ADVERTISEMENT

ಕ್ಷಯ ನಿರ್ಮೂಲನೆಗೆ 2025ರ ಗಡುವು: ಸಂಘಟಿತ ಯತ್ನ ಬೇಕು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಕ್ಷಯ ನಿರ್ಮೂಲನೆಗೆ 2025ರ ಗಡುವು: ಸಂಘಟಿತ ಯತ್ನ ಬೇಕು
ಕ್ಷಯ ನಿರ್ಮೂಲನೆಗೆ 2025ರ ಗಡುವು: ಸಂಘಟಿತ ಯತ್ನ ಬೇಕು   

ಮಾರಣಾಂತಿಕವಾದ ಕ್ಷಯ ರೋಗವನ್ನು 2025ರ ವೇಳೆಗೆ ಮೂಲೋತ್ಪಾಟನೆ ಮಾಡಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಕ್ಷಯ ರೋಗಿಗಳನ್ನು ಹೊಂದಿರುವ ದೇಶ ನಮ್ಮದು. ನಮ್ಮಲ್ಲಿ ಬೇರೆ ಬೇರೆ ಸಾಂಕ್ರಾಮಿಕ ಕಾಯಿಲೆಗಳಿಗೆ ಹೋಲಿಸಿದರೆ ಕ್ಷಯ ರೋಗವು ಅತ್ಯಧಿಕ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರವೇ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ವರ್ಷಕ್ಕೆ ಸರಾಸರಿ 4.8 ಲಕ್ಷ ಕ್ಷಯ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ವಿಶ್ವದಲ್ಲಿ ಈ ರೋಗದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ 14 ಲಕ್ಷ. ಅದರಲ್ಲಿ ನಮ್ಮ ಪಾಲು ದೊಡ್ಡದು ಎನ್ನುವುದು ತಲೆತಗ್ಗಿಸಬೇಕಾದ ಸಂಗತಿ. ನಮ್ಮಲ್ಲಿ ಪ್ರತಿವರ್ಷ ಸುಮಾರು 28 ಲಕ್ಷ ಜನ ಹೊಸದಾಗಿ ಕ್ಷಯದ ಸೋಂಕಿಗೆ ಒಳಗಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರು. ಆದರೆ ಸೋಂಕಿತರಲ್ಲಿ 19 ಲಕ್ಷ ಜನರನ್ನು ಮಾತ್ರ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದ ವ್ಯಾಪ್ತಿಗೆ ತರಲು ಸಾಧ್ಯವಾಗುತ್ತಿದೆ. ಇನ್ನುಳಿದವರಿಗೆ ಒಂದೋ ಕಾಯಿಲೆ ಬಂದಿರುವುದೇ ಗೊತ್ತಿಲ್ಲ ಅಥವಾ ಇವರ ಬಗ್ಗೆ ಖಾಸಗಿ ವೈದ್ಯರು ಸರ್ಕಾರಕ್ಕೆ ಮಾಹಿತಿ ನೀಡುತ್ತಿಲ್ಲ. ನಮ್ಮ ರಾಜ್ಯದ ವಿಷಯಕ್ಕೆ ಬಂದರೆ, ಪ್ರತಿವರ್ಷ ಹೊಸದಾಗಿ ಕ್ಷಯ ರೋಗದ ಸರಾಸರಿ 60 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಇವುಗಳಲ್ಲಿ ಶೇ 85ರಷ್ಟು ಮಂದಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಹೊಂದುತ್ತಿದ್ದಾರೆ. ಆದರೆ ನೂರಕ್ಕೆ ನೂರು ಸಾಧನೆ ಮಾಡಲು ಆಗುತ್ತಿಲ್ಲ. ಕೆಲವು ರೋಗಿಗಳಲ್ಲಿ ಬಹು ಔಷಧ ಚಿಕಿತ್ಸೆಗೂ (ಮಲ್ಟಿ ಡ್ರಗ್‌ ಥೆರಪಿ) ಕ್ಷಯದ ರೋಗಾಣುಗಳು ಬಗ್ಗುತ್ತಿಲ್ಲ. ಔಷಧದ ವಿರುದ್ಧವೇ ಅವು ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತಿವೆ. ನಮ್ಮ ದೇಶದಲ್ಲಿ ಇಂತಹ ರೋಗಿಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಕ್ಷಯ ನಿರ್ಮೂಲನೆಯ ಹಾದಿಯಲ್ಲಿನ ದೊಡ್ಡ ಸವಾಲು. ಇವನ್ನೆಲ್ಲ ನೋಡಿದರೆ ಪೋಲಿಯೊ, ಸಿಡುಬಿನಂತಹ ಕಾಯಿಲೆಗಳನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಾಗಿರುವ ನಮಗೆ ಕ್ಷಯದ ಮೇಲೆ ಇನ್ನೂ ಪೂರ್ಣ ಹತೋಟಿ ಸಿಕ್ಕಿಲ್ಲ ಎನ್ನುವುದು ಸ್ಪಷ್ಟ. ಇದು ಆತಂಕದ ವಿದ್ಯಮಾನ.

ಕ್ಷಯ ರೋಗ ನಿರ್ಮೂಲನೆಯನ್ನು ಸರ್ಕಾರವೇನೋ ಆದ್ಯತೆ ಮೇಲೆ ತೆಗೆದುಕೊಂಡಿದೆ. ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೊಳಿಸಿದೆ. 2025ರ ವೇಳೆಗೆ ರೋಗವನ್ನು ಹೋಗಲಾಡಿಸುವ ಗುರಿ ಇಟ್ಟುಕೊಂಡಿದೆ. ಸೋಂಕಿನ ಸಾಧ್ಯತೆ ಹೆಚ್ಚಿರುವ ಜನ ವರ್ಗಗಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸುತ್ತಿದೆ. ಈ ತಪಾಸಣೆ ಮತ್ತು ಔಷಧ ವಿತರಣೆ ಉಚಿತ. ಆದರೆ ಕ್ಷಯ ರೋಗಕ್ಕೂ ಮತ್ತು ಅಪೌಷ್ಟಿಕತೆ– ಬಡತನಕ್ಕೂ ನಂಟು ಇರುವುದರಿಂದ ಸಾಮಾಜಿಕ ಮತ್ತು ಆರ್ಥಿಕ ಸ್ತರದಲ್ಲಿಯೂ ಬಹುಮುಖಿ ಕಾರ್ಯತಂತ್ರ ಅವಶ್ಯ. ಇದು ಸಂಘಟಿತವಾಗಿ ನಡೆಯಬೇಕಾದ ಕೆಲಸ. ಎಲ್ಲ ರೋಗಗಳಂತೆ ಇದು ಕೂಡ ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಗುಣಪಡಿಸುವುದು ಸುಲಭ. ಆದ್ದರಿಂದ ಸರ್ಕಾರಿ ವಲಯ ಮಾತ್ರವಲ್ಲದೆ ಖಾಸಗಿ ವೈದ್ಯಕೀಯ ಕ್ಷೇತ್ರ, ಸಮಾಜ, ಸೋಂಕಿನಿಂದ ಬಳಲುತ್ತಿರುವವರು... ಹೀಗೆ ಎಲ್ಲರೂ ಕೈಕೈ ಜೋಡಿಸಿ ಸಹಕರಿಸುವುದು ಅಗತ್ಯ. ರೋಗಿಗಳು ಸಹ ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕು. ಆದರೆ ಈ ವಿಷಯದಲ್ಲಿ ಅನೇಕರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈಗ ಬಳಕೆಯಲ್ಲಿರುವ ‘ಬಹು ಔಷಧ’ ಮತ್ತು ‘ವ್ಯಾಪಕ ಔಷಧ’ಗಳಿಗೂ ಬಗ್ಗದೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡ ಕ್ಷಯದ ಪ್ರಕರಣಗಳು ಹೆಚ್ಚಲು ಇದು ಪ್ರಮುಖ ಕಾರಣ. ಅದಕ್ಕಾಗಿಯೇ ಡೆಲಾಮನಿಡ್‌ ಎಂಬ ಹೊಸ ಔಷಧವನ್ನು ರಾಜ್ಯದಲ್ಲೂ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜತೆಗೆ, ಮೊದಲ ಹಂತದಲ್ಲಿ 5 ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ನೀಡಿದ ಬಡಕ್ವಿಲೆನ್‌ ಔಷಧವನ್ನು ರಾಜ್ಯಕ್ಕೂ ಪೂರೈಸಲಿದೆ. ರಾಜ್ಯದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಿದೆ. ಆದರೆ ಅನುಮತಿ, ತರಬೇತಿಗಳಿಂದಷ್ಟೇ ಪ್ರಯೋಜನ ಇಲ್ಲ. ರೋಗ ಪತ್ತೆ, ಸರಿಯಾದ ಔಷಧ ಸುಲಭವಾಗಿ ಸಿಗುವಂತೆ ಮಾಡುವುದು, ರೋಗಿಗಳು ಅದನ್ನು ಸೇವಿಸಿದ್ದಾರೆಯೇ ಎಂಬುದರ ಮೇಲೆ ನಿಗಾ ಇಡುವುದು ಕ್ಷಯ ನಿರ್ಮೂಲನೆಯಲ್ಲಿ ಅತ್ಯಂತ ಮಹತ್ವದ ಘಟ್ಟ. ಅದಕ್ಕೆ ಒಂದು ಜನಾಂದೋಲನದ ರೂಪ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT