ADVERTISEMENT

ಸಂಕುಚಿತ ಮನಸ್ಥಿತಿಯ ಸಂಹಿತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2017, 19:30 IST
Last Updated 2 ಆಗಸ್ಟ್ 2017, 19:30 IST

–ಎಚ್‌.ಕೆ. ಶರತ್‌

ಉಪನ್ಯಾಸಕಿಯರು ಸೀರೆ ಧರಿಸಿ ಕೆಲಸಕ್ಕೆ ಹಾಜರಾಗುವುದರ ಮುಖೇನ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಆದೇಶಿಸುವ ಸುತ್ತೋಲೆ ಹೊರಡಿಸಿ, ಆನಂತರ ಹಿಂಪಡೆಯುವ ಮೂಲಕ ಇತ್ತೀಚೆಗಷ್ಟೇ ಕಾಲೇಜು ಶಿಕ್ಷಣ ಇಲಾಖೆ ಸುದ್ದಿಯಲ್ಲಿತ್ತು. ಸೀರೆಯೆಡೆಗೆ ಒಲವು ಹೊಂದಿರುವ ಕೆಲ ‘ಸುಸಂಸ್ಕೃತ’ ಕಣ್ಣುಗಳು, ‘ಶಿಕ್ಷಣ ಇಲಾಖೆ ತಳೆದ ನಿಲುವಿನಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದೂ ಉಂಟು. ವಸ್ತ್ರ ಸಂಹಿತೆ ಕುರಿತಾದ ಚರ್ಚೆ ಗಮನಿಸುವಾಗ ಒಂದಿಷ್ಟು ಪ್ರಸಂಗಗಳು ಮನಸ್ಸನ್ನು ಹಾದು ಹೋದವು. ತೊಡುವ ದಿರಿಸಿನ ಕುರಿತು ಹೆಚ್ಚು ಚಿಂತಿಸಲು ಹಂಬಲಿಸುವ ನಮ್ಮ ಮನಸ್ಥಿತಿ ಎಷ್ಟು ಸಂಕುಚಿತವಾದುದು ಎಂಬುದನ್ನು ಅವು ಬಿತ್ತಿದ ಅರಿವು ಮನದಟ್ಟು ಮಾಡಿಕೊಟ್ಟಿತು.

ವರ್ಷದ ಹಿಂದೆ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಆಡಳಿತ ಮಂಡಳಿ, ತಮ್ಮ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರೆಲ್ಲರೂ ಜೀನ್ಸು, ಟಿ-ಷರ್ಟು ಧರಿಸುವುದನ್ನು ಬಿಟ್ಟು ಫಾರ್ಮಲ್ಸ್ ಉಡುಗೆ ತೊಡುವುದಲ್ಲದೆ, ಕೋಟು, ಟೈ, ಶೂಗಳನ್ನು ಕಡ್ಡಾಯವಾಗಿ ಧರಿಸಲೇಬೇಕೆಂಬ ಸುತ್ತೋಲೆ ಹೊರಡಿಸಿತ್ತು. ಯಥಾಪ್ರಕಾರವಾಗಿ ಅಧ್ಯಾಪಕಿಯರಿಗೆ ಸೀರೆ ತೊಟ್ಟು ‘ಸಭ್ಯ’ರಾಗಿ ಬರಲು ಸೂಚಿಸಲಾಗಿತ್ತು.

ADVERTISEMENT

ಆ ಕಾಲೇಜಿನಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಪ್ರಾಧ್ಯಾಪಕರಾಗಿರುವ ಆತ್ಮೀಯರೊಬ್ಬರು, ತಮ್ಮ ವೃತ್ತಿ ಬದುಕಿನುದ್ದಕ್ಕೂ ಜೀನ್ಸ್ ಪ್ಯಾಂಟು, ಚಪ್ಪಲಿ ಧರಿಸಿ ಸೈಕಲ್‌ನಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದರು, ಇಂದಿಗೂ ಹಾಗೆಯೇ ತೆರಳುತ್ತಾರೆ. ಅವರು ಜೀನ್ಸ್ ಪ್ಯಾಂಟು, ಚಪ್ಪಲಿ ಧರಿಸಿಕೊಂಡು ತರಗತಿಗೆ ಬರುತ್ತಾರೆಂಬ ಕಾರಣಕ್ಕೆ ಅವರ ಬೋಧನಾ ಗುಣಮಟ್ಟ ಕುಂದಿರುವುದಾಗಿಯೋ ಅಥವಾ ತಮ್ಮ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದಾಗಿಯೋ ವಿದ್ಯಾರ್ಥಿಗಳು ದೂರಿದ್ದು ಸ್ವತಃ ಅವರ ವಿದ್ಯಾರ್ಥಿಗಳಲ್ಲಿ ಒಬ್ಬನಾದ ನನ್ನ ಗಮನಕ್ಕಂತೂ ಬಂದಿರಲಿಲ್ಲ. ಇನ್ನು ಅವರ ಸರಳತೆಯೇ ಹಲವರನ್ನು ಪ್ರಭಾವಿಸಿದ್ದಂತೂ ವಾಸ್ತವ.

ತಮ್ಮ ಕಾಲೇಜಿನ ಆಡಳಿತ ಮಂಡಳಿಯಿಂದ ಹೊರಬಿದ್ದ ಸುತ್ತೋಲೆಯನ್ನು ಲಘುವಾಗಿಯೇ ಪರಿಗಣಿಸಿದ್ದ ಅವರು, ‘ನಾಳೆಯಿಂದ ನಾನೇನಾದ್ರೂ ಕೋಟು, ಟೈ, ಶೂ ಹಾಕ್ಕೊಂಡು ಸೈಕಲ್‌ನಲ್ಲಿ ಬಂದ್ರೆ ಬೀದೀಲಿ ಎಲ್ರೂ ಹೇಗೆ ಗುರಾಯಿಸ್ಬಹುದು ಕಲ್ಪಿಸ್ಕೊ’ ಅಂತ ವ್ಯಂಗ್ಯವಾಡಿದ್ದರು. ಆನಂತರ, ಆ ಆದೇಶವೇನೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ. ಇಂದಿಗೂ ನಮ್ಮ ಸರ್, ಅವರಿಗೆ ಒಗ್ಗಿ ಹೋಗಿರುವ ದಿರಿಸಿನಲ್ಲಿಯೇ ಕಾಲೇಜಿಗೆ ತೆರಳುತ್ತಾರೆ.

ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ‘ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್’ನಲ್ಲಿ (ಸಿಎಂಟಿಐ) ನಡೆದ ಒಂದು ವಾರ ಕಾಲಾವಧಿಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ. ವಸ್ತ್ರ ಸಂಹಿತೆ ಚರ್ಚೆಯ ಹಿನ್ನೆಲೆಯಲ್ಲಿ, ಅಲ್ಲಿ ನಮಗೆ ಬೋಧಿಸಿದ ಮಹಿಳಾ ವಿಜ್ಞಾನಿಯೊಬ್ಬರು ಯಾವ ಉಡುಗೆ ತೊಟ್ಟಿದ್ದರು ಎಂಬುದನ್ನು ನೆನಪಿಸಿಕೊಂಡೆ. ಅವರು ಸೀರೆ ಧರಿಸಿರಲಿಲ್ಲವೆಂಬ ಕಾರಣ ಮುಂದಿಟ್ಟುಕೊಂಡು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ, ಅವರ ಉಡುಗೆಯ ಕುರಿತು ಯಾವೊಂದು ಮಾತೂ ಆಡಿರಲಿಲ್ಲ. ಆ ವೇಳೆ ಅವರು ನಮಗೆ ಬೋಧಿಸಿದ ರೀತಿ ಮತ್ತು ವಿಷಯಗಳು ಮುಖ್ಯವೆನಿಸಿದವೇ ಹೊರತು, ಅವರ ಉಡುಗೆ ನಾವು ಇನ್ನಿಲ್ಲದ ಕುತೂಹಲದೊಂದಿಗೆ ಗಮನಿಸಬೇಕಾದ ಮತ್ತು ಅದರಿಂದ ಪ್ರಭಾವಿತರಾಗಿ ಅನುಸರಿಸಬೇಕಾದ ಸಂಗತಿಯಾಗೇನೂ ತೋರಲಿಲ್ಲ.

ಎರಡು ವಾರಗಳ ಹಿಂದೆ ಸ್ನೇಹಿತನ ಭೇಟಿಗೆಂದು ಅವನು ಕಾರ್ಯನಿರ್ವಹಿಸುವ ಕಾಲೇಜಿಗೆ ತೆರಳಿದ್ದೆ. ವಿದ್ಯಾರ್ಥಿಯೊಬ್ಬ ಅಧ್ಯಾಪಕರ ಭೇಟಿಗೆಂದು ಸ್ಟಾಫ್‌ರೂಮ್‌ಗೆ ಬಂದ. ಅಲ್ಲಿದ್ದ ಹಿರಿಯ ಪ್ರಾಧ್ಯಾಪಕರೊಬ್ಬರು ಅವನನ್ನು ತಮ್ಮ ಬಳಿ ಕರೆದು ‘ಮೊದ್ಲು ಇಲ್ಲಿಂದ ಆಚೆ ಹೋಗು. ಕಾಲೇಜಿಗೆ ಹೇಗೆ ಬರ್ಬೇಕು ಅಂತ ಗೊತ್ತಾಗಲ್ವಾ? ನಿನ್ನನ್ನ ಈ ಅವತಾರದಲ್ಲಿ ಯಾರಾದ್ರೂ ನೋಡಿದ್ರೆ, ನಿಂಗೆ ಪಾಠ ಹೇಳ್ಕೊಡೋ ನಮ್ಗೆ ಉಗಿತಾರೆ’ ಅಂತೆಲ್ಲ ಆಕ್ರೋಶ ಹೊರಹಾಕತೊಡಗಿದರು.

ಕಾಲೇಜು ಕ್ಯಾಂಪಸ್‌ನಲ್ಲೇ ಇರುವ ಹಾಸ್ಟೆಲ್‌ನಲ್ಲಿ ತಂಗಿರುವ ವಿದ್ಯಾರ್ಥಿ, ಲೆಕ್ಚರರ್ ಭೇಟಿ ಮಾಡಲು ನೈಟ್ ಪ್ಯಾಂಟ್ ಧರಿಸಿ ಬಂದದ್ದು ಅವರ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು. ತಮ್ಮ ವಿದ್ಯಾರ್ಥಿ ಭ್ರಷ್ಟನಾದನೆಂದೋ, ಸಮಾಜಘಾತುಕನಾದನೆಂದೋ ನೊಂದುಕೊಳ್ಳಬೇಕಾದವರು, ಅವನು ನೈಟ್ ಪ್ಯಾಂಟ್ ಧರಿಸಿ ಸ್ಟಾಫ್‌ರೂಮ್‌ಗೆ ಬಂದ ಎಂಬ ವಿಚಾರಕ್ಕೆ ಇಷ್ಟೆಲ್ಲ ಮನಶಾಂತಿ ಹಾಳು ಮಾಡಿಕೊಳ್ಳಬೇಕೆ ಎಂಬ ಪ್ರಶ್ನೆ ಕಾಡಿತು.

ಉಡುಗೆಯನ್ನು ಸಭ್ಯ ಮತ್ತು ಅಸಭ್ಯವೆಂದು ವರ್ಗೀಕರಿಸಿ, ತಮ್ಮ ಮೂಗಿನ ನೇರಕ್ಕೆ ಸರಿ ಕಾಣುವುದನ್ನೇ ಉನ್ನತ ಮೌಲ್ಯವೆಂದು ಪರಿಗಣಿಸಿ ಉಳಿದವರ ಕುರಿತು ಟೀಕಾಪ್ರಹಾರ ಮಾಡುವುದರ ಹಿಂದಿರುವ ಮನಸ್ಥಿತಿಗೆ ಕನ್ನಡಿ ಹಿಡಿಯುವ ಮತ್ತು ಅದನ್ನು ಎತ್ತಿಹಿಡಿಯುವ ವಸ್ತ್ರಸಂಹಿತೆಗೆ ಸಂಬಂಧಿಸಿದ ಸುತ್ತೋಲೆಗಳು ಉಡುಗೆಯ ಮೇಲಷ್ಟೇ ನಿಯಂತ್ರಣ ಹೇರುವ ಉಮೇದು ಪ್ರದರ್ಶಿಸುತ್ತಿವೆಯೇ? ಆ ಮೂಲಕ ಹೇರಲು ಹೊರಡುತ್ತಿರುವುದು ಯಾವ ಮೌಲ್ಯಗಳನ್ನು ಮತ್ತು ಪೊರೆಯುತ್ತಿರುವುದು ಎಂತಹ ಮನಸ್ಥಿತಿಯನ್ನು ಎಂದೂ ಪರಿಶೀಲಿಸಬೇಕಿದೆ.

ವಸ್ತ್ರ ಸಂಹಿತೆಗೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲ ಮತ್ತು ಕೆಲವರು ಅವರಿವರ ಉಡುಗೆ ತೊಡುಗೆ ಗಮನಿಸಿ, ‘ಇವರು ಹೀಗೆಯೇ, ಇಂತಹವರೇ...’ ಎಂದು ತೀರ್ಪು ನೀಡುವುದನ್ನು ಕಂಡಾಗಲೆಲ್ಲ, ಪೂರ್ಣಚಂದ್ರ ತೇಜಸ್ವಿಯವರು ಆಡಿದ ಮಾತು ನೆನಪಾಗುತ್ತದೆ.

‘ಪ್ಯಾಂಟ್ ಹರ್ದೋಗಿದ್ರೆ ನಂಗೇನೋ... ನಾನು ಹೊಸ ಪ್ಯಾಂಟ್ ಹಾಕ್ಕೊಂಡ್ರೂ ನಾನು ನಾನೇ ಆಗಿರ್ತೀನಿ, ಹಳೆ ಪ್ಯಾಂಟ್ ಹಾಕ್ಕೊಂಡೋದ್ರೂ ನಾನು ನಾನೇ ಆಗಿರ್ತೀನಿ. ಒಳ್ಳೆ ಬಟ್ಟೆ ಹಾಕಿದ್ ತಕ್ಷಣ ಚೇಂಜ್ ಆಗಲ್ಲ’.

ಇದನ್ನು ತೇಜಸ್ವಿಯವರ ತೋಟದಲ್ಲಿ ರೈಟರ್ ಆಗಿದ್ದ ಶಿವು ಅವರು ‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ಹರಿದ ಪ್ಯಾಂಟು ತೊಟ್ಟು ಪೇಟೆಗೆ ಹೊರಟ ತೇಜಸ್ವಿಯವರನ್ನು ಕಂಡು ಶಿವು, ‘ಪ್ಯಾಂಟೆಲ್ಲ ಹರ್ದುಂಟಲ್ಲ, ಬೇರೆ ಪ್ಯಾಂಟ್ ಹಾಕೊಂಡ್ಹೋಗಿ’ ಅಂತ ಹೇಳಿದಾಗ ತೇಜಸ್ವಿ ಅವರು ಮೇಲಿನಂತೆ ಪ್ರತಿಕ್ರಿಯಿಸುತ್ತಾರೆ.

‘ನೀವು ಸೀರೆಯನ್ನೇ ಧರಿಸಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಉಳಿಸಬೇಕು. ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ರೂಪುಗೊಳ್ಳಲು ಇದು ಅತ್ಯಗತ್ಯ’ ಎನ್ನುವ ಮೂಲಕ ಇತರರು ಏನನ್ನು ತೊಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ತೀರ್ಪು ನೀಡಲು ಉತ್ಸಾಹ ತೋರುವವರ ಕಿವಿಗಷ್ಟೇ ಅಲ್ಲ ಮನಸ್ಸಿಗೂ ತೇಜಸ್ವಿಯವರ ಮಾತು ತಾಕುವಂತಾಗಲಿ.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮವಸ್ತ್ರವೂ ಸೇರಿದಂತೆ, ಅದು ಆರಾಮದಾಯಕವಲ್ಲದಿದ್ದರೂ ‘ಸಭ್ಯ’ವೆಂಬ ಒಂದೇ ಕಾರಣಕ್ಕೆ ನಾವೂ ಧರಿಸಿ, ಇತರರೂ ಧರಿಸಲೇಬೇಕೆಂದು ಯಾವುದಾದರೂ ಉಡುಗೆಯನ್ನು ಹೇರುವ, ಹೇರಿಕೊಳ್ಳುವ ಮುನ್ನ ನಮ್ಮ ಮನಸ್ಥಿತಿಗೂ ಸಾಣೆ ಹಿಡಿದುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.