ADVERTISEMENT

ಚಾಣಾಕ್ಷತೆ ಮಾತ್ರ ಸಾಕೆ?

​ಪ್ರಜಾವಾಣಿ ವಾರ್ತೆ
Published 22 ಮೇ 2014, 11:23 IST
Last Updated 22 ಮೇ 2014, 11:23 IST

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ಎದುರು ಜೆಡಿಯು ಪಕ್ಷ ನೆಲ ಕಚ್ಚಿದ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯಾಗಿ  ದಲಿತರಲ್ಲಿ ಅತ್ಯಂತ ಕೆಳಶ್ರೇಣಿಯ ಮಹಾದಲಿತ ಸಮುದಾಯದ ಜಿತನ್‌ ರಾಮ್‌ ಮಾಂಝಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ­ದ್ದಾರೆ.

ಈ ಎರಡೂ ಕ್ರಮಗಳು ನಿತೀಶ್‌ ಕುಮಾರ್‌ರ ರಾಜಕೀಯ ಚಾಣಾ­ಕ್ಷತೆಯನ್ನು ಎತ್ತಿ ತೋರಿಸಿವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಯು ದಯನೀಯವಾಗಿ ಸೋತ ಕಾರಣ ಪಕ್ಷದ ಒಳಗಿಂದಲೇ ಹೊಸ ಭಿನ್ನಮತ ಹುಟ್ಟಿಕೊಳ್ಳುವ ಸೂಚನೆಗಳಿದ್ದವು. ಈ ಭಿನ್ನಮತದ ದುರ್ಲಾಭ ಪಡೆಯಲು ಬಿಹಾರದ ಬಿಜೆಪಿ ನಾಯಕರೂ ತುದಿಗಾಲಲ್ಲಿ ನಿಂತಿದ್ದರು.

ಜೆಡಿಯು ಇಬ್ಭಾಗವಾಗಿ ದೊಡ್ಡ ಸಂಖ್ಯೆಯ ಶಾಸಕರು ಬಿಜೆಪಿ   ಸೇರಲಿದ್ದಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು. ಪರಿಸ್ಥಿತಿಯನ್ನು ಗ್ರಹಿಸಿದ ನಿತೀಶ್‌, ರಾಜೀ­ನಾಮೆಯ ಅಸ್ತ್ರವನ್ನೇ ತಮ್ಮ ಪರವಾದ ಬೆಂಬಲವನ್ನಾಗಿ ಪರಿವರ್ತಿಸಿದ್ದಾರೆ. ನೈತಿಕ ನಿಲುವಿನ ಕಾರಣ ನೀಡಿದ ಅವರು, ರಾಜೀನಾಮೆ ಹಿಂತೆಗೆ­ದುಕೊಳ್ಳಬೇಕೆಂಬ ಪಕ್ಷದ ಒತ್ತಡಕ್ಕೂ ಮಣಿಯಲಿಲ್ಲ.

ಅನಿವಾರ್ಯವಾಗಿ ಎಲ್ಲ ಶಾಸಕರೂ ಒಗ್ಗಟ್ಟಾಗಿ ಮುಂದಿನ ಮುಖ್ಯಮಂತ್ರಿಯ ಆಯ್ಕೆಯನ್ನು ನಿತೀಶ್‌ ಆಯ್ಕೆಗೇ ಬಿಡುವ ಪರಿಸ್ಥಿತಿ  ನಿರ್ಮಾಣವಾಯಿತು.  ರಾಜೀ­ನಾಮೆಯ ಮೂಲಕ ವರ್ಚಸ್ಸನ್ನು ಹೆಚ್ಚಿಸಿಕೊಂಡದ್ದಲ್ಲದೆ, ತಮ್ಮ ಕೈಗೊಂ­ಬೆಯಾಗಿರಬಲ್ಲ ಬೆಂಬಲಿಗನನ್ನೇ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಿದ್ದಾರೆ. ಜತೆಗೆ ಮಹಾದಲಿತರೊಬ್ಬರನ್ನು ಮೊತ್ತಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿಸಿದ ಕೀರ್ತಿಯೂ ಅವರಿಗೆ ಲಭ್ಯವಾಗಿದೆ.

ಆದರೆ ಈ ನೈತಿಕ ನಿಲುವು, ಶೀಘ್ರದಲ್ಲೇ ಬರಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವ ರಾಜಕೀಯ ತಂತ್ರ ಮಾತ್ರ ಎನ್ನುವುದು ಸ್ಪಷ್ಟ. ಹೊಸ ನಾಯಕನ ಆಯ್ಕೆ ಸಂದರ್ಭದಲ್ಲಿ ‘2015ರ ಅಕ್ಟೋ­ಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ನಾಯಕತ್ವದಲ್ಲೇ ಪಕ್ಷ ಸ್ಪರ್ಧಿಸಲಿದ್ದು ಅವರೇ ಮತ್ತೆ ಮುಖ್ಯಮಂತ್ರಿ­ಯಾಗಲಿದ್ದಾರೆ’ ಎಂಬ ನಿರ್ಣಯವನ್ನು ಸ್ವೀಕರಿಸಲಾಗಿದೆ.

ಅಂದರೆ ಮಹಾ­ದಲಿತನೊಬ್ಬನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಸಮಯ­ಸಾಧಕ ನೀತಿ ಎನ್ನಬಹುದೆ? 17 ವರ್ಷಗಳ ಕಾಲ ಬಿಹಾರದಲ್ಲಿ ಬಿಜೆಪಿ ಸಖ್ಯ ಬೆಳೆಸಿದ್ದ ನಿತೀಶ್‌, ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಜತೆಗಿನ ಸಖ್ಯವನ್ನು ಕಳೆದ ವರ್ಷ ಕಡಿದುಕೊಂಡರು.

ಈ ನಡೆಯ ಮೂಲಕ ಬಿಹಾರದ ಅಲ್ಪಸಂಖ್ಯಾತರ ಮತಬ್ಯಾಂಕನ್ನು ಗೆಲ್ಲುವುದು ಅವರ ತಂತ್ರವಾಗಿತ್ತು. ಆದರೆ ನರೇಂದ್ರ ಮೋದಿಯಷ್ಟೇ ಉಗ್ರ ಹಿಂದುತ್ವವಾದಿಯಾಗಿದ್ದ ಎಲ್‌.ಕೆ. ಅಡ್ವಾಣಿ ನೇತೃತ್ವದ ಬಿಜೆಪಿ ಜತೆ ಎಂಟು ವರ್ಷಗಳ ಕಾಲ ಆಡಳಿತ ಹಂಚಿಕೊಂಡಿದ್ದ ನಿತೀಶ್‌, ಹಠಾತ್ತಾಗಿ ಸೆಕ್ಯುಲರ್‌ವಾದಿ ಆದದ್ದನ್ನು ಅಲ್ಪಸಂಖ್ಯಾತರು ನಂಬಲಿಲ್ಲ.

ಅಲ್ಪಸಂಖ್ಯಾತರ ಮತಗಳು ಆರ್‌ಜೆಡಿ ಮತ್ತು ಜೆಡಿಯು ನಡುವೆ ಹಂಚಿಹೋದದ್ದರಿಂದ ಬಿಜೆಪಿಗೇ ಹೆಚ್ಚು ಲಾಭವಾಯಿತು. ಈಗ ನಿತೀಶ್‌ ಉರುಳಿಸಿರುವ ಇನ್ನೊಂದು ‘ಮಹಾದಲಿತ ದಾಳ’ ವಿಧಾನಸಭಾ ಚುನಾವಣೆಯಲ್ಲಿ ಫಲ ನೀಡುತ್ತದೆ ಎನ್ನುವ ಖಾತ್ರಿಯಿಲ್ಲ. ರಾಜಕೀಯದಲ್ಲಿ ಕೇವಲ ಚಾಣಾಕ್ಷತೆಯಷ್ಟೇ ಸಾಲದು; ನೀತಿಯ ಕುರಿತು ಪ್ರಾಮಾಣಿಕತೆಯೂ ಬೇಕು ಎನ್ನುವುದು ನಿತೀಶ್‌ಗೆ ಅರ್ಥವಾದಂತೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.