ADVERTISEMENT

ಇನ್ನಾದರೂ ಎಚ್ಚೆತ್ತುಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ವೃತ್ತಿ ಶಿಕ್ಷಣದ ವಿಷಯದಲ್ಲಿ ಹೈಕೋರ್ಟ್‌ನಿಂದ ಮತ್ತೆ ಕಿವಿ ಹಿಂಡಿಸಿ­ಕೊಳ್ಳು­ವಂಥ ಸ್ಥಿತಿಯನ್ನು ರಾಜ್ಯ ಸರ್ಕಾರವೇ ತಂದುಕೊಂಡಿದೆ.

ಅನು­ದಾನ­ರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ  ಶಿಕ್ಷಣ ಶುಲ್ಕವನ್ನು ಇನ್ನು ನಾಲ್ಕು ವಾರಗಳಲ್ಲಿ ನಿಗದಿ ಮಾಡಬೇಕು ಎಂದು ಕೋರ್ಟ್‌ ನೀಡಿದ ಆದೇಶ ಸರ್ಕಾರಕ್ಕೆ ಹಿನ್ನಡೆಯಲ್ಲದೆ ಬೇರೇನಲ್ಲ. ಏಕೆಂದರೆ ಇಷ್ಟು ದಿನವೂ ಸರ್ಕಾರ, ‘2006ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ಮತ್ತು ಶುಲ್ಕ ನಿಗದಿ) ಕಾಯ್ದೆಯನ್ನು 2014–15ನೇ ಶೈಕ್ಷಣಿಕ ವರ್ಷದಲ್ಲಿ ಅಮಾನತಿನಲ್ಲಿ ಇಟ್ಟು ಕಾಲೇಜು ಆಡಳಿತ ಮಂಡಳಿಗಳ ಜತೆ ಸರ್ವಸಮ್ಮತ ಒಪ್ಪಂದ ಮಾಡಿ­ಕೊಂಡು ಶುಲ್ಕ ನಿಗದಿಪಡಿಸುತ್ತೇವೆ’ ಎಂದೇ ಹೇಳುತ್ತಿತ್ತು. ಆದರೆ ವಾಸ್ತವ­ದಲ್ಲಿ ಅದಕ್ಕೆ ಪೂರಕವಾದ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣಾಮುಚ್ಚಾಲೆ ಆಡುತ್ತಿತ್ತು.

ಶುಲ್ಕ ನಿಗದಿ ಮಾಡದೇ ಇದ್ದರೆ ತಮಗೆ ಕೋಟಿಗಟ್ಟಲೆ ನಷ್ಟವಾಗುತ್ತದೆ ಎಂದು ದೂರಿ 13 ಖಾಸಗಿ ಎಂಜಿನಿಯರಿಂಗ್‌ ಕಾಲೇಜು­ಗಳು ಕೋರ್ಟ್‌ ಮೆಟ್ಟಿಲೇರಿದ್ದವು.  ತಾನೇ ರೂಪಿಸಿದ ಕಾಯ್ದೆಯೊಂದನ್ನು ಎಂಟು ವರ್ಷಗಳಿಂದಲೂ ಅನುಷ್ಠಾನಕ್ಕೆ ತರದೇ  ಹುಡುಗಾಟ ಆಡುತ್ತಿ­ರುವ, ಹೊಣೆಯನ್ನು ಸರಿಯಾಗಿ ನಿಭಾಯಿಸದೆ ಜಾರಿಕೊಳ್ಳುತ್ತಿರುವ ಸರ್ಕಾರವನ್ನು  ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಮತ್ತು ರವಿ ಮಳಿಮಠ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿರುವುದು ಸಹಜ­ವಾದುದೇ.

ಕಾಯ್ದೆಯನ್ವಯ ಶುಲ್ಕ ನಿಗದಿಗೆ ಹೈಕೋರ್ಟ್‌ ನಿವೃತ್ತ ನ್ಯಾಯ­ಮೂರ್ತಿ ಅಜಿತ್‌ ಗುಂಜಾಳ ನೇತೃತ್ವದ ಸಮಿತಿಯನ್ನು ನೇಮಕ ಮಾಡ­ಲಾ­ಗಿತ್ತು. ಆದರೆ ಕಾಯ್ದೆಯನ್ನೇ ಸರ್ಕಾರ ಸ್ಥಗಿತದಲ್ಲಿ ಇಟ್ಟ ಕಾರಣ ಗುಂಜಾಳ ಅವರು ಸಮಿತಿಯಿಂದ ಹಿಂದೆ ಸರಿಯುವಂತಾಯಿತು.  ಹೀಗಾಗಿ ಶುಲ್ಕ ನಿಗದಿಪಡಿಸುವ ಹೊಣೆ ಸರ್ಕಾರದ ಮೇಲೇ ಇದೆ. ಆದರೆ ಅದು ಕುಂಟು ನೆಪ ಹೇಳುತ್ತ ದಿನ ನೂಕುತ್ತಿದೆ.

‘ಸರ್ವಸಮ್ಮತಿ’ ಹೆಸರಿನಲ್ಲಿ ಸರ್ಕಾರ ಸೂಚಿಸುವ ಕಡಿಮೆ ಶುಲ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿಗಳು ವಾದಿಸುತ್ತಿವೆ. ಆದರೆ, ಶುಲ್ಕ ನಿಯಂತ್ರಣ ಇಲ್ಲದೆ ಹೋದರೆ ಪೋಷಕರ ಮೇಲೆ ಯದ್ವಾತದ್ವಾ ಆರ್ಥಿಕ ಹೊರೆ ಬೀಳುತ್ತದೆ. ಪೋಷಕರು ಆತಂಕಕ್ಕೆ ಒಳಗಾಗುವಂಥ ಸ್ಥಿತಿಯನ್ನು ಸರ್ಕಾರವೇ ಸೃಷ್ಟಿಸಿದೆ. ಇದು ಆಗಬಾರದು. ಸುಪ್ರೀಂ ಕೋರ್ಟ್‌ ನಿರ್ದೇಶನ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿಯಮದ ಪ್ರಕಾರ ಜುಲೈ 2014ರ ಒಳಗೆ ಪ್ರವೇಶ ಪ್ರಕ್ರಿಯೆ ಮುಗಿಯಬೇಕು. ಆದರೆ ಶುಲ್ಕವೇ ನಿಗದಿ ಆಗಿಲ್ಲ ಎಂದರೆ ಏನರ್ಥ?

ಕೆಲವೇ ವರ್ಷಗಳ ಹಿಂದೆ ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ವೃತ್ತಿ ಶಿಕ್ಷಣ ವ್ಯವಸ್ಥೆ ಇಂದು ಗೊಂದಲಗಳ ಗೂಡಾಗಲು ತದನಂತರ ಬಂದ ಸರ್ಕಾರಗಳ ಎಡಬಿಡಂಗಿ ಧೋರಣೆಗಳೇ ಕಾರಣ ಎಂದರೆ ಉತ್ಪ್ರೇಕ್ಷೆ­ಯೇನಲ್ಲ.

ಬಹುಪಾಲು ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ರಾಜಕಾರಣಿಗಳ ಹಿಡಿತದಲ್ಲೇ ಇದ್ದು ಖಾಸಗಿ ಶಿಕ್ಷಣ ಲಾಬಿ ಎದುರು ಸರ್ಕಾರವೇ ಡೊಗ್ಗಾಲೂರುತ್ತಿದೆ. ವೃತ್ತಿ ಶಿಕ್ಷಣವಂತೂ ಹಣದ ವ್ಯಾಪಾರ ಎನ್ನುವಂತಾಗಿದೆ. ಅದನ್ನು ತಡೆಯುವ ಪ್ರಯತ್ನ ಮಾತ್ರ ನಡೆಯುತ್ತಿಲ್ಲ.

ಸರ್ಕಾರದ ಈ ಲೋಪದಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಅನಿಶ್ಚಯ ಎದುರಿಸುವುದು ಮಾಮೂಲು. ಇನ್ನು ನೆಪ ಸಾಕು. ವಿದ್ಯಾರ್ಥಿ ಹಿತ ಕಾಯುವಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.