ADVERTISEMENT

ಉದ್ಯಮಿಗಳ ಪಾಲಿಗೆ ಚೇತೋಹಾರಿ ಬಜೆಟ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST
ಉದ್ಯಮಿಗಳ ಪಾಲಿಗೆ ಚೇತೋಹಾರಿ ಬಜೆಟ್
ಉದ್ಯಮಿಗಳ ಪಾಲಿಗೆ ಚೇತೋಹಾರಿ ಬಜೆಟ್   

ನೋಟು ಅಮಾನ್ಯೀಕರಣ, ಅಕ್ರಮ ಸಕ್ರಮದಂಥ ನಿಯಮಗಳು ಜಾರಿಯಾದ ನಂತರ ರಿಯಲ್‌ ಎಸ್ಟೇಟ್‌ ಕ್ಷೇತ್ರದ ವ್ಯವಹಾರಕ್ಕೆ ತುಸು ಮಂಕು ಕವಿದಿತ್ತು. ಆದರೆ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ಕೆಲ ಯೋಜನೆಗಳಿಂದಾಗಿ ಈ ಕ್ಷೇತ್ರಕ್ಕೆ ಕವಿದಿದ್ದ ಕಾರ್ಮೋಡ ಪಕ್ಕಕ್ಕೆ ಸರಿಯುವ ಆಶಾಭಾವ ಉದ್ಯಮಿಗಳಲ್ಲಿ ಕಂಡು ಬಂದಿದೆ.

ಕೈಗೆಟುಕುವ ದರದ ಮನೆ ನಿರ್ಮಾಣ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಅವಧಿಯ ಮಿತಿಯನ್ನು 3ರಿಂದ 5 ವರ್ಷಕ್ಕೆ ಏರಿಸಿದೆ. ಗೃಹ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲು ಸರ್ಕಾರ ಮಹತ್ವದ ಯೋಜನೆಗಳನ್ನು ಆರಂಭಿಸಿದೆ. ಬಜೆಟ್‌ ಬಗೆಗೆ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಪ್ರಮುಖರು ಹಂಚಿಕೊಂಡಿರುವ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಉದ್ಯಮಕ್ಕೆ ಅನುಕೂಲ
ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಅನುಕೂಲವಾಗುವಂತಹ ಬಜೆಟ್‌ ಮಂಡನೆಯಾಗಿದೆ. ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣದ ಬಗೆಗೆ ಸರ್ಕಾರ ಚಿಂತನೆ ನಡೆಸಿದೆ. ಹಾಗೆಂದು ಮನೆ ಮತ್ತು ಫ್ಲಾಟ್‌ಗಳ ಬೆಲೆ ಕಡಿಮೆಯಾಗುವುದಿಲ್ಲ.  ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣಕ್ಕೆ ಈ ಮೊದಲು ಹೇಳಲಾದ ವಿಸ್ತೀರ್ಣದ ಮಿತಿಯನ್ನು ಹೆಚ್ಚಿಸಿರುವುದು ಖುಷಿ ತಂದಿದೆ.

ADVERTISEMENT

ಮೂರು ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟಿಗೆ ತಡೆ ಇರುವುದರಿಂದ ಕಪ್ಪುಹಣ ಚಲಾವಣೆಗೆ ಅವಕಾಶ ಇರುವುದಿಲ್ಲ. ನಗದು ರಹಿತ ವಹಿವಾಟಿಗೆ ಉತ್ತೇಜನ ದೊರಕಲಿದೆ. ಈ ಬಾರಿಯ ಬಜೆಟ್‌ನಲ್ಲಿ ಆಸ್ತಿ ಖರೀದಿಗೆ ಮಿತಿ ಹೇರಲಾಗುವುದು, ಒಬ್ಬರಿಗೆ ಒಂದೇ ನಿವೇಶನ ಎಂಬ ನಿಯಮ ಜಾರಿಯಾಗುವ ವದಂತಿಗಳು ಕೇಳಿ ಬಂದಿದ್ದವು. ಆದರೆ ಬಜೆಟ್‌ನಲ್ಲಿ ಇಂಥ ಯಾವುದೇ ಪ್ರಸ್ತಾಪ ಇಲ್ಲ. ಮಧ್ಯಮ ವರ್ಗದ ಜನರಿಗೆ ಬಜೆಟ್‌ನಿಂದ ಅನುಕೂಲವಾಗಲಿದೆ.
ಗಿರಿಗೌಡ, ವೇದಾ ಪ್ರಾಪರ್ಟೀಸ್‌

ಅಭಿವೃದ್ಧಿ ದ್ಯೋತಕ
ಇದು ಸಮತೋಲಿತ ಬಜೆಟ್‌. ಒಂದು ಕೋಟಿ ಮನೆ ನಿರ್ಮಾಣದಂಥ ಯೋಜನೆಗಳಿಂದ ಅನೇಕ ಕ್ಷೇತ್ರಗಳ ಪರಿಸ್ಥಿತಿ ಸುಧಾರಿಸುತ್ತದೆ. ಒಂದು ಮನೆಗೆ ಕನಿಷ್ಠ 250 ಚದರ ಅಡಿ ವಿಸ್ತೀರ್ಣ ಎಂದರೂ 250 ಕೋಟಿ ಚದರ ಅಡಿ ಸ್ಥಳದಲ್ಲಿ ಮನೆ ಕಟ್ಟಬೇಕಾಗುತ್ತದೆ. ಒಂದು ಚದರ ಅಡಿಗೆ ಒಂದು ಸಾವಿರ ರೂಪಾಯಿ ಎಂದರೂ ₹2.50 ಸಾವಿರ ಕೋಟಿ ಹೂಡಿಕೆಯಾಗಬೇಕಿದೆ.
ಇದರಿಂದ ಸಿಮೆಂಟ್‌, ಉಕ್ಕು, ಲೋಹಗಳು, ಟೈಲ್ಸ್‌, ಬಾಗಿಲು, ಕಿಟಕಿ, ಕಾರ್ಮಿಕರು ಸೇರಿದಂತೆ ಅನೇಕ ಅಗತ್ಯ ಸಾಮಗ್ರಿಗಳ ಬಳಕೆಗೆ ಈ ಹಣ ವಿನಿಯೋಗವಾಗಲಿದೆ. ಉದ್ಯೋಗಾವಕಾಶಗಳೂ ಹೆಚ್ಚಲಿವೆ. ವಸತಿ ಕ್ಷೇತ್ರದಲ್ಲಿ ಕನಿಷ್ಠ 15 ಲಕ್ಷ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಮುರಳಿ, ವ್ಯವಸ್ಥಾಪಕ ನಿರ್ದೇಶಕ, ಶ್ರೀರಾಮ ಪ್ರಾಪರ್ಟೀಸ್‌

ಸ್ಥಿರ ಮಾರುಕಟ್ಟೆ
ಫ್ಲ್ಯಾಟ್‌ ಮತ್ತು ಮನೆಗಳ ದರ ಅಗ್ಗವಾಗಲಿದೆ ಎಂಬುದು ಕೇವಲ ವದಂತಿ. ಖರೀದಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಯಾರೂ ಮಾರುವುದಿಲ್ಲ. ಗ್ರಾಹಕರ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಆಗಲಿರುವುದರಿಂದ ಆಸ್ತಿ ಕೊಳ್ಳುವವರ ಸಂಖ್ಯೆ ಹೆಚ್ಚಲಿದೆ.

ಸಾಲದ ಮೇಲಿನ ತೆರಿಗೆ ಕಡಿಮೆ ಮಾಡುವ ಆಶಾಭಾವನೆ ಉದ್ಯಮಿಗಳಲ್ಲಿ ಇತ್ತು. ಅದು ಈಡೇರಿದೆ. ಹೊಸದಾಗಿ ಕಂಪೆನಿ ಆರಂಭಿಸುವವರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಎರಡು ಮೂರು ಆಸ್ತಿ ಹೊಂದಿದ್ದರೆ, ಅದನ್ನು ಬೇನಾಮಿ ಆಸ್ತಿ ಎಂದು ಘೋಷಿಸುತ್ತಾರೆ ಎಂಬ ವದಂತಿ ಇತ್ತು. ಬಜೆಟ್‌ ನಂತರವೂ ಹೀಗೊಂದು ಆದೇಶ ಹೊರಡಿಸಬಹುದು ಎಂಬ ಭಯದಿಂದ ಜನರು ಆಸ್ತಿ ಖರೀದಿಗೆ ಹಿಂದೇಟು ಹಾಕಬಹುದು.
ರಾಜ್ಯ ಸರ್ಕಾರವೂ ತೆರಿಗೆ ಕಡಿಮೆ ಮಾಡಿದರೆ ರಿಯಲ್‌ ಎಸ್ಟೇಟ್ ಉದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತದೆ.
ರಾಜೇಶ್‌ ರಾಯ್ಕರ್‌,  ಡಿವೈನ್ ಡೆವಲಪರ್ಸ್‌

ನಿರೀಕ್ಷೆ ತಕ್ಕಮಟ್ಟಿಗೆ ಈಡೇರಿದೆ
ರಿಯಲ್‌ ಎಸ್ಟೇಟ್‌ ಕ್ಷೇತ್ರದ ಕೆಲವು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ. ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣಕ್ಕೆ ಈ ವಿಸ್ತೀರ್ಣದ ಮಿತಿಯನ್ನು ಹೆಚ್ಚಿಸಿರುವುದು ಖುಷಿ ತಂದಿದೆ. ಇದು ಕೈಗೆಟುಕುವ ದರದ ಮನೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯ ಭರವಸೆ ಮೂಡಿಸಿದೆ.
ಆಶಿಶ್‌ ಪುರವಂಕರ್‌, ವ್ಯವಸ್ಥಾಪಕ ನಿರ್ದೇಶಕ ಪುರವಂಕರ ಲಿಮಿಟೆಡ್

ಉತ್ತಮ ಬಜೆಟ್‌
ದೀರ್ಘಾವಧಿ ಬಂಡವಾಳದ ಮೇಲಿನ ಲಾಭಕ್ಕೆ ಸಂಬಂಧಿಸಿದ ತೆರಿಗೆ ಅವಧಿಯನ್ನು ಮೂರುವರ್ಷದಿಂದ ಎರಡು ವರ್ಷಕ್ಕೆ ಇಳಿಸಿರುವುದು ಸ್ವಾಗತಾರ್ಹ. ಕೈಗೆಟುಕುವ ಬೆಲೆಯ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯ ಅಭಿವೃದ್ಧಿ, ಮನೆ ನಿರ್ಮಾಣದ ವಿಸ್ತೀರ್ಣದ ಮಿತಿ ಹೆಚ್ಚಿಸಿರುವುದು ಸೇರಿದಂತೆ ಅನೇಕ ಯೋಜನೆಗಳನ್ನು ಬಜೆಟ್ ಉಲ್ಲೇಖಿಸಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಕಡಿಮೆ ಬೆಲೆಯ ಮನೆ ನಿರ್ಮಾಣಕ್ಕೆ ಉತ್ತೇಜನ ನೀಡಲಿವೆ.
ವೆಂಕಟೇಶ್‌ ಗೋಪಾಲಕೃಷ್ಣನ್‌, ಶಾಪೂರ್ಜಿ, ಪಲೋಂಜಿ ರಿಯಲ್‌ ಎಸ್ಟೇಟ್‌ ಕಂಪೆನಿ ಅಧ್ಯಕ್ಷ

ವಸತಿ ಕ್ಷೇತ್ರಕ್ಕೆ ಶ್ರೀರಕ್ಷೆ
ವಸತಿ ಕ್ಷೇತ್ರದ ಮೇಲೆ ಸರ್ಕಾರಕ್ಕಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಬಜೆಟ್‌. ಇದೇ ಮೊದಲ ಬಾರಿಗೆ ವಸತಿ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಯನ್ನೊಳಗೊಂಡ ಬಜೆಟ್‌ ಇದಾಗಿದೆ. ವಸತಿ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಚಿಂತನೆ ಸರ್ಕಾರದ್ದು. ಡೆವಲಪರ್‌ಗಳು ಕೈಗೆಟುಕುವ ಮನೆ ನಿರ್ಮಾಣದಲ್ಲಿ ಹೆಚ್ಚು ಬಂಡವಾಳ ಹೂಡಲಿದ್ದಾರೆ. ಮನೆ ನಿರ್ಮಾಣ ಪ್ರದೇಶದ ವಿಸ್ತೀರ್ಣ ಹೆಚ್ಚಿಸಿರುವುದು ಶ್ರೀಸಾಮಾನ್ಯರಿಗೆ ವರದಾನವಾಗಿದೆ.
ಓಂ ಅಹುಜಾ, ಬ್ರಿಗೇಡ್‌ ಗ್ರೂಪ್‌ ರೆಸಿಡೆನ್ಶಿಯಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಜನಸಾಮಾನ್ಯರಿಗೆ ಅನುಕೂಲ
ರಿಯಲ್‌ ಎಸ್ಟೇಟ್‌ ಕ್ಷೇತ್ರದ ಬೆಳವಣಿಗೆಗೆ 2017ರ ಬಜೆಟ್‌ ಪೂರಕವಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂಥ ಯೋಜನೆಗಳಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ತೊಡಗಿಕೊಳ್ಳಲು ಇದು ಪೂರಕವಾಗಲಿದೆ.
ರವೀಂದ್ರ ಪೈ, ಸೆಂಚುರಿ ರಿಯಲ್‌ ಎಸ್ಟೇಟ್‌ ವ್ಯವಸ್ಥಾಪಕ ನಿರ್ದೇಶಕ

ಹೊರ ವಲಯ ಅಭಿವೃದ್ಧಿ
ಕೈಗೆಟುಕುವ ಬೆಲೆಯ ಮನೆ ನಿರ್ಮಾಣ ವಿಸ್ತೀರ್ಣವನ್ನು 30 ಚದರ ಮೀಟರ್‌ ಎಂದು ಈ ಮೊದಲು ನಿರ್ಧರಿಸಲಾಗಿತ್ತು. ಮೆಟ್ರೊ ಸಿಟಿಗಳಲ್ಲಿ ಇದೇ ಅಳತೆಯನ್ನು ಉಳಿಸಿಕೊಂಡು ನಗರದ ಹೊರ ಭಾಗಗಳಲ್ಲಿ ಮನೆ ನಿರ್ಮಾಣ ವಿಸ್ತೀರ್ಣವನ್ನು 60 ಚದರ ಮೀಟರ್‌ಗೆ ಏರಿಸಲಾಗಿದೆ. ಇದರಿಂದ ಹೊರ ಭಾಗಗಳಲ್ಲಿ  (ರೂರಲ್‌ ಹೌಸಿಂಗ್‌) ಚುರುಕಿನ ಚಟುವಟಿಕೆಗಳು ಕಂಡು ಬರಲಿವೆ. ಇನ್ನು ಮುಂದೆ ಮಿಡಲ್‌ ಹಾಗೂ ಲಕ್ಸುರಿ ಸೆಗ್ಮೆಂಟ್‌ ಬಿಟ್ಟು ಕೈಗೆಟುಕುವ ಬೆಲೆಯ ಮನೆ ನಿರ್ಮಾಣದ ಬಗೆಗೆ ಡೆವಲಪರ್ಸ್‌ಗಳು ಹೆಚ್ಚು ಗಮನ ನೀಡಲಿದ್ದಾರೆ.

ಮೂಲಸೌಕರ್ಯ ವಿಷಯದಲ್ಲಿ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿರುವುದರಿಂದ ಅಗತ್ಯ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಗುತ್ತದೆ. ಒಟ್ಟಿನಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಅಭಿವೃದ್ಧಿ ನಿಚ್ಚಳವಾಗಿದೆ.
ಸುರೇಶ್‌ ಹರಿ, ಕ್ರೆಡಾಯ್‌ ಬೆಂಗಳೂರು ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.