ADVERTISEMENT

ಮೀಸಲಾತಿ ಮತ್ತು ಶೋಷಿತರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST

–ಡಾ. ಎಚ್.ಡಿ. ಉಮಾಶಂಕರ್, ಬಿ. ಶ್ರೀಪಾದ್  ಭಟ್

‘ಬಡ್ತಿ ಮೀಸಲಾತಿ: ತೀರ್ಪಿಗೆ ತಲೆಬಾಗಿ’ ಎನ್ನುವ ಶೀರ್ಷಿಕೆ ಹೊತ್ತ ಮಹೇಶ ಸಿ.ಎಚ್. ಅವರ ಲೇಖನಕ್ಕೆ  (ಪ್ರ.ವಾ., ಸಂಗತ, ಫೆ. 17) ಪ್ರತಿಕ್ರಿಯೆ. ಇಡೀ ಲೇಖನದ ತಿರುಳು, ಮೀಸಲಾತಿಯನ್ನು ಅರೆಬೆಂದ ಮನಸ್ಸಿನಿಂದ ಅರ್ಥಮಾಡಿಕೊಂಡಂತಿದೆ. 

‘ಶತಮಾನಗಳ ಕಾಲ ಕುಲೀನರಿಂದ ಶೋಷಣೆಗೊಳಗಾಗಿದ್ದಾರೆಂಬ ಭಾವನೆಯಿಂದ ದಲಿತರು, ಶೋಷಿತರನ್ನು ಸಮಾಜದ ಮೇಲ್‌ಸ್ತರಕ್ಕೆ ಕೊಂಡೊಯ್ಯುವ ಪ್ರಯತ್ನದ ಭಾಗವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ’ ಎಂಬುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಮಾತುಗಳನ್ನು ಪ್ರಜ್ಞಾವಂತರು ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೂ ಸಾಕು ಇದರ ಹಿಂದಿರುವ ದಲಿತ ಮತ್ತು ಶೋಷಿತರ ವಿರೋಧಿ ನೆಲೆಗಳು ಧುತ್ತನೆ ಎದುರು ನಿಲ್ಲುತ್ತವೆ.

‘ಅರ್ಹತೆ’ ಮತ್ತು ‘ಸಾಮಾಜಿಕ ನ್ಯಾಯ’ ಇವೆರಡನ್ನೂ ಏಕರೂಪಿಯಾಗಿ, ಹೊರಗಣವಾಗಿ ನೋಡುವ ಜೀವವಿರೋಧಿಯಾದ ದೋಷಪೂರಿತ ದೃಷ್ಟಿಕೋನವನ್ನು ಕಳಚಿಕೊಂಡು ಇವೆರಡಕ್ಕೂ ಬಹುರೂಪಿ ಆಯಾಮಗಳಿವೆ ಎನ್ನುವುದನ್ನು ಮನಗಾಣಬೇಕಿದೆ. ಒಂದನ್ನು ಬೆಂಬತ್ತಿ ಹೋಗುವುದರ ಮೂಲಕ ಮತ್ತೊಂದನ್ನು ತ್ಯಜಿಸಬೇಕು ಎನ್ನುವ ವಾದವನ್ನು ಅಸಮಾನತೆಯ ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಬುದ್ಧನಿಂದ ಮೊದಲುಗೊಂಡು ಅಂಬೇಡ್ಕರ್‌ ಅವರವರೆಗೆ ನಡೆದುಬಂದ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧದ ಸಾಮಾಜಿಕ ಕ್ರಾಂತಿಯನ್ನು ಪ್ರತಿ ಹಂತದಲ್ಲಿ ತೀವ್ರವಾಗಿ ವಿರೋಧಿಸಿದ ಪುರೋಹಿತಶಾಹಿಗಳು ಅಸಮಾನತೆಯ ಜಾತಿ ಪದ್ಧತಿಯನ್ನು ಇಂದಿಗೂ ಬೆಂಬಲಿಸುತ್ತಿದ್ದರೆ, ಹಿಂದೂ ಧರ್ಮದ ಸುಧಾರಣಾವಾದಿಗಳು ತಳ ಸಮುದಾಯಗಳ ಸಾಮಾಜಿಕ-ಶೈಕ್ಷಣಿಕ ಸಬಲೀಕರಣಕ್ಕಾಗಿ ಮೀಸಲಾತಿ ಎನ್ನುವ ನ್ಯಾಯದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿರುಚಿ  ‘ಹರಿಜನ ಕಲ್ಯಾಣ’ ಎನ್ನುವ ಮರೆಮೋಸದ ಸಿದ್ಧಾಂತದ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ. 

ಇಂದು ತಳಸಮುದಾಯಗಳು ಮೀಸಲಾತಿಯ ಮೂಲಕ ಸಾಮಾಜಿಕವಾಗಿ ಚಲನಶೀಲತೆ ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿ ಇದೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲಕ ಶತಮಾನಗಳ ಕಾಲ ಎಲ್ಲಾ ಬಗೆಯ ಸವಲತ್ತುಗಳನ್ನು, ಅಧಿಕಾರವನ್ನು ಅನುಭವಿಸಿದ ಮೇಲ್ಜಾತಿಗಳು ‘ಜಾತಿ ಎಲ್ಲಿದೆ?’ ಎನ್ನುವ ಶಿರೋನಾಮೆ ಅಡಿಯಲ್ಲಿ ವಿತಂಡವಾದ ಹೂಡುತ್ತಿರುವುದು ನಿಜಕ್ಕೂ ಖಂಡನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ–ಧರ್ಮದವರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತದಲ್ಲಿ ಪ್ರಾತಿನಿಧ್ಯ ಹೊಂದಿರಬೇಕು ಎನ್ನುವುದು ಸಾಮಾಜಿಕ ನ್ಯಾಯದ ಮೂಲ ಸಿದ್ಧಾಂತ. ಈ ಮೀಸಲಾತಿಯ ಅಡಿಯಲ್ಲಿ ವ್ಯಕ್ತಿಯನ್ನು ಆದ್ಯತೆಯಾಗಿ ಪರಿಗಣಿಸುವುದಿಲ್ಲ. ಸಮುದಾಯವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ.

ತಳ ಸಮುದಾಯದ ವ್ಯಕ್ತಿಯೊಬ್ಬ ಆರ್ಥಿಕವಾಗಿ ಮೇಲಿನ ಸ್ತರಕ್ಕೇರಿದರೆ ಅದು ಸಾಮಾಜಿಕ ನ್ಯಾಯ ಜಾರಿಗೊಂಡಿದೆ ಎಂದು ಅನಿಸಿಕೊಳ್ಳುವುದಿಲ್ಲ. ಇಡೀ ಶೋಷಿತ ಸಮುದಾಯವೇ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಆಗಲೇ ಸಾಮಾಜಿಕ ನ್ಯಾಯದ ಅನುಷ್ಠಾನ. ಇದು ಇಂಡಿಯಾದಲ್ಲಿ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಸಾಧ್ಯವಾಗಿಲ್ಲ. ಈ ದೇಶದಲ್ಲಿ ಜಾತಿ ಮತ್ತು ಅಸಮಾನತೆ ಎಲ್ಲಿಯವರೆಗೆ ಮುಂದುವರೆಯುತ್ತದೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು. 

ಇದನ್ನು ಮೀಸಲಾತಿ ವಿರೋಧಿಗಳು ಅರಿತುಕೊಳ್ಳಬೇಕು ಮೀಸಲಾತಿಯನ್ನು ವಿರೋಧಿಸಲಿಕ್ಕೆ ಯಾರು ಮೀಸಲಾತಿಯನ್ನು ಜಾರಿಗೆ ತಂದರೋ ಅವರನ್ನೇ ಅಸ್ತ್ರವಾಗಿ ಬಳಸಿರುವುದು ಈ ಲೇಖನದ ಮತ್ತೊಂದು ಹಿರಿಮೆ! ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಮೀಸಲಾತಿಯನ್ನು ಸಂವಿಧಾನ ಜಾರಿಯಾದ ಹತ್ತು ವರ್ಷಗಳಲ್ಲಿ ಕೊನೆಗೊಳಿಸಬೇಕು’ ಎಂದು ಎಲ್ಲಿಯೂ ದಾಖಲಿಸಿಲ್ಲ. ಅದೂ ಮಾತಿಗೆಂಬಂತೆ ಬಂದ ರಾಜಕೀಯದಲ್ಲಿನ ಮೀಸಲಾತಿಯ ಮಾತಿನ ಜಾಡು ಹಿಡಿದು ಇಡೀ ಮೀಸಲಾತಿಗೇ ಕುತ್ತು ತರಲು ಹೊರಟಿರುವುದು ದಲಿತರ ವಿರೋಧಿ ನೀತಿಯಲ್ಲದೆ ಮತ್ತೇನೂ ಅಲ್ಲ.

ದೇಶದ ಭವಿಷ್ಯ, ಅಭಿವೃದ್ಧಿಗೆ ಮೀಸಲಾತಿ ತೊಡಕಾಗಿದೆ ಎನ್ನುವ ಇವರು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಮೀಸಲಾತಿಯ ಪ್ರಮಾಣ ಎಷ್ಟು ಜಾರಿಯಾಗಿದೆ? ಅದರಲ್ಲಿ ಶೋಷಿತ ಸಮುದಾಯದವರ ಪಾಲೆಷ್ಟು ಅಥವಾ ಮೀಸಲಾತಿ ಇಲ್ಲವೆನ್ನುವ ಶೋಷಕ ಸಮುದಾಯಗಳು ಹೊಂದಿರುವ ಪ್ರಾತಿನಿಧ್ಯದ ಪಾಲೆಷ್ಟು  ಎಂಬುದನ್ನು ಮೊದಲು ತಿಳಿದುಕೊಳ್ಳಲಿ.

ಈ ದೇಶದಲ್ಲಿ ‘ಎ’ ದರ್ಜೆ ಹುದ್ದೆಗಳಲ್ಲಿ ಇಂದಿಗೂ ಮೇಲ್ಜಾತಿಗಳ ಪ್ರಾಬಲ್ಯ ಶೇಕಡ 76.8 ರಷ್ಟಿದೆ. ಹಾಗೆಯೇ ‘ಬಿ’ ದರ್ಜೆಯಲ್ಲಿ ಶೇ 71.8ರಷ್ಟು, ‘ಸಿ’ ದರ್ಜೆಯಲ್ಲಿ ಶೇ 60, ಹಾಗೂ ‘ಡಿ’ ದರ್ಜೆಯಲ್ಲಿ ಶೇ 53.2 ರಷ್ಟು ಹುದ್ದೆಗಳನ್ನು ಮೇಲ್ಜಾತಿಗಳು ಪಡೆದುಕೊಂಡಿವೆ ಎನ್ನುವುದನ್ನು ಈ ಮೀಸಲಾತಿ ವಿರೋಧಿಗಳು ಬೇಕೆಂತಲೇ ಮರೆಯುವುದು ಜಾಣಕುರುಡು ಎಂದೇ ಕರೆಯಬೇಕಾಗುತ್ತದೆ.

ಸಾಮಾನ್ಯ ಕೆಟಗರಿ ಅಡಿಯಲ್ಲಿ ಶೇ 50ರಷ್ಟು ಪ್ರಮಾಣದಲ್ಲಿ ಅವಕಾಶ ಹೊಂದಿರುವ ಮೇಲ್ಜಾತಿಗಳಿಗೆ ಅದು ಮೀಸಲಾತಿ ಅಂತ ಅನ್ನಿಸದೇ ಹೋಗುವುದು ಆತ್ಮವಂಚನೆಯಲ್ಲವೇ? ಈ ದೇಶದಲ್ಲಿ ಶೇ 75ರಷ್ಟು ಹುದ್ದೆಗಳನ್ನು ಪಡೆದುಕೊಂಡು ದೇಶದ ನೀತಿ ನಿರೂಪಕ ಸ್ಥಾನದಲ್ಲಿ ಮೇಲ್ಜಾತಿಗಳೇ ಇಂದಿಗೂ ಇವೆ. ಆದರೂ ಈ ದೇಶ ಯಾಕೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 187ನೇ ಸ್ಥಾನದಲ್ಲಿದೆ? ಇದನ್ನು ಮೊದಲು ಕೇಳಿಕೊಳ್ಳಬೇಕಿದೆ.

ಸಾಮಾಜಿಕ ನ್ಯಾಯ ಎಂಬುದು ಪ್ರತಿಭೆ ಕೇಂದ್ರೀಕೃತ ಪ್ರಶ್ನೆಯಲ್ಲ. ಸಮಾಜದ ಸಮಾನತೆಯ ಅಸ್ತಿತ್ವದ ಪ್ರಶ್ನೆ. ಯಾರನ್ನೂ ಈ ದೇಶದಲ್ಲಿ ದಡ್ಡರೆಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ದಡ್ಡರಾದರೆ ಅವರಿಗೆ ತರಬೇತಿ ನೀಡಿಯಾದರೂ ಎಲ್ಲ ಕ್ಷೇತ್ರಗಳ ಒಳಗೆ ಸಕಲರೂ ಇರುವಂತೆ ನೋಡಿಕೊಳ್ಳಬೇಕು.

ADVERTISEMENT

ಆಗಮಾತ್ರ ಈ ದೇಶದ ಮಾವನ ಸಂಪನ್ಮೂಲ ಸರಿಯಾಗಿ ಬಳಕೆಗೊಂಡು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಕಾಣಲು ಸಾಧ್ಯ. ಇದು ಬಡ್ತಿ ಮೀಸಲಾತಿಗೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.