ADVERTISEMENT

ನ್ಯಾಯಾಂಗದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಲು ಸಹಕಾರಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:48 IST
Last Updated 8 ಅಕ್ಟೋಬರ್ 2017, 19:48 IST
ನ್ಯಾಯಾಂಗದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಲು ಸಹಕಾರಿ
ನ್ಯಾಯಾಂಗದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಲು ಸಹಕಾರಿ   

ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ಬಡ್ತಿ, ವರ್ಗಾವಣೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವ ಎಲ್ಲ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ನ ಜಾಲತಾಣದಲ್ಲಿ ಪ್ರಕಟಿಸಲು ಕಡೆಗೂ ಕೊಲಿಜಿಯಂ ನಿರ್ಧರಿಸಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿಗಳಾಗಿ, ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಹೈಕೋರ್ಟ್‌ ಪೀಠಕ್ಕೆ ನೇಮಿಸಿ ಬಡ್ತಿ ನೀಡುವ ಸಂಬಂಧ ಸರ್ಕಾರಕ್ಕೆ ಕೊಲಿಜಿಯಂ ಮಾಡುವ ಶಿಫಾರಸುಗಳು ಇನ್ನು ಮುಂದೆ ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟವಾಗಲಿವೆ.

ಇದಕ್ಕಾಗಿ ಸುಪ್ರೀಂ ಕೋರ್ಟ್ ಅಂತರ್ಜಾಲ ತಾಣದಲ್ಲಿ ‘ಕೊಲಿಜಿಯಂ ನಿರ್ಣಯಗಳು’ ಎಂಬ ವಿಭಾಗ ಸೃಷ್ಟಿಯಾದ್ದು ಈ ನಿರ್ಧಾರ ಈಗಾಗಲೇ ಜಾರಿಯಾಗಿದೆ. ಮದ್ರಾಸ್ ಹೈಕೋರ್ಟ್‌ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳಿಗೆ ಇತ್ತೀಚೆಗೆ ಮಾಡಲಾದ ನೇಮಕಾತಿ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ನ ಜಾಲತಾಣದ ಈ ವಿಭಾಗದಲ್ಲಿ ಪ್ರಕಟಿಸಲಾಗಿದೆ. ಈ ನೇಮಕಾತಿಗೆ ಮುಂಚೆ ನಡೆದ ಕೊಲಿಜಿಯಂ ಕಲಾಪಗಳನ್ನು ಇದು ವಿವರಿಸುತ್ತದೆ. ಕಡೆಗೂ ತನ್ನ ನಿರ್ಧಾರಗಳ ಬಗ್ಗೆ ಪಾರದರ್ಶಕತೆ ಪ್ರದರ್ಶಿಸಲು ಕೊಲಿಜಿಯಂ ಮುಂದಾಗಿರುವುದು ಸ್ವಾಗತಾರ್ಹ.

ADVERTISEMENT

ಈ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ಗೆ 24 ವರ್ಷಗಳು ಬೇಕಾಯಿತು. 1993ರಲ್ಲಿ ಏಳು ನ್ಯಾಯಮೂರ್ತಿಗಳ ಪೀಠದ ತೀರ್ಪಿನ ಮೂಲಕ ಜಾರಿಗೊಳಿಸಲಾದ ಕೊಲಿಜಿಯಂ (ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳ ಸಮಿತಿಯೇ ನೇಮಕ ಮಾಡುವ ವ್ಯವಸ್ಥೆ) ಬಗ್ಗೆ ಇದ್ದ ದೊಡ್ಡ ದೂರು ಎಂದರೆ ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬುದಾಗಿತ್ತು.

‘ಕೊಲಿಜಿಯಂ ಪದ್ಧತಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಈಗ ಕೊಲಿಜಿಯಂ ಹೊರಡಿಸಿರುವ ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ.

ಈ ನಿರ್ಧಾರವನ್ನು ಕೊಲಿಜಿಯಂ ಕೆಲವು ದಿನಗಳ ಹಿಂದೆಯೇ ತೆಗೆದುಕೊಂಡಿದ್ದರೆ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಂತ್ ಪಟೇಲ್ ವರ್ಗಾವಣೆ ಹಾಗೂ ನಂತರದ ಅವರ ರಾಜೀನಾಮೆ ವಿಚಾರದ ಸುತ್ತ ಎದ್ದ ವಿವಾದವನ್ನು ತಪ್ಪಿಸಿರಬಹುದಿತ್ತು. ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ವರ್ಗಾವಣೆ ವಿಚಾರ ಕಾನೂನು ವಲಯದಲ್ಲಿ ಟೀಕೆಗಳಿಗೆ ಕಾರಣವಾಗಿದೆ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೂ ಈ ಪ್ರಶ್ನೆ ಸಂಬಂಧಿಸಿದ್ದರಿಂದ ಈ ವಿವಾದ ಗಂಭೀರವಾದುದು. ಆದರೆ ಈ ವರ್ಗಾವಣೆ ಪ್ರಜ್ಞಾಪೂರ್ವಕವಾದ ಸರ್ವಾನುಮತದ ನಿರ್ಣಯವಾಗಿತ್ತು ಎಂಬಂತಹ ಕೊಲಿಜಿಯಂನ ಈಗಿನ ಮಾತುಗಳು ಹೆಚ್ಚೇನೂ ಪರಿಣಾಮ ಬೀರಿಲ್ಲ. ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕಾದುದು ಅಗತ್ಯ.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಅವರು ಕೊಲಿಜಿಯಂನ ಭಾಗವಾಗಿದ್ದುಕೊಂಡೇ ಕೊಲಿಜಿಯಂ ರಹಸ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಟೀಕಿಸಿದ್ದರು. 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಮಸೂದೆಯನ್ನು ಸಂಸತ್ತು ಅಂಗೀಕರಿಸಿತ್ತು.

ಈ ಪ್ರಕಾರ ಎನ್‌ಜೆಎಸಿಯಲ್ಲಿ ಕಾನೂನು ಸಚಿವ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಲ್ಲದೆ ಪ್ರಧಾನಿ ಹಾಗೂ ಪ್ರತಿಪಕ್ಷದ ನಾಯಕರನ್ನೊಳಗೊಂಡ ಪ್ರತ್ಯೇಕ ಸಮಿತಿ ಆಯ್ಕೆ ಮಾಡುವ ಇಬ್ಬರು ಗಣ್ಯ ವ್ಯಕ್ತಿಗಳೂ ಇರಲು ಅವಕಾಶ ಇತ್ತು. ಆದರೆ ಎನ್‌ಜೆಎಸಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ ಈ ತೀರ್ಪಿಗೆ ಏಕಾಂಗಿ ವಿರೋಧದ ದನಿಯಾಗಿದ್ದರು ನ್ಯಾಯಮೂರ್ತಿ ಚಲಮೇಶ್ವರ್.

ಚಲಮೇಶ್ವರ್ ಅವರು ಸಂಸತ್ತು ಅಂಗೀಕರಿಸಿದ ಎನ್‌ಜೆಎಸಿ ಕಾನೂನನ್ನು ಎತ್ತಿ ಹಿಡಿದಿದ್ದರಲ್ಲದೆ, ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ಪ್ರತಿಪಾದಿಸಿದ್ದುದನ್ನು ಸ್ಮರಿಸಿಕೊಳ್ಳಬಹುದು.

ಈಗ ಸಾರ್ವಜನಿಕ ಪರಿಶೀಲನೆಗೆ ಒಳಪಡಲು ಕೊಲಿಜಿಯಂ ತಾನಾಗಿಯೇ ಮುಂದೆ ಬಂದಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕದ್ದಾಗಿದೆ. ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟುವ ಜನರಿಗೆ ನ್ಯಾಯಾಂಗವೂ ಉತ್ತರದಾಯಿಯಾಗಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.