ADVERTISEMENT

ಭಾನುವಾರ, 1–10–1967

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2017, 19:30 IST
Last Updated 30 ಸೆಪ್ಟೆಂಬರ್ 2017, 19:30 IST

ವೇತನ ಮಂಡಲಿಗಳ ಸಮಗ್ರ ವ್ಯವಸ್ಥೆ ಬಗ್ಗೆ ಪರಿಶೀಲನೆ
ನವದೆಹಲಿ, ಸೆ. 30–
ವೇತನ ಮಂಡಳಿಗಳ ಸಮಗ್ರ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ಮಾಲೀಕರು ಹಾಗೂ ಕಾರ್ಮಿಕರ ನಾಲ್ಕು ಮಂದಿ ಪ್ರತಿನಿಧಿಗಳಿರುವ ದ್ವಿಪಕ್ಷೀಯ ಉಪಸಮಿತಿಯೊಂದನ್ನು ನೇಮಿಸಲು ಸ್ಥಾಯೀ ಕಾರ್ಮಿಕ ಸಮಿತಿ ಇಂದು ನಿರ್ಧರಿಸಿತು.

ಅಸ್ಸಾಮ್ ಕಾರ್ಮಿಕ ಸಚಿವ ಶ್ರೀ ಕೆ.ಪಿ. ತ್ರಿಪಾಠಿ ಅವರು ಉಪ ಸಮಿತಿಯ ಅಧ್ಯಕ್ಷರಾಗುವರು. ಉಪ ಸಮಿತಿಯು ಎರಡು ತಿಂಗಳೊಳಗೆ ಸ್ಥಾಯೀ ಕಾರ್ಮಿಕ ಸಮಿತಿಗೆ ತನ್ನ ವರದಿಯನ್ನು ಒಪ್ಪಿಸಬೇಕಾಗಿದೆ.

ವೇತನ ಮಂಡಳಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಮಾಲೀಕರು ಹಾಗೂ ಕಾರ್ಮಿಕರ ಪ್ರತಿನಿಧಿಗಳು ಉಗ್ರವಾಗಿ ಟೀಕಿಸಿದ ನಂತರ ಉಪಸಮಿತಿಯನ್ನು ನೇಮಿಸಲು ಕೇಂದ್ರ ಕಾರ್ಮಿಕ ಸಚಿವ ಶ್ರೀ ಹಾಥಿ ಅವರು ಒಪ್ಪಿಗೆ ನೀಡಿದರು.

ADVERTISEMENT

ಮಹಾಜನ್ ತೀರ್ಪನ್ನು ಒಪ್ಪಿಕೊಳ್ಳತಕ್ಕದ್ದೆಂದು ಮುಖ್ಯಮಂತ್ರಿ ಪುನರುಕ್ತಿ
ಬೆಂಗಳೂರು, ಸೆ. 30–
ಮಹಾಜನ್ ಗಡಿ ಆಯೋಗದ ವರದಿಯ ಬಗ್ಗೆ ‘ಹೊಸ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಭಾವಿಸಿದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಈಗ ಕೇಂದ್ರ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವುದು ಮಾತ್ರ ಉಳಿದಿದೆ’ ಎಂದು ಇಲ್ಲಿ ತಿಳಿಸಿದರು.

ಕೇಂದ್ರದಿಂದ ಗಡಿ ಆಯೋಗದ ವರದಿಯ ಪ್ರತಿಯನ್ನು ಪಡೆದು ಸಂಜೆ ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ‘ನಮ್ಮ ಅಭಿಪ್ರಾಯ ಹಾಗೂ ನಿಲುವುಗಳನ್ನು ಈಗಾಗಲೇ ಆಯೋಗದ ಮುಂದೆ ವ್ಯಕ್ತಪಡಿಸಿದ್ದೇವೆ. ಹೊಸ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ ಎಂದು ನನಗನಿಸುವುದಿಲ್ಲ’ ಎಂದು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ವರದಿಗಾರರಿಗೆ ತಿಳಿಸಿದರು.

ಕಾಸರಗೋಡಿನ ಬಗ್ಗೆ ಸ್ಪಷ್ಟ ಅಭಿಪ್ರಾಯ: ತೀರ್ಪಿನ ರೂಪದಲ್ಲಿಲ್ಲ
ಬೆಂಗಳೂರು, ಸೆ. 30–
ಮಹಾಜನ್ ಗಡಿ ಆಯೋಗವು, ಕಾಸರಗೋಡು ತಾಲ್ಲೂಕಿನಲ್ಲಿ ಚಂದ್ರಗಿರಿ ಹಾಗೂ ಪಯಸ್ವಿನಿ ನದಿಗಳ ಉತ್ತರ ಭಾಗ ಮೈಸೂರಿಗೆ ಸೇರಬೇಕೆಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಈ ಅಭಿಪ್ರಾಯ ತೀರ್ಪಿನ ರೂಪದಲ್ಲಿಲ್ಲವೆಂದು ತಿಳಿದುಬಂದಿದೆ.

ಬೆಲೆ ಏರಿಕೆ ವಿರುದ್ಧ ನಗರದಲ್ಲಿ ಸೋಮವಾರ ಸತ್ಯಾಗ್ರಹ ಆರಂಭ
ಬೆಂಗಳೂರು, ಸೆ. 30–
ಅಧಿಕ ಬೆಲೆಯ ವಿರುದ್ಧ ಪ್ರತಿಭಟಿಸಿ ಅಕ್ಕಿಯ ಬೆಲೆ ‘ಕೆ.ಜಿ.ಗೆ ಒಂದು ರೂಪಾಯಿ ಆಗುವವರೆಗೆ’ ಪ್ರತಿ ದಿನ ನಗರದಲ್ಲಿ ಆರಿಸಲ್ಪಡುವ ಅಂಗಡಿಗಳ ಮುಂದೆ ಸೋಮವಾರರಿಂದ ಸತ್ಯಾಗ್ರಹ ಹೂಡಲು ವಿರೋಧ ಪಕ್ಷಗಳು, ಪೌರ ಸಮಿತಿ, ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಸಂಸ್ಥೆಗಳು, ಕನ್ನಡ ಚಳವಳಿಗಾರರು ಮತ್ತಿತರ ಕ್ರಿಯಾ ಸಮಿತಿಯು ನಿರ್ಧರಿಸಿದೆ.

ಕೃಷ್ಣಾ ಜಲ ವಿವಾದ ಪರಿಹಾರ ನಿರೀಕ್ಷೆ
ಬೆಂಗಳೂರು, ಸೆ. 30–
ಕೃಷ್ಣಾ ನೀರಿನ ವಿವಾದದ ವಿಚಾರದಲ್ಲಿ ಅಕ್ಟೋಬರ್ 6 ರಂದು ದೆಹಲಿಯಲ್ಲಿ ನಡೆಯಲಿರುವ ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಯಾವುದಾದರೊಂದು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಆಂಧ್ರ, ಮೈಸೂರು ಮತ್ತು ಮಹಾರಾಷ್ಟ್ರಗಳ ನಡುವಣ ಈ ವಿವಾದವನ್ನು ತಾವು ಅಕ್ಟೋಬರ್  8 ರಂದು ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರವಾಸಕ್ಕೆ ಹೊರಡುವ ಮುನ್ನವೇ ಯಾವುದಾದರೊಂದು ರೀತಿಯಲ್ಲಿ ಇತ್ಯರ್ಥಪಡಿಸಲು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಕಾತುರರಾಗಿದ್ದಾರೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.