ADVERTISEMENT

ಬುಧವಾರ, 12–7–1967

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST

* ಸಿಕ್ಕಿಂ ಗಡಿಯಲ್ಲಿ ಚೀನಾ ಸೇನೆ ಜಮಾವಣೆ
ಟೋಕಿಯೊ, ಜುಲೈ 11– 
ಚೀನಾದ ಕೆಂಪು ಸೇನೆಯ ವಿಶೇಷ ಗುಡ್ಡಗಾಡು ಪಡೆಯು ಭೂತಾನ್‌ ಹಾಗೂ ಸಿಕ್ಕಿಂ ಗಡಿಗೆ ಸಮೀಪ ಬಂದಿದ್ದು, ಅಲ್ಲಿ ಪ್ರತಿನಿತ್ಯ ತಾಲೀಮು ನಡೆಸುತ್ತಿದೆ ಎಂದು ಮಾಸ್ಕೊ ರೇಡಿಯೊವನ್ನು ಮೂಲವಾಗಿಸಿ ಜಪಾನ್‌ನ ‘ಸೋವಿಯತ್‌ ನ್ಯೂಸ್‌’ ವರದಿ ಮಾಡಿದೆ.

ಜಪಾನ್‌ನ ಪತ್ರಿಕೆಯೊಂದು ಸಹ ನಿನ್ನೆ ಈ ಸುದ್ದಿಯನ್ನು ಪ್ರಕಟಿಸಿದ್ದು, ‘ಚೀನಾದ ಈ ವಿಶೇಷ ಪಡೆ ಗುಡ್ಡಗಾಡು ಪ್ರದೇಶದಲ್ಲಿ ಗೆರಿಲ್ಲಾ ಯುದ್ಧತಂತ್ರದಲ್ಲಿ ಪರಿಣತಿ ಪಡೆದಿದೆ’ ಎಂದಿದೆ.

ಮಾಸ್ಕೊ ರೇಡಿಯೊದಲ್ಲಿ ಜುಲೈ 8ರಂದು ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲಾಗಿದ್ದು, ಅದರಲ್ಲಿ ‘ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಕ್ಕಿಂ– ಭೂತಾನ್‌ ನಡುವೆ ಬಿಗುವಿನ ವಾತಾವರಣವಿದೆ. ಸಿಕ್ಕಿಂ ಪ್ರದೇಶದಲ್ಲಿ ಗಡಿ ಗುರುತಿಸಲು ನೆಡಲಾಗುತ್ತಿರುವ ಕಲ್ಲುಗಳ ಮೇಲೆ ಚೀನಾದ ನಾಯಕ ಮಾವೋತ್ಸೆ ತುಂಗನ ಚಿತ್ರಗಳಿವೆ ಎಂದು ಹೇಳಿದೆ’ ಎಂಬುದಾಗಿ ಸೋವಿಯತ್‌ ನ್ಯೂಸ್‌ ವರದಿ ಮಾಡಿದೆ.

ADVERTISEMENT

*  ಕೃಷಿ ಸಾಲಕ್ಕೆ ನಿಗಮ ಸ್ಥಾಪನೆ
ಮುಂಬೈ, ಜುಲೈ 11–
ಕೃಷಿಕರ ಮನೆಬಾಗಿಲಿಗೆ ಸಾಲ ಸೌಲಭ್ಯ ಒದಗಿಸುವ ಮಹತ್ವದ ನಿರ್ಣಯವನ್ನು ಶೆಡ್ಯೂಲ್ಡ್‌ ಬ್ಯಾಂಕ್‌ಗಳು ಕೈಗೊಂಡಿದ್ದು, ಇದಕ್ಕಾಗಿ 10 ಕೋಟಿ ರೂಪಾಯಿ ಪಾಲು ಬಂಡವಾಳದಲ್ಲಿ ಅಗ್ರಿಕಲ್ಚರ್‌ ಫೈನಾನ್ಸ್‌ ಕಾರ್ಪೊರೇಷನ್‌ ಆರಂಭಿಸಲು ನಿರ್ಧರಿಸಿವೆ.

*  ಪ್ರತಿಭಟನೆ: ಶಾಲಾ–ಕಾಲೇಜು ಬಂದ್‌
ಶಿಲ್ಲಾಂಗ್‌, ಜುಲೈ 11– 
ಪ್ರತ್ಯೇಕ ಗುಡ್ಡಗಾಡು ರಾಜ್ಯದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಆಲ್‌ ಪಾರ್ಟಿ ಹಿಲ್‌ ಲೀಡರ್ಸ್‌ ಕಾನ್ಫರೆನ್ಸ್‌ ಕರೆನೀಡಿದ್ದ ಬಂದ್‌ಗೆ ವಿದ್ಯಾರ್ಥಿಗಳೂ ಬೆಂಬಲ ಸೂಚಿಸಿ ಇಂದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಇಂದು ಎಲ್ಲ ಶಾಲಾ– ಕಾಲೇಜುಗಳು ಮುಚ್ಚಿದ್ದವು. ಸುಮಾರು 200ಕ್ಕೂ ಹೆಚ್ಚು ಜನರು ‘ನಮಗೆ ಗುಡ್ಡಗಾಡು ರಾಜ್ಯ ಬೇಕು’ ಎಂಬ ಘೋಷಣೆ ಕೂಗುತ್ತ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.