ADVERTISEMENT

ಹಸಿರು ನಗಲು...

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಹಸಿರು ನಗಲು...
ಹಸಿರು ನಗಲು...   

ಕಿಟಕಿ– ಬಾಗಿಲು ತೆಗೆದರೆ ಸಾಕು ಮನೆ ಸೇರಿಕೊಳ್ಳುವ ದೂಳಿನ ರಾಶಿಯಲ್ಲಿ ಆರೋಗ್ಯಕರ ವಾತಾವರಣ ಕಾಪಿಟ್ಟುಕೊಳ್ಳುವುದು ಸಾಹಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಅನೇಕರು ಮನೆಯೊಳಗೆ ಪುಟ್ಟಪುಟ್ಟ ಗಿಡಗಳನ್ನು ಬೆಳೆಸಿ ಮನೆಯ ಸೌಂದರ್ಯದ ಜೊತೆಗೆ ಆರೋಗ್ಯಕರ ವಾತಾವರಣವನ್ನೂ ನೆಲೆಗೊಳಿಸುವ ಚಿತ್ತ ಹರಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್, ಪೆಂಟಾಹೌಸ್‌ ಲೇಔಟ್‌ ಒಳಗೆ ಹೆಚ್ಚಿನ ಮನೆಗಳಲ್ಲಿ ಹಿತ್ತಲಿರುವುದಿಲ್ಲ. ಅಂಗಳವಂತೂ ಕನಸಿನ ಮಾತು.

ಇದ್ದವರೂ ಅಂಗಳದಲ್ಲಿ ವಾಹನಗಳ ನಿಲ್ಲಿಸುತ್ತಾರೆ. ಉಳಿದ ಸ್ಥಳಗಳಾದ ತಾರಸಿ, ಬಾಲ್ಕನಿ, ಕಿಟಕಿ ಅಂಚು, ಅಡುಗೆ ಮನೆಯಲ್ಲಿನ ಸೆಲ್ಫ್‌ ಹೀಗೆ ಅಲ್ಪಸ್ವಲ್ಪ ಸ್ಥಳದಲ್ಲೇ ಯೋಜನೆ ರೂಪಿಸಿ ಒಂದಿಷ್ಟು ತರಕಾರಿ, ಹೂವಿನ ಗಿಡ ಬೆಳೆಯಲು ಮುಂದಾಗುತ್ತಿದ್ದಾರೆ.

ಮಕ್ಕಳಿಗೆ ಜವಾಬ್ದಾರಿ ನೀಡಿ
ತರಕಾರಿ, ಹೂವಿನ ಸಸಿ ನೆಟ್ಟು ಮಕ್ಕಳಿಗೆ ಅದರ ಪಾಲನೆ ಜವಾಬ್ದಾರಿ ನೀಡಿ. ಇದನ್ನು ಖುಷಿಯಿಂದ ಮಾಡುತ್ತಾರೆ. ಮಣ್ಣಿನೊಂದಿಗಿನ ಸಂಪರ್ಕ ನಗರದ ಮಕ್ಕಳಿಗೂ ಸಿಗುವಂತಾಗುತ್ತದೆ.

ನೀರು ಹಾಕಿದಾಗ ಚೆಲ್ಲುವ ಹೆಚ್ಚುವರಿ ನೀರು ಒರೆಸಿ ಶುಚಿಗೊಳಿಸುವುದು, ಒಣಗಿದ ಎಲೆ ತೆಗೆಯುವುದು ಎಲ್ಲಾ ಮಾಡುತ್ತಾ ವಿಭಿನ್ನ ಚಟುವಟಿಕೆಯಲ್ಲಿ ಮಗು ಮಗ್ನವಾಗುತ್ತದೆ.

ಟೊಮೆಟೊ, ಕೊತ್ತಂಬರಿ ಸೊಪ್ಪು, ಬದನೆ, ಅವರೆ, ಹಸಿಮೆಣಸು, ಆಲೂಗಡ್ಡೆ, ಬೀಟ್‌ರೂಟ್, ಅರಿಶಿಣ, ಶುಂಠಿ, ತುಳಸಿ, ಲಕ್ಕಿ ಸೊಪ್ಪು, ಅಮೃತಬಳ್ಳಿ, ಅಲೋವೆರಾ, ಬೆಳ್ಳುಳ್ಳಿ, ಪುದಿನಾ, ಬಸಳೆ ಮುಂತಾದ ಸೊಪ್ಪು, ತರಕಾರಿ ಬೆಳೆಯಬಹುದು.

ಬೆಳೆಸುವುದು ಹೇಗೆ
ಈ ಸಸಿಗಳಿಗೆ ಹೆಚ್ಚಿನ ಖರ್ಚೇನು ಆಗುವುದಿಲ್ಲ. ನರ್ಸರಿಗೆ ಹೋದರೆ ನೂರು ರೂಪಾಯಿಗೂ ಪುಟ್ಟ ಪಾಟ್‌ಗಳು ಸಿಗುತ್ತವೆ. ಅಥವಾ ಸ್ವಲ್ಪ ಕ್ರೀಯಾಶೀಲರಾದರೆ ಬಳಕೆಯಾಗದ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿ, ಒಡೆದ ಬಕೆಟ್ ಅನ್ನು ಕತ್ತರಿಸಿ, ಬಣ್ಣ ಹಚ್ಚಿ ಬಳಸಬಹುದು.

ತಾರಸಿ ಮೇಲಾದರೆ ಸಿಮೆಂಟ್‌ ಚೀಲವನ್ನೂ ಗಿಡ ಬೆಳೆಸಲು ಉಪಯೋಗಿಸಬಹುದು. ಇಲ್ಲ ನೇರವಾಗೇ ಮಣ್ಣು ಹಾಕಿ ಸಣ್ಣಸಣ್ಣ ಪ್ಲಾಟ್‌ ಮಾಡಿ ಹೆಚ್ಚು ಬೇರು ಬಿಡದ ತರಕಾರಿ, ಸೊಪ್ಪು ಬೆಳೆಯಬಹುದು. ಬೇಕಾದ ತರಕಾರಿ ಬೀಜಗಳು ನರ್ಸರಿಯಲ್ಲಿ ಸಿಗುತ್ತವೆ. ಇಲ್ಲ ಕೊಳೆತ ಟೊಮೊಟೊ, ಆಲೂಗೆಡ್ಡೆ ಹಾಕಿದರೂ ಅದರಿಂದ ಸಸಿ ಚಿಗುರುತ್ತದೆ.

ಮನೆಯಲ್ಲೇ ಗೊಬ್ಬರ ತಯಾರಿಸಿ
ಸಸಿಗಳ ನಿರ್ವಹಣೆಗೆ ಹೆಚ್ಚೇನು ಕೆಲಸವಿಲ್ಲ. ಗೊಬ್ಬರವನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಹಳೇ ಬಕೆಟ್ ಇದ್ದರೆ ಅದಕ್ಕೆ ಹಣ್ಣು, ತರಕಾರಿ ಸಿಪ್ಪೆ ಹಾಕಿ ಕೊಳೆಯಲು ಬಿಡಿ.  ಮೇಲೆ ಒಂದಿಷ್ಟು ನ್ಯೂಸ್‌ ಪೇಪರ್ ಹಾಕಿ ಮುಚ್ಚಿದರೆ ವಾಸನೆ ಹೆಚ್ಚು ಬರುವುದಿಲ್ಲ. ಹದಿನೈದು ದಿನಕ್ಕೊಮ್ಮೆ ಬದಲಾಯಿಸಿ, ಹೊಸ ಕಸ ಹಾಕಿ, ಇದಕ್ಕೆ ತೆಂಗಿನ ನಾರು ಮಿಶ್ರಣ ಮಾಡಿ ಗಿಡಗಳಿಗೆ ಹಾಕಬಹುದು. ಸಾಧ್ಯವಾದರೆ ಒಂದಿಷ್ಟು ಎರೆಹುಳು ಬಿಟ್ಟರೆ ಗೊಬ್ಬರ ಬೇಗ ತಯಾರಾಗುತ್ತದೆ.

ಅಂತರ್ಜಾಲದಲ್ಲಿ ಕಿಚನ್ ಗಾರ್ಡನ್ ಕಿಟ್‌ ಎಂದು ಹುಡುಕಿದರೇ ಗಿಡ ಬೆಳೆಸಲು ಬೇಕಾದ, ಪಾಟ್, ಸಸಿ ಬೀಜ, ಗೊಬ್ಬರದ ಪೊಟ್ಟಣ, ಮಣ್ಣು ಎಲ್ಲಾ ಸಿಗುತ್ತವೆ. ಬೆಲೆ ₹600 ರಿಂದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.