ADVERTISEMENT

ಸನ್ನದ್ಧತೆಯ ಕೊರತೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ರಾಜ್ಯದಲ್ಲಿ ತಲೆದೋರಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಈ ಹಂಗಾಮಿನ ಆಹಾರ ಉತ್ಪಾದನೆಯಲ್ಲಿ 10 ಲಕ್ಷ ಟನ್‌­ಗಳಷ್ಟು ಕುಸಿತ ಕಂಡುಬರಲಿದೆ ಎಂದು ಮುಖ್ಯಮಂತ್ರಿಗಳೇ ಬಹಿರಂಗ­ಪಡಿಸಿ­ದ್ದಾರೆ. ದೇಶದ ಇತರ ಕಡೆಗಳಲ್ಲೂ ಬರ, ಪ್ರವಾಹದಿಂದಾಗಿ ಮುಂಗಾರು ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಆಹಾರ ಉತ್ಪಾದನೆ ಇಳಿಮುಖವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಾವು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದಕ್ಕೊಂದು ಸೂಚನೆ.

ಮುಖ್ಯಮಂತ್ರಿಗಳೇ ಕೊಟ್ಟ ಅಂಕಿಸಂಖ್ಯೆ ಪ್ರಕಾರ ನಮ್ಮ ರಾಜ್ಯದ 66 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೆ, 8 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಹೀಗಾಗಿ 74 ಲಕ್ಷ ಹೆಕ್ಟೇರ್ ಗುರಿಗೆ ಬದಲಾಗಿ 65 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿರುವುದರಿಂದ 135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಸಾಧನೆ ಕಷ್ಟ. ಪ್ರಾಕೃತಿಕ ವಿಕೋಪದ ಪರಿಣಾಮ ಯಾವಾಗಲೂ ಘನಘೋರವಾಗಿಯೇ ಇರುತ್ತದೆ.

ಇಳುವರಿ ಕುಸಿತದಿಂದ ರೈತರು ಹಾನಿಗೊಳಗಾದರೆ, ಉದ್ಯೋಗ ಇಲ್ಲದೆ ಕೃಷಿ ಕಾರ್ಮಿಕರು ಗುಳೆ ಹೋಗ­ಬೇಕಾಗುತ್ತದೆ. ಮೇವಿಲ್ಲದೆ ಜಾನುವಾರುಗಳು, ಪಶು ಪಕ್ಷಿಗಳು ತೊಂದರೆ ಅನುಭವಿಸುತ್ತವೆ. ಬೇಸಿಗೆಯ ಮಾತಿರಲಿ, ಮಳೆಗಾಲದಲ್ಲಿಯೇ ಕುಡಿವ ನೀರಿನ ಅಭಾವವೂ ಎದುರಾದ ಪ್ರಸಂಗಗಳಿವೆ. ಇವೆಲ್ಲವನ್ನೂ ನಿಭಾಯಿಸಲು ಸರ್ಕಾರದ ಬೊಕ್ಕಸದ ಮೇಲಿನ ಒತ್ತಡ ಹೆಚ್ಚುತ್ತದೆ.

ತೀವ್ರ ಬರ, ಅತಿಯಾದ ಪ್ರವಾಹ ರಾಜ್ಯಕ್ಕೇನೂ ಹೊಸದಲ್ಲ. ಆಗಾಗ ಈ ಬಗೆಯ ವೈಪರೀತ್ಯವನ್ನು ಅನುಭವಿಸುತ್ತಲೇ ಬಂದಿದ್ದೇವೆ. ಆದರೆ ಇಂಥ ಸನ್ನಿವೇಶ ಎದುರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ಪ್ರತಿ ಸಲವೂ ಎಡ­ವುತ್ತಿದ್ದೇವೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜಾಯ­ಮಾನ­ದಿಂದ ಹೊರಬರಲು ಸರ್ಕಾರಕ್ಕೂ ಆಗುತ್ತಿಲ್ಲ, ಸಂಬಂಧಪಟ್ಟ ಇಲಾಖೆ ಅಧಿ­ಕಾರಿ­ಗಳಿಗೂ ಮನಸ್ಸಿಲ್ಲ.

ಕೃಷಿ ವಿಶ್ವವಿದ್ಯಾಲಯಗಳಿಂದಲೂ ಈ ವಿಷಯ­ದಲ್ಲಿ ರೈತರಿಗೆ ಸಮರ್ಪಕವಾದ ಬೆಂಬಲ ಸಿಗುತ್ತಿಲ್ಲ ಎನ್ನುವುದು ಉತ್ಪ್ರೇಕ್ಷೆಯ ವಿಷಯವೂ ಅಲ್ಲ. ಮಳೆ ಕೊರತೆಯನ್ನೂ ತಾಳಿಕೊಳ್ಳಬಲ್ಲ ಭತ್ತ, ರಾಗಿ, ಜೋಳದ ಎಷ್ಟೋ ತಳಿಗಳು ಕಾಣೆಯಾಗಿವೆ. ಅಧಿಕ ಇಳುವರಿ, ಹೈಬ್ರಿಡ್ ತಳಿಗಳ ಅತಿ ವ್ಯಾಮೋಹದ ಬೆನ್ನು ಹತ್ತಿ ಸಾಂಪ್ರದಾಯಿಕ ಜ್ಞಾನವನ್ನು ಕಳೆ­ದು­ಕೊಂಡಿದ್ದೇವೆ. ಹೀಗಿರುವಾಗ ಒಂದಿಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು, ಸಾಲ ಮತ್ತು ಕಂದಾಯ ವಸೂಲಿ ಮುಂದೂ­ಡುವುದು, ಹಣ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸುವುದು  ಹೀಗೆ ತಾತ್ಕಾಲಿಕ ಪರಿಹಾರ ಒದಗಿಸಬಹುದು. ಅದು ಅಗತ್ಯವೂ ಹೌದು.

ಆದರೆ ರೈತರಿಗೆ ಬೇಕಾಗಿರುವುದು ‘ಮಳೆ ಮತ್ತು ಪ್ರಧಾನ ಬೆಳೆ ಕೈಕೊಟ್ಟರೆ ತಕ್ಷಣಕ್ಕೆ ಪರ್ಯಾಯವಾಗಿ ಏನು ಮಾಡಬಹುದು, ಯಾವ ಉಪ ಬೆಳೆ ಬೆಳೆದು ನಷ್ಟವನ್ನು ಕೆಲ ಮಟ್ಟಿಗಾದರೂ ಸರಿದೂಗಿಸಿಕೊಳ್ಳಬಹುದು’ ಎಂಬ ಮಾಹಿತಿ ಮತ್ತು ಅದಕ್ಕೆ ಪೂರಕವಾಗಿ ಸರ್ಕಾರದ ನೆರವು. ಅದು ಬಿತ್ತನೆ ಬೀಜ, ಗೊಬ್ಬರ, ನಷ್ಟ ಪರಿಹಾರ ಹೀಗೆ ವಿವಿಧ ರೂಪಗಳಲ್ಲಿರಬೇಕು. ಮಳೆಯೇ ಇಲ್ಲದ ಕಡೆಯೂ ಕಡಿಮೆ ನೀರಿನಲ್ಲಿ ಒಳ್ಳೆ ಇಳುವರಿ ಪಡೆಯುವ ಇಸ್ರೇಲ್, ಪ್ರವಾಹದಲ್ಲೂ ಬೆಳೆ ಬೆಳೆಯುವ ಥಾಯ್ಲೆಂಡ್ ಮುಂತಾದ ಕಡೆಯ ಕೃಷಿ ತಂತ್ರಜ್ಞಾನ ನಮ್ಮ ರೈತರಿಗೂ ಸಿಗುವಂತೆ ಮಾಡುವುದು ಈ ದಿಸೆಯಲ್ಲಿ ಒಂದು ಗಟ್ಟಿ ಹೆಜ್ಜೆಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT