ADVERTISEMENT

ಮನೆ ಖರೀದಿಗೆ ಮನ ಸಿದ್ಧಗೊಳಿಸಿ

ವಾಸ್ತು ಪ್ರಕಾರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಮನೆ ಖರೀದಿಗೆ ಮನ ಸಿದ್ಧಗೊಳಿಸಿ
ಮನೆ ಖರೀದಿಗೆ ಮನ ಸಿದ್ಧಗೊಳಿಸಿ   
-ಗಣಪತಿ ಶರ್ಮಾ
 
**
ಮನೆ ಖರೀದಿ, ಉದ್ಯೋಗ ಬದಲಾವಣೆ ಸೇರಿದಂತೆ ಬದುಕನ್ನು ಗಾಢವಾಗಿ ಪ್ರಭಾವಿಸುವ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭ ಮನಸ್ಸು ಗೊಂದಲ ಅನುಭವಿಸುವುದು ಸಹಜ. 
 
ಸರಿಯಾದುದನ್ನು ಮಾಡುತ್ತಿದ್ದೇವೆಯೇ? ನಮ್ಮ ನಿರ್ಧಾರ ಸರಿ ಇದೆಯೇ? ಈ ತೀರ್ಮಾನ ತೆಗೆದುಕೊಳ್ಳಲು ಇದು ಸೂಕ್ತ ಸಮಯವೇ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಮನೆ ಖರೀದಿಯಂಥ ನಿರ್ಧಾರ ಕೈಗೊಳ್ಳುವ ಮುನ್ನ ನಾವು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತಯಾರಿರಬೇಕು. ಆ ನಿಟ್ಟಿನಲ್ಲಿ ಮನಸ್ಸನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
 
ಸದ್ಯದ ಪರಿಸ್ಥಿತಿಯಲ್ಲಿ ನಾವು ಮನೆ ಖರೀದಿಸಬಹುದೇ? ನಾನು ಆರ್ಥಿಕವಾಗಿ ಅಷ್ಟು ಸದೃಢರಾಗಿದ್ದೇವೆಯೇ ಎಂಬುದನ್ನು ಮೊದಲು ವಿಶ್ಲೇಷಿಸಬೇಕು. ಆ ಕುರಿತು ಯೋಚಿಸಿ ರೂಪುರೇಷೆ ಸಿದ್ಧಪಡಿಸಬೇಕು. ಸಾಲ ಮಾಡುವುದಾದರೆ ಅದಕ್ಕೆ ಪೂರಕವಾದ ದಾಖಲೆಪತ್ರಗಳನ್ನು ಹೊಂದಿಸಿಟ್ಟುಕೊಳ್ಳಬೇಕು.
 
ಹೇಗಿರಬೇಕು ಮನೆ: ಮನೆ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಪ್ರಸಕ್ತ ಸನ್ನಿವೇಶದಲ್ಲಿ ನಮಗೆ ಯಾವ ರೀತಿಯ ಮನೆ ಒಳ್ಳೆಯದು? ಮಾರುಕಟ್ಟೆಯಲ್ಲಿ ಅಂಥ ಮನೆಯ ಮೌಲ್ಯ ಎಷ್ಟಿದೆ? ಅದು ನಮ್ಮ ಬಜೆಟ್‌ಗೆ ಪೂರಕವಾಗಿದೆಯೇ? ಇತ್ಯಾದಿ ವಿಚಾರಗಳನ್ನು ಮೊದಲು ಲೆಕ್ಕ ಹಾಕಬೇಕು. ಇದಕ್ಕೆ ಸಂಬಂಧಿಸಿದ ಮಾಹಿತಿಗೆ ರಿಯಲ್ಟಿ ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು, ದಿನಪತ್ರಿಕೆಗಳಿಂದ ಪಡೆಯಬಹುದು.
 
ಸಾಲದ ಬಗ್ಗೆ ಸಾಕಷ್ಟಿರಲಿ ಮಾಹಿತಿ: ಪೂರ್ಣ ಮೊತ್ತ ಪಾವತಿಸಿ ಮನೆ ಖರೀದಿಸುವವರ ಸಂಖ್ಯೆ ಕಡಿಮೆ. ಮಧ್ಯಮ ವರ್ಗದ ಜನರಂತೂ ಸಾಲದ ನೆರವಿಲ್ಲದೆ ಮನೆ ಖರೀದಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಖರೀದಿಗೆ ಮುಂದಾಗುವುದಕ್ಕೂ ಮುನ್ನ ಸಾಲ ಪಡೆಯುವ ಕುರಿತು ಸಾಕಷ್ಟು ಮಾಹಿತಿ ಪಡೆಯುವುದು ಒಳ್ಳೆಯದು.
 
ನಮ್ಮ ಕೈಲಿ ಇರುವ ಒಟ್ಟು ಹಣದ ಮೊತ್ತ, ಎಷ್ಟು ಮೊತ್ತ ಪಾವತಿಸಲು ನಾವು ಸಿದ್ಧರಿದ್ದೇವೆ, ಎಷ್ಟು ಮೊತ್ತವನ್ನು ಸಾಲ ಪಡೆಯಬೇಕಾಗಬಹುದು ಎಂಬ ಬಗ್ಗೆ ಮೊದಲೇ ಲೆಕ್ಕಾಚಾರ ಮಾಡಿರಬೇಕು. ನಂತರ ನಮಗೆ ಅವಶ್ಯವಿರುವಷ್ಟು ಮೊತ್ತದ ಸಾಲ ಸಿಗಲಿದೆಯೇ ಎಂಬುದನ್ನು ತಿಳಿಯಬೇಕು.
 
ಆದಾಯ, ಉಳಿತಾಯ ಪ್ರಮಾಣ, ಹೂಡಿಕೆ ಮತ್ತಿತರ ವಿವರಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಎಷ್ಟು ಸಾಲ ದೊರೆಯಬಹುದು ಎಂಬುದನ್ನು ತಿಳಿಯಬಹುದು. ಪೂರ್ವಭಾವಿ ಸಮಾಲೋಚನೆ ಸಂದರ್ಭ ಬ್ಯಾಂಕ್ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಪೂರಕ ದಾಖಲೆಗಳನ್ನು ಸಂಗ್ರಹಿಸಲು ಇದು ನೆರವು ನೀಡುತ್ತದೆ.
 
ಮಾಹಿತಿ ಸಂಗ್ರಹ ಅವಶ್ಯ: ನಿವೇಶನ ಖರೀದಿಸುವ ಪ್ರಕ್ರಿಯೆಯಲ್ಲಿ ರಿಯಲ್‌ ಎಸ್ಟೇಟ್ ಮಧ್ಯಸ್ಥಿಕೆದಾರರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಖರೀದಿಸಲಿರುವ ಮನೆ, ನೆರೆ–ಹೊರೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ  ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು. ಅವರು ಹೇಳುವ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಅಂತಿಮ ನಿರ್ಧಾರವನ್ನು ಪೂರ್ವಾಪರ ಯೋಚಿಸಿ ತೆಗೆದುಕೊಳ್ಳಬೇಕು.
 
ಪರಿಶೀಲನೆ ಅಗತ್ಯ: ಮನೆ ಆಯ್ಕೆ ಮಾಡಿದ ನಂತರ ಪರಿಶೀಲನೆ ಮಾಡುವುದೂ ಬಹು ಮುಖ್ಯ. ಅದು ನಮ್ಮ ನಿರೀಕ್ಷೆಗೆ ತಕ್ಕುದಾಗಿದೆಯೇ? ನಮಗೆ ಬೇಕಾಗಿರುವ ಎಲ್ಲ ಸೌಲಭ್ಯಗಳು ಇವೆಯೇ? ಬಾಗಿಲು, ಕಿಟಕಿ, ಕಟ್ಟಡ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸದಿದ್ದರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾದೀತು. 
 
ಏನಾದರೂ ಸಮಸ್ಯೆ ಇದ್ದಲ್ಲಿ ತಕ್ಷಣ ಮನೆ ಮಾರಾಟ ಮಾಡುವವರ ಗಮನಕ್ಕೆ ತರಬೇಕು. ಅವರು ನಮಗೆ ತೃಪ್ತಿಯಾಗುವಂತೆ ನಿರ್ಮಾಣ ಕಾರ್ಯ ಪೂರೈಸಿದ ನಂತರವೇ ವ್ಯವಹಾರ ಮುಂದುವರಿಸಬೇಕು.
 
ಬಡ್ಡಿ ವಿಚಾರಿಸಿಕೊಳ್ಳಿ: ಮನೆಯ ಆಯ್ಕೆ ಮತ್ತು ದರ ಅಂತಿಮಗೊಂಡ ನಂತರ ಯಾವ ಬ್ಯಾಂಕ್‌ನಿಂದ ಸಾಲ ಪಡೆಯಬೇಕು ಎಂಬ ಸಂಗತಿಯತ್ತ ಗಮನ ನೀಡಬೇಕು. ಕಡಿಮೆ ಬಡ್ಡಿದರ ಮತ್ತು ಕಡಿಮೆ ಪ್ರೊಸೆಸಿಂಗ್‌ ಶುಲ್ಕ ಇರುವ, ಗ್ರಾಹಕ ಸ್ನೇಹಿ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಒಳಿತು. ಈ ಹಿಂದೆ ಸಾಲ ಪಡೆದುಕೊಂಡವರ ಅಭಿಪ್ರಾಯಗಳನ್ನು ಕೇಳಿದ ನಂತರವೇ ಯಾವ ಬ್ಯಾಂಕ್‌ನಿಂದ ಸಾಲ ಪಡೆಯಬೇಕು ಎಂಬುದನ್ನು ಅಂತಿಮಗೊಳಿಸಿಕೊಳ್ಳಿ.
 
ಕಾನೂನುಬದ್ಧ ವ್ಯವಹಾರ: ಮನೆ ಖರೀದಿ ಪೂರ್ಣಗೊಳ್ಳಲು ಅದರ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಅಗತ್ಯ. ಸಾಲ ದೊರೆತ ನಂತರ ಈ ಪ್ರಕ್ರಿಯೆಯನ್ನು ವಕೀಲರೊಬ್ಬರ ನೆರವಿನೊಂದಿಗೆ ಪೂರ್ಣಗೊಳಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾನೂನಿಗೆ ಸಂಬಂಧಿಸಿದ ತೊಡಕುಗಳಿಂದ ಬಿಡಿಸಿಕೊಳ್ಳಲು ಇದು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.