ADVERTISEMENT

ಅಟ್ಟಹಾಸಕ್ಕೆ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ ಅವರನ್ನು ಕೊನೆಗೂ ಬಂಧಿಸುವ ಮೂಲಕ ‘ನಮ್ಮ ದೇಶದಲ್ಲಿ ಕಾನೂನು ಸರ್ವಶ್ರೇಷ್ಠ’ ಎಂಬು­ದನ್ನು ಹರಿಯಾಣ ಪೊಲೀಸರು ಸಾಬೀತು ಮಾಡಿದ್ದಾರೆ. ಆದರೆ ಈ ಕೆಲಸ ಬಹಳ ತಡವಾಯಿತು. ಮುಖ್ಯಮಂತ್ರಿ ಖಟ್ಟರ್‌ ಕೂಡ ಆರಂಭದಲ್ಲಿ ದಿಟ್ಟತನ ತೋರಲಿಲ್ಲ. ಆಶ್ರಮದೊಳಗೆ ಮಹಿಳೆಯರು, ಮಕ್ಕಳು ಸೇರಿ ಸಹ­ಸ್ರಾರು ಜನರನ್ನು ಬಲವಂತವಾಗಿ  ಹಿಡಿದಿಟ್ಟುಕೊಳ್ಳಲಾಗಿತ್ತು.

ಕಾನೂನಿಗೆ, ನ್ಯಾಯಾಲಯದ ಆದೇಶಕ್ಕೆ ಸಡ್ಡು ಹೊಡೆದು ಎರಡು ವಾರಗಳಿಂದಲೂ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಸೆರೆ ಹಿಡಿಯಲು ಸಾವಿರಾರು ಪೊಲೀಸರು ಅನೇಕ ದಿನ ಹೆಣಗಬೇಕಾಯಿತು. ಒಬ್ಬ ವ್ಯಕ್ತಿಯನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪಂಜಾಬ್‌ ಹರಿಯಾಣ ಹೈಕೋರ್ಟ್‌ ಛೀಮಾರಿ ಹಾಕಿದ ನಂತರ ರಾಜ್ಯ ಸರ್ಕಾರ ಮತ್ತು ಪೊಲೀಸರ ಮುಂದೆ ಬೇರೆ ಆಯ್ಕೆಗಳೇ ಇರಲಿಲ್ಲ. ಈ ಸಂದರ್ಭದಲ್ಲಿ ಸಾವು ನೋವುಗಳೂ ಆಗಿವೆ. ಆಶ್ರಮದಲ್ಲಿ ಮಗು, ಮಹಿಳೆಯರು ಸೇರಿ ಆರು ಮಂದಿ ಅನುಮಾನಾಸ್ಪದವಾಗಿ ಸತ್ತಿದ್ದಾರೆ. ರಾಮಪಾಲ್‌ ಅವರ ಖಾಸಗಿ ಕಮಾಂಡೊಗಳು ಪೊಲೀಸರ ಮೇಲೆ ಶಸ್ತ್ರಸಜ್ಜಿತ ದಾಳಿ ನಡೆಸಿದ್ದಾರೆ.

ನಮ್ಮಲ್ಲಿ ಎಷ್ಟೋ ಜನ ಬೂದಿಬಾಬಾಗಳು, ಸ್ವಯಂಘೋಷಿತ ದೇವ­ಮಾನ­ವರು, ಸಾಧುಗಳು ಸನ್ಯಾಸಿಗಳು, ಮಠಾಧೀಶರು ನಾನಾಬಗೆಯ ಅನ್ಯಾಯ, ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಆಗಾಗ ಬೆಳಕಿಗೆ ಬರುತ್ತಿದೆ.  ಶುದ್ಧತೆ, ಪಾವಿತ್ರ್ಯದ ಸಂಕೇತವಾದ ಕಾವಿ ಧರಿಸಿ ಕೊಲೆ, ಸುಲಿಗೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಭಕ್ತರ ಶೋಷಣೆಯಂಥ ಕೆಟ್ಟ ಕೆಲಸ ನಡೆಸುವುದು ಅತ್ಯಂತ ಹೇಯ. ಧರ್ಮಶಾಸ್ತ್ರಗಳಿಗೆ ವಿರುದ್ಧ. ಮುಗ್ಧ ಜನರ ನಂಬಿಕೆಗೆ ಮಾಡುವ ಮೋಸ.

ಇಂಥವರೆಲ್ಲ ಕಾವಿಯ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ,  ಅದರ ಬಗ್ಗೆ ಜನ ಸಮುದಾಯ ಇಟ್ಟು­ಕೊಂಡ ಗೌರವಕ್ಕೆ ಕಳಂಕ ತರುತ್ತಿದ್ದಾರೆ. ಕೊಲೆ ಆರೋಪದಲ್ಲಿ ಎರಡು ವರ್ಷ ಜೈಲಿನಲ್ಲಿದ್ದ ಮತ್ತು ಜಾಮೀನಿನ ಮೇಲೆ ಹೊರ ಬಂದ ನಂತರ 43 ಸಲ ವಿಚಾರಣೆಗೆ ಹಾಜರಾಗದೆ ನ್ಯಾಯ ವ್ಯವಸ್ಥೆಗೇ ಸವಾಲೊಡ್ಡಿದ್ದ ರಾಮ್‌­ಪಾಲ್‌ ದೇವಮಾನವ ಎಂದು ಕರೆದುಕೊಳ್ಳುವುದು, ಸಹಸ್ರಾರು ಅನುಯಾ­ಯಿಗಳನ್ನು ಹೊಂದುವುದು ಸೋಜಿಗದ ಜತೆಗೆ ಬೇಸರದ ಸಂಗತಿಯೂ ಹೌದು.

ಈಗೇನೋ ನ್ಯಾಯಾಲಯ ಅವರ ಜಾಮೀನು ರದ್ದು ಮಾಡಿ ಜೈಲಿಗೆ ಕಳಿಸಿದೆ. ಆದರೆ, ಮುಂದೆ ಇನ್ಯಾರೂ ಇಂಥ ದುಸ್ಸಾಹಸಕ್ಕೆ ಇಳಿಯ­ದಂತೆ ತಕ್ಕ ಪಾಠ ಕಲಿಸಬೇಕಿದೆ. ಜತೆಗೆ ಸಮಾಜವೂ ಇಂಥವರ ಬಗ್ಗೆ ಎಚ್ಚರ­ದಿಂದ ಇರಬೇಕು. ತಪ್ಪು ಮಾಡಿದವರು ಯಾರೇ ಇದ್ದರೂ ಅವರ ಧಾರ್ಮಿಕ, ಸಾಮಾಜಿಕ ಅಂತಸ್ತು, ವರ್ಚಸ್ಸು, ಪ್ರತಿಷ್ಠೆಗಳನ್ನು ಪರಿಗಣಿಸದೇ ಕಠಿಣವಾಗಿ ನಡೆದುಕೊಳ್ಳಬೇಕು. ಜನರ ಧಾರ್ಮಿಕ ನಂಬಿಕೆಗಳನ್ನು ಬಳಸಿ­ಕೊಂಡು ಅಕೃತ್ಯಗಳಲ್ಲಿ ತೊಡಗುವವರನ್ನು ಸರಿಯಾಗಿ ಶಿಕ್ಷಿಸಬೇಕು. ಆಗ ಮಾತ್ರವೇ ಧರ್ಮದ ಸೋಗು ಹಾಕಿಕೊಂಡು ಅಪರಾಧ ಎಸಗುವವರ ಅಟ್ಟ­ಹಾಸವನ್ನು ಮಟ್ಟ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT