ADVERTISEMENT

ಕೊಳ್ಳುಬಾಕತನ ಎಂಬ ಅಸಹಾಯಕತೆ

ಬಿಂಡಿಗನವಿಲೆ ಭಗವಾನ್
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ಮೊನ್ನೆ ಸಂಜೆ ಬೆಂಗಳೂರಿನ ಮನೆ ಬಳಿಯ ಬಜಾರಿನಲ್ಲಿ ಹುರುಳಿಕಾಯಿ ಬೆಲೆ ಕೇಳಿದಾಗ ಆ ವ್ಯಾಪಾರಿ ಕಣ್ಣರಳಿಸುತ್ತ ‘ಉಳಿದೆಡೆಗಿಂತ ಅರ್ಧ’ ಎಂದು ಹೇಳಿದ್ದ. ನಾನು ಕೊಡು ಎನ್ನುವ ಮುನ್ನವೇ ಆತ ಒಂದು ಕಿಲೊ ತೂಗಿ ಕವರಿನೊಳಗೆ ಸುರಿದು ಗಂಟು ಬಿಗಿದ. ಹಣ ನೀಡಿ, ಅಗ್ಗದ ಬೆಲೆಗೆ ಎರಡು–ಮೂರು ದಿನಕ್ಕೆ ಸಾಕಾಗುವಷ್ಟು ತರಕಾರಿ ಸಿಕ್ಕಿತು ಅಂತ ಬೀಗಿದ್ದೆ. ರಾತ್ರಿ ಊಟಕ್ಕೆ ಪಲ್ಯಕ್ಕೆ ಹೆಚ್ಚುವಾಗ ಅದರ ಗುಣಮಟ್ಟ ಅನಾವರಣವಾಯಿತು. ಅಂಚಿನಲ್ಲಿ ಕೊಳೆತ ಕಾಯಿಗಳು ಹಲವನ್ನು ಒಗೆಯಬೇಕಾಯಿತು. ಮರುದಿನ ಉಳಿದಿದ್ದ  ಮುಕ್ಕಾಲು ಭಾಗಕ್ಕೆ ಬೂಸ್ಟು ಹತ್ತಿತ್ತು! ಎಲ್ಲವನ್ನೂ ಕಸಕ್ಕೆ ಒಪ್ಪಿಸಲಾಯಿತು.

‘ಗ್ರಾಹಕನೇ ದೊರೆ’- ಅರ್ಥಶಾಸ್ತ್ರದ ಶ್ರವಣಾನಂದಕರ ಉಕ್ತಿ. ಆದರೆ ಬಹುತೇಕ ಸಂದರ್ಭಗಳಲ್ಲಿ ವ್ಯಾಪಾರಿ ಮನೋಭಾವವೇ ಮೆರೆಯುವುದನ್ನು ಕಾಣುತ್ತಿದ್ದೇವೆ. ‘ಗ್ರಾಹಕರ ಸಂತೃಪ್ತಿಯೇ ನಮ್ಮ ಸಂತೃಪ್ತಿ’ ಎನ್ನುವ ಧ್ಯೇಯ ನೇಪಥ್ಯಕ್ಕೆ ಸರಿದಿದೆ. ಗಿರಾಕಿಗಳನ್ನು ಸೆಳೆಯಲು ಏನೆಲ್ಲ ಸಾಧ್ಯವೊ ಅವೆಲ್ಲ ಪ್ರಯೋಗವಾಗುತ್ತವೆ. ಒಂದು ಐಟಂ ಕೊಂಡರೆ ಇನ್ನೊಂದು ಉಚಿತವೆಂದೊ, ಇಂತಿಷ್ಟು ಸಾವಿರ ಸರಕು ಖರೀದಿಸಿದರೆ ಮನೆಗೆ ಪುಕ್ಕಟೆ ಸರಬರಾಜೆಂದೊ ಪ್ರಚಾರವಾಗುತ್ತದೆ. ಎರಡು ಕಿಲೊ ಕಾಫಿಪುಡಿ ಕೊಂಡರೆ ಒಂದು ಕಿಲೊ ಸಕ್ಕರೆ ಉಚಿತವೆಂಬ ಆಕರ್ಷಣೆ. ವಾಸ್ತವವಾಗಿ ರಿಯಾಯಿತಿ, ಉಡುಗೊರೆ ಕೂಪನ್ ಮುಂತಾದ ಕೊಡುಗೆಗಳಿಗಿಂತ ಗ್ರಾಹಕರು ನಿರೀಕ್ಷಿಸುವುದು ವಸ್ತುಗಳ ಗುಣಮಟ್ಟ.

ಗ್ರಾಹಕರು ಎನ್ನುವುದರ ವ್ಯಾಖ್ಯೆ ಸ್ಪಷ್ಟವೇ ಇದೆ; ‘ಪದಾರ್ಥ ಅಥವಾ ಸೇವೆಯನ್ನು ಮರು ಮಾರಾಟ, ಉತ್ಪಾದನೆಗೆ ವಿನಿಯೋಗಿಸದೆ ನೇರ ತಮ್ಮ ಉಪಯೋಗಕ್ಕೆ ಇಲ್ಲವೆ ಒಡೆತನಕ್ಕೆ ಪಡೆದುಕೊಳ್ಳುವವರು’. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಲಾಭ ನಷ್ಟ ಮೀರಿ ತಾವು ಮಾರುವ ಸರಕು, ಒದಗಿಸುವ ಸೇವೆಯ ಸಾರ್ಥಕ್ಯವನ್ನು ಬಳಕೆದಾರರ ಸಮಾಧಾನ, ತೃಪ್ತಿಯಲ್ಲಿ ಕಾಣಬೇಕು. 

‘ಚಿಲ್ಲರೆ ಅಭಾವ’ ಗ್ರಾಹಕನನ್ನೇ  ಹೆಚ್ಚು ಕಂಗೆಡಿಸಿದೆ.  ಸಣ್ಣಪುಟ್ಟ ವಸ್ತು ಖರೀದಿಗೆ ಹೋದರೆ ‘ನಿಮ್ಮ ಬಳಿ ಚಿಲ್ಲರೆ ಇದೆಯೆ’ ಎಂಬ ಪ್ರಶ್ನೆ ಎದುರಾಗುತ್ತದೆ. ಚಿಲ್ಲರೆ ಕೊಡಲಾಗದಿದ್ದರೆ ಕೂಪನ್, ಚಾಕೊಲೇಟ್, ಶಾಂಪು, ಸೋಪು ಪಡೆಯಬೇಕು ಅಥವಾ ಕೊಟ್ಟ ನೋಟಿಗೆ ಸರಿಹೊಂದುವಂತೆ ಮಾಲು ಕೊಳ್ಳಬೇಕು. ವ್ಯಾಪಾರಿಯೊಂದಿಗೆ ರಾಜಿಯಾಗಬೇಕು. ಈ ಭರಾಟೆಯಲ್ಲಿ ತೂಕ, ಗುಣಮಟ್ಟ ಪರಿಶೀಲನೆಗೆ ವ್ಯವಧಾನವೆಲ್ಲಿ?

ಒಂದು ಪ್ರಸಂಗ ಇಲ್ಲಿ ಉಲ್ಲೇಖನೀಯ. ನಮ್ಮ ಬೀದಿಗೆ ಹಸು, ಕರು ಸಮೇತ ಬಂದು ಹಾಲು ಕರೆದು ವಿತರಿಸುತ್ತಿದ್ದವ ‘ನೋಡಿ, ನೀರು ಸ್ವಲ್ಪ ಕೂಡ ಬೆರೆಸದೆ ಅಪ್ಪಟ ಹಾಲು ಮಾರುತ್ತಿದ್ದೇನೆ’ ಎಂದು ಹೇಳುತ್ತಾ ತನ್ನ ಮಾತಿಗೆ ಬದ್ಧನಾಗಿದ್ದ. ಹಾಲು ಕರೆದಹಾಗೇ ಕೊಡುತ್ತಿದ್ದ. ಜನ ತಾಜಾ ಹಾಲಿಗೆ ಮುಗಿಬೀಳುತ್ತಿದ್ದರೆಂದು ಬೇರೆ ಹೇಳಬೇಕಿಲ್ಲ. ಅದೇಕೊ ನಮಗೆ ಆತನ ಶ್ರಮ ಕಂಡು ಮುಜುಗರವಾಯಿತು. ಒಂದು ನಿರ್ಧಾರಕ್ಕೆ ಬಂದೆವು. ‘ನೋಡಪ್ಪ, ನೀನು ನಿನ್ನ ಅಂತಃಸಾಕ್ಷಿಯಂತೆ ನಡೆದುಕೊಂಡರಾಯಿತು. ನಾಳೆಯಿಂದ ಮನೆಯಲ್ಲೇ ಹಾಲು ಕರೆದು ತಾ. ವೃಥಾ ಮೂಕ ಪ್ರಾಣಿಗಳಿಗೆ ಏಕೆ ಇಷ್ಟು ದೂರ ನಡೆಯುವ ಹಿಂಸೆ?’ ಎಂದೆವು. ಆತ ಮನೆಯಿಂದಲೇ ಈಗ ಹಾಲು ಕರೆದು ತರುತ್ತಾನೆ. ಅದು ಮೊದಲಿನಂತೆಯೇ ತಾಜಾ ಆಗಿರುತ್ತದೆ.

ವ್ಯಾಪಾರಿ, ಗ್ರಾಹಕರ ನಡುವೆ ವಿಶ್ವಾಸ ಅತಿ ಮುಖ್ಯವಾಗಿರುತ್ತದೆ. ಬಾಳೆಹಣ್ಣು ವ್ಯಾಪಾರಿ ಮೊದಲು ಕೊಳೆಯಲಾರಂಭಿಸಿರುವ ಹಣ್ಣುಗಳನ್ನೇ ಸಾಗಹಾಕಲು ಹವಣಿಸುತ್ತಾನೆ. ಅವು ಹೇಗೋ ಖಾಲಿಯಾಗುವ ವೇಳೆಗೆ ಮಿಕ್ಕವು ರವಷ್ಟು ತಾಜಾತನ ಕಳೆದುಕೊಂಡಿರುತ್ತವೆ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಉತ್ತಮವಾದವು ಬಳಕೆಗೆ ಸಿಗುವುದೇ ಇಲ್ಲ. ಹಳೆ  ಸರಕು ಶೀಘ್ರವಾಗಿ ಖಾಲಿಯಾಗಲಿ, ಲಾಭ ಸಿಗಲಿ ಎಂಬ ಧೋರಣೆ ಸ್ವತಃ ವ್ಯಾಪಾರಿಗೆ ಮಾರಕ. ಏಕೆಂದರೆ ಒಮ್ಮೆ ಬಳಕೆದಾರರು ಹೀಗೆ ಕಳಪೆ ಗುಣಮಟ್ಟದ್ದು ತಮಗೆ ಮಾರಾಟವಾಯಿತೆಂದು ಬವಣೆಪಟ್ಟರೆ ಅವರೆಂದೂ ಆ ವ್ಯಾಪಾರಿಯ ಬಳಿಯೂ ಸುಳಿಯರು. ಹಾಗಾಗಿ ವ್ಯಾಪಾರಿಗಳು ಮೊದ ಮೊದಲು ನಷ್ಟ ಅನುಭವಿಸಿದರೂ ಉತ್ತಮವಾದ ಸರಕನ್ನೇ ಬಳಕೆದಾರರಿಗೆ ಒದಗಿಸಬೇಕು.

ಹಿಂದೆ ಹೋಟೆಲ್‌ಗೆ ಹೋದರೆ ಗಿರಾಕಿ ಉಂಡು ನಂತರ ಹಣ ಪಾವತಿಸಬಹುದಿತ್ತು. ಮೇಜಿನ ಬಳಿಗೆ ಬಂದು ನೀರಿರಿಸಿ ‘ಏನು ಬೇಕು’ ಅಂತ ವಿಚಾರಿಸುವ ಶಿಷ್ಟಾಚಾರ. ಮನೆಯಂತೆಯೇ ಬಡಿಸುವ ಉಪಚಾರ. ಆದರೆ ಈಗ ಮೊದಲು ಹಣ ತೆತ್ತು ನಂತರ ಕೌಂಟರಿನಲ್ಲಿ ನಿಲ್ಲಬೇಕು. ಗ್ರಾಹಕರಲ್ಲಿ ಮಾಲೀಕ ನಂಬಿಕೆ ಕಳೆದುಕೊಂಡಿದ್ದು ಹೇಗೆ? ಈಗಲೂ ವಿರಳಕ್ಕಾದರೂ ತಿಂದು-ತೆರುವ ಹೋಟೆಲ್‌ಗಳು ಇವೆ.

ಭಾರತದ ಗ್ರಾಹಕ ಹಿತರಕ್ಷಣಾ ಕಾಯ್ದೆಯಂತೆ ಗ್ರಾಹಕರಿಗಿರುವ ಹಕ್ಕುಗಳೆಂದರೆ ಭದ್ರತೆ, ಆಯ್ಕೆ, ಮಾಹಿತಿ, ದೂರು ದಾಖಲಾತಿ, ಶಿಕ್ಷಣ, ಪರಿಹಾರ. ಟೂತ್ ಪೇಸ್ಟ್ ಟ್ಯೂಬಿನಲ್ಲಿ ಗಾಳಿಗೆ ಸ್ಥಾನಮಾನ ಸಂದಿರುತ್ತದೆ! ಹಣ್ಣುಗಳ ಮೇಳ, ಸಂತೆಗಳೇನೊ ಏರ್ಪಡುತ್ತವೆ. ಆದರೆ ವಿಶೇಷ ಮಟ್ಟದ ಹಣ್ಣುಗಳೇನೂ ಅಲ್ಲಿ ಲಭ್ಯವಿರವು. ಬೆಲೆಯೂ ಕೈಗೆಟುಕುವಂಥದ್ದಲ್ಲ. ಅಂದಚೆಂದದ ಪ್ಯಾಕಿಂಗ್ ನಮ್ಮನ್ನು ಮೋಸಗೊಳಿಸುವುದೂ ಉಂಟು. ‘ತೀರುವಳಿ ಮಾರಾಟ’, ‘ಹಳೆಯ ಸರಕನ್ನು ಹೊಸದಕ್ಕೆ ವಿನಿಮಯಿಸಿಕೊಳ್ಳಿ’, ‘ಬೆಲೆ ಕೇವಲ ₹ 499, 599, 2999’... ಮುಂತಾದ ಮೋಡಿ. ಮಾಲ್‌ಗಳಿಗೆ ಒಂದೆರಡು ವಸ್ತುಗಳ ಖರೀದಿಗೆಂದು ಹೋದರೆ ಕೇಳದಿದ್ದರೂ ಬುಟ್ಟಿ, ಕೈಗಾಡಿ ನೀಡುವುದೂ ಒಂದು ಸೆಳೆತವೆ!

ಕುಕ್ಕರ್, ಮಿಕ್ಸಿ, ಟಿ.ವಿ., ಲ್ಯಾಪ್‌ಟಾಪ್‌, ದ್ವಿಚಕ್ರ ವಾಹನ ವಗೈರೆ ಹೊಸದನ್ನು ಕೊಳ್ಳಬೇಕೆಂದರೆ ಹಳೆಯದನ್ನು ತೀರ ಕಡಿಮೆ ಬೆಲೆಗೆ ಒಪ್ಪಿಸಬೇಕಾಗುತ್ತದೆ. ಸಾವಯವ ಆಹಾರ ವಸ್ತುಗಳ ಮಾರಾಟವೆನ್ನುವಲ್ಲಿ ನಮಗೆ  ಸಾವಯವವೊ ಅಲ್ಲವೊ ತಿಳಿಯುವುದಾದರೂ ಹೇಗೆ?  ಈ ಕುರಿತು ಗ್ರಾಹಕರಿಗೆ ಸೂಕ್ತ ತಿಳಿವಳಿಕೆ ಬೇಕಲ್ಲವೆ?

ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆಯ ಶನಿವಾರಬ್ಯಾಂಕುಗಳಿಗೆ ರಜೆ. ಉಳಿದ ಶನಿವಾರಗಳಂದು ಅವು ಪೂರ್ಣಾವಧಿ ಕೆಲಸ ನಿರ್ವಹಿಸುವುವಂತೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ತ್ವರಿತವಾಗಿ ಬ್ಯಾಂಕಿನಲ್ಲಿ ವಹಿವಾಟು ನಡೆಸಿ ಹೊರ ಊರಿಗೆ ಪಯಣಿಸುವ ಗ್ರಾಹಕರು ಹಲವರಿರುತ್ತಾರೆ. ನೂಕುನುಗ್ಗಲು ಬೆಳಿಗ್ಗೆಯೇ ಹೆಚ್ಚು. ಹಾಗಾಗಿ ಶನಿವಾರ ಮಧ್ಯಾಹ್ನದ ನಂತರವೂ ಬ್ಯಾಂಕುಗಳು ತೆರೆದಿದ್ದರೆ ಅದರಿಂದ ಹೆಚ್ಚು ಅನುಕೂಲವೇನೂ ಆಗದು. ತಿಂಗಳಿಗೆರಡು ಶನಿವಾರ ಪೂರ್ತಿ ರಜೆ ಎನ್ನುವುದು ಗ್ರಾಹಕ ಸ್ನೇಹಿ ನಿರ್ಧಾರವಲ್ಲ. ಇದನ್ನು ಪರಿಷ್ಕರಿಸುವುದು ಅಗತ್ಯ.

ಗ್ರಾಹಕರೂ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಹೆಚ್ಚು ಕೊಳ್ಳಲು ಸಾಮರ್ಥ್ಯವಿದ್ದೂ ಕಡಿಮೆ ಕೊಳ್ಳುವುದು ಸವಾಲೆಂದು  ಅರ್ಥಶಾಸ್ತ್ರ ವಿಶ್ಲೇಷಿಸುತ್ತದೆ. ಅಗತ್ಯವಿಲ್ಲದ ವಸ್ತು ಕೊಂಡರೆ ತನ್ನ ಕಿಸೆಯಿಂದ ತಾನೇ ಹಣ ಕಳವು ಮಾಡಿದಂತೆ ಎಂಬ ನುಡಿಯಿದೆ. ಗ್ಯಾಸ್ ಸಿಲಿಂಡರ್ ವಿಷಯದಲ್ಲಿ ತನ್ನ ಹೊಣೆಗಾರಿಕೆಯನ್ನು ಶ್ರೀಸಾಮಾನ್ಯ ಅಭೂತಪೂರ್ವವಾಗಿ ಸಾಬೀತುಪಡಿಸಿದ್ದಾನೆ. ತನ್ನ ವರಮಾನ ಹೆಚ್ಚಿದೆ, ಸಬ್ಸಿಡಿ ಒಲ್ಲೆ, ಅರ್ಹರಿಗೆ ಸಿಗಲಿ ಅಂತ ಪ್ರಾಮಾಣಿಕತೆ ಅಪ್ಪಿದ್ದಾನೆ. ಗ್ರಾಹಕರಲ್ಲಿ ಕೊಳ್ಳುಬಾಕತನ ಮೆರೆದಷ್ಟೂ ಅಸಹಾಯಕತೆ ಕಾಡುತ್ತದೆ. ವ್ಯಾಪಾರ ಬಳಕೆದಾರರನ್ನೇ ಬಳಸಿಕೊಳ್ಳುವಷ್ಟು ವಿಜೃಂಭಿಸುತ್ತದೆ. ಅಷ್ಟಕ್ಕೂ ವ್ಯಾಪಾರಿ, ಬಳಕೆದಾರ ಪರಸ್ಪರ ಎದುರಾಳಿಗಳಲ್ಲ. ವ್ಯಾಪಾರಿಗಳೂ ಬಳಕೆದಾರರೆ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.