ADVERTISEMENT

ಮಾರುತ್ತರ ನೀಡಲು ಸಾಧ್ಯವೇ?

ರಂಗನಾಥ ಕಂಟನಕುಂಟೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಕನಕದಾಸರ ‘ರಾಮಧಾನ್ಯ ಚರಿತೆ’ಯಲಿ ನರೆದಲೆಗ (ರಾಗಿ) ಮತ್ತು ವ್ರೀಹಿ (ಭತ್ತ) ನಡುವೆ ಸಂವಾದ ನಡೆಯುವುದು ಈ ಕೃತಿಯನ್ನು ಓದಿದವರಿಗೆ ಈಗಾಗಲೇ ತಿಳಿದಿರುವ ಸಂಗತಿ. ರಾಗಿ-ವ್ರೀಹಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದಾಗ ವ್ರೀಹಿಯನ್ನು ಉದ್ದೇಶಿಸಿ ರಾಗಿ ಮಾತನಾಡುತ್ತದೆ. ಆ ಮಾತು ಹೀಗಿದೆ: ‘ನುಡಿಗೆ ಹೇಸದ ಭಂಡ/ ನಿನ್ನೊಳು ಕೊಡುವರೇ ಮಾರುತ್ತರವ/ ಕಡು ಜಡನಲಾ ನಿನ್ನೊಡನೆ ಮಾತೇಕೆಂದ’. ವ್ರೀಹಿ ಈ ಬಗೆಯ ಉತ್ತರವನ್ನು ಕೊಡುವ ಮುನ್ನ ನರೆದಲೆಗವನ್ನು ‘ಶೂದ್ರ, ಕಪಿ, ಒಣಗಿದ ಕಾಷ್ಟ, ಕುರಿಹಾಲು, ಬಕಪಕ್ಷಿ, ಕಾಗೆ...’ ಹೀಗೆ ಹೀನಾರ್ಥದಲ್ಲಿ ನಿಂದಿಸುತ್ತದೆ. ನಂತರ ‘ನೀನಾವ ಮಾನ್ಯನು ಕಡೆಗೆ ತೊಲಗೆಂದು’ ಜರಿಯುತ್ತದೆ. ಇಷ್ಟೆಲ್ಲ ಕೇಳಿಸಿಕೊಂಡ ನಂತರ ಮೇಲೆ ಉಲ್ಲೇಖಿಸಿರುವ ಮಾತನ್ನು ರಾಗಿ ಸಿಟ್ಟಿನಿಂದಲೇ ಹೇಳುತ್ತದೆ.

ಈ ವಿವರಣೆಯನ್ನು ನೀಡಿದ ಉದ್ದೇಶ– ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರು ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದವರನ್ನು ಹೊರತುಪಡಿಸಿ ಉಳಿದವರಿಗೆ ಕನ್ನಡ ನುಡಿಯನ್ನು ಸರಿಯಾಗಿ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಹೇಳಿರುವುದರ (ಪ್ರ.ವಾ., ಫೆ. 18) ಹಿನ್ನೆಲೆಯಲ್ಲಿ. ಅವರ ಹೇಳಿಕೆಯನ್ನು ಓದಿದ ನಂತರ ಮೇಲಿನ ಮಾತು ನೆನಪಾಯಿತು. ಅವರ ಮಾತಿಗೆ ಮಾರುತ್ತರ ನೀಡುವುದು ಅಗತ್ಯವಿಲ್ಲ ಎನ್ನಿಸಿತು. ಆದರೆ ಕನಕನ ಕೃತಿಯಲ್ಲಿ ನರೆದಲೆಗ ಹಾಗೆ ಹೇಳುತ್ತಲೇ ವ್ರೀಹಿಗೆ ಉತ್ತರವನ್ನು ನೀಡುತ್ತದೆ. ಸದ್ಯ ಕನ್ನಡದ ಜನರಿಗೆ ಅಂತಹುದೇ ಪರಿಸ್ಥಿತಿ ಎದುರಾಗಿದೆ.

ಯಾಕೆಂದರೆ ಕನ್ನಡ- ಕರ್ನಾಟಕದ ಭಾಷಿಕ, ಧಾರ್ಮಿಕ ಮತ್ತು ಬೌದ್ಧಿಕ ಪರಂಪರೆಗಳ ಬಗೆಗೆ ಅರಿವು ಇದ್ದವರು ಯಾರೂ ಹಾಗೆ ಮಾತನಾಡುತ್ತಿರಲಿಲ್ಲ. ನುಡಿಯನ್ನು ಬಳಸುವ ಮುನ್ನ ಅರಿತು ಮಾತನಾಡಬೇಕು ಮತ್ತು ಅವರ ಮಾತುಗಳು ಬೇರೆಯವರ ಅರಿವಿನ ಮಿತಿಗಳನ್ನು ತೆರೆದು ತೋರುವಂತಿರಬೇಕು. ಅಷ್ಟೇ ಅಲ್ಲ, ಎದುರಿಗಿರುವ ಜನರ ಬಗೆಗೆ ಕನಿಷ್ಠವಾದರೂ ಗೌರವ ಇಟ್ಟುಕೊಂಡು ಅವರ ಬಗೆಗೆ ಮತ್ತು ಜೊತೆಗೆ ಸಂವಾದ ಮಾಡಬೇಕು. ಇದಾವುದೂ ಇಲ್ಲದೆ, ಹೋದ– ಹೋದಲ್ಲೆಲ್ಲಾ ಮತ್ತೆ ಮತ್ತೆ ಬೀಸು ಹೇಳಿಕೆಗಳನ್ನು ನೀಡುವುದು ನುಡಿಗೆ ಹೇಸದೆ ಭಂಡತನದಿಂದಲೇ ಆಡುವ ಮಾತುಗಳಲ್ಲವೇ? ಜವಾಬ್ದಾರಿ ಸ್ಥಾನದಲ್ಲಿರುವವರು ಆಡುವ ಮಾತುಗಳೇ?

ADVERTISEMENT

ಅವರು ಇತ್ತೀಚೆಗೆ ಎಲ್ಲ ಕಡೆಯೂ ವಿಪರೀತದ ಭಾಷಣ ಮಾಡುತ್ತ, ತಮ್ಮ ಮಾತಿನ ಓಘದಲ್ಲಿ ಎದುರಿಗಿರುವವರನ್ನು ವ್ರೀಹಿಯ ರೀತಿಯಲ್ಲಿಯೇ ಅವಹೇಳನ ಮಾಡುತ್ತಿದ್ದಾರೆ. ಸದ್ಯ ಅವರು ನುಡಿಯ ಬಗೆಗೆ ಹೇಳಿಕೆ ನೀಡುವ ಮೊದಲು ತಾವು ಪ್ರತಿನಿಧಿಸುವ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಮತ ನೀಡಿದ ಜನರು ಬಳಸುತ್ತಿರುವ ವಿವಿಧ ಬಗೆಯ ಉಪಭಾಷೆಗಳ ಬಗೆಗೆ ಮಾಹಿತಿಯನ್ನಾದರೂ ಪಡೆದಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ಹವ್ಯಕರ ಕನ್ನಡ, ಹಾಲಕ್ಕಿಗಳ ಕನ್ನಡ, ನಾಮಧಾರಿಗಳ ಕನ್ನಡ, ನಾಡವರ ಕನ್ನಡಗಳನ್ನು ಒಳಗೊಂಡಂತೆ ಇಪ್ಪತ್ತಕ್ಕೂ ಹೆಚ್ಚಿನ ಬಗೆಯ ಉಪಭಾಷೆಗಳಿವೆ. ಇವುಗಳ ವೈವಿಧ್ಯ ನಿಜಕ್ಕೂ ಕನ್ನಡದ ಸಂಪತ್ತು.

ಸಚಿವರು ಹೇಳಿರುವಂತೆ ಇವು ಯಾವುವೂ ಇವರು ತಿಳಿದಿರುವ ‘ಶುದ್ಧ ಕನ್ನಡ’ಗಳಲ್ಲ. ಪ್ರಮಾಣೀಕೃತ ಕನ್ನಡದ ಇಲ್ಲವೇ ಇವರು ಹೇಳಿರುವ ಕನ್ನಡದ ಎದುರು ‘ಅಶುದ್ಧ ಕನ್ನಡ’ಗಳೇ ಆಗಿವೆ. ತಮ್ಮ ಕ್ಷೇತ್ರದಲ್ಲಿ ಸುತ್ತಾಡುವಾಗ ಜನರು ನಿತ್ಯ ಬಳಸುತ್ತಿರುವ ಈ ನುಡಿಗಳನ್ನು ಅನಂತಕುಮಾರ ಹೆಗಡೆ ಇನ್ನಾದರೂ ತಪ್ಪದೇ ಕೇಳಿಸಿಕೊಂಡು ತಿಳಿಯಲಿ. ಆ ಮೂಲಕ ಆ ಕ್ಷೇತ್ರದ ಜನರ ದೈನಂದಿನ ಬದುಕಿನ ಸಮಸ್ಯೆಗಳನ್ನೂ ಆಲಿಸಲಿ. ಇದು ನಿಜಕ್ಕೂ ಅವರ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಜನಪರ ಪ್ರಜ್ಞೆಯನ್ನೂ ಹೆಚ್ಚಿಸುತ್ತದೆ.

ಇನ್ನು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇರುವ ಕನ್ನಡದ ವೈವಿಧ್ಯಗಳು, ಸಚಿವರು ಹೇಳುವಂತಹ ಶುದ್ಧ ಕನ್ನಡದ ವ್ಯಾಪ್ತಿಗೆ ಸೇರುವುದಿಲ್ಲ. ಕನ್ನಡವೆನ್ನುವುದು ಹತ್ತಾರು ಉಪಭಾಷೆಗಳನ್ನು ಒಳಗೊಂಡ ವೈವಿಧ್ಯಮಯ ಮತ್ತು ಜೀವಂತ ಆಡುನುಡಿಗಳಿಂದ ಕೂಡಿದ ಒಂದು ಭಾಷಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ. ಅಲ್ಲದೆ ಇಂತಹ ವ್ಯವಸ್ಥೆಯಲ್ಲಿ ಬರಹದ ಕನ್ನಡಕ್ಕೂ ಮತ್ತು ವಿಶಾಲ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬಳಕೆಯಾಗುತ್ತಿರುವ ವೈವಿಧ್ಯಮಯ ಆಡುನುಡಿಗಳಿಗೂ ವ್ಯತ್ಯಾಸವಿದೆ. ಇದನ್ನು ಸಚಿವರು ತಿಳಿದರೆ ಒಳಿತು. ಜೊತೆಗೆ ಅಂತಹ ‘ಅಶುದ್ಧ ಕನ್ನಡ’ ಮತದಾರರೇ ತಮಗೆ, ತಾವು ಪ್ರತಿನಿಧಿಸುವ ಪಕ್ಷಕ್ಕೆ ಮತ ಚಲಾಯಿಸುತ್ತಿರುವುದು ಎನ್ನುವುದನ್ನು ಅರಿತು ಅವರಿಗೆ ಕೊಂಚವಾದರೂ ಗೌರವ ತೋರಲು ವಾಸ್ತವ ಸಂಗತಿ ತಿಳಿಯುವುದು ಒಳಿತು. ಜನರನ್ನು, ಇಡೀ ದೇಶವನ್ನು ಪ್ರತಿನಿಧಿಸುವ ಸಚಿವರಾದವರು ತಿಳಿಯದೆಯೋ ಇಲ್ಲವೇ ಸತ್ಯ ಮರೆಮಾಚಿಯೋ ಮಾತನಾಡುವುದು ಸರಿಯೇ? ಕನ್ನಡಿಗರ ಬಗೆಗೆ ಆಡಿರುವ ಈ ಮಾತು ಇದೇ ಮೊದಲಿನದಾಗಿದ್ದರೆ ಬೇರೆ.

ಆದರೆ ಅವರು ಈಚೆಗೆ ಸಂವಿಧಾನದ ಮೌಲ್ಯಗಳು, ಬುದ್ಧಿಜೀವಿಗಳು, ಜಾತ್ಯತೀತ ತತ್ವ... ಇತ್ಯಾದಿಗಳ ಬಗೆಗೆ ನಿರಂತರವಾಗಿ ಆಡುತ್ತಿರುವ ಮಾತುಗಳನ್ನು ನೆನೆದಾಗ ಅವರದು ಅದೇ ಚಾಳಿ ಅಂತ ತಿಳಿಯುತ್ತದೆ. ಉದ್ದೇಶಪೂರ್ವಕವಾಗಿಯೇ ಇಂತಹ ಮಾತುಗಳನ್ನು ಅವರು ಬಳಸುತ್ತಿರುವುದು ಸ್ಪಷ್ಟ. ಇದು ಭಾಷಿಕ ಮತ್ತು ಸಾಂಸ್ಕೃತಿಕ ವಾಸ್ತವ ಸ್ಥಿತಿಯನ್ನು ಮರೆಮಾಚಿ ತಪ್ಪು ವಿಚಾರಗಳನ್ನು ಜನರ ಮನದಲ್ಲಿ ಬಿತ್ತಲು ಕಾರಣವಾಗುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿ. ‌

ಸಚಿವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ ಅಂತಹ ಅಭಿಪ್ರಾಯಗಳನ್ನು ಸತ್ಯದ ನೆಲೆಯಲ್ಲಿ ಮತ್ತು ತಮ್ಮ ಎದುರಿಗಿರುವ ಜನರಿಗೂ ಕೊಂಚ ಗೌರವ ನೀಡಿ ಮಾತನಾಡುವಂತಹ ಬುದ್ಧಿಯನ್ನು ಆ ರಾಮ ಕೊಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.