ADVERTISEMENT

ರಾಷ್ಟ್ರೀಯ ಆರೋಗ್ಯ ನೀತಿ ಮಹತ್ವಾಕಾಂಕ್ಷೆಯ ಗುರಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ರಾಷ್ಟ್ರೀಯ ಆರೋಗ್ಯ ನೀತಿ ಮಹತ್ವಾಕಾಂಕ್ಷೆಯ ಗುರಿ
ರಾಷ್ಟ್ರೀಯ ಆರೋಗ್ಯ ನೀತಿ ಮಹತ್ವಾಕಾಂಕ್ಷೆಯ ಗುರಿ   
ಪ್ರತಿಯೊಬ್ಬರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದ ‘ರಾಷ್ಟ್ರೀಯ ಆರೋಗ್ಯ ನೀತಿ– 2017’ರ ಅನುಷ್ಠಾನಕ್ಕೆ ಕಡೆಗೂ ಕೇಂದ್ರ  ಸರ್ಕಾರ  ಮುಂದಾಗಿದೆ. ಈ ನೀತಿ ಜಾರಿಯ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಕಾಯಿಲೆಗಳು ಬರದಂತೆ ಮುಂಜಾಗ್ರತಾ ಕ್ರಮಗಳಿಗೆ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಚಿಕಿತ್ಸೆ ಪಡೆಯುವಾಗ ಹಣಕಾಸು ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವ ಕಾಳಜಿಯನ್ನೂ ಒಳಗೊಂಡಿರುವುದು ಈ ನೀತಿಯ ಪ್ರಮುಖ ಅಂಶ. ಜೊತೆಗೆ ಸರ್ವರಿಗೂ ಆರೋಗ್ಯ ಸೇವೆ ಒದಗಿಸಲು ಅನೇಕ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿರುವುದು ಸಕಾಲಿಕ.

ಹೀಗಾಗಿ ದೇಶಿ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಹೊಸ ಮೈಲುಗಲ್ಲು. ಆರೋಗ್ಯವಂತ ಸಮಾಜ ನಿರ್ಮಾಣದತ್ತ ಇರಿಸಿದಂತಹ ಸರಿಯಾದ ಹೆಜ್ಜೆ ಎನ್ನಬಹುದು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವಿನಿಯೋಗಿಸುವ ಮೊತ್ತದಲ್ಲಿ ಗಮನಾರ್ಹ ಹೆಚ್ಚಳ, ಶಾಲೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಯೋಗ ಶಿಕ್ಷಣ ಜಾರಿ ಈ ನೀತಿಯಲ್ಲಿ ಸೇರಿವೆ.
 
ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣ ತಗ್ಗಿಸುವ ವಿಚಾರ ಆದ್ಯತೆ ಪಡೆದುಕೊಂಡಿದೆ. ಇದು ಸದ್ಯದ ತುರ್ತು ಅಗತ್ಯವಾಗಿತ್ತು ಎಂಬುದನ್ನು ಗಮನಿಸಬೇಕು. ಜೊತೆಗೆ ಚಿಕಿತ್ಸೆಯಲ್ಲಿನ ಲೋಪದೋಷಗಳ ವಿರುದ್ಧ ನ್ಯಾಯಮಂಡಳಿಗೆ ದೂರು ನೀಡಲು ಅವಕಾಶ ಕಲ್ಪಿಸಿರುವುದು ರೋಗಿಗಳ ಹಕ್ಕುಗಳ ರಕ್ಷಣೆಯ ಪ್ರಮುಖ ಕ್ರಮವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೇವೆಗಳು ಮತ್ತು ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದಲ್ಲದೆ ಮಾನವನ ಜೀವಿತಾವಧಿಯನ್ನು 67.5 ವರ್ಷಗಳಿಂದ 70 ವರ್ಷಗಳಿಗೆ ಹೆಚ್ಚಿಸುವ ಗುರಿಯನ್ನೂ ಈ ನೀತಿ ಹೊಂದಿದೆ. ಹಾಗೆಯೇ  ಸರ್ಕಾರಿ ಆಸ್ಪತ್ರೆಗಳಲ್ಲಿ  ಉಚಿತ  ತಪಾಸಣೆ ಮತ್ತು  ಔಷಧಿಗಳನ್ನು ನೀಡುವಂತಹ ಕ್ರಮಗಳು  ಆರೋಗ್ಯವಂತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಮುಖ್ಯವಾದವು.
 
ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1.5ರಿಂದ ಶೇ 2.5ಕ್ಕೆ ಹೆಚ್ಚಿಸುವುದು ಈ ಯೋಜನೆಯ ಮಹತ್ವದ ಅಂಶಗಳಲ್ಲಿ ಒಂದು. ವಿದೇಶಿಯರು ನಮ್ಮಲ್ಲಿಗೆ ಬಂದು ಚಿಕಿತ್ಸೆ ಪಡೆಯುವ ‘ಆರೋಗ್ಯ ಪ್ರವಾಸೋದ್ಯಮ’ ಅಗಾಧವಾಗಿ ಬೆಳೆಯುತ್ತಿದ್ದರೂ, ಎಲ್ಲರಿಗೂ ಎಲ್ಲ ಬಗೆಯ ವೈದ್ಯಕೀಯ ಸೌಲಭ್ಯವು ನಮ್ಮಲ್ಲಿ ದೊರೆಯದಿರುವುದು  ವಿಪರ್ಯಾಸ.

ಸರ್ವರ ಆರೋಗ್ಯ ರಕ್ಷಣೆ  ಎಂಬಂತಹ ಸದುದ್ದೇಶದ ಈ ನೀತಿ ಜಾರಿಗಾಗಿ ಖಾಸಗಿ ವಲಯವನ್ನೂ ಜತೆಯಲ್ಲಿಯೇ ಕರೆದುಕೊಂಡು ಹೋಗುವುದು ಸದ್ಯದ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಉತ್ತರದಾಯಿತ್ವ, ಗುಣಮಟ್ಟದ ಆರೈಕೆ ಹಾಗೂ ವೆಚ್ಚದ ಮೇಲಿನ ನಿಯಂತ್ರಣ ಮುಖ್ಯವಾಗುತ್ತದೆ. 
 
ವೈದ್ಯಕೀಯ ಲೋಕದಲ್ಲೂ ಹಲವು ಸಮಸ್ಯೆಗಳಿವೆ. ಹೀಗಾಗಿ ಘೋಷಿತ ಕಾರ್ಯಕ್ರಮಗಳನ್ನೆಲ್ಲ ಜಾರಿಗೊಳಿಸುವುದು ಹೇಳಿದಷ್ಟು ಸುಲಭವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾದುದು ಮುಖ್ಯ.
 
ಈ ನೀತಿ ಅನುಷ್ಠಾನದ ಜಾರಿಯಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಆದ್ಯತೆಯಾಗಬೇಕು. ಮೊದಲಿಗೆ ಆರೋಗ್ಯ ಕ್ಷೇತ್ರದ ವಿಶ್ವಾಸಾರ್ಹತೆ ಹೆಚ್ಚುವುದು ಮುಖ್ಯ. ಎಲ್ಲರಿಗೂ ಸುಲಭ ವೆಚ್ಚದಲ್ಲಿ ಆರೋಗ್ಯ ಸೇವೆಗಳು ದಕ್ಕುವಂತಾಗಬೇಕು. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ  ಅಗತ್ಯ ಮಾನವ ಸಂಪನ್ಮೂಲ ಹೆಚ್ಚಿಸುವುದೂ ಅತ್ಯವಶ್ಯಕ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.