ADVERTISEMENT

ಕಾಳಿನ ಬೆಲೆ

ಡಾ. ಗುರುರಾಜ ಕರಜಗಿ
Published 1 ಅಕ್ಟೋಬರ್ 2013, 19:30 IST
Last Updated 1 ಅಕ್ಟೋಬರ್ 2013, 19:30 IST

ಮಹಾಕಾವ್ಯ ರಚಿಸುವುದೆಂದರೆ ಆಗಸದ ನಕ್ಷತ್ರಗಳ ಕಿವಿಗಳಲ್ಲಿ ಪಿಸುಗುಟ್ಟುತ್ತಲೇ ನೆಲದ ಮಣ್ಣಿನ ಸ್ವಾದ  ಹೀರಿದಂತೆ. ಉದಾತ್ತವಾದ ತತ್ವದ ದರ್ಶನವನ್ನು ಮಾಡಿಸುವ ಸಮಯ­ದಲ್ಲೇ ಜೀವನದ ಅತ್ಯಂತ ಸಾಮಾನ್ಯ ನಿಯಮಗಳನ್ನು ಮನಮುಟ್ಟುವಂತೆ ಮಾಡುವ ಅಪರೂಪದ ಕಲೆ ಅದು.

ಮಹಾನ್ ಪ್ರತಿಭೆಯ ತೆಕ್ಕೆಗೆ ಮಾತ್ರ ಸಿಗಬಹುದಾದ ಸಾಧ್ಯತೆ ಮಹಾಕಾವ್ಯ. ಪ್ರಪಂಚದ ಸಾಹಿತ್ಯದಲ್ಲಿ ಅನೇಕ ಮಹಾಕಾವ್ಯಗಳು ಸಂಸ್ಕೃತಿಯ ನೆಲೆಗಳಾಗಿ ನಿಂತಿವೆ. ಅದರಲ್ಲಿ ತಮಿಳು ಸಂತರಾದ ತಿರುವಳ್ಳುವರ್ ಬರೆದ ತಿರುಕ್ಕುರಳ್ ಒಂದು ಮಹಾಕಾವ್ಯ. ಬಹುದೊಡ್ಡ  ಕ್ಯಾನ್‌ವಾಸ್‌ನಲ್ಲಿ ಚಿತ್ರ ಬರೆಯಲು ಹೊರಟ ಶ್ರೇಷ್ಠ ಚಿತ್ರಗಾರ ಅತ್ಯಂತ ಸಣ್ಣ ವಿಷಯವನ್ನೂ ಮರೆಯಲಾರ.

ಹಾಗೆಯೇ ಮಹಾಕವಿ ತನ್ನ ಜೀವನದ, ಸುತ್ತ ಮುತ್ತ ನಡೆಯುವ ಘಟನೆಗಳನ್ನು ಪಾಕಮಾಡಿ ಬರೆದದ್ದು ಶತಮಾನಗಳ ಕಾಲ ಜನರಿಗೆ ಮೌಲ್ಯದ ಬುತ್ತಿಯಾಗುತ್ತದೆ. ಅಂಥ ಮಹಾಕವಿ ತಿರುವಳ್ಳುವರ್ ಜೀವನದ ಒಂದು ಘಟನೆ ನಮಗೊಂದು ಬೆಳಕು ನೀಡುತ್ತದೆ, ಚಿಂತನೆಗೆ ಹಚ್ಚುತ್ತದೆ. ತಿರುವಳ್ಳುವರ್‌ರ ಹೆಂಡತಿ ವಾಸುಕಿ. ಪತಿಗೆ ಅತ್ಯಂತ ಅನುರೂಪಳಾದ ಪತ್ನಿ. ಗಂಡ ವೃತ್ತಿಯಲ್ಲಿ ನೇಕಾರನಾಗಿದ್ದರೂ ಅವನ ಅಧ್ಯಾತ್ಮ ಸಾಧನೆಯ ದಾರಿಯಲ್ಲಿ ಮೆಟ್ಟಿಲಾಗಿ, ಸಹಕಾರಿಯಾಗಿ ಬದುಕಿದವರು. ವಯಸ್ಸಾದ ಮೇಲೆ ಆಕೆಗೆ ಕಾಯಿಲೆ ಬಂದಿತು.

ADVERTISEMENT

ಅದು ತನ್ನ ಆಯಸ್ಸನ್ನು ನುಂಗುತ್ತ ಬಂದದ್ದು ವಾಸುಕಿಗೆ ತಿಳಿಯಿತು. ತಾನಿನ್ನು ಹೆಚ್ಚು ದಿನ ಬದುಕಿರಲಾರೆ ಎಂಬುದು ಖಚಿತವೆನ್ನಿಸಿದಾಗ ಆಕೆ ಗಂಡನನ್ನು ಕರೆದು ಕುಳ್ಳಿರಿಸಿಕೊಂಡು ಹೇಳಿದರು, ‘ನಾನು ನಿಮ್ಮ ಪತ್ನಿಯಾಗಿದ್ದು ನನ್ನ ಭಾಗ್ಯ. ನಿಮ್ಮ ಸಾಧನೆಯ ಪಥದಲ್ಲಿ ನಾನೆಷ್ಟು ಪ್ರಯೋಜನಕಾರಿಯಾದೆನೋ ತಿಳಿಯದು. ಆದರೆ, ನನಗೆ ಧನ್ಯತೆಯ ಭಾವವಿದೆ. ನಾನಿನ್ನು ಬಹಳ ಕಾಲ ಇರಲಾರೆ. ನಿಮ್ಮಿಂದಲೇ ಸಾವಿನ ಅನಿವಾರ್ಯತೆಯನ್ನು, ಅದಕ್ಕಾಗಿ ವಿಷಾದಪಡಬಾರದೆಂಬುದನ್ನು ಕಲಿತಿದ್ದೇನೆ. ಅದರ ಚಿಂತೆ ನನಗಿಲ್ಲ.

ಆದರೆ, ಒಂದು ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು. ಅದನ್ನು ನನ್ನಲ್ಲಿಯೇ ಉಳಿಸಿಕೊಂಡು ಹೋಗಲಾರೆ. ಅದನ್ನು ಕೇಳಲೇ?’. ‘ಆಯ್ತು ಕೇಳು’ ಎಂದು ತಿರು ವಳ್ಳುವರ್ ಹೇಳಿದಾಗ ಆಕೆ ಕೇಳಿದರು, ‘ನಾನು ಮದುವೆಯಾಗಿ ನಿಮ್ಮ ಮನೆಗೆ ಬಂದ ಮೊದಲನೇ ದಿನ ನೀವು ನನಗೊಂದು ಅಪ್ಪಣೆ ಮಾಡಿದ್ದಿರಿ. ನಿಮಗೆ ಊಟಕ್ಕೆ ಬಡಿಸುವಾಗ ಎಲೆಯ ಪಕ್ಕದಲ್ಲಿ ಒಂದು ಶಂಖ ಮತ್ತು ಸೂಜಿಯನ್ನು ತಪ್ಪದೇ ಇಡಲು ಹೇಳಿದ್ದಿರಿ. ನಾನು ಪ್ರತಿ ಮಾತು ಕೇಳದೇ ಇಷ್ಟು ವರ್ಷ ಹಾಗೆಯೇ ಮಾಡುತ್ತ ಬಂದೆ. ಆದರೆ ನೀವು ಅವು ಎರಡನ್ನೂ ಒಂದು ಬಾರಿಯೂ ಬಳಸಲಿಲ್ಲ. ಅದು ನನಗೆ ಪರೀಕ್ಷೆಯಾಗಿತ್ತೇ ಇಲ್ಲ, ಅದರ ಹಿಂದೆ ಏನಾದರೂ ಮರ್ಮ ವಿದೆಯೇ ಎಂಬುದನ್ನು ತಿಳಿಯಬಯಸಿದ್ದೆ. ನಿಮ್ಮನ್ನು ಕೇಳುವ ಧೈರ್ಯವಾಗಿರ ಲಿಲ್ಲ. ಅದರ ಉದ್ದೇಶವೇನಿತ್ತೆಂಬುದನ್ನು ಈಗಲಾದರೂ ತಿಳಿಯಬಹುದೇ?’.

ತಿರುವಳ್ಳುವರ್ ಹೆಂಡತಿಯನ್ನು ಸಂತೈಸುತ್ತ ಹೇಳಿದರು, ‘ನಿನ್ನಂಥ ಅನುರೂಪಳಾದ ಪತ್ನಿ ದೊರೆತದ್ದು ನನ್ನ ಭಾಗ್ಯ. ಇನ್ನು ನಿನ್ನ ಸಂದೇಹಕ್ಕೆ ಉತ್ತರ ಇಷ್ಟೇ. ಅನ್ನ, ಜೀವನವನ್ನು ಬದುಕಿಸುವ, ಪೋಷಿಸುವ ಸಾಧನ. ಅದನ್ನು ತುಂಬ ಗೌರವದಿಂದ ಕಾಣಬೇಕು. ಊಟ ಮಾಡುವಾಗ ಒಂದು ಅಗುಳು ಎಲೆಯಿಂದ ಹೊರಗೆ ಬಿದ್ದರೆ, ಅದನ್ನು ಕಡೆಗಣಿಸದೇ ಮೃದುವಾಗಿ ಸೂಜಿ­ಯಿಂದ ಚುಚ್ಚಿ ಎತ್ತಿ ನಂತರ ಶಂಖದ ನೀರಿನಲ್ಲಿ ತೊಳೆದು ಮತ್ತೆ ಎಲೆಗೆ ಹಾಕಿಕೊಂಡು ಬಳಸಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು.

ಇಷ್ಟು ವರ್ಷವೂ ನಾನೇಕೆ ಅವುಗಳನ್ನು ಬಳಸಲಿಲ್ಲವೆಂದರೆ ನೀನು ಅಷ್ಟು ಚೆನ್ನಾಗಿ, ಎಚ್ಚರಿಕೆಯಿಂದ ಒಂದು ಅಗುಳನ್ನೂ ಹೊರಗೆ ಚೆಲ್ಲದಂತೆ ಬಡಿಸುತ್ತಿದ್ದೆ. ಪ್ರತಿಯೊಂದು ಸೇವೆಯನ್ನು ವ್ರತವೆಂಬಂತೆ ನಡೆಸಿದೆ’. ತಿರುವಳ್ಳುವರ್ ಈ ಸಂದರ್ಭವನ್ನು ನೆನಪಿಸಿಕೊಳ್ಳುವಾಗ ಹೆಂಡತಿಯ ಜಾಗರೂಕತೆಯನ್ನು ತಿಳಿಸುವುದರೊಂದಿಗೆ ಅನ್ನದ ಮಹತ್ವವನ್ನೂ ತಿಳಿಸುತ್ತಾರೆ. ಒಂದು ಕಾಳು ನಮ್ಮ ತಟ್ಟೆಗೆ ಬರುವವರೆಗೆ ಅದೆಷ್ಟು ಜನರ ಪರಿಶ್ರಮವನ್ನು, ಅದೆಷ್ಟು ವಸ್ತು ವಿಶೇಷಗಳನ್ನು ಪಡೆದು ಬಂದಿದೆ ಎಂಬುದನ್ನು ಗಮನಿಸಿದರೆ ನಾವು ಪದಾರ್ಥಗಳನ್ನು ತಟ್ಟೆಯಲ್ಲಿ ಚೆಲ್ಲಿ ವ್ಯರ್ಥಮಾಡುವುದು ನಿಲ್ಲಬಹುದು. ವ್ಯರ್ಥಮಾಡಿದ ಪ್ರತಿಯೊಂದು ಕಾಳು ಅದನ್ನು ಸಾಧ್ಯಮಾಡಿದವರ ಬೆವರಿಗೆ ಮಾಡಿದ ಅಪಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.