ADVERTISEMENT

ಗುರುವಾರ, 25–5–1967

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
1966-67ನೇ ಸಾಲಿನ ಆರ್ಥಿಕ ಸಮೀಕ್ಷೆ ಸಾಲದ ಮೇಲೆ ನಿರ್ಬಂಧ ಮುಂದುವರಿಕೆ?
ನವದೆಹಲಿ, ಮೇ 24– ಕೇಂದ್ರ ಸರ್ಕಾರವು ನಡೆಸಿರುವ 1966–67ನೆಯ ಸಾಲಿನ ಆರ್ಥಿಕ ಸಮೀಕ್ಷೆಯು, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿನ ವೆಚ್ಚದ ಪ್ರಮಾಣವನ್ನು ಸದ್ಯದಲ್ಲಿ ಸಾಕಷ್ಟು ಹೆಚ್ಚಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಬಿಗಡಾಯಿಸಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಸಾಲದ ಮೇಲಿನ ನಿರ್ಬಂಧ ಈ ವರ್ಷವೂ ಮುಂದುವರಿಯುವ ಸಂಭವವಿದೆ.
 
ಅಭಿವೃದ್ಧಿಯ ವೆಚ್ಚವನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಹಣಕಾಸಿನ ನಿರ್ಬಂಧಗಳನ್ನು ಜಾರಿ, ಸಾಕಷ್ಟು ಅಧಿಕ ಪ್ರಮಾಣದ ಸಾಲ ಪಡೆಯುವಿಕೆಯೊಡನೆ ಹೆಚ್ಚು ಬಿಗಿಯಾದ ಸಾಲ ನೀಡಿಕೆಯ ನೀತಿಯ ಅನುಸರಣೆ ಹಾಗೂ ವೇತನ– ಧಾರಣೆ– ಬೆಲೆ ಏರಿಕೆಯನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳುವಿಕೆ– ಈ ಹಣದುಬ್ಬರ ನಿವಾರಣೆಯ ಕ್ರಮಗಳನ್ನು ಸಮೀಕ್ಷೆಯು ಸೂಚಿಸಿದೆ.
 
ನಾಲ್ಕನೆಯ ಯೋಜನೆಯಲ್ಲಿ ನೀರಾವರಿ ವೆಚ್ಚ ದ್ವಿಗುಣ
ಬೆಂಗಳೂರು, ಮೇ 24– ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ನಿಗದಿ ಮಾಡಲಾಗಿದ್ದ ಮೊತ್ತವನ್ನು 56 ಕೋಟಿ ರೂಪಾಯಿಗಳಿಂದ 100 ಕೋಟಿ ರೂ.ಗಳಿಗೆ ಹೆಚ್ಚಿಸಲು ಮಂತ್ರಿ ಮಂಡಲವು ಇಂದು ನಿರ್ಧರಿಸಿತು. ಸಚಿವ ಸಂಪುಟದ ನಿರ್ಧಾರವನ್ನು 
ವಾರ್ತಾ ಸಚಿವ ಶ್ರೀ ಡಿ. ದೇವರಾಜ ಅರಸ್‌ರವರು ಸುದ್ದಿಗಾರರಿಗೆ ತಿಳಿಸಿದರು.
 
ಅಶೋಕ ಮೆಹ್ತ– ಭೂಪೇಶ್ ಗುಪ್ತ ನಡುವೆ ವಾಗ್ವಾದ
ನವದೆಹಲಿ, ಮೇ 24– ನಾಲ್ಕನೇ ಯೋಜನೆ ರೂಪಿಸುವುದರಲ್ಲಿ ಆಗಿರುವ ವಿಳಂಬ ಕುರಿತು ಇಂದು ರಾಜ್ಯಸಭೆಯಲ್ಲಿ ಹಾಕಲಾದ ಪ್ರಶ್ನೆಗಳು ಯೋಜನೆ ಸಚಿವ ಶ್ರೀ ಅಶೋಕ ಮೆಹ್ತ ಮತ್ತು ಕಮ್ಯುನಿಸ್ಟ್ ನಾಯಕ ಶ್ರೀ ಭೂಪೇಶ್ ಗುಪ್ತರ ನಡುವೆ ಬಿಸಿ ಬಿಸಿ ವಾಗ್ಯುದ್ಧಕ್ಕೆ ಎಡೆಕೊಟ್ಟಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.