ADVERTISEMENT

ಅರ್ಥ ವ್ಯವಸ್ಥೆಗೆ ವರದಾನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 19:30 IST
Last Updated 11 ಸೆಪ್ಟೆಂಬರ್ 2014, 19:30 IST

ಅಂತರರಾಷ್ಟ್ರೀಯ ಮಾರು­ಕಟ್ಟೆ­ಯಲ್ಲಿ ಕಚ್ಚಾ ತೈಲದ ಬೆಲೆಯು ಗಣನೀಯ­ವಾಗಿ ಕಡಿಮೆಯಾಗಿರುವುದು ದೇಶಿ ಅರ್ಥ ವ್ಯವಸ್ಥೆಗೆ ವರದಾನವಾಗಿ ಪರಿಣಮಿಸಿದೆ. ಎಂಟು ವರ್ಷಗಳಿಂದ ಇರುವ  ಗರಿಷ್ಠ ಮಟ್ಟದ ಬೆಲೆ ಮಟ್ಟ ಈಗ ಕೊನೆ­ಗೊಳ್ಳಲಿದೆ ಎಂದೂ ನಿರೀಕ್ಷಿಸ­ಲಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ದೇಶದಲ್ಲಿ ಡೀಸೆಲ್‌ ಸಬ್ಸಿಡಿಗೆ ಕೊನೆ ಹಾಡುವ ಹಾಗೂ ಬೆಲೆ  ಇಳಿಸುವ ಸಾಧ್ಯತೆಗಳಿವೆ. ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 115 ಡಾಲರ್‌ಗಳಿಂದ 100 ಡಾಲರ್‌ಗಿಂತ ಕೆಳಗೆ ಇಳಿದಿ­ರು­­ವುದು ದೇಶಿ ಅರ್ಥ ವ್ಯವಸ್ಥೆಗೆ ಉತ್ತೇಜ­ನಕಾರಿಯಾಗಿದೆ. ದೇಶೀಯ­ವಾಗಿ ತೈಲ ಬೆಲೆ ಮತ್ತು ಸಬ್ಸಿಡಿಗಳನ್ನು ವ್ಯವಸ್ಥಿತವಾಗಿ ನಿಯಂತ್ರಿ­ಸಲು ಇದರಿಂದ ಸಾಧ್ಯ­ವಾಗಲಿದೆ.

ಅಮೆರಿಕದಲ್ಲಿ ಷೇಲ್‌ ಅನಿಲದ ಉತ್ಪಾದನೆ ಹೆಚ್ಚಿರು­ವುದು ಮತ್ತು ಇತರೆಡೆಗಳಲ್ಲಿಯೂ ತೈಲದ ಪೂರೈಕೆ ಪ್ರಮಾಣ ಹೆಚ್ಚಿರು­ವುದು ಬೆಲೆ ಇಳಿ­ಯಲು ಕಾರಣವಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ಸರ್ಕಾರವು ಈ  ಲಾಭ­ವನ್ನು ಗ್ರಾಹಕರಿಗೆ ವರ್ಗಾಯಿ­ಸುವ ಸಾಧ್ಯತೆಗಳಿವೆ.  ಕಚ್ಚಾ ತೈಲದ ಬೆಲೆ ಇಳಿಕೆಯು  ದೇಶದ ಚಾಲ್ತಿ ಖಾತೆ ಮತ್ತು ವಿತ್ತೀಯ ಕೊರತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ತೈಲೋತ್ಪನ್ನಗಳ ಸಬ್ಸಿಡಿಯು ನಿರೀಕ್ಷೆಗಿಂತ ಕಡಿಮೆಯಾ­ಗಲಿದೆ.  ಪ್ರಸಕ್ತ ಹಣಕಾಸು ವರ್ಷ­ದಲ್ಲಿ ರೂ 93,500 ಕೋಟಿ­ಗಳನ್ನು ಸಬ್ಸಿಡಿ ಉದ್ದೇಶಕ್ಕೆ ಮೀಸಲು ಇಡ­ಲಾ­ಗಿದೆ. ಡೀಸೆಲ್‌ ಮೇಲಿನ ಸಬ್ಸಿ­ಡಿಯು ಗಮ­ನಾರ್ಹವಾಗಿ ಕುಸಿತ­ಗೊಂಡಿರು­ವುದು, ಕಚ್ಚಾ ತೈಲ ಬೆಲೆ ಇಳಿಕೆಯ ಇನ್ನೊಂದು ಪ್ರಮುಖ ಪರಿಣಾಮ­ವಾಗಿದೆ.

ಕಳೆದ ವರ್ಷದಿಂದ ಪ್ರತಿ ತಿಂಗಳೂ 50 ಪೈಸೆಯಂತೆ ಡೀಸೆಲ್‌ ಬೆಲೆ ಹೆಚ್ಚಿ­ಸುತ್ತ ಬಂದಿರುವುದರಿಂದ ಡೀಸೆಲ್‌ ಸಬ್ಸಿ­ಡಿಯು ಈಗ ಪ್ರತಿ ಲೀಟರ್‌ಗೆ ರೂ 1ಕ್ಕೆ ಇಳಿದಂತಾಗಿದೆ. ತಿಂಗಳಿಗೊಮ್ಮೆ ಬೆಲೆ ಏರಿಸುತ್ತ ಬಂದಿರುವುದು ವರ­ಮಾನ ನಷ್ಟವನ್ನೂ ಪ್ರತಿ ಲೀಟರ್‌ಗೆ ರೂ 10ಕ್ಕೆ ಇಳಿಸಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಸಂಸ್ಥೆಗಳು ಡೀಸೆಲ್‌ ಮಾರಾಟ ನಷ್ಟವನ್ನು ಇನ್ನು ಕೆಲವೇ ತಿಂಗ­ಳಲ್ಲಿ  ಸಂಪೂರ್ಣವಾಗಿ ಸರಿದೂಗಿ­ಸುವಂತಾಗಲಿದೆ. ಇದರ ಫಲ­ವಾಗಿ ಡೀಸೆಲ್‌ ಬೆಲೆಯನ್ನು ಗ್ರಾಹ­ಕರಿಗೆ ಹೊರೆಯಾಗದಂತೆ ನಿಯಂತ್ರಣ ಮುಕ್ತ­ಗೊ­ಳಿಸಬಹು­ದಾಗಿದೆ. ಜತೆಗೆ ಸಬ್ಸಿಡಿಗೆ ಕೊನೆ ಹಾಡಿ, ಜಾಗತಿಕ ಬೆಲೆ ಏರಿಳಿತಕ್ಕೆ ತಳಕೂ ಹಾಕಬಹುದು. ಡೀಸೆಲ್‌ ಸಬ್ಸಿಡಿಗೆ ಅಂತ್ಯ ಹಾಡು­ವು­ದ­ರಿಂದ ವಿತ್ತೀಯ ಕೊರತೆ ಪರಿಸ್ಥಿತಿಯ ಆರೋಗ್ಯ­ವನ್ನು ಇನ್ನಷ್ಟು ಸುಧಾರಿ­ಸಲೂ ಸಾಧ್ಯವಾ­ಗಲಿದೆ.

ಸದ್ಯಕ್ಕೆ ತೈಲ ಮಾರಾಟ ಸಂಸ್ಥೆಗಳು ಪೆಟ್ರೋಲ್‌ ಮಾರಾಟ ದರವನ್ನು ತಿಂಗಳಿಗೆ ಎರಡು ಬಾರಿ ಪರಿಷ್ಕರಿಸುತ್ತಿವೆ. ಒಂದೊಮ್ಮೆ ಡೀಸೆಲ್‌ ಸಬ್ಸಿಡಿ ಅಂತ್ಯ­­ಗೊಂಡರೆ ಅಡುಗೆ ಅನಿಲ (ಎಲ್‌ಪಿಜಿ) ಮತ್ತು ಸೀಮೆಎಣ್ಣೆ ಸಬ್ಸಿಡಿ ಮಾತ್ರ ಉಳಿಯಲಿದೆ. ಎಲ್‌ಪಿಜಿ ಮತ್ತು ಸೀಮೆಎಣ್ಣೆ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದಕ್ಕೆ ಗ್ರಾಹಕರಿಂದ ಸಹಜವಾಗಿಯೇ ತೀವ್ರ ವಿರೋಧ ಕಂಡುಬರಲಿದೆ. ಆದರೆ, ಇವೆರಡರ ಸಬ್ಸಿಡಿ ಪ್ರಮಾಣ ಕಡಿಮೆ ಮಾಡಲು ಅವಕಾಶ ಇದ್ದೇ ಇದೆ. ಸಬ್ಸಿಡಿ ಮೊತ್ತವನ್ನು ಬಳಕೆದಾರರ ಖಾತೆಗೇ ನೇರವಾಗಿ ವರ್ಗಾಯಿಸುವ ಪ್ರಯತ್ನ­ಗಳು ಇನ್ನಷ್ಟು ಚುರುಕಾಗಿ ನಡೆ­ಯ­ಬೇಕಾಗಿದೆ. ಸರ್ಕಾರವು  ಈ ಸದವಕಾಶ ಕೈತಪ್ಪಿ ಹೋಗದಂತೆ ಎಚ್ಚರ ವ­ಹಿಸಿದರೆ ಮಾತ್ರ ಬೆಲೆ ಕುಸಿತದ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.