ADVERTISEMENT

ವಲಸೆ ತಪ್ಪಿಸಲು ಚಿಂತಿಸಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಗೋವಾದ ಬೈನಾ ಕಡಲ ದಂಡೆಯಲ್ಲಿದ್ದ ಎಪ್ಪತ್ತಕ್ಕೂ ಹೆಚ್ಚು ಮನೆಗಳನ್ನು ಮನೋಹರ ಪರಿಕ್ಕರ್‌ ನೇತೃತ್ವದ ಸರ್ಕಾರ ಕೆಡವಿ ಹಾಕಿದೆ. ನೆಲೆ ಕಳೆದುಕೊಂಡವರಲ್ಲಿ ಹೆಚ್ಚಿನವರು ಕರ್ನಾಟಕ ಮೂಲ­ದವರು. ಮೂರ್‍್ನಾಲ್ಕು ದಶಕಗಳ ಹಿಂದೆ ಅಲ್ಲಿಗೆ ಹೋಗಿ ನೆಲೆಸಿದವರು. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಬೈನಾದಲ್ಲಿ ಜೋಪಡಿ ಹಾಕಿಕೊಂಡು ಬದುಕು ಕಟ್ಟಿಕೊಂಡವರು. ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

2004ರಲ್ಲಿ ಇದೇ ಬಗೆಯ ಕಾರ್ಯಾಚರಣೆಯಲ್ಲಿ ಇಲ್ಲಿದ್ದ ನಾಲ್ಕು ಸಾವಿರ ಜನರನ್ನು ಇದೇ ಪರಿಕ್ಕರ್‌ ಒಕ್ಕಲೆಬ್ಬಿಸಿದ್ದರು. ಬೈನಾದಲ್ಲಿರುವವರೆಲ್ಲ ವೇಶ್ಯಾವಾಟಿಕೆ­ಯಲ್ಲಿ ತೊಡಗಿದವರು ಎಂದು ಹೇಳುವ ಮೂಲಕ ಪರಿಕ್ಕರ್‌ ಉದ್ಧಟತನ­ವನ್ನೂ ತೋರಿದ್ದರು! ಗೋವಾದ ಕಡಲ ತೀರಗಳ ಸಂರಕ್ಷಣೆಗಾಗಲಿ, ಅಲ್ಲಿ ವೇಶ್ಯಾವಾಟಿಕೆ ನಿಯಂತ್ರಿಸುವುದಕ್ಕಾಗಲಿ ಯಾರ ವಿರೋಧವೂ ಇಲ್ಲ. ಆದರೆ ಅದರ ನೆಪದಲ್ಲಿ ಬಡವರನ್ನು ಒಕ್ಕಲೆಬ್ಬಿಸುವುದು ಮೂಲಭೂತ ಹಕ್ಕುಗಳಿಗೆ ಮಾಡಿದ ಅಪಚಾರ.

ಗೋವಾದ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, 2004ರಲ್ಲಿ ನೆಲೆ ಕಳೆದುಕೊಂಡವರಲ್ಲಿ 900 ಮಂದಿ­ಯಷ್ಟೇ ಲೈಂಗಿಕ ಕಾರ್ಯಕರ್ತೆಯರು. ಉಳಿದವರೆಲ್ಲ ಬಡ ಕೂಲಿಕಾರರು. ಆಗ ನೆಲೆ ಕಳೆದುಕೊಂಡವರಿಗೆ ಗೋವಾ ಸರ್ಕಾರ ಪರಿಹಾರ ಕೊಟ್ಟಿಲ್ಲ. ಪುನರ್ವಸತಿ ಕಲ್ಪಿಸಿಕೊಡುವಂತೆ ಕಳೆದ ವರ್ಷ ಮುಂಬೈ ಹೈಕೋರ್ಟ್‌ ನೀಡಿದ್ದ ಆದೇಶವನ್ನೂ ಗೋವಾ ಸರ್ಕಾರ ಉಪೇಕ್ಷಿಸಿದೆ. ಈ ಬೆಳವಣಿಗೆ ದುರದೃಷ್ಟಕರ. ನೆಲೆ ಕಳೆದುಕೊಂಡವರಿಗೆ ಮಾನವೀಯ ನೆಲೆಯಲ್ಲಿ ಪರಿ­ಹಾರ ಮತ್ತು ಪುನರ್ವಸತಿ ಕಲ್ಪಿಸಲು ಸರ್ಕಾರ ನೆರವಾಗಬೇಕು.

ಗೋವಾದಲ್ಲಿರುವ ಬಡ ಕನ್ನಡಿಗರ ದುಃಸ್ಥಿತಿಗೆ ನಿಜವಾದ ಕಾರಣಗಳೇನು ಎಂಬ ಬಗ್ಗೆ ಕರ್ನಾಟಕ ಸರ್ಕಾರ ಇನ್ನಾದರೂ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಂದ ಸಣ್ಣ ರೈತರು ಮತ್ತು ಕೂಲಿಕಾರರು ಪ್ರತಿ ವರ್ಷ ಗೋವಾ, ಮಹಾರಾಷ್ಟ್ರಗಳ ಕಡೆಗೆ ವಲಸೆ ಹೋಗುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ವಲಸೆ ಹೋದ­ವರಲ್ಲಿ ಅನೇಕರು ಹೊರ ರಾಜ್ಯಗಳಲ್ಲಿ ಉಳಿದಿದ್ದಾರೆ. ಅಂಥವರನ್ನು ಆ ರಾಜ್ಯಗಳ ಜನರು ನಿಕೃಷ್ಟವಾಗಿ ಕಾಣುತ್ತಾರೆ.

ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ಈ ಬೆಳವಣಿಗೆಗಳ ಬಗ್ಗೆ ಅಸಹಾಯಕತೆ ಪ್ರದರ್ಶನ ಮಾಡುವುದನ್ನು ಬಿಟ್ಟು ಬಡವರು ವಲಸೆ ಹೋಗು­ವುದನ್ನು ತಪ್ಪಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಬೇಕು. ಅಪೂರ್ಣ­ಗೊಂಡಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣ­ಗೊಳಿಸಿದರೆ ಸಾಕು, ಜನ ವಲಸೆ ಹೋಗುವುದು ನಿಯಂತ್ರಣಕ್ಕೆ ಬರುತ್ತದೆ.

ಕೃಷಿ ಕಾರ್ಮಿಕರು, ಸಣ್ಣ ರೈತರು ರಾಜ್ಯದಲ್ಲಿಯೇ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ. ಬಡವರ ಬಗ್ಗೆ ತಮಗೆ ಅಪಾರ ಕಾಳಜಿ ಇದೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುತ್ಪಾದಕ ಯೋಜನೆಗಳಿಗೆ ಹಣ ಸುರಿಯುವುದನ್ನು ಕಡಿಮೆ ಮಾಡಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾರ್ಯೋನ್ಮುಖರಾಗಬೇಕು.  ವಲಸೆ ತಪ್ಪಿಸುವ ಶಾಶ್ವತ ಕ್ರಮಗಳನ್ನು ಯೋಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.