ADVERTISEMENT

ಜನಪ್ರಿಯ ಗ್ಲಾಸ್ ಗಾರ್ಡನ್‌

ಕೃಷ್ಣಿ ಶಿರೂರ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಜನಪ್ರಿಯ ಗ್ಲಾಸ್ ಗಾರ್ಡನ್‌
ಜನಪ್ರಿಯ ಗ್ಲಾಸ್ ಗಾರ್ಡನ್‌   

ಬಾಲ್ಕನಿ ಇದ್ದರೂ ಜಾಗವಿಲ್ಲ. ಟೆರೆಸ್‌ ಇದ್ದರೂ ಬಳಸೋ ಹಾಂಗಿಲ್ಲ ಅನ್ನೋ ಗಾರ್ಡನ್‌ ಪ್ರೇಮಿಗಳಿಗೆ ಇಲ್ಲೊಂದು ದಾರಿಯಿದೆ. ಅದೇ ಗ್ಲಾಸ್ ಗಾರ್ಡನ್ (Terrarium). ಬಗೆಬಗೆಯ ವಿನ್ಯಾಸದ ಗಾಜಿನ ಪಾತ್ರೆಗಳಲ್ಲಿ ನಮ್ಮಿಷ್ಟ ಬಂದಂತೆ ಗಾರ್ಡನ್‌ ರೂಪಿಸಬಹುದು. ಇದು ನಮ್ಮೊಳಗಿನ ಉದ್ಯಾನ ಪ್ರೀತಿಯ ಕನಸನ್ನು ನನಸು ಮಾಡುವುದರೊಂದಿಗೆ ಮನೆಯೊಳಗಿನ ಸೌಂದರ್ಯವನ್ನು ಹೆಚ್ಚಿಸಿ, ಹಸಿರು ವಾತಾವರಣಕ್ಕೆ ದಾರಿಮಾಡಿಕೊಡಲಿದೆ.

ಅಕ್ವೇರಿಯಂ ಬೌಲ್‌, ಚೌಕಾಕಾರದ, ಆಯತಾಕಾರದ ಗಾಜಿನ ಪಾತ್ರೆ, ಬಲ್ಬಿನಾಕಾರದ ಗಾಜು ಹೀಗೆ ವಿವಿಧ ನಮೂನೆಯ ಆಕರ್ಷಕ ಗಾಜಿನ ಪಾತ್ರೆಗಳೊಳಗೆ ವೈವಿಧ್ಯಮಯ ಉದ್ಯಾನಗಳು ಅರಳುತ್ತಿವೆ. ಈ ಗಾರ್ಡನ್‌ಗೆ ಬೇಕಾಗುವ ಪರಿಕರಗಳೆಂದರೆ ನಮ್ಮ ಆಯ್ಕೆಯ ಗಾಜಿನ ಪಾತ್ರೆ, ಸಣ್ಣ ಸಣ್ಣ ಕಲ್ಲುಗಳು, ನೋಡಲು ಕೊಕೊಪಿಟ್‌ನಂತೆ ಕಾಣುವ ಟೆರಾರಿಯಂ ಸಾಯಿಲ್‌ (ಸಾಮಾನ್ಯ ಮಣ್ಣಿಗಿಂತ ವಿಭಿನ್ನ ಈ ಮಣ್ಣು), ಸಣ್ಣ ಗಿಡಗಳು, ಅಲಂಕರಿಸಲು ಗೊಂಬೆಗಳು, ಚಾರ್‌ಕೋಲ್ ಪೌಡರ್‌, ಪಾಚಿ.

ಕ್ಯಾಕ್ಟಸ್‌ ಜಾತಿಗೆ ಸೇರಿದ ಸಸ್ಯಗಳು ಈ ವಿಧಾನಕ್ಕೆ ಹೊಂದುತ್ತವೆ. ಔಷಧೀಯ ಆಗರ ಅಲೋವೆರಾ, ಮನಿಪ್ಲಾಂಟ್‌, ಕಳ್ಳಿಗಳನ್ನು ಬೆಳೆಸಬಹುದು. ಗ್ರಾಫ್‌ಟೆಡ್ ಕ್ಯಾಕ್ಟಸ್‌, ಗಲ್ಲೊನ್ ಮಾಸ್‌ ಕೇನ್‌, ಜಡೆ ಪ್ಲಾಂಟ್‌ ಕೂಡ ಗ್ಲಾಸ್‌ ಗಾರ್ಡನ್‌ಗೆ ಉತ್ತಮ ಆಯ್ಕೆ. ಬಿದಿರಿನಿಂದ ಅಲಂಕರಿಸಿದ ಗ್ಲಾಸ್‌ ಗಾರ್ಡನ್‌ ಶೋಭೆಗೂ ಸೈ, ವಾಸ್ತುವಿಗೂ ಸೈ.

ADVERTISEMENT

ಗಾಜಿನ ಪಾತ್ರೆಯ ಬುಡದಲ್ಲಿ ಟೆರಾರಿಯಂ ಸಾಯಿಲ್‌ ಹಾಕಿ, ಅದರಲ್ಲಿ ನಾವು ಆಯ್ದುಕೊಳ್ಳುವ ಸಸಿಗಳನ್ನು ನೆಡಬೇಕು. ಅದರ ಮೇಲೆ ಚಾರ್‌ಕೋಲ್ ಪುಡಿ ಹರಡಿ. ಅದರ ಮೇಲೆ ಚಿಕ್ಕಚಿಕ್ಕ ಕಲ್ಲುಗಳನ್ನು ಹರಡಿ. ಗೊಂಬೆಗಳು, ಬಾತು ಕೋಳಿ, ಪ್ರಾಣಿಗಳ ಪ್ರತಿಕೃತಿಗಳನ್ನು ಜೋಡಿಸಬಹುದು. ಪುಟ್ಟ ಕಲ್ಲುಗಳ ನಡುವೆ ಪಾಚಿಯನ್ನು ಹಾಸಿದರೆ ಉದ್ಯಾನದ ಲುಕ್ ಹೆಚ್ಚುತ್ತದೆ. ನೀರು ಹಾಕುವಾಗ ಸ್ವಲ್ಪ ಎಚ್ಚರವಹಿಸಿ. ಗಾಜಿನ ಪಾತ್ರೆಯಲ್ಲಿ ನೀರು ನಿಲ್ಲದಂತೆ ಗಿಡಕ್ಕೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಚಿಮುಕಿಸಿ.

ಈ ರೀತಿ ಸಿದ್ಧಪಡಿಸಿದ ಗ್ಲಾಸ್‌ ಗಾರ್ಡನ್‌ ಅನ್ನು ಮರದ ಟೇಬಲ್‌ ಮೇಲೆ, ಡೈನಿಂಗ್‌ ಟೇಬಲ್‌ ಮೇಲೆ, ಮೆಟ್ಟಿಲುಗಳ ಮೇಲೆ, ಕಿಟಕಿಗಳ ಮೇಲೆ, ಪುಸ್ತಕಗಳನ್ನು ಇಡುವ ಶೆಲ್ಪ್‌ಗಳ ಮೇಲೆಯೂ ಇರಿಸಬಹುದು. ಆನ್‌ಲೈನ್‌ನಲ್ಲೂ ಗ್ಲಾಸ್‌ ಗಾರ್ಡನ್‌ ಲಭ್ಯ. ₹500ರ ಮೇಲ್ಪಟ್ಟು ದರವಿದೆ. ಉಡುಗೊರೆಯಾಗಿ ನೀಡಲು ಗ್ಲಾಸ್‌ ಗಾರ್ಡನ್‌ ಉತ್ತಮ ಆಯ್ಕೆ. ಬೊನ್ಸಾಯ್‌ ಮರಗಳ ಕುಂಡಗಳಂತೆ ಗ್ಲಾಸ್‌ ಗಾರ್ಡನ್‌ನಿಂದ ಮನೆಯ ಒಳಾಂಗಣಕ್ಕೆ ಶೋಭೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.