ADVERTISEMENT

ಅಂಗೈನಲ್ಲೇ ದಾಖಲೆ ಕಣಜ ‘ಡಿಜಿ ಲಾಕರ್‌’

ಸಂತೋಷ ಜಿಗಳಿಕೊಪ್ಪ
Published 23 ಜನವರಿ 2018, 19:35 IST
Last Updated 23 ಜನವರಿ 2018, 19:35 IST
ಡಿಜಿ ಲಾಕರ್‌
ಡಿಜಿ ಲಾಕರ್‌   

ಸರ್ಕಾರಿ ವ್ಯವಸ್ಥೆಯಲ್ಲಿ ಮನುಷ್ಯನಿಗಿಂತ ದಾಖಲೆಗಳಿಗೇ ಹೆಚ್ಚು ಮಹತ್ವ. ಯಾವುದೇ ಸೌಲಭ್ಯ ಪಡೆಯಬೇಕಾದರೂ ಅಗತ್ಯ ದಾಖಲೆ ನೀಡುವುದು ಕಡ್ಡಾಯ. ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳುವುದು, ಅವುಗಳು ಕಳೆದು ಹೋದರೆ ಬದಲಿ ದಾಖಲೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಲೆನೋವಿನ ವಿಷಯ. ಈ ರೀತಿಯ ಅಲೆದಾಡುವ ಪ್ರಮೇಯ ತಪ್ಪಿಸಲು ದಾಖಲೆಗಳ ಸಂರಕ್ಷಣೆಗಾಗಿಯೇ ಕೇಂದ್ರ ಸರ್ಕಾರವು ಆ್ಯಫ್‌ ಆಧಾರಿತ ‘ಡಿಜಿ ಲಾಕರ್‌’ ಸೌಲಭ್ಯವನ್ನು ಜಾರಿಗೆ ತಂದಿದೆ.

* ಎಂದಿನಿಂದ ಜಾರಿಯಾಗಿದೆ?

‘ಡಿಜಿ ಲಾಕರ್‌’ 2016ರ ಸೆಪ್ಟೆಂಬರ್‌ 7ರಿಂದ ಜಾರಿಗೆ ಬಂದಿದೆ. ಈ ಸೌಲಭ್ಯ ಬಳಸಿ ಅಧಿಕೃತ ದಾಖಲೆಗಳನ್ನು ಅಗತ್ಯ ಬಿದ್ದಾಗ ಪ್ರಸ್ತುತಪಡಿಸಬಹುದು. ಅಂಗೈನಲ್ಲಿರುವ ಮೊಬೈಲ್‌ ಮೂಲಕ ದಾಖಲೆಗಳನ್ನು ಪ್ರಸ್ತುತಪಡಿಸಬಹುದಾದ ಈ ಸೌಕರ್ಯದ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ.

ADVERTISEMENT

* ಏನಿದು ಡಿಜಿ ಲಾಕರ್‌?

ಹೆಸರೇ ಹೇಳುವಂತೆ ಇದೊಂದು ‘ಡಿಜಿಟಲ್‌ ಲಾಕರ್‌’. ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ, ಪ್ರದರ್ಶಿಸುವ  ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ ವ್ಯವಸ್ಥೆ ಇದು. ಕಾಗದರಹಿತ ಆಡಳಿತ ಪರಿಕಲ್ಪನೆ ಹೊಂದಿರುವ ‘ಡಿಜಿಟಲ್ ಇಂಡಿಯಾ’ ಯೋಜನೆಯಡಿ ಇದನ್ನು ಜಾರಿಗೆ ತರಲಾಗಿದೆ.

ಸಾರ್ವಜನಿಕರು, ತಮ್ಮ ಹಲವು ದಾಖಲೆ ಪತ್ರಗಳನ್ನು ಸದಾ ಜೊತೆಗೇ ಕೊಂಡೊಯ್ಯುವ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಕೈಯಲ್ಲಿರುವ ಮೊಬೈಲ್‌ ಫೋನ್ ಅನ್ನು  ದಾಖಲೆಗಳ ಕಣಜವಾಗಿ ಬಳಸಿಕೊಳ್ಳಬಹುದು. ಈ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು. ಯಾರೇ ಕೇಳಿದರೂ ತೋರಿಸಲೂಬಹುದು. ಸರ್ಕಾರಿ ಕಚೇರಿಯ ಸೌಲಭ್ಯ ಪಡೆಯಲು ಆನ್‌ಲೈನ್‌ ಮೂಲಕ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.

* ವ್ಯವಸ್ಥೆ ಬಳಸುವುದು ಹೇಗೆ?

‘https://digilocker.gov.in/’ ಜಾಲತಾಣ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ‘DigiLocker’ ಆ್ಯಪ್ ಮೂಲಕ ಈ ವ್ಯವಸ್ಥೆ ಬಳಸಬಹುದು. 1 ಜಿ.ಬಿಯಷ್ಟು ದಾಖಲೆಗಳನ್ನು ಸಂಗ್ರಹಿಸುವ ಸಾಮರ್ಥ್ಯ ಇದರಲ್ಲಿದೆ.

ಡೌನ್‌ಲೋಡ್‌  ಮಾಡಿಕೊಂಡ ಆ್ಯಪ್‌ ತೆರೆದು ಮೊಬೈಲ್‌ ನಂಬರ್‌ ಬಳಸಿ ಲಾಗ್‌–ಇನ್‌ ಆಗಬೇಕು. ನಂತರ, ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಆ್ಯಪ್‌ನಲ್ಲಿ ಕಾಣಿಸುವ ಸಂಬಂಧಪಟ್ಟ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ (ಉಳಿಸು) ಮಾಡಬಹುದು. ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಹಾಗೂ ಯಾವುದಾದರೂ ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಇಂಥ ದಾಖಲೆಗಳನ್ನು ತೋರಿಸಬಹುದು. ಇವು ಪ್ರಮಾಣೀಕೃತ ದಾಖಲೆಗಳೂ ಹೌದು. ಸಾಫ್ಟ್‌ ಕಾಪಿ ಎಂಬ ಕಾರಣಕ್ಕೆ ಈ ದಾಖಲೆಗಳನ್ನು ತಿರಸ್ಕರಿಸಲು ಬರುವುದಿಲ್ಲ. ಹಾರ್ಡ್ ಕಾಪಿ ಕೊಡಿ ಎಂದೂ ಅಧಿಕಾರಿಗಳು ಕೇಳುವಂತಿಲ್ಲ.

* ಯಾವ್ಯಾವ ದಾಖಲೆ ದೊರೆಯುತ್ತವೆ?

ಆಧಾರ್ ಸಂಖ್ಯೆ, ಸಿಬಿಎಸ್‌ಇ ಅಂಕಪಟ್ಟಿ, ವಾಹನ ನೋಂದಣಿ ಪ್ರಮಾಣಪತ್ರ, ವಾಹನ ಚಾಲನಾ ಪರವಾನಗಿ ಪತ್ರ, ಎಲ್‌ಪಿಜಿ ಠೇವಣಿ ರಸೀದಿ... ಇವೆಲ್ಲಾ ಸಿಗುತ್ತವೆ. ಕೆಲವು ರಾಜ್ಯಗಳು (ಕರ್ನಾಟಕ ಬಿಟ್ಟು) ಜನನ ಪ್ರಮಾಣಪತ್ರ, ಪಡಿತರ ಚೀಟಿ, ಕಂದಾಯ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಡಿಜಿ ಲಾಕರ್‌ಗೆ ಅಳವಡಿಸಿವೆ.

ನಮ್ಮ ರಾಜ್ಯದಲ್ಲಿ ವಾಹನಗಳ ವಿಮೆ, ಕಂದಾಯ, ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಈ ವ್ಯವಸ್ಥೆಯೊಳಗೆ ತರುವ ಪ್ರಯತ್ನ ನಡೆದಿದೆ. ಇದರ ಜೊತೆಗೆ ತಮಗೆ ಬೇಕಾದ ಯಾವುದೇ ದಾಖಲೆಗಳ ಫೋಟೊಪ್ರತಿಯನ್ನು ಅಪ್‌ಲೋಡ್‌ ಮಾಡಬಹುದು. ಈ ದಾಖಲೆಗಳನ್ನು ಯಾರೊಬ್ಬರೂ ನಕಲು ಮಾಡಲು ಸಾಧ್ಯವಿಲ್ಲ.

ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿ ಈ ವ್ಯವಸ್ಥೆಯಿಂದ ಪಾರದರ್ಶಕತೆ ಬರಲಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.  ದಾಖಲೆಗಳ ಗೋಪ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ದತ್ತಾಂಶ ಸಂಗ್ರಹಣೆ ಸರ್ವರ್‌ ನಿರ್ವಹಣೆಗಾಗಿ ಪ್ರತ್ಯೇಕ ತಜ್ಞರನ್ನೇ ನಿಯೋಜಿಸಲಾಗಿದೆ. 

* ಕರ್ನಾಟಕ ಪೊಲೀಸರು ಮಾನ್ಯತೆ ಕೊಡುತ್ತಿದ್ದಾರೆಯೇ?

ಇಲ್ಲ. ಏಕೆಂದರೆ, ಡಿಜಿ ಲಾಕರ್‌ನಲ್ಲಿನ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ ಪತ್ರ ಪರಿಗಣಿಸುವ ಬಗ್ಗೆ  ಇದುವರೆಗೂ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎನ್ನುವುದು ರಾಜ್ಯ ಪೊಲೀಸರ ವಿವರಣೆ. ರಾಜ್ಯ ಸರ್ಕಾರ ಸಹ ತನ್ನ ವ್ಯಾಪ್ತಿಗೆ ಬರುವ ಸೇವೆಗಳ ದಾಖಲೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತಂದಿಲ್ಲ.

* ಸಾರಿಗೆ ಇಲಾಖೆ ಅಧಿಕಾರಿಗಳು ಏನಂತಾರೆ?

ಡಿಜಿ ಲಾಕರ್‌ನಲ್ಲಿರುವ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿ ಪತ್ರಗಳಿಗೆ ಮಾನ್ಯತೆ ಇದೆ ಎನ್ನುತ್ತಾರೆ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಬಿ. ದಯಾನಂದ್‌. ಇದರ ಬಗ್ಗೆ ಪೊಲೀಸರಲ್ಲಿ ಗೊಂದಲಗಳಿದ್ದರೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುತ್ತೇವೆ ಎಂಬುದು ಅವರ ವಿವರಣೆ. ಅದನ್ನು ಪಾಲಿಸದಿದ್ದರೆ ಪೊಲೀಸರ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗ ಶಿಫಾರಸು ಮಾಡುತ್ತೇವೆ ಎಂಬುದು ಅವರ ಮಾತು.

ಅಂಕಿ–ಅಂಶ

* ದೇಶದಲ್ಲಿ ಡಿಜಿ ಲಾಕರ್‌ ಬಳಸಿದವರು: 94.13 ಲಕ್ಷ

* 1.35 ಕೋಟಿ ದಾಖಲೆಗಳನ್ನು ಈ ವ್ಯವಸ್ಥೆಯಲ್ಲಿ ಅಪ್‌ಲೋಡ್‌ ಮಾಡಲಾಗಿದೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.