ADVERTISEMENT

ಸೋರದಿರಲಿ ಸಂಪ್

ರಮೇಶ ಕೆ
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST
ಚಿತ್ರ: ಶ್ರೀಕಂಠ ಮೂರ್ತಿ
ಚಿತ್ರ: ಶ್ರೀಕಂಠ ಮೂರ್ತಿ   

ನಿಮ್ಮ ಮನೆಯ ಸಂಪ್‌ನಲ್ಲಿ ನೀರು ಸೋರಿಕೆ ಆಗುತ್ತಿದೆಯೇ? ಸೋರಿಕೆಗೆ ಕಾರಣವೇನು? ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು? ಎಂಬ ಇತ್ಯಾದಿ ಪ್ರಶ್ನೆಗಳು ಕಾಡುತ್ತಿವೆಯಾ, ಹಾಗಾದರೆ ಈ ಲೇಖನ ಓದಿ, ನಿಮಗೊಂದಿಷ್ಟು ಪರಿಹಾರಗಳು ಸಿಗಬಹುದು.

ಯಾವಾಗಲೂ ಸಂಪ್‌ ಮುಚ್ಚಿರುವುದರಿಂದ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್‌ನಂಥ ಸೂಕ್ಷ್ಮಾಣು ಜೀವಿ ಉತ್ಪತ್ತಿಯಾಗಿ ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ನೀರಿನ ಒತ್ತಡದಿಂದ ಸಂಪ್‌ನ ಒಳಗಡೆ ಬಿರುಕು (ಏರ್‌ ಕ್ರಾಕ್) ಕಾಣಿಸಿಕೊಂಡು ಹೆಚ್ಚು ಪ್ರಮಾಣದ ನೀರು ಸೋರಿಕೆಯಾಗಬಹುದು.
ಕುಡಿಯುವ ನೀರಿನಂತೆ ಸಂಪ್‌ ನೀರಿನ ಶುಚಿತ್ವದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಸಂಪ್‌ಗಳನ್ನು ನಾಲ್ಕು ತಿಂಗಳಿಗೊಮ್ಮೆ ಸ್ವಚ್ಛ ಮಾಡಬೇಕು.

ಇದರಲ್ಲಿ ಎರಡು ವಿಧಾನಗಳಿವೆ. ಒಂದು, ಕಾರ್ಮಿಕರನ್ನು ಬಳಸಿ ದೈಹಿಕವಾಗಿ ಶುಚಿಗೊಳಿಸುವ ಪ್ರಕ್ರಿಯೆ. ಇನ್ನೊಂದು ಅತೀವ ಒತ್ತಡದಲ್ಲಿ ನೀರನ್ನು ಹಾಯಿಸುವ ಜೆಟ್‌ ಕ್ಲೀನರ್‌ ಮೂಲಕ ಶುಚಿಗೊಳಿಸುವುದು.

ಸ್ವಚ್ಛ ಮಾಡುವ ವಿಧಾನ
ಸುಮಾರು 200 ಲೀಟರ್‌ ನೀರಿಗೆ ಅರ್ಧ ಲೀಟರ್‌ ಕ್ಲೋರಿನ್‌ ಹಾಕಲಾಗುತ್ತದೆ. ಸ್ವಚ್ಛ ಮಾಡುವ ಮೊದಲು ಸಂಪ್‌ನಲ್ಲಿರುವ ನೀರನ್ನು ಆಚೆ ತೆಗೆಯಲಾಗುತ್ತದೆ. ಜೆಟ್‌ ಕ್ಲೀನರ್‌ ಮೂಲಕ ಸ್ವಚ್ಛ ಮಾಡುತ್ತಾರೆ.  ವ್ಯಾಕ್ಯೂಮ್‌ ಕ್ಲೀನರ್‌ನಿಂದ ತೊಳೆದ ನೀರನ್ನು ತೆಗೆಯಲಾಗುತ್ತದೆ. ನಂತರ ರಾಸಾಯನಿಕ ಹಾಕದ ನೀರಿನಿಂದ ಜೆಟ್‌ ಕ್ಲೀನರ್‌ ಮೂಲಕ ತೊಳೆಯಲಾಗುತ್ತದೆ.

ಸಂಪ್ ಸ್ವಚ್ಛ ಮಾಡಿದ ನಂತರ ಒಂದು ಗಂಟೆ ಅವಧಿ ಹಾಗೆಯೇ ಬಿಡಬೇಕು. ಹೀಗೆ ಮಾಡುವುದರಿಂದ ಕ್ರಿಮಿನಾಶಕದ ವಾಸನೆ ಉಳಿಯುವುದಿಲ್ಲ.
ಸಂಪ್‌ ಒಳಗೆ ಫಂಗಸ್‌ ಆಗದಂತೆ ತಡೆಗಟ್ಟಲು ವಾಟರ್‌ ಪ್ರೂಫಿಂಗ್‌ ಎಪಾಕ್ಸಿ ರಾಸಾಯನಿಕ ಬಳಸಬಹುದು. ಸಂಪ್‌ ಸ್ವಚ್ಛ ಮಾಡಿದ ನಂತರ ಬ್ರಷಿಂಗ್‌ ಮಾಡುವುದು ಸೂಕ್ತ.

ನೀರು ಸೋರುವ ಸಮಸ್ಯೆ
ಶೇಕಡ 90ರಷ್ಟು ಮನೆಗಳಲ್ಲಿ ಕಂಡು ಬರುವ ಸಮಸ್ಯೆ ಇದಾಗಿದೆ.  ಒಮ್ಮೆ ಬಿರುಕು ಕಾಣಿಸಿಕೊಂಡರೆ ಸಂಪ್‌ ಪೂರ್ತಿ ಖಾಲಿಯಾಗಬಹುದು.
ಮನೆಗಳಲ್ಲಿ 8ರಿಂದ 10 ಸಾವಿರ ಲೀಟರ್‌ ನೀರು ಸಾಮರ್ಥ್ಯದ ಸಂಪ್‌ಗಳಿದ್ದರೆ, ಅಪಾರ್ಟ್‌ಮೆಂಟ್‌ಗಳಲ್ಲಿ  1 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್‌ಗಳಿರುತ್ತವೆ.

ಸಂಪ್‌ ಮಾಡಿಸುವಾಗಲೇ ಎರಡೂ ಭಾಗದಲ್ಲಿ (ಒಳ, ಹೊರಗೆ) ಪ್ಲಾಸ್ಟರಿಂಗ್‌ ಮಾಡಿಸಬೇಕು. ಆಗ ಬಿರುಕು ಮೂಡುವುದನ್ನು ಶಾಶ್ವತವಾಗಿ ತಡೆಗಟ್ಟಬಹುದು. ಈಗಾಗಲೇ ಸಂಪ್‌ ಸೋರಿಕೆಯಾಗುತ್ತಿದ್ದರೆ ರಾಸಾಯನಿಕ ಲೇಪನ ಮಾಡಬೇಕಾಗುತ್ತದೆ.

‘ಸಂಪಿನ ನೀರನ್ನು ಮೊದಲು ಆಚೆ ತೆಗೆಯಬೇಕು. ಬಿರುಕು ಬಿಟ್ಟ ಜಾಗವನ್ನು ಹ್ಯಾಂಡ್‌ ಡೈ ಕಟ್ಟಿಂಗ್‌ ಯಂತ್ರದಿಂದ ಕಿತ್ತು, ಅಲ್ಲಿಗೆ ಎರಡು ಬಾರಿ ವಾಟರ್‌ ಪ್ರೂಫಿಂಗ್‌ ರಾಸಾಯನಿಕ ಲೇಪಿಸಲಾಗುತ್ತದೆ. ಇದು ಶಾಶ್ವತ ಪರಿಹಾರವಾಗಲಿದೆ’ ಎಂದು ಸಲಹೆ ನೀಡುತ್ತಾರೆ ಲಗ್ಗೆರೆಯ ಸುಜಾ ವಾಟರ್‌ ಪ್ರೂಫಿಂಗ್‌ ಸಲ್ಯೂಷನ್‌ ಕಂಪೆನಿಯ ಎಲ್‌.ಅಶೋಕ್‌.

ಸಣ್ಣ ಬಿರುಕಿನಿಂದ ಸಂಪ್‌ ಪೂರ್ತಿ ಸೋರಿಕೆಯಾಗುವ ಸಂಭವ ಇರುತ್ತದೆ. ನೀರು ಸೋರಿಕೆಯಿಂದ ಕಟ್ಟಡದ ಗೋಡೆಗಳು ತೇವಗೊಂಡು ಹಾನಿಯಾಗುತ್ತದೆ. ಆದ್ದರಿಂದ ಸಂಪ್‌ ಕಟ್ಟಿಸುವಾಗಲೇ ಎಚ್ಚರವಹಿಸುವುದು ಒಳಿತು.
ಮಾಹಿತಿಗೆ: 90190 95733

*
ಸಂಪ್‌ ಕಟ್ಟಿಸಿ ಆರು ತಿಂಗಳ ನಂತರ ಬಿರುಕು ಸಮಸ್ಯೆ ಕಂಡು ಬರಬಹುದು. ಸಂಪ್‌ ಕಟ್ಟಿಸುವಾಗಲೇ ಪ್ಲಾಸ್ಟರಿಂಗ್‌ ಜೊತೆಗೆ ರಾಸಾಯನಿಕ ಕೋಟಿಂಗ್‌ ಮಾಡಿಸಿದರೆ ಬಿರುಕು ಬಿಡುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
–ಅಶೋಕ್‌,
ವಾಟರ್‌ ಪ್ರೂಫಿಂಗ್‌  ತಂತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT