆಗೆ ಗಮನ ನೀಡುವುದು ಒಳ್ಳೆಯದು.

ಇತರೆ
ಲ್ಯಾಪ್‌ಟಾಪ್‌ನ ತೂಕ ಕಡಿಮೆ ಇದ್ದರೆ ಒಳ್ಳೆಯದು ತಾನೆ. ಆದ್ದರಿಂದ ತೂಕದ ಕಡೆಗೆ ಸ್ವಲ್ಪ ಗಮನ ನೀಡಿ. ಕೆಲವು ಲ್ಯಾಪ್‌ಟಾಪ್‌ಗಳು ತುಂಬ ಬಿಸಿಯಾಗುತ್ತವೆ. ಇದು ಮಾತ್ರ ಬಳಸಿಯೇ ತಿಳಿಯಬೇಕು.

ಕೆಲವು ಅಲ್ಟ್ರಾಬುಕ್‌ಗಳಲ್ಲಿ ಕೆಳಗಿನ ಭಾಗದಲ್ಲಿ ಗಾಳಿ ಓಡಾಡಲು ಕಿಂಡಿಗಳಿರುವ ಸಾಧ್ಯತೆ ಕಡಿಮೆ. ಆದುದರಿಂದ ಇವು ತುಂಬ ಬಿಸಿಯಾಗುತ್ತವೆ. ಲ್ಯಾಪ್‌ಟಾಪ್ ತಯಾರಿಸಲು ಬಳಸಿದ ವಸ್ತುಗಳು ಸದೃಢವಾಗಿರಬೇಕು.

ಕೆಲವು ಕಂಪೆನಿಗಳ ಲ್ಯಾಪ್‌ಟಾಪ್‌ಗಳ ಒಳಗಿನ ಎಂಜಿನ್ ಚೆನ್ನಾಗಿದ್ದರೂ ಅದನ್ನು ತಯಾರಿಸಲು ಬಳಸಿದ ಪ್ಲಾಸ್ಟಿಕ್ ಅಷ್ಟು ಶಕ್ತಿಶಾಲಿಯಲ್ಲದ ಕಾರಣ ಅದು ಕೆಲವು ಸಮಯದ ನಂತರ ಸೀಳು ಬಿಡಲು ಶುರುವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.