ADVERTISEMENT

ಕಡ್ಡಾಯ ಗ್ರಾಮೀಣ ಸೇವೆ ತರವೇ?

ಕಾರ್ಗಲ್ ಭೋಗನಂಜುಂಡ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ನೆಮ್ಮದಿ ನೀಡದ ಉದ್ಯೋಗಕ್ಕೆ ಎಷ್ಟೇ ಸಂಬಳ ಕೊಟ್ಟರೂ ಸೂಕ್ತ ಸಿಬ್ಬಂದಿ ಸಿಗುವುದಿಲ್ಲ. ಇದು ವೈದ್ಯರ ವಿಷಯಕ್ಕೂ ಅನ್ವಯಿಸುತ್ತದೆ.

ಮೂರು ವರ್ಷ ರಾಷ್ಟ್ರಪತಿ ಅವರ ಅಂಗಳದಲ್ಲಿದ್ದ ಬಹು ನಿರೀಕ್ಷಿತ ‘ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ 2012’ ಇದೀಗ ರಾಷ್ಟ್ರಪತಿ ಅಂಕಿತದೊಂದಿಗೆ ಕರ್ನಾಟಕ ಸರ್ಕಾರದ ಕೈ ಸೇರಿ, ಇದೇ ಜುಲೈ 24ರಿಂದ ಜಾರಿಗೆ ಬಂದಾಗಿದೆ. ಅದರಂತೆ ಇನ್ನು ಮುಂದೆ ರಾಜ್ಯದಲ್ಲಿ ಕಲಿತು ಹಳ್ಳಿ ಸೇವೆಗೆ ಒಲ್ಲದ ಯುವ ವೈದ್ಯರು ಒಂದು ವರ್ಷ ಗ್ರಾಮೀಣ ಸೇವೆಗೆ ಒಗ್ಗಿಕೊಳ್ಳಲೇಬೇಕಾಗಿದೆ. ಆದರೆ, ಕಾನೂನು ಮಾಡಲು ಒಂದು ದಾರಿ ಇದ್ದರೆ, ಅದನ್ನು ಮುರಿಯಲು ಹಲವಾರು ಮಾರ್ಗಗಳಿರುತ್ತವೆ. ಅಂದರೆ ರಾಜ್ಯ ಸರ್ಕಾರ ‘ರೆಂಬೆ’ಗಳ ಮೇಲೆ ನಡೆದು ಗೆದ್ದೆ ಎಂದು ಬೀಗುತ್ತಿದ್ದರೆ, ಚಾಣಾಕ್ಷ ಯುವ ವೈದ್ಯರು ಆಗಲೇ ‘ಎಲೆ’ಗಳ ಮೇಲೆ ನಡೆಯುವ ಕಲೆಯನ್ನು ಕರಗತ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ! ಈ ಕಡ್ಡಾಯ ಗ್ರಾಮೀಣ ಸೇವೆಯಿಂದ ಮತ್ಯಾವ ಮಾರ್ಗದಿಂದ ನುಣುಚಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿಯುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಬಾರದ ಕಾರಣವಂತೂ ವರದಾನವಾಗುವ ಎಲ್ಲ ಸಾಧ್ಯತೆಗಳೂ ಇವೆ. ಏಕೆಂದರೆ ರೋಗಿಗಳ ಕಾಯಿಲೆ ಅರಿತು ತಕ್ಕ ಔಷಧಿ ನೀಡಿ ಅವರ ಜೀವ ಉಳಿಸಲು ‘ಸ್ಥಳೀಯ ಭಾಷಾ ಪರಿಜ್ಞಾನ ಅತ್ಯವಶ್ಯಕ’ ಎಂಬ ವಾದವನ್ನು ಕೋರ್ಟ್‌ಗಳೂ ಒಪ್ಪಿಕೊಳ್ಳುತ್ತವೆ. ಈ ದೃಷ್ಟಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಹಾಗೂ ಸಚಿವರ ಲೆಕ್ಕಾಚಾರ ಸ್ವಲ್ಪ ತಲೆಕೆಳಗಾಗಬಹುದು. ಏಕೆಂದರೆ ಈಗ ರಾಜ್ಯದಲ್ಲಿ ಸರ್ಕಾರಿ  ವೈದ್ಯಕೀಯ ಕಾಲೇಜುಗಳಿಗಿಂತ ಖಾಸಗಿ ವೈದ್ಯಕೀಯ ಕಾಲೇಜುಗಳೇ ಗಣನೀಯ ಪ್ರಮಾಣದಲ್ಲಿವೆ ಮತ್ತು ಅವುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗಿಂತ ಹೊರ ರಾಜ್ಯಗಳ ವಿದ್ಯಾರ್ಥಿಗಳೇ ಜಾಸ್ತಿ!

ಅಲ್ಲದೆ ಆರಂಭದಲ್ಲಿ ‘ದಂಡ ತೆತ್ತು ಪಾರಾಗಲು ಇನ್ನು ಮುಂದೆ ಸಾಧ್ಯವಿಲ್ಲ’ ಎಂದಿದ್ದ ನಮ್ಮ ಆರೋಗ್ಯ ಸಚಿವರ ವಾದಕ್ಕೆ ವ್ಯತಿರಿಕ್ತವಾಗಿ ವೈದ್ಯ ಶಿಕ್ಷಣ ಸಚಿವರು, ‘ಗ್ರಾಮೀಣ ಸೇವೆ ಸಲ್ಲಿಸದೆ ಇದ್ದರೆ ರೂ15 ಲಕ್ಷದಿಂದ ರೂ30 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ’ ಎಂಬ ರಿಯಾಯಿತಿಯ ಕದ ತೆರೆದಿದ್ದಾರೆ. ಕೋಟಿಗಟ್ಟಲೆ ಕೊಟ್ಟು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಓದುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಲಕ್ಷಗಳ ದಂಡ ತೆರುವುದು ಕಷ್ಟವೆ?

ಇನ್ನು ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ವಿಷಯಚರ್ಚಿಸುವುದಾದರೆ ಸಮಸ್ಯೆಯೊಂದರ ಮೂಲ ಶೋಧಿಸಿ ಅದರ ಬುಡಕ್ಕೆ ಚಿಕಿತ್ಸೆ ನೀಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೇ ಹೊರತು, ಬಲವಂತದ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆಯನ್ನು ಹೇರುವುದು ತರವಲ್ಲ. ಇಂಥ ಕಾಯ್ದೆ ವೈದ್ಯರನ್ನು ಹೆಚ್ಚೆಂದರೆ ಒಂದು ವರ್ಷದ ಅವಧಿಗೆ ಮಾತ್ರ ಹಿಡಿದಿಡಬಹುದು ಅಷ್ಟೆ. ಆಮೇಲೆ? ಪ್ರತಿ ವರ್ಷ ಕೇವಲ ತರಬೇತಾರ್ಥಿ  ವೈದ್ಯರನ್ನೇ ಗ್ರಾಮಾಂತರ ಆಸ್ಪತ್ರೆಗಳು ಅವಲಂಬಿಸಿರಲು ಸಾಧ್ಯವೆ? ಸದಾ ತರಬೇತಾರ್ಥಿ ವೈದ್ಯರ ಪ್ರಯೋಗಗಳಿಗೆ ಒಳಗಾಗಲು ಗ್ರಾಮೀಣ ಜನರೇನು ಬಲಿಪಶುಗಳೇ? ಎಲ್ಲರಂತೆ ಅವರಿಗೂ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವ ಹಕ್ಕಿಲ್ಲವೆ? ಈ ಬಗ್ಗೆಯೂ ಸರ್ಕಾರ ಆದ್ಯ ಗಮನ ಹರಿಸಬೇಡವೆ?

ಅದೇನೇ ಇರಲಿ; ಸಂಬಳವೊಂದೇ ಸರ್ವಸ್ವವಲ್ಲ. ಯಾವುದೇ ನೌಕರಿಯಾಗಲಿ ಅದು ಮಾನಸಿಕ ನೆಮ್ಮದಿ ನೀಡುವಂತಿರಬೇಕು. ಬದಲಿಗೆ ಅದು  ಮಾನಸಿಕ ಹಿಂಸೆಗೆ ಮೂಲವಾಗುವಂತಿದ್ದರೆ ಸಂಬಳ ಎಷ್ಟೇ ಕೊಟ್ಟರೂ ಸೂಕ್ತ ಸಿಬ್ಬಂದಿ ಸಿಗುವುದಿಲ್ಲ. ಇದು ವೈದ್ಯರ ವಿಷಯದಲ್ಲೂ ಸತ್ಯವಾಗಿದೆ. ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಂಡಾಗ ಎದುರಾಗುವ ಕೆಲವು ಸಮಸ್ಯೆಗಳು ವ್ಯೆದ್ಯರನ್ನು ಗ್ರಾಮಾಂತರ ಸೇವೆಗೆ ವಿಮುಖರಾಗುವಂತೆ ಮಾಡುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

* ಸರ್ಕಾರಿ ಆಸ್ಪತ್ರೆಗಳ, ಅದರಲ್ಲೂ ಗ್ರಾಮಾಂತರ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಸದಾ ರೋಗಗ್ರಸ್ತವಾಗಿರುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಾಧಿಕಾರಿಗಳಿಗೆ ಇರಬಹುದಾದ ಸರ್ಕಾರಿ ವಸತಿಗೃಹಗಳು ಸುಣ್ಣ ಬಣ್ಣ ನಿರ್ವಹಣೆ ಕಾಣದೆ ಶಿಥಿಲಾವಸ್ಥೆ ತಲುಪಿರುತ್ತವೆ.

* ವೈದ್ಯರು ಎಷ್ಟೇ ಬೇಡಿಕೆ ಇಟ್ಟರೂ ಅಗತ್ಯ ಔಷಧಿ, ಪರಿಕರಗಳು ಸಕಾಲದಲ್ಲಿ ಅಗತ್ಯ ಪ್ರಮಾಣದಲ್ಲಿ ಆರೋಗ್ಯ ಇಲಾಖೆ ಉಗ್ರಾಣಗಳಿಂದ ಸರಬರಾಜಾಗುವುದಿಲ್ಲ. ಇದರಿಂದ ವ್ಯೆದ್ಯರು ವಿನಾಕಾರಣ ರೋಗಿಗಳ ಕೋಪಕ್ಕೆ, ಶಾಪಕ್ಕೆ, ಅನುಮಾನಕ್ಕೆ ಗುರಿಯಾಗಬೇಕಾಗುತ್ತದೆ.

* ಎಷ್ಟೋ ಬಾರಿ ರಾಜ್ಯದ ಕೇಂದ್ರ ಉಗ್ರಾಣದಿಂದ ಅವಧಿ ಮುಗಿಯುವ ಅಂಚಿನಲ್ಲಿರುವ, ಅವಧಿ ಮುಗಿದಿರುವ ಅಥವಾ ಅನಗತ್ಯ ‘ಸ್ಕೀಂ’ ಔಷಧಿಗಳನ್ನು ವೈದ್ಯರಿಗೆ ಹೊರಿಸಿ ಕಳುಹಿಸುತ್ತಾರೆ. ಈ ಅನವಶ್ಯಕ ಹೊರೆಯಿಂದ ಪಾರಾಗಬೇಕೆಂದರೆ ವೈದ್ಯರು ಉಗ್ರಾಣ ಸಿಬ್ಬಂದಿಗೆ ಲಂಚ ಕೊಡಲೇಬೇಕು. ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಸರ್ವೇ ಸಾಮಾನ್ಯ. ಇದರಿಂದ ವೈದ್ಯರೇ ಇತರ ಸಿಬ್ಬಂದಿಯ ಕೆಲಸಗಳನ್ನೂ ನಿರ್ವಹಿಸಬೇಕಾಗಿರುತ್ತದೆ.

* ಹೆಚ್ಚಿನ ತುರ್ತು ಚಿಕಿತ್ಸೆ ಅಗತ್ಯವೆನಿಸಿದಾಗ ರೋಗಿಗಳನ್ನು ಹತ್ತಿರದ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕರೆದೊಯ್ಯಲು ವಾಹನ ಸೌಲಭ್ಯ ಇರುವುದಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರಕದೆ ರೋಗಿ ಮೃತಪಟ್ಟರೆ ಇಡೀ ಗ್ರಾಮದ ಜನ ವೈದ್ಯರ ಮೇಲೆ ಬೀಳುತ್ತಾರೆ.  ಅಲ್ಲದೆ ಚುನಾಯಿತ ಜನಪ್ರತಿನಿಧಿಗಳ ಕೋಪಕ್ಕೂ ವೈದ್ಯರು ಗುರಿಯಾಗಬೇಕಾಗುತ್ತದೆ.

* ಇತ್ತೀಚೆಗೆ ಸರ್ಕಾರಿ ವೈದ್ಯರು ರೋಗಿಗಳ ಚಿಕಿತ್ಸೆ, ಆರೈಕೆಗಿಂತ ಹೆಚ್ಚಾಗಿ ಆಸ್ಪತ್ರೆಗಳ ಆಡಳಿತಾತ್ಮಕ ಕಾರ್ಯಗಳಿಗೇ ತಮ್ಮ ಮೇಲಧಿಕಾರಿಗಳಿಂದ ನಿಯೋಜನೆಗೊಳ್ಳುತ್ತಿದ್ದಾರೆ. ಇದೆಲ್ಲ ಹಳ್ಳಿಗರಿಗೆ ಅರ್ಥವಾಗದೆ ವೈದ್ಯರನ್ನೇ ದೂಷಿಸಿ, ‘ಡಾಕ್ಟರ್ ಸರಿಯಾಗಿ ಆಸ್ಪತ್ರೆಗೇ ಬರುವುದಿಲ್ಲ, ಸರಿಯಾಗಿ ಕೆಲಸ ಮಾಡುವುದಿಲ್ಲ’ ಎಂದೆಲ್ಲ ದೂರುತ್ತಾರೆ.

* ಇವೆಲ್ಲಕ್ಕಿಂತ ಹೆಚ್ಚಾಗಿ ಕಿರಿಕಿರಿ ಉಂಟುಮಾಡುವ ಸಂಗತಿ ಎಂದರೆ, ವೈದ್ಯರ ಕರ್ತವ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸದರು, ಮಂತ್ರಿಮಹೋದಯರವರೆಗೆ ಎಲ್ಲರೂ ಮೂಗು ತೂರಿಸುವುದು, ದರ್ಪ ತೋರುವುದು, ತಾವು ಹೇಳಿದಂತೆ ಕೇಳಬೇಕೆಂದು ರಾಜಕೀಯ ಒತ್ತಡ ಹೇರುವುದು, ಒಪ್ಪದಿದ್ದರೆ ಮಾನಸಿಕ ಹಿಂಸೆ ಇಲ್ಲವೆ ವರ್ಗಾವಣೆ ಶಿಕ್ಷೆ ನೀಡುವುದು. ಮಹಿಳಾ ವೈದ್ಯರಿಗಂತೂ ಸಮಸ್ಯೆ ಒಂದು ಪಟ್ಟು ಜಾಸ್ತಿಯೆ.

ಇಂಥ ಸಂಗತಿ ಅಧಿಕಾರಸ್ಥರಿಗೆ ಗೊತ್ತಿದ್ದರೂ  ಜಾಣ ಕುರುಡಿಗೆ ಶರಣಾಗಿರುತ್ತಾರೆ. ಇದಕ್ಕೂ ಮೀರಿ ಯಾರಾದರೂ ವೈದ್ಯರು ತಮ್ಮ ಸಮಸ್ಯೆಗಳನ್ನು ಅಧಿಕಾರಸ್ಥರಲ್ಲಿ ಹೇಳಿಕೊಳ್ಳುವ ಧೈರ್ಯ ತೋರಿದರೆ ‘ಈ ಸಣ್ಣಪುಟ್ಟ ವಿಷಯಕ್ಕೆಲ್ಲ ಏನೂ ಮಾಡೋಕಾಗಲ್ಲ, ಅಡ್ಜೆಸ್ಟ್ ಮಾಡ್ಕೊಳ್ರಿ...’ ಎಂಬ ಸಿದ್ಧ ಉತ್ತರ ಬರುತ್ತದೆ. ಅಂಥ ಸ್ಥಿತಿಯಲ್ಲಿ ಉತ್ಸಾಹಿ ಯುವ ವೈದ್ಯರೆದುರು ಎರಡೇ ಆಯ್ಕೆಗಳಿರಲು ಸಾಧ್ಯ: ಸ್ವಾಭಿಮಾನ ಬದಿಗಿಟ್ಟು ‘ಅಡ್ಜೆಸ್ಟ್ ಮಾಡಿಕೊಂಡು’ ಹೋಗಬೇಕು ಅಥವಾ  ಸರ್ಕಾರಿ ಸೇವೆಗೆ ಗುಡ್ ಬೈ ಹೇಳಿ ಖಾಸಗಿ ಕ್ಷೇತ್ರದತ್ತ ಮುಖ ಮಾಡಬೇಕು.

ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮೊದಲೇ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಿ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಈ ಮೂಲಕ, ವೈದ್ಯರು ಗ್ರಾಮೀಣ ಸೇವೆಗೆ ಸ್ವತಃ ಆಸಕ್ತಿ ತೋರುವಂತಹ ಮುಕ್ತ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT