ADVERTISEMENT

ಹಜಾರಕ್ಕೆ ಸ್ಥಳಾಂತರಗೊಂಡಿತು ಊಟದ ಮನೆ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ಇತ್ತೀಚಿನ ದಿನಗಳಲ್ಲಿ ಎಲ್ಲರ ‘ಕನಸಿನ ಮನೆ’ಯಲ್ಲಿಯೂ ‘ಊಟದ ಮನೆ’ಗೂ ಪ್ರತ್ಯೇಕ ಜಾಗ ಮೀಸಲಿದ್ದೇ ಇರುತ್ತದೆ. ಜತೆಗೆ, ಅಲ್ಲಿಗೊಂದು ಸುಂದರ ಮೇಜು, 4 ಅಥವಾ 6 ಅಥವಾ 8 ಕುರ್ಚಿಗಳೂ ಇರುತ್ತವೆ.

ತೇಗದ ಮರ, ಬೀಟೆ ಮರ ಅಥವಾ ಗೊಬ್ಬಳಿ ಮರದಿಂದ ಸುಂದರವಾಗಿ ಕೆತ್ತನೆ ಮಾಡಿಸಿದ ಅಥವಾ ಉಕ್ಕು ಮತ್ತು ಗಾಜಿನ ಹೊದಿಕೆಯ ಬಲು ನಾಜೂಕಾದ ಭೋಜನದ ಮೇಜು ಪುಟ್ಟ ಊಟದ ಮನೆಯ ಜಾಗವನ್ನು ಅಷ್ಟೇ ಸುಂದರವಾಗಿ ಅಲಂಕರಿಸಿರುತ್ತದೆ. ಆದರೆ?
ಕನಿಷ್ಠ ₨20 ಸಾವಿರದಿಂದ ₨1 ಲಕ್ಷದವರೆಗೂ ಬೆಲೆಬಾಳುವ ಡೈನಿಂಗ್‌ ಟೇಬಲ್‌ಗಳೂ (ಊಟದ ಮೇಜು) ಇವೆ. ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುವವರು ಇಂತಹ ದುಬಾರಿ ಬೆಲೆಯ ಭೋಜನದ ಮೇಜುಗಳನ್ನು ಖರೀದಿಸಿ ತರುತ್ತಾರೆ. ಆದರೆ?

ಅಷ್ಟೆ ಅಲ್ಲ, ಅದರ ಬೆನ್ನಿನ ಮೇಲೆ ಸುಂದರವಾದ ಹೊದಿಕೆ, ಪ್ರತಿ ಕುರ್ಚಿಯ ಎದುರಿಗೂ ಚೆಂದವಾಗಿ ಕಾಣುವ ಮ್ಯಾಟ್‌ಗಳು, ಕ್ರಿಸ್ಟಲ್‌ನದೋ, ಗಾಜಿನದೋ, ಕೊನೆಗೆ ಪ್ಲಾಸ್ಟಿಕ್‌ನದೋ ನೀರಿನ ಹೂಜಿ, ಉಪ್ಪು, ಕರಿಮೆಣಸಿನ ಪುಡಿ, ಸಕ್ಕರೆ, ಉಪ್ಪಿನ ಕಾಯಿಯ ಬಟ್ಟಲುಗಳನ್ನೂ ಅಲ್ಲಿ ಜೋಡಿಸುತ್ತಾರೆ. ಆದರೆ?

ಆ ಮನೆಯ ಸದಸ್ಯರೆಲ್ಲರ ಊಟ ತಿಂಡಿಗಳು ಆ ಸುಂದರವಾದ, ಬೆಲೆ ಬಾಳುವ ಮೇಜಿನ ಮೇಲೆ ನಡೆಯುವುದೇ ಇಲ್ಲ. ಭೋಜನದ ಮನೆ ಅರ್ಥಾತ್‌ ಡೈನಿಂಗ್‌ ಹಾಲ್‌ ಅಕ್ಷರಶಃ ಹಜಾರಕ್ಕೆ, ಅದರಲ್ಲೂ ‘ಮೂರ್ಖರ ಪೆಟ್ಟಿಗೆ’ಯ ಎದುರಿನ ಜಾಗಕ್ಕೆ ಸ್ಥಳಾಂತರಗೊಂಡಿದೆ. ಟಿವಿ ನೋಡುತ್ತಲೇ ಊಟದ ಆಟ ನಡೆಯುತ್ತದೆ. ಹಾಗಾದರೆ, ಪ್ರತಿ ಮನೆಯಲ್ಲೂ ಡೈನಿಂಗ್‌ ಹಾಲ್‌, ಡೈನಿಂಗ್‌ ಟೇಬಲ್‌ ಇರಬೇಕಾದುದಾದರೂ ಏಕೆ?

ದಯಮಾಡಿ ಯಾರಾದರೂ ಉತ್ತರಿಸುವಿರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.