ADVERTISEMENT

ಕ್ರಿಕೆಟ್‌ ಭ್ರಷ್ಟರಿಗೆ ಚಾಟಿ ಮರುಕಳಿಸಿದ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 15 ಜುಲೈ 2015, 19:30 IST
Last Updated 15 ಜುಲೈ 2015, 19:30 IST

ಭಾರತದಲ್ಲಿ ಕ್ರಿಕೆಟ್‌ ಆಡಳಿತದ ಶುದ್ಧೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ನೇತೃತ್ವದ ಸಮಿತಿಯು ಮಹತ್ವದ ಆದೇಶ ನೀಡಿದೆ. ಐಪಿಎಲ್‌ನ ಶಕ್ತಿ ಕೇಂದ್ರಗಳಾದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಫ್ರಾಂಚೈಸ್‌ ಇಂಡಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಮತ್ತು ರಾಜಸ್ತಾನ ರಾಯಲ್ಸ್‌ ತಂಡದ ಫ್ರಾಂಚೈಸ್‌ ಜೈಪುರ‌ ಐಪಿಎಲ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಚಟುವಟಿಕೆಗಳಿಂದ ಎರಡು ವರ್ಷಗಳ ಕಾಲ ಅಮಾನತಿನಲ್ಲಿಡುವ ದಿಟ್ಟ ತೀರ್ಮಾನ ಹೊರಬಿದ್ದಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಮುಖ್ಯಸ್ಥರೂ ಆಗಿರುವ ಭಾರತದ ಕ್ರಿಕೆಟ್‌ ಆಡಳಿತದ ಪ್ರಭಾವಿ ವ್ಯಕ್ತಿ ಎನ್‌.ಶ್ರೀನಿವಾಸನ್‌ ಅವರ ಅಳಿಯ ಗುರುನಾಥನ್‌ ಮೇಯಪ್ಪನ್‌ ಮತ್ತು ರಾಯಲ್ಸ್‌ ತಂಡದ ಸಹಮಾಲೀಕ ರಾಜ್‌ ಕುಂದ್ರಾ ಅವರ ಮೇಲೆ ಆಜೀವ ನಿಷೇಧ ಹೇರಿದ ನಿರ್ಧಾರ ಕ್ರಿಕೆಟ್‌ ಅಭಿಮಾನಿಗಳೆಲ್ಲರಿಗೂ ಸಂತಸ ನೀಡಿದೆ.

ಐಪಿಎಲ್‌ನ 2013ರ ಆವೃತ್ತಿಯ ಸಂದರ್ಭದಲ್ಲಿ ನಡೆದಿದ್ದ ಸ್ಪಾಟ್‌ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ನೇತೃತ್ವದ ಸಮಿತಿ ಸುಪ್ರೀಂಕೋರ್ಟ್‌ಗೆ ವರದಿ ನೀಡಿತ್ತು. ಆ ವರದಿಯ ಆಧಾರದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಂತೆ ಲೋಧಾ ನೇತೃತ್ವದ ಸಮಿತಿಗೆ ಸುಪ್ರೀಂಕೋರ್ಟ್‌ ತಿಳಿಸಿತ್ತು. ಇದೀಗ ಲೋಧಾ ಸಮಿತಿಯ ಆದೇಶ ಭಾರತ ಕ್ರಿಕೆಟ್‌ ರಂಗದಲ್ಲಿ ಸಂಚಲನ ಉಂಟು ಮಾಡಿದೆ.

ಐಪಿಎಲ್‌ ವಿವಾದಕ್ಕೆ ಸಂಬಂಧಿಸಿದ ಸಮಸ್ತ ವಿವರಗಳನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿರುವ ಕ್ರಿಕೆಟ್‌ಪ್ರಿಯರಲ್ಲಿ ಅನೇಕರು ಈ ಆಟದ‌ ಬಗ್ಗೆಯೇ ನಂಬಿಕೆ ಕಳೆದುಕೊಂಡಿದ್ದರು. ಬೆಟ್ಟಿಂಗ್‌, ಮ್ಯಾಚ್‌ಫಿಕ್ಸಿಂಗ್‌, ಮನರಂಜನೆಗಳಷ್ಟೇ ಐಪಿಎಲ್‌ನಲ್ಲಿರುವುದು ಎಂಬ ಮಟ್ಟಿಗೆ ಆ ಟೂರ್ನಿ ಕುಖ್ಯಾತಿ ಹೊಂದಿತ್ತು. ಕೆಲವು ಆಟಗಾರರು ಬುಕ್ಕಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರೇ ಹೊರತು, ತಂಡಕ್ಕಾಗಿ ಆಡುತ್ತಿರಲಿಲ್ಲ ಎಂಬ ಗುರುತರ ಆರೋಪಗಳೂ ಐಪಿಎಲ್‌ ಪಂದ್ಯಗಳ ವೇಳೆ ವ್ಯಾಪಕವಾಗಿತ್ತು.

ADVERTISEMENT

ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ 2013ರ ಆವೃತ್ತಿಯಲ್ಲಿ ನಡೆದ ಹಗರಣಗಳ ಬಗ್ಗೆ ಮುದ್ಗಲ್‌ ಸಮಿತಿ ಆಮೂಲಾಗ್ರ ತನಿಖೆ ನಡೆಸಿತ್ತು. ಆ ಸಮಿತಿ ನೀಡಿದ್ದ ವರದಿಯಲ್ಲಿ ತಪ್ಪಿತಸ್ಥರ ಹೆಸರುಗಳನ್ನೂ ತಿಳಿಸಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವ ಲೋಧಾ ಅವರು,  ‘ಈ ವಿವಾದ ಭಾರತದಲ್ಲಿ ಕ್ರಿಕೆಟ್‌ನ ಅಡಿಗಲ್ಲನ್ನೇ ಅಲ್ಲಾಡಿಸುವಂತಹದ್ದು. ಕ್ರಿಕೆಟ್‌ನ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಮೇಯಪ್ಪನ್‌ ಮತ್ತು ಕುಂದ್ರಾ ಅವರಿಗೆ ನಿಷೇಧ ಹೇರಿದರಷ್ಟೇ ಸಾಕೇ? ಶಿಕ್ಷೆಯೂ ಆಗಬೇಕಿತ್ತಲ್ಲ? ಎಂಬ ವಾದವೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಮೇಯಪ್ಪನ್‌ ಮತ್ತು ರಾಜ್‌ ಕುಂದ್ರಾ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದಾರೆ ಮತ್ತು ಕ್ರೀಡಾಸ್ಫೂರ್ತಿಯಿಂದ ನಡೆದುಕೊಂಡಿಲ್ಲ ಎನ್ನುವುದು ಸಾಬೀತಾಗಿದೆ. ಬೆಟ್ಟಿಂಗ್‌ನಲ್ಲಿ ಇವರ ಪಾಲ್ಗೊಳ್ಳುವಿಕೆ ಕ್ರಿಕೆಟ್‌ಗೆ ಬಗೆದ ದ್ರೋಹವಲ್ಲದೆ ಇನ್ನೇನು?

ಇದೀಗ ಲೋಧಾ ಸಮಿತಿ ನೀಡಿರುವ ಆದೇಶ ಕ್ರೀಡಾಂಗಣದಲ್ಲಿ ಇರಲೇಬೇಕಾದ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದಿದೆ. ಈ ದೇಶದಲ್ಲಿ ವ್ಯಕ್ತಿ ಎಷ್ಟೇ ಬಲಿಷ್ಠನಾಗಿದ್ದರೂ ನ್ಯಾಯದ ತಕ್ಕಡಿಯಲ್ಲಿ ಎಲ್ಲರೂ ಸಮಾನರು ಎಂಬ ಸಂವಿಧಾನದ ಮೂಲತತ್ವಗಳನ್ನು ಇದು ಮತ್ತೆ ಸಾರೀದೆ. ಈ ಆದೇಶ ಕ್ರಿಕೆಟ್‌ನ ಬಗ್ಗೆ ಮತ್ತೆ ಜನರಲ್ಲಿ ನಂಬಿಕೆ ಮೂಡುವಂತೆ ಮಾಡಿದೆಯಷ್ಟೇ ಅಲ್ಲ, ನಾಡಿನ ನ್ಯಾಯಾಂಗದ ಬಗ್ಗೆಯೂ ಗೌರವ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಮುಂದಿನ ದಿನಗಳಲ್ಲಿ ಬಿಸಿಸಿಐ ತನ್ನ ಪ್ರತಿ ನಡೆಯನ್ನೂ ಪಾರದರ್ಶಕವಾಗಿರಿಸಲಿ. ಇಲ್ಲದಿದ್ದರೆ ‘ಎನ್‌.ಶ್ರೀನಿವಾಸನ್‌ ಅವರ ಹಿತಾಸಕ್ತಿ ಸಂಘರ್ಷ’ದಂತಹ ಗೊಂದಲಗಳು ಮತ್ತೆ ಧುತ್ತೆನ್ನುವ ಸಾಧ್ಯತೆ ಇಲ್ಲದಿಲ್ಲ. ಮುಂದಿನ ವರ್ಷದ ಐಪಿಎಲ್‌ ಋತುವಿನ ವೇಳೆಗೆ ಎರಡು ಹೊಸ ಫ್ರಾಂಚೈಸ್‌ಗಳನ್ನು ಹೊಸದಾಗಿ ಸೇರ್ಪಡೆ ಮಾಡಬೇಕಾದ ಸವಾಲು ಇದೀಗ ಬಿಸಿಸಿಐ ಮುಂದಿದೆ. ಇದನ್ನು ಬಿಸಿಸಿಐ ಸಮರ್ಥವಾಗಿ ನಿಭಾಯಿಸಲಿ.

ಈ ನಡುವೆ ಇಂಡಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಫ್ರಾಂಚೈಸ್‌ನವರು ಲೋಧಾ ಸಮಿತಿಯ ಆದೇಶವನ್ನು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡುವುದಾಗಿ ಹೇಳಿರುವುದೂ ಕುತೂಹಲ ಮೂಡಿಸಿದೆ. ನ್ಯಾಯಾಲಯದ ಪ್ರಕ್ರಿಯೆ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ, ನಿಜ. ಆದರೆ ಮುಂದೆ ಇಂತಹ ವಂಚನೆಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವುದು ಬಿಸಿಸಿಐನ ನೈತಿಕ ಜವಾಬ್ದಾರಿಯಾಗಿದೆ. ಅಂತಹದ್ದೊಂದು ಆಡಳಿತ ವ್ಯವಸ್ಥೆಗೆ ಬೇಕಾದ ನಿಯಮಗಳನ್ನು ಮುಂದಿನ ದಿನಗಳಲ್ಲಿ ಲೋಧಾ ಸಮಿತಿಯೇ ರೂಪಿಸಲಿದೆ ಎನ್ನುವುದೂ ಕುತೂಹಲ ಕೆರಳಿಸುವಂತಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.