ADVERTISEMENT

ಸ್ವಂತ ಸೂರು ಸಾಕಾರವಾಗುವತ್ತ...

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಸ್ವಂತ ಸೂರು ಸಾಕಾರವಾಗುವತ್ತ...
ಸ್ವಂತ ಸೂರು ಸಾಕಾರವಾಗುವತ್ತ...   

ಹೊಸ ವರ್ಷದ ಮುನ್ನಾ ದಿನ (ಡಿ.31, 2016) ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಗೃಹ ನಿರ್ಮಾಣ ಕ್ಷೇತ್ರ ಹುಬ್ಬೇರಿಸಿ ನೋಡುವಂಥ ಹಲವು ಘೋಷಣೆಗಳನ್ನು ಮೊಳಗಿಸಿದರು.

ಈ ಘೋಷಣೆಗಳು ಗೃಹ ನಿರ್ಮಾಣ ಕ್ಷೇತ್ರದ ಮೇಲೆ ಮಹತ್ವದ ಪರಿಣಾಮ ಬೀರಲಿವೆ. ‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಿಂದ ಕಡಿಮೆ ದರದಲ್ಲಿ ಮನೆ ಸಿಗುವ ಅವಕಾಶ ಇನ್ನಷ್ಟು ಹೆಚ್ಚಾಗಿದೆ’ ಎಂದು ಕ್ರೆಡಾಯ್ ಕಾರ್ಯದರ್ಶಿ ಸುರೇಶ್‌ ಹರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರಧಾನಿ ಪ್ರಕಟಿಸಿರುವ ಯೋಜನೆಗಳಿಂದ ಆಸ್ತಿ ಮಾರುಕಟ್ಟೆಯ ಪ್ರಗತಿಗೆ ನೆರವಾಗಲಿದೆ. ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿರುವ ವರ್ಗಕ್ಕೆ  ಹೆಚ್ಚು ಅನುಕೂಲವಾಗಲಿದೆ’ ಟಾಟಾ ಹೌಸಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಬ್ರೊಟಿನ್‌ ಬ್ಯಾನರ್ಜಿ ವಿಶ್ಲೇಷಿಸಿದ್ದಾರೆ.

ನೋಟು ರದ್ದತಿ ಮತ್ತು ಗೃಹ ಸಾಲ ಬಡ್ಡಿ ವಿನಾಯ್ತಿಯಂಥ ಯೋಜನೆಗಳಿಂದ ಬೆಂಗಳೂರು ಹೊರ ವಲಯದಲ್ಲಿ ವಸತಿ ಕ್ಷೇತ್ರ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದೆ. ಹೊರ ವಲಯ ಮತ್ತು ಸುತ್ತಮುತ್ತಲ ನಗರಗಳಲ್ಲಿ ಭೂಮಿಯ ಬೆಲೆ ಇಳಿಕೆ ಕಾಣಲಿದೆ ಎಂದು ಬಿಲ್ಡರ್‌ಗಳು ಹೇಳಿದ್ದಾರೆ.

ಅತ್ತಿಬೆಲೆ, ರಾಜನಕುಂಟೆ ಮತ್ತು ಹೊಸಕೋಟೆಗಳಲ್ಲಿ ಗೃಹ ನಿರ್ಮಾಣ ಚಟುವಟಿಕೆ ಹೆಚ್ಚಾಗಬಹುದು ಎಂದು ರಾಜ್ಯ ವಸತಿ ನಿಗಮದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯ ಹಂಚಿಕೊಂಡರು.

‘ಅಗ್ಗದ ದರದಲ್ಲಿ ವಸತಿ ಒದಗಿಸುವ ಯೋಜನೆಗಳನ್ನು ಬೆಂಗಳೂರು ಹೊರವಲಯ ಮತ್ತು ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಗ್ರಾಮಾಂತರ ಪ್ರದೇಶಗಳಿಗೆ ಸಿಮಿತಗೊಳಿಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವವರಿಗೆ ಆಗುವ ಲಾಭ ಕಡಿಮೆ’ ಎಂಬುದು ಬ್ರಿಗೇಡ್‌ ಗ್ರೂಪ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಓಂ ಅಹುಜಾ ಅವರ ಮಾತು.

ಪ್ರಧಾನಿ ಪ್ರಕಟಿಸಿದ ಯೋಜನೆಗಳು
ಪ್ರಧಾನ ಮಂತ್ರಿ ಆವಾಸ್‌ ಯೋಜನೆ:
ಯೋಜನೆಯಡಿ 2022ರ ಹೊತ್ತಿಗೆ ನಗರ ಪ್ರದೇಶದಲ್ಲಿ ಎರಡು ಕೋಟಿ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ನೇರವಾಗಿ ₹1.30 ಮತ್ತು ₹1.50 ಲಕ್ಷ ವರ್ಗಾವಣೆ ಮಾಡುತ್ತದೆ. ಶೌಚಾಲಯ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹12 ಸಾವಿರ ನೀಡಲಾಗುವುದು.

ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ (ಎನ್‌ಎಚ್‌ಬಿ): ಇದು ಕಡಿಮೆ ವೆಚ್ಚದ ಮನೆ ನಿರ್ಮಾಣ ಉತ್ತೇಜಿಸುವ ಸಂಸ್ಥೆ. ನಗರ ಪ್ರದೇಶಗಳ ಬಡ ಜನರು, ಕಡಿಮೆ ಆದಾಯದ ವರ್ಗ ಮತ್ತಿತರ ದುರ್ಬಲ ವರ್ಗಗಳಿಗೆ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.