ADVERTISEMENT

ವಲಸಿಗರ ಉಚ್ಚಾಟನೆ ಯತ್ನ ಟ್ರಂಪ್‌ ನಿಲುವು ಅಮಾನವೀಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 19:30 IST
Last Updated 7 ಸೆಪ್ಟೆಂಬರ್ 2017, 19:30 IST
ವಲಸಿಗರ ಉಚ್ಚಾಟನೆ ಯತ್ನ ಟ್ರಂಪ್‌ ನಿಲುವು ಅಮಾನವೀಯ
ವಲಸಿಗರ ಉಚ್ಚಾಟನೆ ಯತ್ನ ಟ್ರಂಪ್‌ ನಿಲುವು ಅಮಾನವೀಯ   

ಅಮೆರಿಕದಲ್ಲಿನ ಸುಮಾರು 8 ಲಕ್ಷ ವಿದೇಶಿ ಅಕ್ರಮ ವಲಸಿಗರ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೆಂಗಣ್ಣು ಮತ್ತೆ ಬಿದ್ದಿದೆ. ಇವರೆಲ್ಲ ಬಾಲ್ಯಾವಸ್ಥೆಯಲ್ಲಿಯೇ ಅಕ್ರಮವಾಗಿ ಅಮೆರಿಕಕ್ಕೆ ಬಂದವರು. ಇವರಲ್ಲಿ ಸುಮಾರು 7 ಸಾವಿರ ಭಾರತೀಯರೂ ಇದ್ದಾರೆ. ದೈಹಿಕ ಶ್ರಮದ ಕೆಲಸಗಳಲ್ಲದೆ ಉತ್ತಮ ಶಿಕ್ಷಣ ಪಡೆದು ವೈದ್ಯಕೀಯ, ತಾಂತ್ರಿಕ, ವಿಜ್ಞಾನ ಹೀಗೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಅಮೆರಿಕದ ವೈಭವಕ್ಕೆ, ಸಿರಿವಂತಿಕೆಗೆ, ಪ್ರಗತಿಗೆ ಕೊಡುಗೆ ಕೊಡುತ್ತ ಬಂದಿದ್ದಾರೆ. ಪೌರತ್ವ ಇಲ್ಲ ಎನ್ನುವುದನ್ನು ಬಿಟ್ಟರೆ ಇವರೆಲ್ಲ ಒಂದರ್ಥದಲ್ಲಿ ಅಮೆರಿಕದವರೇ ಆಗಿದ್ದಾರೆ. ಇವರಲ್ಲಿ ಅನೇಕರಿಗೆ ಈಗ 30–35 ವರ್ಷ. ಆದರೆ ‘ಅಮೆರಿಕನ್ನರಿಗಾಗಿ ಮಾತ್ರ ಅಮೆರಿಕ’ ಎಂಬ ಭಾವೋನ್ಮಾದ ಹುಟ್ಟಿಸಿ ಅಧ್ಯಕ್ಷ ಹುದ್ದೆ ಏರಿದ ಟ್ರಂಪ್‌ ಅವರಿಗೆ ಈ ಜನ ಈಗ ಭಾರ ಎನಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವರು ಈ ಅಕ್ರಮ ವಲಸಿಗರನ್ನು ಗಡಿಪಾರು ಮಾಡದಂತೆ ರಕ್ಷಣೆ ನೀಡಿ ಕಾನೂನು ಜಾರಿಗೊಳಿಸಿದ್ದರು.

ಒಬಾಮ ಬಗ್ಗೆ ಮತ್ತು ಅವರ ಕಾಲದ ನಿರ್ಧಾರಗಳ ಬಗ್ಗೆ ಅಸೂಯೆ ಬೆಳೆಸಿಕೊಂಡಿರುವ, ಸಾಧ್ಯವಾದಾಗೆಲ್ಲ ಅದನ್ನು ವ್ಯಕ್ತಪಡಿಸುವ ಟ್ರಂಪ್‌ಗೆ ‘ವಲಸಿಗ ಮಕ್ಕಳ ವಿರುದ್ಧದ ಕ್ರಮ ಮುಂದೂಡಿಕೆ’ (ಡಿ.ಎ.ಸಿ.ಎ.) ಎಂಬ ಈ ಕಾನೂನಿನ ಬಗ್ಗೆ ಕೋಪ ಇದೆ. ಕಾನೂನು ಮತ್ತು ಅದರಡಿ ಗಡಿಪಾರಿನಿಂದ ದೊರೆಯುವ ರಕ್ಷಣೆಯನ್ನು ಮುಂಬರುವ ಮಾರ್ಚ್‌ 5ರ ನಂತರ ಮುಂದುವರಿಸುವುದಿಲ್ಲ ಎಂಬ ನಿಲುವು ತಳೆದು ದಿಗಿಲು ಹುಟ್ಟಿಸಿದ್ದಾರೆ.

ಆದರೆ ಅದು ಅಷ್ಟು ಸುಲಭವಲ್ಲ ಎಂಬುದನ್ನು ಟ್ರಂಪ್‌ ಅರ್ಥ ಮಾಡಿಕೊಳ್ಳಬೇಕು. ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನವೇ ಡಿ.ಎ.ಸಿ.ಎ. ಕಾನೂನು ರದ್ದುಪಡಿಸುವುದಾಗಿ ಚುನಾವಣೆಯಲ್ಲಿ ವೀರಾವೇಶದ ಭಾಷಣ ಮಾಡಿದ್ದ ಅವರು ನಂತರ ಏಕಾಏಕಿ ಕ್ರಮ ತೆಗೆದುಕೊಳ್ಳಲು ಹೋಗಲಿಲ್ಲ. ಬಾಲ್ಯದಲ್ಲಿಯೇ ಬಂದು ಈಗ ಬೆಳೆದುನಿಂತ ಅಕ್ರಮ ವಲಸಿಗರ ಬಗ್ಗೆ ಅಮೆರಿಕದ ಜನಕ್ಕೆ ಸಹಾನುಭೂತಿ ಇದೆ. ಈಚೆಗೆ ನಡೆದ ಜನಾಭಿಪ್ರಾಯ ಸಂಗ್ರಹವೊಂದರಲ್ಲಿ ‘ಡಿ.ಎ.ಸಿ.ಎ. ಕಾನೂನಿನಡಿ ರಕ್ಷಣೆ ಪಡೆದಿರುವ ವಲಸಿಗರನ್ನು ಅಮೆರಿಕದಲ್ಲಿಯೇ ಉಳಿಯಲು ಬಿಡಬೇಕು’ ಎಂದು ಬಹುಪಾಲು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ತಾವು ಅಧಿಕಾರದಿಂದ ಇಳಿದ ಬಳಿಕ ಹೊಸ ಸರ್ಕಾರದ ನೀತಿಗಳ ಬಗ್ಗೆ ಪ್ರತಿಕ್ರಿಯಿಸದೆ ಮೌನ ವಹಿಸಿದ್ದ ಒಬಾಮ ಕೂಡ ಈಗ ಮೊದಲ ಸಲ ಟ್ರಂಪ್‌ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ವಲಸಿಗರನ್ನು ಹೊರ ಹಾಕುವ ತೀರ್ಮಾನ 2018ರ ಕಾಂಗ್ರೆಸ್‌ ಚುನಾವಣೆಯಲ್ಲಿ ತಮಗೆ ಪ್ರತಿಕೂಲವಾಗಬಹುದು ಎಂಬ ಭೀತಿ ಟ್ರಂಪ್‌ ಅವರದೇ ರಿಪಬ್ಲಿಕನ್‌ ಪಕ್ಷದವರಲ್ಲಿದೆ.

ADVERTISEMENT

ಟ್ರಂಪ್‌ ನಿಲುವಿಗೆ ಉದ್ಯಮ ರಂಗ ಕಿಡಿ ಕಾರುತ್ತಿದೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್ ಅವರಂತೂ ‘ಅದು ಕ್ರೂರ ತೀರ್ಮಾನ’ ಎಂದೇ ಹೇಳಿದ್ದಾರೆ. ಅಮೆರಿಕದ 350ಕ್ಕೂ ಹೆಚ್ಚು ದೊಡ್ಡ ಮತ್ತು ಪ್ರತಿಷ್ಠಿತ ಉದ್ಯಮ ಸಂಸ್ಥೆಗಳ ಮುಖ್ಯಸ್ಥರು ‘ವಲಸಿಗರನ್ನು ಹೊರಗೆ ಕಳಿಸಬೇಡಿ’ ಎಂದು ಟ್ರಂಪ್‌ಗೆ ಸಾಮೂಹಿಕ ಮನವಿ ಪತ್ರ ಕಳಿಸಿದ್ದಾರೆ. ಡಿ.ಎ.ಸಿ.ಎ. ರದ್ದು ಮಾಡಿ ತನ್ನ ಒಬ್ಬನೇ ಒಬ್ಬ ಉದ್ಯೋಗಿಯನ್ನು ಗಡಿಪಾರು ಮಾಡಲು ಮುಂದಾದರೂ ಬಿಡುವುದಿಲ್ಲ; ಅವರಿಗೆ ಕಾನೂನು ನೆರವು ಮತ್ತು ಅದಕ್ಕಾಗುವ ಎಲ್ಲ ಖರ್ಚು ಭರಿಸುವುದಾಗಿ ಮೈಕ್ರೋಸಾಫ್ಟ್ ಹೇಳಿದೆ. ಆದರೂ ಟ್ರಂಪ್‌ಗೆ ಇವೆಲ್ಲ ಲೆಕ್ಕಕ್ಕೇ ಇದ್ದಂತಿಲ್ಲ. ಈಗ ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳನ್ನು ಅವರ ಪಾಲಕರು ಮಾಡಿದ ತಪ್ಪಿಗಾಗಿ ಶಿಕ್ಷಿಸುವ ಉದ್ದೇಶ ತಮಗಿಲ್ಲ ಎಂದು ಒಂದು ಕಡೆ ಹೇಳುತ್ತಾರೆ. ಆದರೆ ಅದೇ ಉಸಿರಿನಲ್ಲಿಯೇ ‘ವಲಸೆಗೆ ಸಂಬಂಧಪಟ್ಟಂತೆ ಕಾನೂನು ಕಟ್ಟಳೆಗಳನ್ನು ಕಾಂಗ್ರೆಸ್‌ 6 ತಿಂಗಳಲ್ಲಿ ರೂಪಿಸಬೇಕು. ಇಲ್ಲವಾದರೆ ನಾನು ರೂಪಿಸುತ್ತೇನೆ’ ಎಂಬ ಬೆದರಿಕೆ ಹಾಕುತ್ತಾರೆ.

ವಲಸಿಗರನ್ನು ಹೊರ ಹಾಕುವ ನಿರ್ಧಾರಕ್ಕೆ ಟ್ರಂಪ್‌ ಕಟ್ಟುಬಿದ್ದರೆ ಅಮೆರಿಕದ ಆರ್ಥಿಕತೆ ಮೇಲೆ ಆಗುವ ಕೆಟ್ಟ ಪರಿಣಾಮವೂ ಅಷ್ಟಿಷ್ಟಲ್ಲ. ತಮ್ಮಲ್ಲಿ ಕೆಲಸ ಮಾಡುತ್ತಿರುವ ಅಕ್ರಮ ವಲಸಿಗರನ್ನು ವಜಾ ಮಾಡಿದರೆ ಮಾಲೀಕರು ಪರಿಹಾರ ರೂಪದಲ್ಲಿ 630 ಕೋಟಿ ಡಾಲರ್‌ (ಸುಮಾರು ₹ 41 ಸಾವಿರ ಕೋಟಿ) ಕೊಡಬೇಕಾಗುತ್ತದೆ. ಬದಲಿ ಉದ್ಯೋಗಿ
ಗಳನ್ನು ಹುಡುಕುವುದು ಸುಲಭದ ಕೆಲಸ ಅಲ್ಲ. 8 ಲಕ್ಷ ಜನರನ್ನು ಹೊರದಬ್ಬುವುದು ಮಾನವೀಯತೆಯೂ ಅಲ್ಲ. ಮಾನವ ಹಕ್ಕುಗಳ ಪ್ರತಿಪಾದಕ, ಉದಾರವಾದಿ ಎಂದು ಬೀಗುವ ಅಮೆರಿಕ, ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕು. ತನ್ನ ಧೋರಣೆಯನ್ನು ಟ್ರಂಪ್‌ ಮರುಪರಿಶೀಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.