ADVERTISEMENT

ದನಗಳ ಸಂದೇಶ

ಡಾ. ಗುರುರಾಜ ಕರಜಗಿ
Published 16 ಜನವರಿ 2013, 19:59 IST
Last Updated 16 ಜನವರಿ 2013, 19:59 IST

ನಾವು ಯಾರಿಂದ ಯಾವಾಗ ಏನೆಲ್ಲಾ  ಕಲಿಯಬಹುದು ಎಂಬುದು ಆಶ್ಚರ್ಯವನ್ನುಂಟುಮಾಡುತ್ತದೆ. ನನ್ನ ಸ್ನೇಹಿತನೊಬ್ಬ ಹೇಳಿದ ವಿಷಯ ನನಗೊಂದು ವಿಶೇಷವಾದ ತಿಳುವಳಿಕೆ ಮೂಡಿಸಿತು. ಕೆನಡಾದ ಒಂಟಾರಿಯೊ ಪ್ರಾಂತ್ಯದ ಬೆಟ್ಟದ ಪ್ರದೇಶಗಳಲ್ಲಿ ತಂಪು ಹೆಚ್ಚು.

ಚಳಿಗಾಲದಲ್ಲಿಯಂತೂ ಚಳಿ ತಡೆದುಕೊಳ್ಳುವುದೇ ಅಸಾಧ್ಯ. ಡಿಸೆಂಬರ - ಜನವರಿಯಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆ ಇರುತ್ತದೆ. ದನ ಕಾಯುವ ಹುಡುಗರು ಹಸು, ದನಗಳನ್ನು ಮೇಯಿಸಲು ಬೆಟ್ಟಕ್ಕೆ ಹೋಗುತ್ತಾರೆ. ಒಂದೊಂದು ಬಾರಿ ಏಕಾಏಕಿ ಹವಾಮಾನ ತುಂಬ ತಂಪಾಗಿ ಬಿಡುತ್ತದೆ, ಹಿಮಪಾತ ಪ್ರಾರಂಭವಾಗುತ್ತದೆ. ಅದರೊಂದಿಗೆ ಬಿರುಗಾಳಿ ಬೀಸಿದಾಗ ಮಂಜಿನ ಗಡ್ಡೆಗಳು ಗಾಜಿನ ಚೂರುಗಳಂತೆ ಹಾರಿ ಹಾರಿ ಬಂದು ಅಪ್ಪಳಿಸುತ್ತವೆ. ಅವುಗಳು ಹೊಡೆದರೆ ಚಾಕೂವಿನಿಂದ ಕತ್ತರಿಸಿದಷ್ಟು ನೋವಾಗುತ್ತದೆ. ಅದೊಂದು ನಿಸರ್ಗದ ಭೀಕರ ರೂಪದ ದರ್ಶನ.

ದನಗಾಹಿಗಳು ನೂರಾರು ದನಗಳನ್ನು ಬೆಟ್ಟದ ಮೇಲೆ ಮೇಯಲು ಕರೆದುಕೊಂಡು ಹೋದಾಗ ಇಂತಹ ಹಿಮಪಾತವಾದಾಗ ಅನಾಹುತವಾಗುತ್ತದೆ. ಬೀಸಿ ಬೀಸಿ ಬಂದು ಹೊಡೆಯುವ ಈ ಮಂಜಿನ ತುಂಡುಗಳ ಆಘಾತಕ್ಕೆ ದನಗಳು ಗಾಬರಿಯಾಗಿ ದಿಕ್ಕುಗೆಟ್ಟು ಹಾರುತ್ತವೆ. ಮೈಲುಗಟ್ಟಲೇ ಪರ್ವತದ ಇಳಿಜಾರಿನಲ್ಲಿ ಓಡಲಾರಂಭಿಸುತ್ತವೆ. ಅವುಗಳಿಗೆ ತಿಳಿಯುವುದು ಒಂದೇ, ಹಿಮಪಾತ ಮತ್ತು ಬಿರುಗಾಳಿಗೆ ಬೆನ್ನು ತೋರಿ ಓಡುವುದು. ಆದರೆ ಹೀಗೆ ರಭಸದಿಂದ ಕೆಳಮುಖವಾಗಿ ಓಡುವ ದನಗಳು ದಾರಿಯಲ್ಲಿ ಕಟ್ಟಿರುವ ಬೇಲಿಗಳನ್ನು ಗಮನಿಸದೇ ಹಾಯ್ದು ಮಂಜಿನಲ್ಲಿ ಜಾರಿ ಬಿದ್ದು, ಕಾಲು ಮುರಿದುಕೊಂಡು, ಗೋಣುಮುರಿದುಕೊಂಡು ಅಪಾಯಕ್ಕೆ ಈಡಾಗುತ್ತವೆ. ಅನೇಕ ದನಗಳು ಸತ್ತೇ ಹೋಗುತ್ತವೆ.

ಆದರೆ, ಈ ದನಗಳಲ್ಲಿ ಹೆರೆಫೋರ್ಡ್ ಎಂಬ ತಳಿಯ ದನಗಳು ಮಾತ್ರ ಸಾಯದೇ ಉಳಿಯುತ್ತವಂತೆ. ಅವುಗಳ ನಡತೆಯೇ ವಿಶೇಷವಾದದ್ದು. ಅವು ಬೇಗನೇ ಗಾಬರಿಯಾಗುವುದಿಲ್ಲ. ಹಿಮಪಾತ ಮತ್ತು ಬಿರುಗಾಳಿ ಪ್ರಾರಂಭವಾದೊಡನೆ ಅವು ಉಳಿದ ದನಗಳಿಂದ ಬೇರ್ಪಡುತ್ತವೆ. ವಿಚಿತ್ರವೆಂದರೆ ಅವು ಬಿರುಗಾಳಿಗೆ ಬೆನ್ನುಮಾಡಿ ಓಡುವುದಿಲ್ಲ, ಬದಲಾಗಿ ಒಂದಕ್ಕೊಂದು ಬೆನ್ನು ತಗುಲಿಸಿಕೊಂಡು ಬಿರುಗಾಳಿಗೆ ಮುಖಮಾಡಿ ನಿಲ್ಲುತ್ತವೆ. ಮೊದಲನೆಯದು ಒಂದು ಮರವೋ, ಗೋಡೆಯೋ ಯಾವುದೋ ಒಂದನ್ನು ಆಸರೆಯಾಗಿಟ್ಟುಕೊಂಡು ನಿಲ್ಲುತ್ತದೆ. ಉಳಿದವು ಅದರ ಪಕ್ಕದಲ್ಲೇ ಸಾಲಾಗಿ ನಿಂತು ಆದಷ್ಟು ಚಳಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಅವು ತಮ್ಮ ತಲೆಗಳನ್ನು ಕೆಳಗೆ ಮಾಡಿ ಕಣ್ಣುಮುಚ್ಚಿಕೊಂಡು ಭದ್ರವಾಗಿ ನಿಂತು ಬಿಡುತ್ತವೆ. ಹಿಮಪಾತ ನಿಂತ ಮೇಲೆ ನಿಧಾನವಾಗಿ ಬೇರ್ಪಟ್ಟು ಕೆಳಗಿಳಿದು ಮನೆ ಸೇರುತ್ತವೆ. ಆದ್ದರಿಂದ ಈ ದನಗಳು ಸಾಯುವುದು ತುಂಬ ಅಪರೂಪ. ಅದಕ್ಕೇ ದನಗಾಹಿಗಳು ಕೂಡ ಇಂಥ ಸಂದರ್ಭಗಳಲ್ಲಿ ಹೆರೆಪೋರ್ಡ್ ದನಗಳ ಜೊತೆಗೇ ಉಳಿದು ತಮ್ಮನ್ನು ಉಳಿಸಿಕೊಳ್ಳುತ್ತಾರೆ.


ಈ ವಿಷಯವನ್ನು ಸ್ನೇಹಿತ ನನಗೆ ಹೇಳಿದಾಗ ಹೆರೆಫೋರ್ಡ್ ದನಗಳಿಂದ ನಾವು ಕಲಿಯುವುದು ಎಷ್ಟಿದೆಯಲ್ಲ ಎನ್ನಿಸಿತು. ನಮ್ಮ ಜೀವನದಲ್ಲೂ ಬಿರುಗಾಳಿಗಳು ಬೀಸುತ್ತವೆ, ಮಂಜು ಕವಿಯುತ್ತದೆ. ಆಗ ನಾವು ಬಹಳಷ್ಟು ಜನ ಉಳಿದ ದನಗಳಂತೆ ಬಿರುಗಾಳಿಗೆ ಬೆನ್ನು ಮಾಡಿ ಅದನ್ನು ತಪ್ಪಿಸಿಕೊಳ್ಳಲು ಓಡುತ್ತೇವೆ. ಎಲ್ಲಿಯೋ ಪೆಟ್ಟು ಮಾಡಿಕೊಳ್ಳುತ್ತೇವೆ.

ಹೆರೆಫೋರ್ಡ್ ದನಗಳು ನೀಡುವ ಸಂದೇಶ ಅದ್ಭುತವಾದದ್ದು.  ಸಮಸ್ಯೆಯ ಬಿರುಗಾಳಿ ಬೀಸಿದಾಗ ಹಿಮ್ಮುಖವಾಗಿ ಓಡಬೇಡಿ. ಧೈರ್ಯದಿಂದ ಎದೆಗೊಟ್ಟು ನಿಂತು ಎದುರಿಸಿ.  ಯಾವ ಬಿರುಗಾಳಿಯೂ ಜೀವನ ಪರ್ಯಂತ ಇರುವಂತಹದಲ್ಲ. ಅದು ಬೀಸುವುದು ಕೆಲಕಾಲ ಮಾತ್ರ. ಅಷ್ಟು ಹೊತ್ತು ಉಸಿರು ಬಿಗಿಹಿಡಿದು, ಮೌನವಾಗಿ ಆದರೆ ಪ್ರಯತ್ನವನ್ನು ಬಿಡದೇ, ಎದೆಗುಂದದೇ ನಿಂತರೆ ನಾವು ಎಂತಹ ಪ್ರಚಂಡವಾದ ಬಿರುಗಾಳಿಯನ್ನಾದರೂ ಎದುರಿಸಿ ಬದುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.