ADVERTISEMENT

ನೀರು, ವಿದ್ಯುತ್ ಸಂಪರ್ಕ ಪಡೆಯಬೇಕೆ?

ಕೆ.ಎಸ್.ಗಿರೀಶ್
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST
ಚಿತ್ರ : ಶಿಲ್ಪಾ ಕಬ್ಬಿಣಕಂತಿ
ಚಿತ್ರ : ಶಿಲ್ಪಾ ಕಬ್ಬಿಣಕಂತಿ   

ಕಳೆದ ಸಂಚಿಕೆಗಳಲ್ಲಿ ನಿವೇಶನ ಮತ್ತು ಮನೆ ಖರೀದಿಸಿದ ನಂತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದು, ನಂತರ ಕಂದಾಯ ಶಾಖೆಯಲ್ಲಿ ಖಾತೆ ಬದಲಾವಣೆ ಮತ್ತು ಕಂದಾಯ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಬಹಳಷ್ಟು ವಿಚಾರ ತಿಳಿದುಕೊಂಡಂತಾಯಿತು.

ಮನೆ, ನಿವೇಶನ ಖರೀದಿಗೆ ಸಂಬಂಧಿಸಿದಂತೆ ಬಹಳ ಮುಖ್ಯವಾದ ಹಾಗೂ ಆರಂಭ ಹಂತದ ಈ ಎರಡೂ ಪ್ರಕ್ರಿಯೆಗಳು ಮುಗಿದ ನಂತರ ಮನೆಗೆ ಅತ್ಯಗತ್ಯವಾಗಿ ಬೇಕಾದ ನೀರು ಹಾಗೂ ವಿದ್ಯುತ್ ಸಂಪರ್ಕ ಪಡೆಯುವ ಕುರಿತ ಸಾಮಾನ್ಯ ಪ್ರಕ್ರಿಯೆ ಬಗೆಗೆ ತಿಳಿಯೋಣ.

ಇಲ್ಲೂ ಕೂಡ ಯಾವುದೇ ಪ್ರಕ್ರಿಯೆ ಬಹಳ ಸರಳವಾಗಿಯೂ, ಅತ್ಯಂತ ನಾಜೂಕಿನದಾಗಿಯೂ ಇಲ್ಲ. ಪೂರ್ಣಗೊಂಡ ಮನೆಗಾಗಲೀ ಅಥವಾ  ನಿವೇಶನದಲ್ಲಿ ಮನೆ ಕಟ್ಟಲು ಆರಂಭಿಸುವ ಸಂದರ್ಭದಲ್ಲಾಗಲೀ ನಲ್ಲಿ ನೀರಿನ ಸಂಪರ್ಕ ಪಡೆದುಕೊಳ್ಳಬೇ­ಕೆಂದರೆ ಆ ಕೆಲಸಕ್ಕೆ ಜಲಮಂಡಳಿ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ನೋಂದಾಯಿತವಾದ ಪ್ಲಂಬರ್ ಸಹಕಾರ ಅಗತ್ಯವಾಗಿ ಬೇಕು. ಇವರಿಲ್ಲದೇ ನಲ್ಲಿ ನೀರಿನ ಸಂಪರ್ಕ ಲಭ್ಯವಾಗುವುದಿಲ್ಲ.ಗೃಹಬಳಕೆ, ಗೃಹೇತರ ಬಳಕೆ, ವಾಣಿಜ್ಯ ಉದ್ದೇಶಕ್ಕೆ ಹೀಗೆ ವಿವಿಧ ಸ್ವರೂಪದ ನೀರಿನ ಬಳಕೆಗೆ ಬೇರೆ ಬೇರೆ ಶುಲ್ಕಗಳೂ ಇವೆ.

ಗೃಹ ಬಳಕೆ ನೀರಿನ ಸಂಪರ್ಕ
ಮನೆಗೆ ನಲ್ಲಿ ನೀರಿನ ಸಂಪರ್ಕ ಪಡೆದುಕೊಳ್ಳಬೇಕೆಂದರೆ ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕೆಂದರೆ ಸಾಕಷ್ಟು ದಾಖಲೆಗಳನ್ನು ಮೊದಲು ಕಲೆಹಾಕಿಕೊಳ್ಳಬೇಕು. ಸ್ಥಳೀಯ ಸಂಸ್ಥೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಡೆದಿರುವ ದಾಖಲೆಗಳು, ಖಾತೆ, ಕಂದಾಯದ ರಶೀತಿ, ವಾರ್ಷಿಕ ತೆರಿಗೆ ಮೌಲ್ಯದ ಅರ್ಹತಾಪತ್ರ, ‘ಸಿ.ಆರ್’ ಅಂದರೆ, ಕಂಪ್ಲೀಷನ್‌ ರಿಪೋರ್ಟ್‌  (ಅನುಮೋದಿತ ನೀಲ ನಕ್ಷೆಯಂತೆಯೇ ಮನೆಯ ನಿರ್ಮಾಣ ಆಗಿದೆ ಎಂಬುದನ್ನು ದೃಢೀಕರಿಸುವ ಪತ್ರ) ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಬೇಕು.

ನಂತರ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೋಂದಾಯಿತ ಪ್ಲಂಬರ್ ಮೂಲಕ ಜಲಮಂಡಳಿ ಅಥವಾ ನಲ್ಲಿ ನೀರಿನ ಸಂಪರ್ಕ ಒದಗಿಸುವ ಸ್ಥಳೀಯ ಸಂಸ್ಥೆಗೆ ಸಲ್ಲಿಸಬೇಕು. ನೀರಿನ ಮಾಪಕವನ್ನು ಖರೀದಿಸಿದ ಬಿಲ್‌ನ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯನ್ನೂ ಜತೆಗೆ ಲಗತ್ತಿಸಲೇಬೇಕು. ಈ ಅನುಮತಿ ಪಡೆಯುವುದಕ್ಕಾಗಿ ರೂ.3,115 ಠೇವಣಿ ಇಡಬೇಕು.

ಗೃಹೇತರ ಬಳಕೆಗೆ
ಗೃಹ ಕೃತ್ಯಕ್ಕೆ ಹೊರತಾದ ಅನ್ಯ ಉದ್ದೇಶಕ್ಕೆ ನೀರನ್ನು ಬಳಸುವುದಕ್ಕಾದರೆ, ಅಂದರೆ ಕಟ್ಟಡ ಕಟ್ಟುವುದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಸಂಸ್ಥೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದ ಅನುಮತಿ ಪತ್ರ, ನೀಲನಕ್ಷೆಯ ಜೆರಾಕ್ಸ್ ಪ್ರತಿ, ಕಂದಾಯ ಕಟ್ಟಿರುವುದಕ್ಕೆ ರಶೀತಿ ಇವುಗಳನ್ನು ನೋಂದಾಯಿತ ಪ್ಲಂಬರ್ ಮೂಲಕವೇ ಅರ್ಜಿ ಸಮೇತ ಸಲ್ಲಿಸಬೇಕು. ಜತೆಗೆ ಅನುಮತಿ ಶುಲ್ಕವಾಗಿ ರೂ.6,340 ಕಟ್ಟಬೇಕು.

ವಾಣಿಜ್ಯ ಬಳಕೆ ಸಂಪರ್ಕ
ವಾಣಿಜ್ಯ ಉದ್ದೇಶದ ಬಳಕೆಗಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿರುವ ದಾಖಲೆಗಳು, ಖಾತೆ, ಕಂದಾಯದ ರಶೀತಿ, ವಾರ್ಷಿಕ ತೆರಿಗೆ ಮೌಲ್ಯದ ಅರ್ಹತಾಪತ್ರ, ಸಿ.ಆರ್ (ಮನೆ ನಿರ್ಮಾಣ ಪೂರ್ಣಗೊಂಡ ವರದಿ) ಇವುಗಳಲ್ಲಿ ಯಾವುದಾದರೂ ಒಂದು ಹಾಗೂ ವ್ಯಾಪಾರದ ಪರವಾನಗಿ ಪತ್ರದ ಜತೆಗೆ ನೋಂದಾಯಿತ ಪ್ಲಂಬರ್ ಮೂಲಕ  ಅರ್ಜಿಯನ್ನು ರೂ.12,640 ಶುಲ್ಕದೊಡನೆ ಸಲ್ಲಿಸಬೇಕು.

ಯಾವುದೇ ನೀರಿನ ಸಂಪರ್ಕಕ್ಕೇ ಆದರೂ ಮನೆ ಅಥವಾ ನಿವೇಶನದ ಎದುರಿನ ರಸ್ತೆಯನ್ನು ಅಗೆಯಬೇಕಾಗಿ ಬಂದರೆ ಅದಕ್ಕೆ ಪ್ರತ್ಯೇಕವಾದ ಶುಲ್ಕವನ್ನು ಸ್ಥಳೀಯ ಸಂಸ್ಥೆಯಲ್ಲಿ (ಪಾಲಿಕೆಯ ವಲಯ ಕಚೇರಿ) ಪಾವತಿಸಿರಬೇಕು. ಜತೆಗೆ ಅದರ ರಶೀತಿಯನ್ನೂ ಸಹ ನಲ್ಲಿ ನೀರಿನ ಸಂಪರ್ಕಕ್ಕೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ಜತೆಗೆ ಲಗತ್ತಿಸುವುದು ಕಡ್ಡಾಯ.

ಇಷ್ಟನ್ನು ಮಾಡಿದರೆ, ಎಂಜಿನಿಯರ್ ಸ್ಥಳದ ಸಮೀಕ್ಷೆ ನಡೆಸಿ ವರದಿ ನೀಡುತ್ತಾರೆ. ಜಲನಿರೀಕ್ಷಕರು, ಉಪ ಕಾರ್ಯನಿರ್ವಾಹಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಮೀಟರ್‌ ಅಳವಡಿಕೆ ವಿಭಾಗದ  ಅಧಿಕಾರಿ (ಸೆಕ್ಷನ್‌ ಆಫೀಸರ್‌) ಇವರೆಲ್ಲರ ಸಹಿ ಪಡೆದರೆ ಮುಂದಿನ 15 ದಿನಗಳಲ್ಲಿ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಮನೆಯ ‘ನಲ್ಲಿಯಲ್ಲಿ ನೀರು ಬರುತ್ತದೆ’ ಎಂಬುದು ಅಧಿಕಾರಿಗಳ ಮಾತು.

ಆದರೆ, ನಲ್ಲಿ ನೀರಿನ ಸಂಪರ್ಕ ಪಡೆದುಕೊಳ್ಳುವ ಸಲುವಾಗಿ ಸಂಬಂಧಿಸಿದ ಇಲಾಖೆಯ ಒಳ ಹೊರಗೆ ಓಡಾಡಿದರೆ ಈ ಎಲ್ಲ ಪ್ರಕ್ರಿಯೆಗಳೂ ಅಧಿಕಾರಿಗಳು ಹೇಳಿದಷ್ಟು ಸರಳವಿಲ್ಲ. ಬಹಳಷ್ಟು ದಿನ ಓಡಾಡಬೇಕಾಗುತ್ತದೆ. ಭ್ರಷ್ಟ ಆಚಾರದ ಕರೆಗೂ ಓಗೊಡಬೇಕಾಗುತ್ತದೆ ಎಂಬುದು ಅರಿವಾಗುತ್ತದೆ ಎನ್ನುತ್ತಾರೆ ಈಗಾಗಲೇ ಸಾಕಷ್ಟು ಅನುಭವ ಪಡೆದಿರುವ ಕೆಲವು ಮನೆ ಮಾಲೀಕರು. ಆದರೆ, ಇತ್ತೀಚೆಗೆ ‘ಸಕಾಲ’ ಯೋಜನೆ ಜಾರಿಗೆ ಬಂದಾಗಿನಿಂದ ಕೈಬಿಸಿ ಮಾಡಬೇಕಾದ ರೂಢಿಗೆ ಸ್ವಲ್ಪ ಕಡಿವಾಣ ಬಿದ್ದಿದೆ ಎನ್ನುತ್ತಾರೆ ಕೆಲವರು.

2013–14ನೇ ಸಾಲಿನಲ್ಲಿ ಮೈಸೂರಿನಲ್ಲಿ ನೋಂದಾಯಿತ ಪ್ಲಂಬರ್‌ಗಳ ಸಂಖ್ಯೆ ಇರುವುದು ಕೇವಲ 33!
ಲಕ್ಷಾಂತರ ಜನಸಂಖ್ಯೆ ಇರುವ, ಪ್ರತಿ ವರ್ಷ ಸಾವಿರಾರು ಮನೆಗಳು ನಿರ್ಮಾಣವಾಗುವ ಈ ನಗರದಲ್ಲಿ ಬರೇ 33 ಮಂದಿ ನೋಂದಾಯಿತ ಪಂಬ್ಲರ್‌ಗಳು ಇದ್ದಾರೆ ಎಂದರೆ, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತೆ! ಬೇಡಿಕೆಗೂ ಪೂರೈಕೆಗೂ ನಡುವೆ ಅಜಗಜಾಂತರ.

ವಿದ್ಯುತ್ ಸಂಪರ್ಕ
‘ವಿದ್ಯುತ್ ಸಂಪರ್ಕ ಪಡೆಯುವುದೂ ಸಹ ಬಹಳ ಸಲೀಸು. ಇದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆ’...
ಇಂತಹ ಪದಗಳನ್ನು ಅಧಿಕಾರಿಗಳು ಬಹಳ ಸುಲಭವಾಗಿಯೇ ಬಳಸುತ್ತಾರೆ!ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ಮನೆ ನಿರ್ಮಾಣದ ನೀಲನಕ್ಷೆಗೆ ಅನುಮತಿ ಪಡೆದಿರುವ ದಾಖಲೆ, ಖಾತೆ ಮತ್ತು ಕಂದಾಯ ಪಾವತಿಯ ದಾಖಲೆಗಳ ಪ್ರತಿಗಳನ್ನು ಒದಗಿಸಬೇಕಿದೆ.

ವಿದ್ಯುತ್‌ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ನಂತರ ವಿದ್ಯುತ್‌ ಸರಬರಾಜು ಕಂಪೆನಿಯ (ರಾಜ್ಯದ ಆಯಾ ಪ್ರದೇಶದಲ್ಲಿರುವ ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ,  ಸೆಸ್ಕ್‌) ಎಂಜಿನಿಯರ್ ಸ್ಥಳ ಸಮೀಕ್ಷೆ ನಡೆಸುತ್ತಾರೆ. ಮನೆಯ ಒಳಗಡೆ ಸಮರ್ಪಕವಾಗಿ ವೈರಿಂಗ್ ಆಗಿದೆಯೇ, ಗುಣಮಟ್ಟದ (ಐಎಸ್‌ಐ ಗುಣಮಟ್ಟ ಖಾತರಿ ಇರುವ ಬಿಡಿಭಾಗ ಬಳಸುವುದು ಉತ್ತಮ) ಸ್ವಿಚ್‌ಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ.

ಮನೆಗೆ ವೈರಿಂಗ್‌ ಕೆಲಸ ಪೂರ್ಣಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಿಕಲ್ ಗುತ್ತಿಗೆದಾರರಿಂದ ಸಿ.ಆರ್ (ವೈರಿಂಗ್‌ ಪೂರ್ಣಗೊಂಡ  ವರದಿ) ಪಡೆದು ಈ ಹಂತದಲ್ಲಿ ಸಲ್ಲಿಸುವುದು ಅವಶ್ಯಕ. ಅವರು ವರದಿ ನೀಡಿದ ಬಳಿಕ ವಿವಿಧ ಮೀಟರ್‌ಗಳಿಗೆ ವಿವಿಧ ಕಿಲೋ ವಾಟ್‌ಗೆ ಹಾಗೂ ವಿವಿಧ ಉದ್ದೇಶಗಳಿಗೆ ತಕ್ಕಂತೆ (ಎಇಎಚ್‌ ಇತ್ಯಾದಿ) ಠೇವಣಿ ಇಡಬೇಕಾಗುತ್ತದೆ.

ಉದಾಹರಣೆಗೆ, ಒಂದು ಕಿಲೋವಾಟ್‌ ವಿದ್ಯುತ್‌ ಸಾಮರ್ಥ್ಯಕ್ಕೆ  ರೂ.310, ಎರಡು ಕಿಲೋವಾಟ್‌ ಸಾಮರ್ಥ್ಯಕ್ಕೆ ರೂ.710, ಮೂರು ಕಿಲೋವಾಟ್‌ ಸಾಮರ್ಥ್ಯಕ್ಕೆ ರೂ.1,200, ನಾಲ್ಕು ಕಿಲೋವಾಟ್‌ ಸಾಮರ್ಥ್ಯಕ್ಕೆ  ರೂ.1,700 ಹಾಗೂ ಐದು  ಕಿಲೋವಾಟ್‌ ಸಾಮರ್ಥ್ಯಕ್ಕೆ ರೂ.2,260 ಠೇವಣಿ ಇಡಬೇಕಿದೆ.

ಮನೆಗೆ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಅಗತ್ಯವಿದ್ದಲ್ಲಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಂತರ್ಜಾಲ ತಾಣ www.kerc.org ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT