ADVERTISEMENT

ವ್ಯಕ್ತಿತ್ವ ರೂಪಿಸುವುದು ಶಿಕ್ಷಣ ಮಾತ್ರವೇ?

ಗೋವಿಂದ್ ಬೆಳಗಾಂವಕರ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST

ಎಲ್ಲೋ ಕೆಲವು ಪಿಎಚ್‌.ಡಿ. ಪದವೀಧರರು ಅಟೆಂಡರ್‍ ಹುದ್ದೆಗೆ ಅರ್ಜಿ ಹಾಕಿದರೆಂದು ಅಥವಾ ಇನ್ನೆಲ್ಲೋ ಕೆಲವು ಪದವೀಧರರು ಭಿಕ್ಷುಕರಾದರೆಂದು (ಪ್ರ.ವಾ., ಜ. 13) ಬಹುತೇಕರು ಇಡೀ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲಎಂದು ತೀರ್ಮಾನಿಸಿಬಿಡುತ್ತಾರೆ. ಇದು ಸರಿಯೇ? ವ್ಯಕ್ತಿಯನ್ನು ರೂಪಿಸುವುದು ಶಿಕ್ಷಣ ಮಾತ್ರವೇ? ಸಮಾಜವೇ? ನಮ್ಮ ಪರಿಸರವೇ? ಪಾಲಕರೇ? ಅಥವಾ ಇವೆಲ್ಲವುಗಳ ಸಂಕ್ರಮಣವೇ?

ಯು.ಆರ್‍.ಅನಂತಮೂರ್ತಿ, ಗಿರೀಶ ಕಾರ್ನಾಡ, ಕುಂ.ವೀರಭದ್ರಪ್ಪ ಅವರ ಆತ್ಮಕಥೆಗಳಾದ ‘ಸುರಗಿ’, ‘ಆಡಾಡ್ತ ಆಯುಷ್ಯ’, ‘ಗಾಂಧಿಕ್ಲಾಸ್’ ಪುಸ್ತಕಗಳನ್ನು  ಓದಿದರೆ, ಇವರೆಲ್ಲರೂ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದು ಬರೀ ಶಿಕ್ಷಣದಿಂದ ಅಲ್ಲವೇ ಅಲ್ಲ ಎಂದೇ ಅನಿಸುತ್ತದೆ. ಕಲಿಕೆಯ ಹೊರತಾದ ಸ್ವಯಂ ಓದಿನ ಜ್ಞಾನ ಸಂಪಾದನೆ, ಜ್ಞಾನ ಸಂಪನ್ನರೊಡನೆ ಒಡನಾಟ ಅವರ ದೊಡ್ಡ ಆಸ್ತಿ.

ನಮ್ಮಲ್ಲಿ ಹಲವರ ಮೇಲೆ ಶಿಕ್ಷಣ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಬಹುದು. ಒಂದು ಉದ್ಯೋಗ ಪಡೆದುಕೊಳ್ಳಲು ಪದವಿ ಕೆಲವರಿಗೆ ಸಹಾಯ ಮಾಡಬಹುದು. ಆದರೆ ಪದವಿಯೊಂದರ ಆಧಾರದ ಮೇಲೆಯೇ ಗಳಿಸಿಕೊಳ್ಳುವ ನೌಕರಿಯಲ್ಲಿ ನಾವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಕಾಲಕ್ಕೆ ತಕ್ಕಂತೆ ಸೂಕ್ತ ಕೌಶಲಗಳನ್ನು ಗಳಿಸಿಕೊಳ್ಳದಿದ್ದರೆ ಬೆಳವಣಿಗೆ ಕಷ್ಟ.

ನಮ್ಮ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ (not employable) ಎಂದು ಉದ್ಯೋಗದಾತರು ದೂರುತ್ತಿರುತ್ತಾರೆ. ಇಂದಿನ ಅನೇಕ ಯುವಕರಿಗೆ ಶಿಕ್ಷಣ ಸಂಸ್ಥೆಗಳ ಮಿತಿಯ ಅರಿವಿದೆ. ಬರೀ ಪದವಿ ಕೊಡುವ ಸಂಸ್ಥೆಗಳನ್ನು ಅವರು ನೆಚ್ಚಿಕೊಳ್ಳುವುದಿಲ್ಲ. ಪಟ್ಟಣಗಳಲ್ಲಿ ಸೂಕ್ತ ಕೌಶಲಗಳ ಅಭಿವೃದ್ಧಿಗೆ, ಕೌಶಲಗಳನ್ನು ಪಡೆದಿರುವ ಬಗ್ಗೆ ಪ್ರಮಾಣಪತ್ರ ಪಡೆಯಲು ಕಾತರರಾಗಿರುತ್ತಾರೆ. ಅಂತಲೇ ನಮ್ಮ ಸುತ್ತಮುತ್ತ ನೂರಾರು ಬಗೆಯ ಕೌಶಲ ಅಭಿವೃದ್ಧಿ ಕೇಂದ್ರಗಳು ತಲೆ ಎತ್ತಿವೆ. ವಿದ್ಯಾರ್ಥಿಗಳು, ಪಾಲಕರು ಅವುಗಳತ್ತ ನುಗ್ಗುತ್ತಿದ್ದಾರೆ. ಹಳ್ಳಿಗಳು, ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳೂ ಈ ವಿಷಯದಲ್ಲಿ ಹೆಚ್ಚು ತೆರೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಹಾಗಾಗಿ ಪಿಎಚ್‌.ಡಿ. ಪದವೀಧರರು ಅಟೆಂಡರ್‍ ಹುದ್ದೆಗೆ ಅರ್ಜಿ ಹಾಕಿದರೆ ಅಥವಾ ಇನ್ನೆಲ್ಲೋ ಕೆಲವು ಪದವೀಧರರು ಭಿಕ್ಷುಕರಾದರೆ ಈ ಕೆಲವು ಪಿಎಚ್‌.ಡಿ. ಮಾಡಿದವರನ್ನು ಮತ್ತು ಆ ಕೆಲವು ಪದವೀಧರರನ್ನೇ ಹೆಚ್ಚು ಹೊಣೆಗಾರರೆಂದು ದೂಷಿಸಬೇಕಾಗುತ್ತದೆ.

ಪಿಎಚ್‌.ಡಿ. ಪದವಿ ಪಡೆದಿರುವ ಇಂತಹ ವ್ಯಕ್ತಿಗಳ ಬಗ್ಗೆ ಪ್ರಶ್ನೆಗಳನ್ನೆತ್ತಬೇಕಾಗಿದೆ. ಸಂಶೋಧನೆ ಎಂಬ ಹೆಸರಿನಲ್ಲಿ ಹಲವಾರು ವರ್ಷಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದು, ಆ ಅವಧಿಯಲ್ಲಿ ಹೇಗೋ ಯುಜಿಸಿಯಿಂದ ಅನುದಾನ ಪಡೆದು, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸದೇ, ವಿಶ್ವವಿದ್ಯಾಲಯಗಳ ಕ್ಯಾಂಟೀನಿನ ಸುತ್ತ ತಮ್ಮ ಅರ್ಧ ಜೀವಮಾನವೆಲ್ಲ ಕಳೆಯುವವರಿದ್ದಾರೆ. ಯಾವುದೇ ನೈಜ ಸಂಶೋಧನೆ ಮಾಡದೇ ‘ಡಾ. ಸೋ ಅಂಡ್ ಸೋ’ ಆಗಿಬಿಡುತ್ತಾರೆ. ಅವರು ಜೀವನದಲ್ಲಿ ಸರಿಯಾದ ದಡ ಮುಟ್ಟದೇ ಅಟೆಂಡರ್‍ ಕೆಲಸಕ್ಕೆ ಅರ್ಜಿ ಹಾಕಿದರೆ, ಭಿಕ್ಷುಕರಾದರೆ ಅದಕ್ಕೆ ಸಂಪೂರ್ಣವಾಗಿ ಶಿಕ್ಷಣ ವ್ಯವಸ್ಥೆಯನ್ನೇ ಹೊಣೆ ಮಾಡಲಾಗದು.

ಯಾರೇ ಆಗಲಿ ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ಗುರಿ ಏನೆಂದು ಯೋಚಿಸಿ ಸ್ಪಷ್ಟ ದಾರಿ ಹಾಕಿಕೊಂಡು, ಅದರ ಬಗ್ಗೆ ಉತ್ಸುಕತೆ, ಬದ್ಧತೆ ಮತ್ತು ಭಾವೋದ್ದೀಪ್ತ (passionate) ಆಗಿರದಿದ್ದರೆ ಗೆಲ್ಲುವುದು ಕಷ್ಟ. ಸ್ವಲ್ಪವಾದರೂ ಶ್ರಮವಿಲ್ಲದಿದ್ದರೆ, ಆತ್ಮವಿಶ್ವಾಸ ರೂಢಿಸಿಕೊಳ್ಳದಿದ್ದರೆ ಏನೂ ಸಾಧಿಸಲಾಗದು.

ಶಿಕ್ಷಣದ ಬಗ್ಗೆ ಮಾತನಾಡುವಾಗ ನಾವು ಗಮನಿಸಬೇಕಾದ ಒಂದು ಅಂಶವೆಂದರೆ, ನಮ್ಮ ಬಹುತೇಕ ಶಿಕ್ಷಕರು ನಮಗೆಲ್ಲ ಉತ್ತಮ ನಾಗರಿಕರಾಗಬೇಕು, ದೊಡ್ಡ ಮನುಷ್ಯರಾಗಬೇಕು ಎಂದು ಆಗಾಗ ಹೇಳಿ ಹುರಿದುಂಬಿಸಿ ಆಶೀರ್ವದಿಸಿದವರೆ. ಕನಿಷ್ಠ ಪಕ್ಷ ಅವರ್‍ಯಾರೂ ನೀವು ಅಟೆಂಡರ್‍ ಆಗಿ ಎಂದೋ, ಭಿಕ್ಷುಕರಾಗಿ ಎಂದೋ ಹರಸಿಲ್ಲ, ಆಶಿಸಿಲ್ಲ. ಸಾಧಿಸಿ ತೋರಿಸಿ ಎಂದು ಸಾಧಕರ ಕತೆಗಳನ್ನು ಹೇಳಿದವರೇ ಹೆಚ್ಚು. ಅವರು ಹೇಳದಿದ್ದರೂ ನಮಗಿದ್ದ ಪಾಠಗಳು ನಮ್ಮನ್ನು ಪ್ರೇರೇಪಿಸುವಂತೆ ಇರುತ್ತಿದ್ದವು. ಸತ್ಯ ಹರಿಶ್ಚಂದ್ರ, ಗಾಂಧೀಜಿ ಕತೆಗಳು ನಮಗೆ ಸತ್ಯ ಹೇಳುವುದರ ಬಗ್ಗೆ, ಸಚ್ಚಾರಿತ್ರ್ಯದ ಬಗ್ಗೆ ಹೇಳಿಕೊಡಲಿಲ್ಲವೇ? ಧೀರಶೂರರು, ವಿಜ್ಞಾನಿಗಳ ಬಗ್ಗೆ ಇದ್ದ ಪಾಠಗಳು ಅವರು ಪಟ್ಟ ಪರಿಶ್ರಮದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳಲಿಲ್ಲವೇ? ಅಂತಹ ಪಾಠಗಳನ್ನು ಆದರ್ಶವಾಗಿ ಇಟ್ಟುಕೊಂಡು ಜೀವನದ ಬಗ್ಗೆ ನಾವು ಆಲೋಚಿಸದಿದ್ದರೆ, ಬರೀ ಶಿಕ್ಷಣವನ್ನೇ ಹೊಣೆ ಮಾಡಬಹುದೇ? ಉಚ್ಚ ಶಿಕ್ಷಣವು ಪಾಠಕ್ಕಿಂತ ಹೆಚ್ಚಾಗಿ ಓದು ಒಡನಾಟಗಳಲ್ಲೇ ಸಂಭವಿಸುವಂತಹದ್ದಲ್ಲವೇ?

ಸಾಧಕರೆಲ್ಲರೂ ಹೇಳುವ ಮಾತೆಂದರೆ, ತಾವು ಸದಾ ವಿದ್ಯಾರ್ಥಿಯಾಗಿದ್ದೇವೆ ಎಂಬುದು. ಅಂದರೆ ಜೀವನದಲ್ಲಿ ಸದಾ ಕಲಿಯುತ್ತಲೇ ಇರುವುದು ಎಲ್ಲರೂ ರೂಢಿಸಿಕೊಳ್ಳಲೇಬೇಕಾದ ಮುಖ್ಯ ಕೌಶಲವೆಂದೇ ಹೇಳಬೇಕಾಗುತ್ತದೆ. ಕಲಿಯುವುದನ್ನು ನಿಲ್ಲಿಸಿದಾಗ ನಮ್ಮ ಅವನತಿ ಆರಂಭವಾಗುತ್ತದೆ ಎಂಬುದು ಆಧುನಿಕ ಜೀವನಕ್ರಮದ ವೇದವಾಕ್ಯ.

ನಾವು ಕಲಿಯುವುದು ಕೇವಲ ಶಿಕ್ಷಕರಿಂದ ಅಲ್ಲವಲ್ಲ. ಗೆಳೆಯ ಗೆಳತಿಯರಿಂದ, ಬಂಧು ಬಳಗದವರಿಂದ, ಮಕ್ಕಳಿಂದ ಅಥವಾ ನಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಂದಲೂ ಕಲಿಯುವುದು ಬೇಕಾದಷ್ಟಿರುತ್ತದೆ. ನಮ್ಮ ಗುರಿ ಏನು ಎಂಬುದರ ಆಧಾರದ ಮೇಲೆ ನಾವು ನಮ್ಮ ಮಾರ್ಗದರ್ಶಕರನ್ನು ಆಯ್ದುಕೊಂಡು ಅವರ ಸಹಾಯ ಪಡೆಯುತ್ತಿರಬೇಕಾಗುತ್ತದೆ. ತನಗೆ ತಾನೇ ಗುರು ಎಂಬ ಅಹಂ ಬಿಡಬೇಕಾಗುತ್ತದೆ. ಅನಂತಮೂರ್ತಿ ಅವರು ತಮ್ಮ ಆತ್ಮಕಥೆಯ ಉದ್ದಕ್ಕೂ ತಮಗೆ ಮಾರ್ಗದರ್ಶನ ಮಾಡಿದ ಅನೇಕರನ್ನು ನೆನೆಯುತ್ತಾರೆ.

ಇದಲ್ಲದೆ ಜೀವನದಲ್ಲಿ ಮುಂದೆ ಬರಲು ನಾವು ನಮ್ಮ ಮಿತಿಗಳೇನು ಎಂಬುದನ್ನು ಕೂಡ ತಿಳಿದಿರಬೇಕಾಗುತ್ತದೆ. ಹಾಗೆಯೇ ಶಿಕ್ಷಣದ ಮಿತಿಗಳೂ ಗೊತ್ತಿರಬೇಕು. ವಿದ್ಯಾರ್ಥಿ ಶಾಲಾ–ಕಾಲೇಜುಗಳಲ್ಲಿ ಕಳೆಯುವುದು ನಾಲ್ಕಾರು ಗಂಟೆಗಳನ್ನಷ್ಟೆ. ಆತ  ಅಥವಾ ಆಕೆ ವ್ಯವಹರಿಸುವುದು  ಹೊರಜಗತ್ತಿನಲ್ಲೇ ಹೆಚ್ಚು. ಅಲ್ಲಿ ಸಾಧನೆಗೆ ವಿಪುಲ ಅವಕಾಶಗಳಿವೆ. ಏನೇ ಪರಿಸ್ಥಿತಿ ಬಂದರೂ ಭಿಕ್ಷುನಾಗುವುದಿಲ್ಲವೆಂಬ ಕನಿಷ್ಠ ಹಟ ಇರಬೇಕು.

ಬೇಕಾದರೆ ಪಿಎಚ್‌.ಡಿ. ಮಾಡಿದ ಕೆಲವರುಅಟೆಂಡರ್‍ ಆಗುವುದಾದಾದರೆ ಆಗಿ ಗೌರವದಿಂದ ಬಾಳಲಿ. ಆದರೆ ಶಿಕ್ಷಣ ಕ್ಷೇತ್ರದಲ್ಲಿ  ಸವಾಲುಗಳಿಲ್ಲದೇ ಇಲ್ಲ. ಮಕ್ಕಳು ವಿಷಯಗಳನ್ನು ಸರಳವಾಗಿ ತಿಳಿದುಕೊಳ್ಳುವಂತೆ ಮಾಡಬೇಕಾದ ಸವಾಲಿದೆ. ನಮ್ಮ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಬೇಕಾದ ಸವಾಲಿದೆ. ಅವುಗಳ ಬಗ್ಗೆಯೂ ಗಮನಹರಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.