ADVERTISEMENT

ಹೆರಿಗೆ ರಜೆ ಸೌಲಭ್ಯ ಹೆಚ್ಚಳ: ಪ್ರಗತಿಪರ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 3:53 IST
Last Updated 14 ಮಾರ್ಚ್ 2017, 3:53 IST
ಹೆರಿಗೆ ರಜೆ ಸೌಲಭ್ಯ ಹೆಚ್ಚಳ: ಪ್ರಗತಿಪರ ಹೆಜ್ಜೆ
ಹೆರಿಗೆ ರಜೆ ಸೌಲಭ್ಯ ಹೆಚ್ಚಳ: ಪ್ರಗತಿಪರ ಹೆಜ್ಜೆ   

ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಇನ್ನು ಮುಂದೆ 26 ವಾರಗಳ ವೇತನಸಹಿತ ಹೆರಿಗೆ ರಜೆ ಸೌಲಭ್ಯ ಲಭ್ಯವಾಗಲಿದೆ. ಈವರೆಗೆ 12 ವಾರಗಳ ವೇತನಸಹಿತ ಹೆರಿಗೆ ರಜೆ ಸಿಗುತ್ತಿತ್ತು. ಇದನ್ನು 26 ವಾರಗಳಿಗೆ ಏರಿಸಿರುವುದು ಸ್ವಾಗತಾರ್ಹ. ಆದರೆ ಈ ಸೌಲಭ್ಯ ಮೊದಲ ಎರಡು ಮಕ್ಕಳಿಗೆ ಸೀಮಿತವಾಗಿರುತ್ತದೆ.

ಮೂರನೇ ಮಗುವಿಗೆ 12 ವಾರಗಳ ರಜೆ ಪಡೆಯಲು ಅವಕಾಶ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ 1961ರ ಹೆರಿಗೆ ಸೌಲಭ್ಯ ಕಾಯಿದೆ ತಿದ್ದುಪಡಿ ಮಸೂದೆಗೆ ಕಳೆದ ವಾರ ಲೋಕಸಭೆಯ ಅಂಗೀಕಾರ ದೊರೆತಿದೆ. ಈ ಮಸೂದೆ ಕೆಲವು ತಿಂಗಳ ಹಿಂದೆಯೇ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಇದರಿಂದ ರಾಷ್ಟ್ರದಾದ್ಯಂತ ಸುಮಾರು 18 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗಲಿದೆ ಎಂಬುದು ದೊಡ್ಡ ವಿಚಾರ.

ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯುವ ಮಹಿಳೆಯರು ಹಾಗೂ ಬಾಡಿಗೆ ತಾಯಿಯನ್ನು ನಿಯೋಜಿಸಿ ತನ್ನದೇ ಮಗು ಪಡೆದುಕೊಳ್ಳುವ ಜೈವಿಕ ತಾಯಿಗೂ 12 ವಾರಗಳ ರಜೆ ಸಿಗಲಿದೆ. ಎಂದರೆ, ಸಮಾಜದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಕ್ಕೆ ತಂದುಕೊಂಡು ಅದಕ್ಕೆ ಕಾನೂನಿನ ಮೂಲಕ ಸ್ಪಂದಿಸಿರುವುದು ಪ್ರಗತಿಪರ ಹೆಜ್ಜೆ.

ಸುದೀರ್ಘ ಹೆರಿಗೆ ರಜೆ ನೀಡುವುದು ಸಾಮಾಜಿಕವಾಗಿ ಅಗತ್ಯವಾದುದು. ತಾಯ್ತನ ಬರೀ ಹೆಣ್ಣಿಗಷ್ಟೇ ಸಂಬಂಧಿಸಿದ್ದಲ್ಲ. ಸಮಾಜವನ್ನು ಮುಂದುವರಿಸುವ ಈ ಪ್ರಕ್ರಿಯೆಯನ್ನು ಗೌರವಿಸಿ ಅಗತ್ಯ ಸೌಲಭ್ಯಗಳನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಈ ತಿದ್ದುಪಡಿ ಮಸೂದೆ ಎತ್ತಿಹಿಡಿದಿರುವುದು ಮುಖ್ಯ.

10ಕ್ಕಿಂತ ಹೆಚ್ಚು ನೌಕರರಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೂ ಈ ನಿಯಮ ಅನ್ವಯಿಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಲೇ ಇರುವ ಪ್ರಸಕ್ತ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣದ ಪರವಾದ ಈ ಕಾನೂನು ಮತ್ತಷ್ಟು ಮಹತ್ವದ್ದಾಗುತ್ತದೆ.

ADVERTISEMENT

ಈಗಿರುವ ಅಂಕಿಅಂಶಗಳ ಪ್ರಕಾರ, ಉದ್ಯೋಗ ಕ್ಷೇತ್ರದಲ್ಲಿ  ಗ್ರಾಮೀಣ ವಲಯದಲ್ಲಿ ಶೇ 24.8 ಹಾಗೂ ನಗರ ಪ್ರದೇಶಗಳಲ್ಲಿ ಶೇ 14.7ರಷ್ಟು ಮಾತ್ರ ಮಹಿಳೆಯರ ಪಾಲ್ಗೊಳ್ಳುವಿಕೆ ಇದೆ. ಆರ್ಥಿಕತೆಯಲ್ಲಿ ಬೆಳವಣಿಗೆ ಆಗುತ್ತಿದ್ದರೂ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇಳಿಮುಖವಾಗುತ್ತಿದೆ. ಇದಕ್ಕೆ ಪಾರಂಪರಿಕ ಲಿಂಗತ್ವ ಪೂರ್ವಗ್ರಹಗಳು ಕಾರಣವಾಗುತ್ತಿವೆ ಎಂಬುದು ಮತ್ತಷ್ಟು ಕಳವಳಕಾರಿಯಾದ ಸಂಗತಿ.

ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ತಜ್ಞರ ಶಿಫಾರಸುಗಳ ಪ್ರಕಾರ, ಶಿಶು ಜನನದ ನಂತರ 24 ವಾರಗಳವರೆಗೆ ಶಿಶುವಿಗೆ ತಾಯಿಯ ಹಾಲನ್ನೇ ನೀಡುವುದು ಮುಖ್ಯ. ಈ ಕಾರಣದಿಂದಲೂ ಹೆರಿಗೆ ರಜೆ ಸೌಲಭ್ಯ ವಿಸ್ತರಣೆ ಅಗತ್ಯ. ಆದರೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ವಿಸ್ತರಣೆ ಆಗಬೇಕು. ಏಕೆಂದರೆ ರಾಷ್ಟ್ರದಲ್ಲಿ ಸುಮಾರು ಶೇ 85ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವಿಚಾರವನ್ನು ನಿರ್ಲಕ್ಷಿಸುವುದು ಸಲ್ಲದು. ಈ ಮಹಿಳೆಯರಿಗೂ ಈ ಬಗೆಯ ಸೌಲಭ್ಯಗಳು ಹಾಗೂ ರಕ್ಷಣೆ ದಕ್ಕಬೇಕಾಗಿರುವುದು ಬಹಳ ಮುಖ್ಯ. ಹಾಗೆಯೇ ಪಿತೃತ್ವ ರಜೆ ಬಗ್ಗೆ ಈ ಮಸೂದೆ ಮೌನವಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಗಳಾಗುತ್ತಿರುವ ಈ ಕಾಲದಲ್ಲಿ  ಶಿಶು ಪಾಲನೆಯನ್ನು ಅಮ್ಮ, ಅಪ್ಪಂದಿರ ಜಂಟಿ ಹೊಣೆಗಾರಿಕೆಯಾಗಿಸುವ ದೃಷ್ಟಿಕೋನವನ್ನು ಸಮಾಜದಲ್ಲಿ ಮೂಡಿಸಲು ಪಿತೃತ್ವ ರಜೆಯ ಅವಶ್ಯಕತೆ ಇದೆ ಎಂದು ಕೆಲವು ಸಂಸತ್ ಸದಸ್ಯರು ಪ್ರಸ್ತಾಪಿಸಿದ್ದು ಸರಿಯಾಗಿಯೇ ಇದೆ.

ಜೊತೆಗೆ 50 ಅಥವಾ ಅದಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಸಂಸ್ಥೆಗಳು ಶಿಶು ಪಾಲನಾ ಕೇಂದ್ರಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸುವ ವಿಚಾರವೂ ಮಸೂದೆಯಲ್ಲಿದೆ. ಈ ಎಲ್ಲಾ ವಿಚಾರಗಳೂ ಮುಂದಿನ ದಿನಗಳಲ್ಲಿ ಅನುಷ್ಠಾನವಾದಲ್ಲಿ ದುಡಿಯುವ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.