ADVERTISEMENT

ಮನೆಗೆ ಹಬ್ಬದ ಕಳೆ

ಸುರೇಖಾ ಹೆಗಡೆ
Published 22 ಡಿಸೆಂಬರ್ 2016, 19:30 IST
Last Updated 22 ಡಿಸೆಂಬರ್ 2016, 19:30 IST
ಪುಸ್ತಕಗಳನ್ನು ಬಳಸಿ ವಿನ್ಯಾಸಗೊಳಿಸಲಾದ ಕ್ರಿಸ್‌ಮಸ್‌ ಟ್ರೀ
ಪುಸ್ತಕಗಳನ್ನು ಬಳಸಿ ವಿನ್ಯಾಸಗೊಳಿಸಲಾದ ಕ್ರಿಸ್‌ಮಸ್‌ ಟ್ರೀ   

ನಿಮ್ಮದು ಸೃಜನಶೀಲ ಮನಸ್ಸೇ? ಖಾಲಿ ಸಮಯದಲ್ಲಿ ಹೊಸತೇನನ್ನಾದರೂ ಮಾಡುವ ಹಂಬಲ, ಆಸಕ್ತಿ  ನಿಮಗಿದೆಯೇ? ಹಾಗಿದ್ದರೆ ಈ ಕ್ರಿಸ್‌ಮಸ್‌ ಸಂದರ್ಭದಲ್ಲಿ ನೀವೇ ತಯಾರಿಸಿದ ವಸ್ತುಗಳಿಂದ ಮನೆ ಅಲಂಕರಿಸಿ. ಕಡಿಮೆ ಖರ್ಚಿನಲ್ಲಿ ಚೆಂದದ ವಿನ್ಯಾಸ ಮಾಡಿ ಮನೆ ಮಂದಿ ಹಾಗೂ ಸಂಬಂಧಿಕರ ಮನ ಗೆಲ್ಲಿ.

ಮೇಣದಬತ್ತಿ ಕುಂಡ
ಹಲವು ವರ್ಷಗಳ ಕಾಲ ಬಳಸಿ ಬಿಟ್ಟ ಕೆಲ ಡಬ್ಬಿಗಳು ಮನೆಯಲ್ಲಿ ಹಾಗೆಯೇ ಇವೆಯೇ? ಹಾಗಿದ್ದರೆ ಈ ಹಬ್ಬಕ್ಕೆ ಅವುಗಳನ್ನು ಕ್ಯಾಂಡಲ್‌ ಹೋಲ್ಡರ್‌ಗಳನ್ನಾಗಿ ಮರುಬಳಸಿಕೊಳ್ಳಬಹುದು.

ಮುಚ್ಚಳ ತೆಗೆದು, ಸುತ್ತಲೂ ಗಮ್ ಹಚ್ಚಿ ಕೆಂಪು, ಹಸಿರು ಅಥವಾ ಬಿಳಿ ಬಣ್ಣದ ಲೇಸ್‌ ಅಂಟಿಸಿ. ಡಬ್ಬದ ಒಳಗೊಂದು ಟೀಲೈಟ್‌ ಕ್ಯಾಂಡಲ್‌ ಅನ್ನು ಇಳಿಬಿಡಿ. ಸಂಜೆಯ ಮಬ್ಬಿಗೆ ಟೇಬಲ್‌ನಲ್ಲಿರಿಸಿದ ಸ್ವಯಂ ನಿರ್ಮಿತ ಕ್ಯಾಂಡಲ್‌ ಹೋಲ್ಡರ್‌ ನೀಡುವ ಬೆಳಕಿನ ಖುಷಿ ಅನುಭವಿಸಿ.

ಕ್ಯಾಂಡಿ ಕೇನ್‌ ವಿನ್ಯಾಸ
ಗ್ಲಾಸ್‌ ಡಬ್ಬಕ್ಕೆ ಟೇಪ್‌ ಸುತ್ತಬೇಕು. ಖಾಲಿ ಇರುವ ಜಾಗದಲ್ಲಿ ಬಿಳಿಬಣ್ಣದ ಆಕ್ರಿಲಿಕ್‌ನಿಂದ ಪೇಂಟ್‌ ಮಾಡಬೇಕು. ಇದು ಒಣಗಿದ ನಂತರ ಟೇಪ್‌ ತೆಗೆದು ಆ ಜಾಗದಲ್ಲಿ ಕೆಂಪು ಆಕ್ರಿಲಿಕ್‌ ಬಣ್ಣದಿಂದ ಪೇಂಟ್‌ ಮಾಡಿ. ಒಳಗೆ ಎಲ್‌ಇಡಿ ಲೈಟ್‌ ಇಟ್ಟರೆ ಕ್ಯಾಂಡಿ ಕೇನ್‌ನಂಥ ಲೈಟ್‌ ಹೋಲ್ಡರ್‌ ನಿಮ್ಮ ಎದುರಿಗಿರುತ್ತದೆ. ಅಥವಾ ಕ್ಯಾಂಡಿ ಕೇನ್‌ ಬಣ್ಣ ವಿನ್ಯಾಸದಲ್ಲಿ ಲೇಸ್‌ ಅಂಟಿಸಿ ವಿನ್ಯಾಸ ಮಾಡಿದರೂ ಆಗುತ್ತದೆ.

ಒಂದೊಮ್ಮೆ ನಿಮಗೆ ಸ್ಪ್ರೇ ಪೇಂಟಿಂಗ್‌ ಬಗೆಗೆ ಒಲವಿದ್ದರೆ, ಕೆಲವು ಗ್ಲಾಸ್‌ ಜಾರ್‌ಗಳನ್ನು ಬಳಸಿ. ಮನೆಯ ಹೊರಗಿನ ಬಾಲ್ಕನಿ ಅಥವಾ ವರಾಂಡದಲ್ಲಿ ಪೇಪರ್‌ ಮೇಲೆ ಅದನ್ನಿಟ್ಟು ಬಣ್ಣ ಸಿಂಪಡಿಸಿ. ಕೆಂಪು, ಬಿಳಿ, ಚಿನ್ನ ಹಾಗೂ ಬೆಳ್ಳಿ ಬಣ್ಣವನ್ನು ಬಳಿಯಿರಿ. ಅದು ಒಣಗಿದ ನಂತರ ಗ್ಲಾಸ್‌ನ ಮೇಲ್ಭಾಗವನ್ನು ಗಟ್ಟಿಯಾದ ದಾರದಿಂದ ಕಟ್ಟಿ.ಅವುಗಳಿಗೆ ಕೆಂಪು ಅಥವಾ ಬಂಗಾರದ ಬಣ್ಣದ ಕೃತಕ ಗಿಡಗಳನ್ನು ಅಂಟಿಸಿ ಅಂದಗಾಣಿಸಬಹುದು.

ಅಕ್ಷರ ರೂಪ
ಇದು Love, Joy, Peace ಹೀಗೆ ಮನಸಿನ ಭಾವನೆಗಳಿಗೆ ಅಕ್ಷರ ರೂಪ ಕೊಡುವ ಕಾಲವೂ ಹೌದು. ಕ್ರಾಫ್ಟ್‌ ಅಥವಾ ಸ್ಟೇಶನರಿ ಅಂಗಡಿಗಳಲ್ಲಿ  ದೊಡ್ಡ ದೊಡ್ಡ ಗಾತ್ರದ ಎಂಡಿಎಫ್‌ ಅಲ್ಫಾಬೆಟ್‌ಗಳನ್ನು ಖರೀದಿಸಿ ತರಬಹುದು. ಅಥವಾ ಕಾರ್ಡ್‌ಬೋರ್ಡ್‌ಗಳಲ್ಲಿ/ ಥರ್ಮಕೋಲ್‌ಗಳಲ್ಲಿ ಅಕ್ಷರಗಳನ್ನು ರೂಪಿಸಿಕೊಳ್ಳಬಹುದು.

ನಿಮ್ಮ ಭಾವನೆಗಳಿಗೆ ಪದದ ರೂಪ ಕೊಡುವುದಲ್ಲದೆ ಪೇಂಟ್‌ ಮಾಡಿ ಬಣ್ಣದ ಮೆರುಗನ್ನೂ ನೀಡಬಹುದು. ಪ್ರತಿ ಅಕ್ಷರವನ್ನು ಗಮ್‌ ಮೂಲಕ ಅಂಟಿಸಬಹುದು ಅಥವಾ ಅವುಗಳನ್ನು ಬಂಗಾರ ಬಣ್ಣದ ರಿಬ್ಬನ್‌/ದಾರದಿಂದ ಸೇರಿಸಬಹುದು.

ಬಗೆಬಗೆ ಟೇಪ್‌
ಒಂದೊಮ್ಮೆ ಮನೆಯಲ್ಲಿ ತುಂಬಾ ಟೀಲೈಟ್‌ ಕ್ಯಾಂಡಲ್‌ಗಳಿದ್ದಲ್ಲಿ ಅಂಗಡಿಯಿಂದ ಕ್ರಿಸ್‌ಮಸ್‌ ಸಂಬಂಧಿ ವಾಶಿ ಟೇಪ್‌ ಖರೀದಿಸಿ ತನ್ನಿ ಅಥವಾ ಕೆಂಪು, ಹಸಿರು, ಬಂಗಾರ ಬಣ್ಣದ ಟೇಪ್‌ಗಳನ್ನು ಬಳಸಿದರೂ ಆಗಬಹುದು. ಅವುಗಳನ್ನು ಮೇಣದಬತ್ತಿ ಸುತ್ತ ಸುತ್ತಬೇಕು. ಆಗ ಅದು ಇನ್ನಷ್ಟು ಸೊಬಗಿನಿಂದ ನಳನಳಿಸುತ್ತದೆ.

ಐಸ್‌ಕ್ಯಾಂಡಿ ಸ್ಟಿಕ್‌
ಐಸ್‌ಕ್ಯಾಂಡಿ ಸ್ಟಿಕ್‌ನ ಮೂರೂ ಭಾಗಗಳನ್ನು ತ್ರಿಕೋನಾಕಾರದಲ್ಲಿ ಸೇರಿಸಿ ಫೆವಿಕಾಲ್‌ನಿಂದ ಅಂಟಿಸಬೇಕು. ಹೀಗೆ ಕ್ರಿಸ್‌ಮಸ್‌ ಟ್ರೀಯನ್ನೂ ಮಾಡಬಹುದು ಅಥವಾ ಮುಖದ ಆಕಾರವನ್ನೂ ನೀಡಬಹುದು.

ಕಂದುಬಣ್ಣದ ಪೇಪರ್‌/ಕಾರ್ಡ್‌ಬೋರ್ಡ್‌ ಅನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿ ಕ್ಯಾಂಡಿಸ್ಟಿಕ್‌ಗೆ ಅಂಟಿಸಬೇಕು. ಪೇಪರನ್ನು ಎರಡು ಗೋಲಾಕಾರದಲ್ಲಿ ಕತ್ತರಿಸಿ ಅದನ್ನು ಕಣ್ಣಿನಂತೆ ಅಂಟಿಸಬಹುದು. ಮಧ್ಯದಲ್ಲೊಂದು ಕಪ್ಪು ವೃತ್ತ ಮಾಡಲು ಮರೆಯದಿರಿ. ಕೆಂಪು ಬಣ್ಣದ ಪಾಂ ಪಾಂ ಪೇಪರ್‌ ಅನ್ನು ಮೂಗಿನಿ ಆಕಾರದಲ್ಲಿ ಅಂಟಿಸಿ. ಕಣ್ಣಿಗೂ ಮೇಲ್ಭಾಗದ ಸ್ಟಿಕ್‌ನ ಮಧ್ಯೆ ದಾರವನ್ನು ಕಟ್ಟಿ ಅಲ್ಲಿಗೆ ಗಮ್‌ ಹಾಕಿ ಅಂಟಿಸಿ. ಇದನ್ನು ಕ್ರಿಸಮಸ್‌ ಟ್ರೀಯಲ್ಲಿ ಅಲಂಕರಿಸಬಹುದು.

ಕ್ಯಾನ್ವಾಸ್‌ ಚೆಲುವು
ಚೌಕಾಕಾರದ ಚಿಕ್ಕಚಿಕ್ಕ ಕ್ಯಾನ್ವಾಸ್‌ಗಳು ಅಂಗಡಿಯಲ್ಲಿ ಸಿಗುತ್ತವೆ. ಬೇರೆ ಬೇರೆ ಬಣ್ಣದ ಪೇಂಟ್‌ ಮಾರ್ಕರ್‌ಗಳು ಜೊತೆಗಿರಲಿ. ಇದರಿಂದ ಬಗೆಬಗೆಯ ಚಿತ್ರಗಳನ್ನು ಮೂಡಿಸಬಹುದು. ಸಾಂತಾ, ಸ್ನೋಮೆನ್‌, ಸ್ನೋಫ್ಲೇಕ್‌, ಜಿಂಜರ್‌ಬಿಯರ್ಡ್‌ ಮ್ಯಾನ್‌ ಹೀಗೆ ವಿವಿಧ ರೀತಿಯಲ್ಲಿ ಚಿತ್ರವನ್ನು ಅಲ್ಲಿ ಮೂಡಿಸಬಹುದು. 

ಕ್ರಿಸ್‌ಮಸ್ ಮರ
ಹಳೆಯ ಪುಸ್ತಕ, ಚಿತ್ರಗಳು, ಎಲ್‌ಇಡಿ ಲೈಟ್ಸ್‌ ಸೇರಿದಂತೆ ಇನ್ನಿತರೆ ವಸ್ತುಗಳಿದ್ದರೆ ಸುಂದರ ಕ್ರಿಸ್‌ಮಸ್‌ ಟ್ರೀ ಮಾಡಬಹುದು. ಬದುಕಿನ ಹೆಜ್ಜೆಗಳನ್ನು ನೆನಪಿಸುವ ಅನೇಕ ಚಿತ್ರಪಟಗಳಿದ್ದರೆ ಅವುಗಳಿಂದಲೇ ಕ್ರಿಸ್‌ಮಸ್‌ ಟ್ರೀಯೊಂದನ್ನು ನಿರ್ಮಿಸಬಹುದು.

ನಿಮ್ಮಿಷ್ಟದ ಚಿತ್ರಗಳನ್ನು ಆಲ್ಬಂನಿಂದ ತೆಗೆದು ಗೋಡೆಯ ಮೇಲೆ ಕ್ರಿಸ್‌ಮಸ್‌ ಟ್ರೀ ವಿನ್ಯಾಸದಲ್ಲಿ ಅಂಟಿಸಿ. ಟೇಪ್‌ನಲ್ಲಿ ಕ್ರಿಸ್‌ಮಸ್‌ ಟ್ರೀ ವಿನ್ಯಾಸ ಮಾಡಿ ಅದರಲ್ಲಿ ಚಿತ್ರಗಳನ್ನು ಜೋಡಿಸಬಹುದು. ಕೆಂಪು ಬಣ್ಣದ ಟೇಪ್‌ನಿಂದ ಸ್ಟಾರ್‌ ವಿನ್ಯಾಸ ಮಾಡಿ, ಮಿಂಚುವ ಮರಕ್ಕಾಗಿ ಅಲ್ಲಲ್ಲಿ ದೀಪಗಳನ್ನು ಬಳಸಬಹುದು.

ಪುಸ್ತಕಗಳಿಂದ ಕ್ರಿಸ್‌ಮಸ್ ಟ್ರೀ
ನೀವು ಪುಸ್ತಕ ಪ್ರೇಮಿಗಳಾಗಿದ್ದಲ್ಲಿ, ನಿಮ್ಮ ಮನೆಯಲ್ಲಿರುವ ಬೇರೆ ಬೇರೆ ಗಾತ್ರದ ಪುಸ್ತಕಗಳಿಂದಲೇ ಕ್ರಿಸ್‌ಮಸ್‌ ಮರವನ್ನು ಮಾಡಬಹುದು. ಟೇಬಲ್‌ ಮೇಲೆ ಇಲ್ಲವೇ ನೆಲದ ಮೇಲೆ ಪುಸ್ತಕದಿಂದ ದೊಡ್ಡ ವೃತ್ತ ನಿರ್ಮಿಸಿ. ಪ್ರತಿ ಸುತ್ತಿಗೂ ಒಂದೇ ಅಳತೆಯ ಪುಸ್ತಕಗಳಿದ್ದರೆ ಗಟ್ಟಿಯಾಗಿ ನಿಲ್ಲುತ್ತದೆ. ಒಂದರ ಮೇಲೊಂದರಂತೆ ತ್ರಿಕೋನಾಕಾರದಲ್ಲಿ ಜೋಡಿಸಿ. ರಾತ್ರಿ ಸಂದರ್ಭದಲ್ಲಿ ಮಿನುಗುವಂತೆ ಮಾಡಲು ದೀಪದಿಂದ ಅಲಂಕರಿಸಬಹುದು.

ಬಗೆಬಗೆ ವಿನ್ಯಾಸ
ಏಣಿ, ಮರದ  ತುಂಡುಗಳಿದ್ದರೆ ಅಥವಾ ಬಿಯರ್‌ ಬಾಟಲ್‌ಗಳ ರಾಶಿ ನಿಮ್ಮಲ್ಲಿದ್ದರೆ, ದೀಪಗಳ ಮಾಲೆ ಇದ್ದರೆ ಅವುಗಳಿಂದಲೂ ಕ್ರಿಸ್‌ಮಸ್‌ ಮರ ಸೃಷ್ಟಿಸಬಹುದು. ಹಳೆಯ ಪೇಪರ್‌ನಿಂದಲೇ ಸಾಕಷ್ಟು ವಿನ್ಯಾಸದ ಕ್ರಿಸ್‌ಮಸ್‌ ಮರ ಮಾಡಬಹುದು.

ಆರ್ನಮೆಂಟಲ್ ಟ್ರೀ, ದಾರದಿಂದ, ಟಿಶ್ಯೂ ಪೇಪರ್‌ನಿಂದ, ಮರದ ತುಂಡಿನಿಂದ, ಎಗ್‌ ಹೋಲ್ಡರ್‌ನಿಂದ, ರಿಬ್ಬನ್‌ನಿಂದ, ಪಿವಿಸಿ ಪೈಪ್‌ ತುಂಡುಗಳಿಂದ, ಸ್ಟ್ರಾನಿಂದ, ಪೇಪರ್‌ ಕೋನ್‌ನಿಂದ, ಬಗೆಬಗೆಯ ಹಣ್ಣುಗಳ ಮಾದರಿಗಳಿಂದಲೂ ವಿನ್ಯಾಸ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT