ADVERTISEMENT

ತಲೆತಗ್ಗಿಸಬೇಕಾದ ಸಂಗತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 19:30 IST
Last Updated 25 ಜೂನ್ 2014, 19:30 IST

ತುಮಕೂರು ಜಿಲ್ಲೆ ತಿಪಟೂರಿನ ತಾಲ್ಲೂಕು ಕಚೇರಿ ಪಹಣಿ ವಿತರಣಾ ಕೇಂದ್ರದ ಮುಂದೆ ಪಹಣಿ ಪಡೆಯಲು ಬಂದ ರೈತರು ಕೇಂದ್ರದ ಬಾಗಿಲು ತೆರೆಯುವವರೆಗೂ ಸರತಿ ಸಾಲಿನಲ್ಲಿ ತಮ್ಮ ಬದಲು ತಮ್ಮ ಚಪ್ಪಲಿಗಳನ್ನು ಜೋಡಿಸಿ ಇಟ್ಟಿದ್ದರು ಎನ್ನುವ ಸುದ್ದಿ ನಮಗೆಲ್ಲ ತಮಾಷೆ ಎನಿಸಬಹುದು. ಆದರೆ ಅದರ ಹಿಂದೆ ರೈತರ ನೋವು, ಕಷ್ಟ ಕೋಟ­ಲೆಗಳ ಚಿತ್ರಣ ಇದೆ.

ಹೊಸ ತಂತ್ರಜ್ಞಾನ ಅಳವಡಿಸಿ ರೈತರಿಗೆ ತ್ವರಿತವಾಗಿ ಪಹಣಿ ಸಿಗುವಂತೆ ಮಾಡಿದ್ದೇವೆ ಎಂದು ಅಧಿಕಾರಿಗಳು, ಮಂತ್ರಿಮಹೋದ­ಯರು ಎಷ್ಟೆಲ್ಲ ತುತ್ತೂರಿ ಊದಿದರೂ ವಾಸ್ತವ ಸ್ಥಿತಿ ಬೇರೆಯೇ ಇದೆ ಎನ್ನು­ವುದಕ್ಕೆ ಈ ವಿದ್ಯಮಾನವೇ ಸಾಕ್ಷಿ.

ಈಗ ಮುಂಗಾರು ಹಂಗಾಮಿನ ಕಾಲ. ರೈತ­ರಿ­ಗೆ ಹೊಲದಲ್ಲಿ ಕೈ ತುಂಬ ಕೆಲಸ. ಪುರುಸೊತ್ತೇ ಇರುವುದಿಲ್ಲ. ಈಗೇನಾ­ದರೂ ಜಮೀನಿನ ಕಡೆ ಅಲ್ಪಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಇಳುವರಿ ಮೇಲೆ ಅದು ಪರಿಣಾಮ ಬೀರುತ್ತದೆ, ರೈತರ ಬದುಕೇ ಏರುಪೇರಾಗುತ್ತದೆ ಎನ್ನು­ವುದು ಎಂಥವರಿಗೂ ಗೊತ್ತು. ಇಷ್ಟೆಲ್ಲ ಸಮಸ್ಯೆ, ಸಂಕಟ ಇದ್ದರೂ ರೈತರು ಕೆಲಸ ಕಾರ್ಯ ಬಿಟ್ಟು ಪಹಣಿ ಪಡೆಯಲು ಪಹಣಿ ಕೇಂದ್ರಗಳಿಗೆ ಎಡತಾ­ಕುವ, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ರಾಜ್ಯದ ಎಲ್ಲ ಕಡೆಯೂ ಇದೆ. ನಿರ್ದಿಷ್ಟ ಸಮಯದೊಳಗೆ ವಿವಿಧ ಬಗೆಯ ಸೇವೆ ಪಡೆಯುವ ಹಕ್ಕನ್ನು ನಾಗ­ರಿ­ಕ­ರಿಗೆ ನೀಡುವ ‘ಸಕಾಲ’ ಇದ್ದೂ ಈ ಸ್ಥಿತಿ.

ಅಟಲ್‌ ಜನಸ್ನೇಹಿ ಕೇಂದ್ರ ಯೋಜ­ನೆ­­ಯಡಿ ನಾಡ ಕಚೇರಿಗಳಲ್ಲಿ ಪಹಣಿ ಮತ್ತು ಮ್ಯುಟೇಷನ್‌ ಪ್ರತಿ­ಗಳನ್ನು ಯಾರೇ ಕೇಳಿದರೂ ತಕ್ಷಣವೇ ಪೂರೈಸಬೇಕು ಎನ್ನುವ ಆದೇಶವೇ ಇದೆ. ಆದರೂ ರೈತರು ದಿನಗಟ್ಟಲೆ ಕಾದು ಬಸವಳಿಯುತ್ತಿದ್ದಾರೆ. ಕಚೇರಿ ಬಾಗಿಲು ತೆರೆಯುವುದಕ್ಕೆ ಸಾಕಷ್ಟು ಮೊದಲೇ ದೂರದ ಹಳ್ಳಿಗಳಿಂದ ಬಂದು ಪಾಳಿ ಹಚ್ಚಬೇಕಾದ ಅನಿವಾರ್ಯ ಅವರದ್ದು. ಅವರಿಗೆ ತ್ವರಿತವಾಗಿ ಪಹಣಿ ಸಿಗುವ ವ್ಯವಸ್ಥೆ ಮಾಡಲು ಸರ್ಕಾರಿ ಯಂತ್ರ ಸೋತಿದೆ ಎನ್ನುವುದು ಆಡಳಿ­ತದ ಸೂತ್ರ ಹಿಡಿದವರಿಗೆ ಭೂಷಣವಂತೂ ಅಲ್ಲ. ಮಳೆ, ಚಳಿ, ಗಾಳಿ ಎನ್ನದೆ ಕುಟುಂಬ ಸಮೇತ ಹಗಲಿರುಳೂ ಹೊಲದಲ್ಲಿ ದುಡಿದು ನಮಗೆಲ್ಲ ಅನ್ನ ಕೊಡುವ ರೈತ ಸಮುದಾಯವನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ.  

ಪಹಣಿ ಎನ್ನುವುದು ರೈತನ ಹಿಡುವಳಿ, ಒಡೆತನ, ಬೆಳೆ, ಸಾಲ ಸೋಲ ಮತ್ತಿತರ ಮಾಹಿತಿಯುಳ್ಳ ಬಹುಮುಖ್ಯ ಕಂದಾಯ ದಾಖಲೆ. ರಿಯಾಯ್ತಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಪಡೆಯಲು, ಕೃಷಿ ಸಾಲಕ್ಕೆ ಅರ್ಜಿ ಹಾಕಲು ರೈತರು ಆಯಾ ವರ್ಷದ ಪಹಣಿಯನ್ನು ಸಂಬಂಧಿಸಿದ ಇಲಾಖೆ, ಬ್ಯಾಂಕ್‌ಗಳು, ಸಹಕಾರ ಸಂಘಗಳಿಗೆ ಸಲ್ಲಿಸುವುದು ಅನಿವಾರ್ಯ. ಹೀಗಾಗಿ ಈಗ ಪಹಣಿ ಕೇಳಿ ಬರುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಿರು­ತ್ತದೆ. ಇಂಥ ಸಮಯದಲ್ಲಿ ತ್ವರಿತವಾಗಿ ಪಹಣಿ ವಿತರಣೆಯಾಗುವಂತೆ ಮಾಡು­ವುದು ಕಂದಾಯ ಇಲಾಖೆಯ ಜವಾಬ್ದಾರಿ. ಆ ಕೆಲಸ ಸರಿಯಾಗಿ ನಡೆ­ಯುತ್ತಿಲ್ಲ,  ಆಡಳಿತ ವ್ಯವಸ್ಥೆ ಜನಸ್ನೇಹಿಯಾಗಿಲ್ಲ, ರೈತರ ಅಗತ್ಯಗಳಿಗೆ ಸ್ಪಂದಿಸು­ತ್ತಿಲ್ಲ ಎನ್ನುವುದನ್ನು ತಿಪಟೂರಿನ ಘಟನೆ ಪುಷ್ಟೀಕರಿಸಿದೆ. ಇಂಥ ಪ್ರಸಂಗಗಳು ಪುನರಾವರ್ತನೆಯಾಗದಂತೆ ಅಧಿಕಾರಶಾಹಿ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.