ADVERTISEMENT

ಕ್ಲೈಮ್ಯಾಕ್ಸ್‌ನ ಬಾದಾಮಿ ಹಲ್ವಾ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 15:37 IST
Last Updated 22 ಸೆಪ್ಟೆಂಬರ್ 2014, 15:37 IST

‘ಬಂಧನ’ ಚಿತ್ರವನ್ನು ಮಾಡುವ ಹಂತದಲ್ಲಿ ಅದೊಂದು ಮೈಲಿಗಲ್ಲಿನ ಸಿನಿಮಾ ಆಗಬಹುದು ಎಂದು ಎಣಿಸಿರಲಿಲ್ಲ. ನಮ್ಮಷ್ಟಕ್ಕೆ ನಾವು ಶ್ರದ್ಧೆಯಿಂದ, ತಮಾಷೆಯಾಗಿ ಚಿತ್ರೀಕರಣ ಮುಗಿಸುತ್ತಾ ಬಂದೆವು. ಕುದುರೆಮುಖದಲ್ಲಿ ಬಣ್ಣ ಬಣ್ಣ ಹಾಡಿನ ಚಿತ್ರೀಕರಣದ ನೆನಪು ಇನ್ನೂ ಮನಸ್ಸಿನಲ್ಲಿ ಹಸಿರಾಗಿತ್ತು. ರಾತ್ರಿ ಹೊತ್ತು ವಿಷ್ಣು ರೂಮ್‌ನಲ್ಲಿ ಜಿ.ಕೆ. ಗೋವಿಂದ ರಾವ್ ಅವರ ಜೊತೆ ಚರ್ಚೆ ನಡೆಸುತ್ತಾ ಇದ್ದೆವು. ಅವರಿಗೆ ಬಿಯರ್ ಕುಡಿಸಿದ್ದು ಕೂಡ ಜಾಲಿಯಾಗಿತ್ತು. ಚಿತ್ರೀಕರಣ ಮುಗಿಯುತ್ತಾ ಬಂದಿತು. ಉಳಿದದ್ದು ಕ್ಲೈಮ್ಯಾಕ್ಸ್.

ನಾನು ಹಾಗೂ ಸಂಭಾಷಣೆಕಾರರಾದ ಸುಬ್ಬರಾವ್ ಸಿನಿಮಾದ ಅಂತ್ಯ ಹೇಗಿರಬೇಕು ಎಂದು ದಿನಗಟ್ಟಲೆ ಚರ್ಚಿಸಿದ್ದೆವು. ಕಾದಂಬರಿಯಲ್ಲಿ ಇದ್ದಂಥ ಅಂತ್ಯವನ್ನೇ ಚಿತ್ರೀಕರಿಸುವುದು ಸಾಧ್ಯವಿರಲಿಲ್ಲ. ಅದು ಓದುವುದಕ್ಕಷ್ಟೇ ಸರಿಯಾಗಿತ್ತು. ಕೊನೆಗೆ ಸುಬ್ಬರಾವ್ ಮನಮಿಡಿಯುವಂಥ ಕ್ಲೈಮ್ಯಾಕ್ಸ್ ಬರೆದರು. ಅವರ ಬರವಣಿಗೆ ಬಹಳ ಚೆನ್ನಾಗಿತ್ತು. ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಒಮ್ಮೆ ವಿಷ್ಣು ಮತ್ತು ಸುಹಾಸಿನಿಗೆ ಕ್ಲೈಮ್ಯಾಕ್ಸ್‌ನ ರೀಡಿಂಗ್ ಕೊಟ್ಟೆ. ವಿಷ್ಣುವಿಗೆ ಬಹಳ ಸಂತೋಷವಾಯಿತು. ಸಿನಿಮಾದಲ್ಲಿ ವಿಷ್ಣು ಸಾಯುವುದು ಅವನ ಫ್ಯಾನ್ಸ್‌ಗೆ ಇಷ್ಟವಾಗದೇ ಇರಬಹುದು ಎನ್ನುವ ಆತಂಕ ಅನೇಕರಿಗೆ ಇತ್ತು. ನನಗೆ ಸೂತ್ರಬದ್ಧ ಅಥವಾ ಸಾಂಪ್ರದಾಯಿಕ ಶೈಲಿಯ ಕ್ಲೈಮ್ಯಾಕ್ಸ್ ಬೇಕಿರಲಿಲ್ಲ. ಆಯಾ ಕಾಲಘಟ್ಟದಲ್ಲಿ ಭಿನ್ನವಾದ ಕ್ಲೈಮ್ಯಾಕ್ಸ್ ಇರಬೇಕು ಎಂದು ಸದಾ ಯೋಚಿಸುತ್ತಿದ್ದೆ. ವಿಭಿನ್ನವಾದ ಕ್ಲೈಮ್ಯಾಕ್ಸ್‌ಗಳನ್ನು ಮಾಡಿ ಗೆದ್ದಿದ್ದೇನೆ; ಸೋತೂ ಇದ್ದೇನೆ. ನಿರ್ದೇಶಕನಿಗೆ ಕ್ಲೈಮ್ಯಾಕ್ಸ್ ಒಂದು ಸವಾಲು.

ಬಂಧನ ಸಿನಿಮಾ ಮಟ್ಟಿಗಂತೂ ಕ್ಲೈಮ್ಯಾಕ್ಸ್ ನನ್ನನ್ನು ತುಂಬಾ ಕಾಡಿತ್ತು. ಅದರ ಚಿತ್ರೀಕರಣ ಮುಗಿಯುವವರೆಗೂ ನಿರ್ದೇಶಕನಾಗಿ ಅನುಭವಿಸಿದ್ದು ಒಂದು ರೀತಿಯ ಪ್ರಸವ ವೇದನೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ನಿಗದಿಯಾದ ದಿನ ನನಗೊಬ್ಬನಿಗಷ್ಟೇ ಅಲ್ಲ; ವಿಷ್ಣು, ಸುಹಾಸಿನಿಗೂ ಟೆನ್ಷನ್ ಶುರುವಾಗಿತ್ತು.
ಆ ದಿನ ಚಿತ್ರೀಕರಣ ಶುರುಮಾಡಿ, ಸಂಜೆ ೪ ಗಂಟೆಗೇ ಪ್ಯಾಕ್‌ಅಪ್ ಮಾಡಿದೆ. ನನ್ನ ಮನಸ್ಸಿನಲ್ಲಿ ಇನ್ನೂ ಏನೋ ಬೇಕು ಅಂತ ಕೊರೆಯುತ್ತಿತ್ತು. ಸುಬ್ಬರಾಯರು ಬೆಂಗಳೂರಿನಲ್ಲಿದ್ದರು. ಅವರಿಗೆ ಫೋನ್ ಮಾಡಿ ಕರೆಸಿಕೊಂಡೆ. ರಾತ್ರಿ ಒಂದು ಗಂಟೆವರೆಗೆ ಚರ್ಚೆ ಮಾಡಿ, ಹಲವು ಬದಲಾವಣೆಗಳನ್ನು ಮಾಡಿಕೊಂಡೆ. ಮತ್ತೆ ಬೆಳಿಗ್ಗೆ ಆಸ್ಪತ್ರೆಯಲ್ಲಿ ಚಿತ್ರೀಕರಣ. ಯಾವುದೇ ಟೆನ್ಷನ್ ಇಲ್ಲದೆ ಸಹಜವಾಗಿದ್ದುಕೊಂಡೇ ಚಿತ್ರೀಕರಣ ಮುಗಿಸೋಣ ಎಂದು ವಿಷ್ಣುಗೆ ಹೇಳಿದೆ. ತಮಾಷೆಯಾಗಿಯೇ ಚಿತ್ರೀಕರಣವನ್ನು ಪ್ರಾರಂಭಿಸಿದೆವು. ಆ ದಿನ ವಿಷ್ಣುವೇ ಬೆಳಿಗ್ಗೆ ತನಗೆ ಇಷ್ಟವಾದ ತಿಂಡಿಯನ್ನು ತರಿಸಲು ಮುಂದಾದ. ಮೈಸೂರಿನ ರಮ್ಯಾ ಹೋಟೆಲ್‌ನ ಬೆಣ್ಣೆ ಮಸಾಲೆ, ಸಾದಾ ದೋಸೆ – ಸಾಗು, ಗುರು ಸ್ವೀಟ್ ಮಾರ್ಟ್‌ನಿಂದ ಸ್ಪೆಷಲ್ ಮೈಸೂರು ಪಾಕ್, ಬಾದಾಮಿ ಹಲ್ವಾ ಎಲ್ಲವನ್ನೂ ಆರ್ಡರ್ ಮಾಡಿದ. ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಸವರಾಜ್‌ಗೆ ಎಲ್ಲವನ್ನೂ ಹೇಳಿ, ತರಿಸಿದ.

ಬಾದಾಮಿ ಹಲ್ವಾ, ಮೈಸೂರು ಪಾಕನ್ನು ವಿಷ್ಣು ಮೊದಲು ಸುಹಾಸಿನಿಗೆ ಕೊಟ್ಟ. ಸಿಹಿ ಎಂದರೆ ಸುಹಾಸಿನಿಗೆ ಪ್ರಾಣ. ಆಮೇಲೆ ಒಂದಾದ ಮೇಲೊಂದು ಬಗೆಯ ದೋಸೆಗಳನ್ನು ಸವಿಯತೊಡಗಿದ. ನನಗೋ ಚಿಂತೆ. ಇಷ್ಟೆಲ್ಲಾ ತಿಂದಮೇಲೆ ವಿಷ್ಣು ಹೇಗೆ ಅಭಿನಯಿಸುತ್ತಾನೋ ಎಂದು ಒಳಗೊಳಗೇ ಅಂದುಕೊಂಡೆ. ಆಗ ವಿಷ್ಣು, ಸಿಹಿ ತಿಂದರೆ ಕ್ಲೈಮ್ಯಾಕ್ಸ್ ಕೂಡ ಸಿಹಿಯಾಗಿಯೇ ಮೂಡಿಬರುತ್ತದೆ ಎಂದು ಚಟಾಕಿ ಹಾರಿಸಿದ. ದುರಂತದ ಕ್ಲೈಮ್ಯಾಕ್ಸ್ ಸಿಹಿಯಾಗಿ ಮೂಡಿಬರಲು ಹೇಗೆ ಸಾಧ್ಯ ಎನ್ನುವುದು ಬೇರೆ ಮಾತು. ಶಾಟ್‌ಗಳ ಚಿತ್ರೀಕರಣದ ನಡುವಿನ ಸಣ್ಣ ಬಿಡುವಿನಲ್ಲೂ ವಿಷ್ಣು ಪದೇ ಪದೇ ಸುಹಾಸಿನಿಗೆ ಸಿಹಿ ಕೊಡುತ್ತಿದ್ದ. ನನಗೂ ಕೊಟ್ಟು, ನಗುತ್ತಿದ್ದ. ತಾನು ಮಾತ್ರ ಆರಾಮವಾಗಿ ಪಾತ್ರ ನಿರ್ವಹಿಸುತ್ತಿದ್ದ. ಕ್ಯಾಮೆರಾ ಚಾಲೂ ಆದಮೇಲಂತೂ ಅವನು ಪಾತ್ರವೇ ತಾನಾಗುತ್ತಿದ್ದ. ಗ್ಲಿಸರಿನ್ ಇಲ್ಲದೆ ಎಷ್ಟೋ ಸಲ ಅವನು ಅತ್ತಿದ್ದನ್ನು ನೋಡಿ ನಾನು ಸೋಜಿಗಪಟ್ಟೆ. ಸುಹಾಸಿನಿ ಟೈಮಿಂಗ್ ನಾವು ಅಂದುಕೊಂಡಂತೆಯೇ ಚೆನ್ನಾಗಿ ಬಂತು. ವಿಷ್ಣು ಅಭಿನಯ ಕಂಡು ಖುದ್ದು ಸುಹಾಸಿನಿ ದಂಗಾಗಿ ಹೋದರು. ‘ವಾಟ್ ಎ ಫೈನ್ ಆಕ್ಟರ್, ಹೀ ಈಸ್ ಗ್ರೇಟ್’ ಎಂದು ಒಂದು ಉದ್ಗಾರ ತೆಗೆದಳು. ಕ್ಲೈಮ್ಯಾಕ್ಸ್ ಚಿತ್ರೀಕರಣ ಮೂರು ದಿನಗಳಲ್ಲಿ ಮುಗಿಯಿತು. ದುರಂತದ ಸನ್ನಿವೇಶದ ಚಿತ್ರೀಕರಣಕ್ಕೆ ಸಿಹಿತಿನಿಸುಗಳು ಜೊತೆಯಾದದ್ದು ವಿಚಿತ್ರವಾದರೂ ಸತ್ಯ.

ಚಿತ್ರೀಕರಣ ನಡೆಸಿದ ಪ್ರತಿಯನ್ನು ನೋಡಿ ನಾನು ಕಂಗಾಲಾದೆ. ಸುಮಾರು ೨೫ ಸಾವಿರ ಅಡಿಯಷ್ಟು ಫಿಲ್ಮ್ ಬಳಸಿ ಚಿತ್ರೀಕರಣ ನಡೆಸಿದ್ದೆವು. ಎಡಿಟಿಂಗ್ ಟೇಬಲ್ ಎದುರು ಕುಳಿತಾಗ ಯಾವುದನ್ನು ಕಟ್ ಮಾಡುವುದು ಎಂಬ ಸಮಸ್ಯೆ. ಸಂಕಲನಕಾರ ಕೃಷ್ಣನ್ ಹಾಗೂ ನಾನು ಹಗಲೂ ರಾತ್ರಿ ಪಟ್ಟಾಗಿ ಕುಳಿತೆವು. ಸಂಕಲನ ಮಾಡುವಾಗ ಕಟುಕನಿಗೆ ಇರುವಂಥದ್ದೇ ನಿರ್ದಾಕ್ಷಿಣ್ಯ ಸ್ವಭಾವ ರೂಢಿಸಿಕೊಳ್ಳಬೇಕಾಗುತ್ತದೆ. ಎಲ್ಲಾ ಸೀನ್‌ಗಳೂ ನಿರ್ದೇಶಕನಿಗೆ ಮುದ್ದೇ ಆಗಿರುತ್ತವೆ. ಆದರೆ ಸಿನಿಮಾ ಅವಧಿಗೆ ತಕ್ಕಂತೆ ಸಂಕಲನ ಮಾಡುವುದು ಜಾಣತನ. ಕೊನೆಗೂ ಸಿನಿಮಾ ಸಿದ್ಧವಾಯಿತು. ರಂಗರಾವ್ ಅವರಿಗೆ ರೀರೆಕಾರ್ಡಿಂಗ್‌ಗೆ ಮೊದಲು ತೋರಿಸಿದೆ. ಅವರು ತುಂಬಾ ಇಷ್ಟಪಟ್ಟರು. ಕ್ಲೈಮ್ಯಾಕ್ಸನ್ನು ಹೊಗಳಿದರು. ರೀರೆಕಾರ್ಡಿಂಗ್ ರೂಮ್‌ನಲ್ಲಿದ್ದ ೫೦ ಜನ ವಾದ್ಯವೃಂದದವರು ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಸರ್ಟಿಫಿಕೇಟ್ ಕೊಟ್ಟರು. ಕ್ಲೈಮ್ಯಾಕ್ಸ್‌ಗೆ ಹೊಂದುವಂಥ ಕ್ರಿಶ್ಚಿಯನ್ ಪ್ರಾರ್ಥನೆಯ ಟ್ಯೂನ್ ಅನ್ನು ಹತ್ತು ನಿಮಿಷ ನುಡಿಸಿದರು. ಅದು ಕ್ಲೈಮ್ಯಾಕ್ಸ್‌ನ ಭಾವತೀವ್ರತೆಯನ್ನು ಹೆಚ್ಚಿಸಿತು.

ಮೊದಲನೆಯ ಪ್ರತಿ ಸಿದ್ಧವಾಯಿತು. ಮದ್ರಾಸ್‌ನ ಸವೇರಾ ಹೋಟೆಲ್‌ನ ಪ್ರಿವ್ಯು ಥಿಯೇಟರ್‌ನಲ್ಲಿ ಒಂದು ಪ್ರೊಜೆಕ್ಷನ್ ಹಾಕಿಸಿದೆ. ಮೊದಲು ನಾನು ಒಬ್ಬನೇ ಸಿನಿಮಾ ನೋಡಿದೆ. ಆಮೇಲೆ ವಿಷ್ಣುವನ್ನೂ ಕರೆದು, ಅವನ ಜೊತೆ ಇನ್ನೊಮ್ಮೆ ನೋಡಿದೆ. ನಾವು ಮೊದಲು ಸಿನಿಮಾ ನೋಡಿದಾಗ ಒಂದೊಂದು ದಿನ ಒಂದೊಂದು ರೀತಿ ಕಾಣುತ್ತದೆ. ಒಮ್ಮೆ ತುಂಬಾ ಚೆನ್ನಾಗಿದೆ ಅನ್ನಿಸಿದರೆ, ಮತ್ತೊಮ್ಮೆ ಡಬ್ಬಾ ಸಿನಿಮಾ ಅನ್ನಿಸಿಬಿಡುತ್ತದೆ. ಇದೊಂದು ರೀತಿ ನಿರ್ಮಾಪಕರು, ನಿರ್ದೇಶಕರನ್ನು ಕಾಡುವ ಹುಚ್ಚು. ಚಾರ್ಲಿ ಚಾಪ್ಲಿನ್, ರಾಜ್‌ಕಪೂರ್, ಗುರುದತ್ ತರಹದ ಘಟಾನುಘಟಿಗಳನ್ನೂ ಇದು ಬಿಟ್ಟಿಲ್ಲ. ಇನ್ನು ನಾನು ಯಾವ ಲೆಕ್ಕ? ಕೊನೆಗೆ ಪ್ರೇಕ್ಷಕ ಪ್ರಭುಗಳ ತೀರ್ಪೇ ಸುಪ್ರೀಂಕೋರ್ಟ್ ತೀರ್ಪಿನಂತೆ.

ವಿಷ್ಣು ಒಂದಿಷ್ಟು ಆಪ್ತರ ನಡುವೆ ಮೊದಲು ಸಿನಿಮಾ ನೋಡಿದಾಗ ನಾನು ಅವನ ಪಕ್ಕ ಕೂರಲಿಲ್ಲ. ಬೇರೆ ಕಡೆ ಕುಳಿತು, ಅವನ ಪ್ರತಿಕ್ರಿಯೆಯನ್ನೇ ಗಮನಿಸುತ್ತಾ ಇದ್ದೆ. ಕ್ಲೈಮ್ಯಾಕ್ಸ್‌ನಲ್ಲಿ ಅವನು ಭಾವ ಪರವಶನಾಗಿ ತನ್ನನ್ನು ತಾನೇ ನೋಡುತ್ತಿದ್ದ. ಪಕ್ಕದ ಕುರ್ಚಿ ಮೇಲೆ ಒಮ್ಮೆ ಕೈಯನ್ನು ಜೋರಾಗಿ ಬಡಿದ. ಆ ರಭಸಕ್ಕೆ ಅವನ ಕೈಗಡಿಯಾರ ಕಿತ್ತು ಕೆಳಗೆ ಬಿತ್ತು. ಗಾಬರಿಗೊಂಡ ನಾನು, ಯಾಕೆ ಏನಾದರೂ ಬ್ಲಂಡರ್ ಆಗಿದೆಯೇ ಎಂದು ಕುತೂಹಲದಿಂದ ಕೇಳಿದೆ. ಅವನು, ‘ಮಗನೇ, ಎಷ್ಟು ಒಳ್ಳೆ ಸಿನಿಮಾ ಮಾಡಿದ್ದೀಯೋ’ ಎಂದ. ಹೋದ ಜೀವ ಮರಳಿ ಬಂದಂತಾಯಿತು.

ಒಂದು ರಾತ್ರಿ ವಿಷ್ಣು ಮನೆಯಲ್ಲಿ ನನ್ನ ‘ಬಂಧನ’ ಸಿನಿಮಾ ಬಗೆಗೇ ಗಂಟೆಗಟ್ಟಲೆ ಚರ್ಚೆ ನಡೆಯಿತು. ಭಾರತಿ ಕೂಡ ಸಿನಿಮಾ ಮೆಚ್ಚಿಕೊಂಡಿ ದ್ದರು. ಹಂಚಿಕೆದಾರರಿಗೆ ಸಿನಿಮಾ ಚೆನ್ನಾಗಿದೆ ಎಂಬ ಅಭಿಪ್ರಾಯ ಮೂಡಲು ಅವರೆಲ್ಲರ ಪ್ರತಿಕ್ರಿಯೆಗಳೇ ಕಾರಣ.

ಬೆಂಗಳೂರಿನಲ್ಲಿ ಕೆಂಪೇಗೌಡ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸವಾಲೇ ಸರಿ. ನನಗೆ ಅಭಿನಯ್ ಚಿತ್ರಮಂದಿರದಲ್ಲಿ ಬಿಡುಗಡೆಯಾದರೆ ಚೆನ್ನ ಎನಿಸಿತ್ತು. ಹಂಚಿಕೆದಾರರಾದ ಪಾಲ್ ಚಂದಾನಿ ಅವರಲ್ಲಿ ನನ್ನ ಈ ಬಯಕೆಯನ್ನು ಹೇಳಿಕೊಂಡೆ. ಸಿನಿಮಾ ನೋಡಿದ ಅವರು ಇಷ್ಟಪಟ್ಟು, ಮುಂಗಡ ಹಣವನ್ನು ಕೊಟ್ಟರು. ಆಗಸ್ಟ್ ೧೦, ವರಮಹಾಲಕ್ಷ್ಮಿ ಹಬ್ಬದ ದಿನ ಸಿನಿಮಾ ಬಿಡುಗಡೆ ಎಂದು ನಿಗದಿಯಾಯಿತು.
ಒಮ್ಮೆ ಚಂದಾನಿ ಅವರು ಫೋನ್ ಮಾಡಿ, ರಾಜ್‌ಕುಮಾರ್ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಅಭಿನಯ್ ಚಿತ್ರಮಂದಿರದಲ್ಲಿ ಅವಕಾಶವಿಲ್ಲ, ಅಪರ್ಣಾದಲ್ಲಿ ಆಗಬಹುದು ಎಂದರು. ಅಪರ್ಣಾ ಚಿತ್ರಮಂದಿರ ಆಗ ಮುಚ್ಚುವ ಸ್ಥಿತಿಯಲ್ಲಿತ್ತು. ಮೇಲಾಗಿ ಅಲ್ಲಿ ಹಿಂದಿ ಚಿತ್ರಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದವು. ಶಿಥಿಲವಾದ ಗೋಡೆಗಳ, ಮುರಿದ ಕುರ್ಚಿಗಳ, ಉತ್ತಮ ಸ್ಕ್ರೀನ್ ಇಲ್ಲದ ಆ ಚಿತ್ರಮಂದಿರದಲ್ಲಿ ನನ್ನ ಕನಸಿನ ಕೂಸಿನಂಥ ಸಿನಿಮಾ ಬಿಡುಗಡೆ ಮಾಡಲು ಮೊದಲು ಮನಸ್ಸು ಒಪ್ಪಲಿಲ್ಲ. ಆಮೇಲೆ ವಿಧಿಯಿಲ್ಲದೆ ಒಪ್ಪಿಕೊಂಡೆ. ಆದರೆ, ಸುಣ್ಣ ಬಣ್ಣ ಬಳಿಸಿ, ಸ್ಕ್ರೀನ್ ಬದಲಿಸುವಂತೆ ಚಂದಾನಿ ಅವರನ್ನು ವಿನಂತಿಸಿಕೊಂಡಾಗ, ಅವರು ನನ್ನ ಬೇಡಿಕೆಗೆ ಸ್ಪಂದಿಸಿದರು. ಅಪರ್ಣಾ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡು, ಹೌಸ್‌ಫುಲ್ ಬೋರ್ಡ್ ಹೊರಗೆ ಕಂಡಾಗ ಮನಸ್ಸು, ಎದೆ ತುಂಬಿಬಂದಿತು.

ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಿದ್ದು ಇನ್ನೊಂದು ರಸಾನುಭವ. ಅವರ ಪ್ರತಿಕ್ರಿಯೆಗಳಿಂದಲೇ ನಾವು ನಿರಂತರವಾಗಿ ಕಲಿಯಲು ಸಾಧ್ಯ. ಅದು ಯಾವ ಓದಿನಿಂದಲೂ ಸಿಗುವುದಿಲ್ಲ. ‘ಈ ಬಂಧನಾ’ ಹಾಡನ್ನು ಜೈಜಗದೀಶ್‌ಗೆ ಕೊಡುವ ಬದಲು ತಮ್ಮ ಗುರುವಿಗೇ ಕೊಡಬೇಕಿತ್ತು ಎಂದು ಒಬ್ಬ ಅಭಿಮಾನಿ ಆಗ್ರಹಿಸಿದ. ಅವನನ್ನು ನಾನು, ವಿಷ್ಣು ಸಮಾಧಾನಪಡಿಸಿ ನಗುತ್ತಲೇ ಹೊರಬಂದೆವು.

ಮದ್ರಾಸ್‌ನ ಪ್ರಸಾದ್ ಲ್ಯಾಬ್‌ಗೆ ಹೋಗಿ ಬಂಧನ ಚಿತ್ರದ ಒಂದಿಷ್ಟು ಪ್ರತಿಗಳನ್ನು ತೆಗೆದುಕೊಳ್ಳಬೇಕಿತ್ತು. ವಿಷ್ಣುವಿಗೆ ಫೋನ್ ಮಾಡಿ, ರಾತ್ರಿ ತಾಜ್ ಹೋಟೆಲ್‌ನಲ್ಲಿ ಊಟ ಮಾಡುವ ಕಾರ್ಯಕ್ರಮ ನಿಗದಿ ಮಾಡಿದೆ. ಏರ್‌ಪೋರ್ಟ್‌ನಿಂದ ಪ್ರಸಾದ್ ಲ್ಯಾಬ್‌ನತ್ತ ನಾನು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದೆ. ಮಾರ್ಗಮಧ್ಯೆ ವಿಷ್ಣು ಕಾರು ಎದುರಾಯಿತು. ಅವನೇ ಓಡಿಸುತ್ತಿದ್ದ. ನನ್ನ ಹೆಸರನ್ನು ಕೂಗಿದವನೇ, ಟ್ಯಾಕ್ಸಿಯನ್ನು ನಿಲ್ಲಿಸಿದ. ನಾನೂ ಇಳಿದೆ. ಅವನು ಇಳಿದು ಬಂದವನೇ ಗಟ್ಟಿಯಾಗಿ ನನ್ನ ತಬ್ಬಿಕೊಂಡು ನಿಮಿಷಗಟ್ಟಲೆ ನಿಂತುಬಿಟ್ಟ. ‘ಎಂಥ ಸಿನಿಮಾ ಮಾಡಿದ್ದೀಯೋ’ ಎಂದು ಪದೇಪದೇ ಹೇಳಿ, ಅಭಿನಂದಿಸಿದ. ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವವರೆಗೆ ಅವನು ಅಪ್ಪಿಕೊಂಡೇ ಇದ್ದ. ಆಮೇಲೆ ಭಾವುಕ ಲೋಕದಿಂದ ಹೊರಬಂದ. ಟ್ಯಾಕ್ಸಿಯನ್ನು ಕಳಿಸಿ, ನಾನೂ ಅವನ ಕಾರಿನಲ್ಲೇ ಹೊರಟೆ. ರಾತ್ರಿ ಹೋಟೆಲ್‌ನಲ್ಲಿ ಭರ್ಜರಿ ಊಟ. ಇಬ್ಬರೂ ಸಂತೋಷವನ್ನು ವಿನಿಮಯ ಮಾಡಿಕೊಂಡೆವು.

ಸಿನಿಮಾ ನೂರು ದಿನ ಓಡಿದ ಮೇಲೆ ಮಂಗಳೂರು, ದಾವಣಗೆರೆ ಎಲ್ಲಡೆಯೂ ಸಮಾರಂಭಗಳಾದವು. ದಾವಣಗೆರೆಯಲ್ಲಿ ಒಬ್ಬ ನೂರು ಸಲ ನಮ್ಮ ಸಿನಿಮಾ ನೋಡಿದ್ದ. ‘ಪ್ರೇಮದ ಕಾದಂಬರಿ’ ಹಾಡು ಬಂದಾಗಲೆಲ್ಲಾ ತೆರೆಯ ಎದುರು ದೀಪ ಹಚ್ಚಿ ಬರುತ್ತಿದ್ದ. ಅವನನ್ನು ನಾವು ಅಭಿನಂದಿಸಿದೆವು. ಅಭಿಮಾನಿ ದೇವರುಗಳಿಗೆ ಸಿನಿಮಾ ಇಷ್ಟವಾದರಷ್ಟೇ ನಿರ್ಮಾಪಕ, ನಿರ್ದೇಶಕ, ನಟರ ಹಣೆಬರಹ ಬದಲಾಗುತ್ತದೆ. ಅದು ಲಂಚ ಕೊಟ್ಟು, ಪಡೆಯುವಂಥದ್ದಲ್ಲ. ವಿಷ್ಣುವರ್ಧನ್ ಸಾಹಸ ಸಿಂಹ ಎಂಬ ಇಮೇಜ್‌ನಿಂದ ಹೊರಬಂದು, ಅಭಿನಯ ಭಾರ್ಗವ ಎಂದು ಹೊಸ ಬಿರುದಿಗೆ ಭಾಜನನಾದ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತಿಂದ ಮೈಸೂರು ಪಾಕ್, ಬಾದಾಮಿ ಹಲ್ವಾ, ದೋಸೆಗಳು ಚೆನ್ನಾಗಿ ಜೀರ್ಣವಾದವು. ಸತ್ಫಲವನ್ನೇ ಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.