ADVERTISEMENT

ಭಾನುವಾರ, 13–8–1967

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST

ಕೇಂದ್ರ ನೌಕರರ ತುಟ್ಟೀಭತ್ಯ: ಸೆಪ್ಟೆಂಬರ್ 11 ಕ್ಕೆ ಮುಂಚೆ ಸರ‍್ಕಾರದ ನಿರ್ಧಾರ
ನವದೆಹಲಿ, ಆ. 12–
ತುಟ್ಟೀಭತ್ಯದ ಬಗ್ಗೆ ಕೇಂದ್ರ ಸರ್ಕಾರದ ನೌಕರರ ಜಂಟೀ ಕ್ರಿಯಾಸಮಿತಿಯು ಮುಷ್ಕರ ಹೂಡಲು ಉದ್ದೇಶಿಸಿರುವ ಸೆಪ್ಟೆಂಬರ್ 11ನೆ ತಾರೀಕಿಗೆ ಮುಂಚೆಯೇ ಕೇಂದ್ರ ಸರ್ಕಾರವು ತುಟ್ಟೀಭತ್ಯ ಕುರಿತ ತನ್ನ ನಿರ್ಧಾರವನ್ನು ಪ್ರಕಟಿಸುವುದು ಎಂದು ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.

ತುಟ್ಟೀಭತ್ಯೆ ಕುರಿತ ನಿರ್ಧಾರ ಎಷ್ಟೇ ಕಠಿಣವಾಗಿರಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಲೇಬೇಕಾಗಿದೆಯೆಂದೂ ಅವರು ಹೇಳಿದರು.

ಪಶ್ಚಿಮ ಬಂಗಾಳದ ನವದ್ವೀಪದಲ್ಲಿ ಅನ್ನದ ಕೂಗು, ಲೂಟಿ: ಪೋಲೀಸಿಗೆ ಮುತ್ತಿಗೆ, ಗೋಲೀಬಾರ್
ಕಲ್ಕತ್ತ, ಆ. 12–
ನಾಡಿಯಾ ಜಿಲ್ಲೆಯ ನವದ್ವೀಪದ ಪೋಲೀಸು ಠಾಣೆಗೆ ಇಂದು ಬೆಳಿಗ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಉದ್ರಿಕ್ತ ಗುಂಪೊಂದನ್ನು ಚದುರಿಸಲು ಪೋಲೀಸರು 35 ಸುತ್ತು ಗುಂಡು ಹಾರಿಸಿದರೆಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬಂದಿರುವ ವರದಿ ತಿಳಿಸಿದೆ. ಇಬ್ಬರು ಗುಂಡಿಗೆ ಬಲಿಯಾದರು. ಸಾವು ನೋವುಗಳ ಹೆಚ್ಚಿನ ವಿವರ ಕೂಡಲೆ ತಿಳಿದುಬಂದಿಲ್ಲ. ‌

ADVERTISEMENT

ಶ್ರಾವಣ ಶನಿವಾರದ ನೂಕುನುಗ್ಗಲು: ಸಾವನ್ನಪ್ಪಿದ 17 ಜನ ಯಾತ್ರಾರ್ಥಿಗಳು
ತಿರುಪತಿ, ಆ. 12–
ನೂಕು ನುಗ್ಗಲಿನ ಪರಿಣಾಮವಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದು ಮಹಿಳೆಯರು ಮಕ್ಕಳನ್ನೊಳಗೊಂಡು 16 ಮಂದಿ ಯಾತ್ರಾರ್ಥಿಗಳಿಗೆ ಸ್ಥಳದಲ್ಲೇ ಸಾವು ಸಂಭವಿಸಿತು. ಪ್ರಜ್ಞೆತ‌ಪ್ಪಿ ಆಸ್ಪತ್ರೆಗೆ ಸೇರಿಸಲ್ಪಟ್ಟ 10 ಜನರ ಪೈಕಿ ಮಹಿಳೆಯೊಬ್ಬರು ಮರಣ ಹೊಂದಿದರು. ಸತ್ತವರ ಸಂಖ್ಯೆ ಒಟ್ಟು 17. ಪ್ರಜ್ಞೆತಪ್ಪಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.

ಅಕ್ಕಿ ಬೇಕು, ರಾಗಿ ಬೇಕು
ಬೆಂಗಳೂರು, ಆ. 12
– ‘ಏನು ಬೇಕು, ಏನು ಬೇಕು?’ ಅಕ್ಕಿ ಬೇಕು, ರಾಗಿ ಬೇಕು!’ ‘ತರಗುಪೇಟೆ ಚಲೋ’ದಲ್ಲಿ ಭಾಗವಹಿಸಿದ್ದ ಪ್ರದರ್ಶನಕಾರರ ಘೋಷಣೆಗಳೇ ಅವರ ಬೇಡಿಕೆಗಳನ್ನು ಸಾರಿದವು.

‘ಸಮಾಜಘಾತುಕರಿಗೆ, ಕಾಳಸಂತೆ ಕೋರರಿಗೆ ಮತ್ತು ಅನ್ನ ಕೊಡದ ಸರಕಾರಕ್ಕೆ’ ಅವರು ‘ಧಿಕ್ಕಾರ’ ಹಾಕಿದರು. ಬೆಲೆಗಳನ್ನು ಇಳಿಸಬೇಕೆಂಬ ಘೋಷಣೆಗಳ ಜೊತೆಗೆ ‘ನೀರಿನ ಸಮಸ್ಯೆಯನ್ನು ಬಗೆಹರಿಸಿ’ ಘೋಷಣೆಯನ್ನೂ ಕೂಗಿದರು.

‘ಕಾಳಸಂತೆ ಕೋರರಿಗೆ ಏನು ಶಿಕ್ಷೆ’? ಎಂಬ ಪ್ರಶ್ನೆಗೆ ಪ್ರದರ್ಶನಕಾರರ ಭಿತ್ತಿ ಪತ್ರ ‘ಗಲ್ಲು’ ಎಂದು ಉತ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.